ಪೋಕ್ಸೋ ಕಾಯ್ದೆಯಡಿ ಬಂಧನ: ಮುರಘಾ ಶ್ರೀಗಳು ಪೀಠತ್ಯಾಗ ಮಾಡಲಿ, ಯತ್ನಾಳ

By Kannadaprabha NewsFirst Published Oct 5, 2022, 2:00 AM IST
Highlights

ತಾವು ಈಗಾಗಲೇ ಈ ಸಂಬಂಧ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದು, ಇದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಬೇಕು ಎಂದು ವಿನಂತಿಸಿದ್ದೇನೆ: ಯತ್ನಾಳ

ವಿಜಯಪುರ(ಅ.05): ಮುರಘಾ ಶ್ರೀಗಳಿಗೆ ಮಠದ ಪೀಠ ತ್ಯಾಗ ಮಾಡುವಂತೆ ಹೈಕೋರ್ಟ್‌ ನಿರ್ದೇಶನ ನೀಡಬೇಕು. ಮಠದ ಆಡಳಿತ ನಿರ್ವಹಣೆಗಾಗಿ ಇನ್ನೊಬ್ಬ ಸ್ವಾಮೀಜಿಯನ್ನು ನೇಮಕ ಮಾಡುವವರೆಗೆ ತಾತ್ಕಾಲಿಕವಾಗಿ ಮೇಲುಸ್ತುವಾರಿ ಸಮಿತಿ ರಚಿಸಬೇಕು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಒತ್ತಾಯಿಸಿದ್ದಾರೆ. ತಾವು ಈಗಾಗಲೇ ಈ ಸಂಬಂಧ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದು, ಇದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಬೇಕು ಎಂದು ವಿನಂತಿಸಿದ್ದೇನೆ. ಮುರಘಾ ಶ್ರೀಗಳು ಪೋಕ್ಸೋ ಕಾಯ್ದೆಯಡಿ ವಿಚಾರಣೆ ಎದುರಿಸುತ್ತಿದ್ದಾರೆ. ಹಾಗಾಗಿ, ಅವರು ಪೀಠ ತ್ಯಜಿಸಬೇಕು. ಬೇರೆ ಶ್ರೀಗಳನ್ನು ಆಯ್ಕೆ ಮಾಡಬೇಕು ಎಂದು ಅವರು ತಿಳಿಸಿದರು.

ಮಠಕ್ಕೆ ಸೇರಿದ ಸಾವಿರಾರು ಕೋಟಿ ಆಸ್ತಿ ಇದೆ. ಮಾಜಿ ಶಾಸಕ ಏಕಾಂತಯ್ಯ ನೇತೃತ್ವದಲ್ಲಿ ಅಲ್ಲಿಯ ಭಕ್ತರು ಸಭೆ ಮಾಡಿದ್ದಾರೆ. ಹಾಗಾಗಿ, ಶಿವಮೂರ್ತಿ ಸ್ವಾಮೀಜಿ ಸ್ವಯಂಪ್ರೇರಣೆಯಿಂದ ಪೀಠತ್ಯಾಗ ಮಾಡಬೇಕು. ಶ್ರೀಗಳಿಗೆ ಸಂಬಂಧಿಸಿದ ಇಂಥ ಘಟನೆಯಿಂದ ವೀರಶೈವ-ಲಿಂಗಾಯತ ಸಮುದಾಯಕ್ಕೆ ಬಹಳ ಅಪಮಾನವಾಗಿದೆ ಎಂದರು.

ಸಣ್ಣ ಹುಡುಗ(ರಾಹುಲ್‌ ಗಾಂಧಿ) ಕರ್ಕೊಂಡು ಕಾಂಗ್ರೆಸ್‌ ಯಾತ್ರೆ: ಸಂಸದ ಜಿಗಜಿಣಗಿ ವ್ಯಂಗ್ಯ

ಮುರಘಾ ಶರಣರು ಸ್ವಯಂಪ್ರೇರಣೆಯಿಂದ ಪೀಠತ್ಯಾಗ ಮಾಡದಿದ್ದರೆ, ಭಕ್ತರೇ ಅವರನ್ನು ಉಚ್ಚಾಟನೆ ಮಾಡಬೇಕಾಗುತ್ತದೆ. ಮಠದಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಪೋಕ್ಸೋ ಕಾಯ್ದೆ ಅಡಿ ಮುರಘಾ ಶರಣರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಅವರನ್ನು ಬಂಧಿಸಲು ಪೊಲೀಸರು ಆರು ದಿನ ವಿಳಂಬ ಮಾಡಿದ್ದಾರೆ. ಇದರ ಹಿಂದಿರುವ ರಾಜಕಾರಣಿಗಳು ಯಾರು? ಎಂದು ಪ್ರಶ್ನಿಸಿದ ಅವರು, ಯಾವ ಭ್ರಷ್ಟರಾಜಕಾರಣಿಗಳು ಹಣ ಹಾಗೂ ದಾಖಲಾತಿಗಳನ್ನು ಮಠದಲ್ಲಿ ಇಟ್ಟಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು. ಒಬ್ಬರು ಮಾಜಿ ಸಿಎಂ ಹಾಗೂ ಅವರ ಮಗನ ಬೆಂಬಲ ಸ್ವಾಮೀಜಿಗೆ ಬಹಳಷ್ಟಿದೆ. ಸ್ವಾಮೀಜಿ ಆ ಮಾಜಿ ಸಿಎಂ ಮಗನ ಹೆಲಿಕಾಪ್ಟರ್‌ ತೆಗೆದುಕೊಂಡು ಅಡ್ಡಾಡುತ್ತಿದ್ದರು. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿದ್ದಾರೆ.

ಪಿಎಸ್‌ಐ ಅಕ್ರಮ ನೇಮಕ ತನಿಖೆ ಸಿಬಿಐಗೆ ವಹಿಸಿ

ರಾಜ್ಯದಲ್ಲಿ ನಡೆದಿರುವ ಅಕ್ರಮ ಪಿಎಸ್‌ಐ ನೇಮಕಾತಿ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆ ನಡೆಸುವ ಸಲುವಾಗಿ ಸಿಬಿಐಗೆ ವಹಿಸಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ. ಇಡೀ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಪುತ್ರನ ಕೈವಾಡ ಇದೆ. ಹಾಗಾಗಿ, ಈ ಹಗರಣವನ್ನು ಸಿಬಿಐಗೆ ವಹಿಸುವುದು ಹೆಚ್ಚು ಸೂಕ್ತವಾಗಿದೆ ಎಂದು ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಕೂಡ ಈ ಬಗ್ಗೆ ಈಗಾಗಲೇ ಆರೋಪ ಮಾಡಿದ್ದಾರೆ. ಈ ಪ್ರಕರಣದ ಸಮಗ್ರ ತನಿಖೆಗೆ ಸಿಬಿಐಗೆ ವಹಿಸಬೇಕು. ಆಗ ಈ ಹಗರಣದ ಹಿಂದೆ ಯಾರು ಇದ್ದಾರೆ ಎಂಬುದು ಹೊರಬೀಳುತ್ತದೆ ಎಂದು ಅವರು ತಿಳಿಸಿದ್ದಾರೆ.

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ನವರೂ ಇದ್ದಾರೆ. ಈ ನಿಟ್ಟಿನಲ್ಲಿ ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ. ಪಿಎಸ್‌ಐ ಹುದ್ದೆಗಾಗಿ .70 ಲಕ್ಷದಿಂದ . 80 ಲಕ್ಷದವರೆಗೆ ನೀಡಿದ್ದಾರೆ. ಅಂಥವರ ಕುಟುಂಬ ಈಗ ಬೀದಿಗೆಬಿದ್ದಿದೆ. ಹಣ ಕಳೆದುಕೊಂಡ ಕುಟುಂಬಳಿಗೆ ಹಣ ಮರಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪುತ್ರನ ಭ್ರಷ್ಟಾಚಾರದಿಂದ ಬಿಎಸ್‌ವೈ ಪದಚ್ಯುತಿ

ವಿಜಯಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಒಳ್ಳೆಯವರು. ಆದರೆ ಅವರು ತಮ್ಮ ಪುತ್ರ ವಿಜಯೇಂದ್ರ ಅವರಿಂದ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ವಿಜಯೇಂದ್ರ ಅವರು ನಡೆಸಿದ ಭೃಷ್ಟಾಚಾರದಿಂದ ಬಿ.ಎಸ್‌.ಯಡಿಯೂರಪ್ಪ ತಮ್ಮ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ. ವಿಜಯೇಂದ್ರ ಅವರು ಭ್ರಷ್ಟಾಚಾರ ನಡೆಸಿರದಿದ್ದರೆ, ಇಂದಿಗೂ ಕೂಡ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿಯೇ ಮುಂದುವರಿಯುತ್ತಿದ್ದರು ಎಂದರು.

ವಿಜಯೇಂದ್ರ ಯಾವಾಗ ಹಗರಣದಲ್ಲಿ ಸಿಲುಕಿಕೊಂಡರೋ ಆಗ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಈ ಭ್ರಷ್ಟಾಚಾರದಿಂದ ಬಿಜೆಪಿ ಹೆಸರು ಕೆಟ್ಟು ಹೋಗಿದೆ. ಇದರಿಂದ ಬಿಜೆಪಿಗೆ ದೊಡ್ಡ ಡ್ಯಾಮೇಜ್‌ ಆಗಿದೆ. ಬಿ.ಎಸ್‌.ಯಡಿಯೂರಪ್ಪ ತುಂಬಾ ಒಳ್ಳೆಯವರು. ಯಡಿಯೂರಪ್ಪ ಜೈಲಿಗೆ ಹೋಗುವುದಕ್ಕೂ ವಿಜಯೇಂದ್ರ ಕಾರಣ ಎಂದು ಹೇಳಿದರು.

ಭಾರತ ತೋಡೋ ಯಾತ್ರೆ

ವಿಜಯಪುರ: ಕಾಂಗ್ರೆಸ್ಸಿನವರು ಆರಂಭಿಸಿರುವುದು ಭಾರತ ಜೋಡೋ ಯಾತ್ರೆ ಅಲ್ಲ. ಅದು ಭಾರತ ತೋಡೋ ಯಾತ್ರೆಯಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವ್ಯಂಗ್ಯವಾಡಿದರು. ಭಾರತ ಜೋಡೋ ಯಾತ್ರೆ ಮಾಡುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ. ಹಿಂದೆ ದೇಶ ಒಡೆದವರು ಇಂದು ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಅಂದು ನೆಹರೂ ಅವರನ್ನು ಪ್ರಧಾನಿಯನ್ನಾಗಿಸಲು ಭಾರತ ಒಡೆದರು. ಹಾಗಾಗಿ, ಕಾಂಗ್ರೆಸ್‌ನ ಇಂದಿನ ಯಾತ್ರೆ ಜೋಡೋ ಆಗುವುದಿಲ್ಲ, ತೋಡೋ ಆಗುತ್ತದೆ ಎಂದು ತಿಳಿಸಿದರು.

500 ಕೋಟಿ ನೀಡಿದ್ರೆ ವಿಜಯಪುರ ಲಂಡನ್‌ ಮಾಡುವೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ

ನಿಜಾರ್ಥದಲ್ಲಿ ಭಾರತ ಜೋಡೋ ಮಾಡಿದ್ದು ಪ್ರಧಾನಿ ಮೋದಿ. ಅವರು, ಆರ್ಟಿಕಲ… 370 ರದ್ದತಿ, ಸರ್ಜಿಕಲ… ಸ್ಟೆ್ರೖಕ್‌ ಮೂಲಕ ಭಾರತವನ್ನು ಜೋಡಿಸಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಯತ್ನಾಳ ಪ್ರಧಾನಿ ಮೋದಿ ಅವರನ್ನು ಪ್ರಶಂಸಿಸಿದರು.

ಅಳುವ ಗಂಡಸರನ್ನು ನಂಬಬಾರದು

ವಿಜಯಪುರ: ಭಾರತ ಜೋಡೋ ಯಾತ್ರೆಯಲ್ಲಿ ಡಿ.ಕೆ.ಶಿವಕುಮಾರ ಕಣ್ಣೀರು ಹಾಕಿದ ವಿಷಯವಾಗಿ ಪ್ರತಿಕ್ರಿಯೆ ನೀಡಿದ ಅವರು, ಯಾತ್ರೆಯಲ್ಲಿ ಕಣ್ಣೀರು ಹಾಕುವವರೆಲ್ಲರೂ ಮಹಾ ಕಳ್ಳರು. ಬಡವರ ಆಸ್ತಿ ಲೂಟಿ ಮಾಡಿದ ಈ ಪುಣ್ಯಾತ್ಮನಿಗೆ ಈಗ ಹೇಗೆ ಕಣ್ಣೀರು ಬರುತ್ತೆ ಯಾರಿಗೆ ಗೊತ್ತು. ಕೆಲವರು ಗ್ಲಿಸರಿನ್‌ ಹಚ್ಚಿ ಕಣ್ಣೀರು ಹಾಕುತ್ತಾರೆ. ಡಿಕೆಶಿ ಎಂದರೆ ಕಣ್ಣೀರು ನಾಟಕ ಕಂಪನಿ. ಅಳುವ ಗಂಡಸರನ್ನು ನಂಬಬಾರದು, ಡಿಕೆಶಿ ಅಳುವ ಗಂಡಸು ಎಂದು ಯತ್ನಾಳ ವ್ಯಂಗ್ಯವಾಡಿದರು.

ಪ್ರಿಯಾಂಕ ಖರ್ಗೆ ತಾವು ಮಾಡಿದ ಆಸ್ತಿಯನ್ನ ಕಲಬುರ್ಗಿಯ ದಲಿತರಿಗೆ ಹಂಚಿಬಿಡಲಿ. ಎಲ್ಲ ದಲಿತ ಕುಟುಂಬಗಳಿಗೆ ಒಂದೊಂದು ಮನೆ ಕಟ್ಟಿಕೊಡಲಿ. ಇವರಿಗೆ ಬಡವರ ಬಗ್ಗೆ ನಿಜವಾದ ಕನಿಕರ ಇಲ್ಲ. ಇವರು ಕನಿಕರದಿಂದ ಕಣ್ಣೀರು ಹಾಕುತ್ತಿಲ್ಲ. ಅವರ ಕಣ್ಣೀರು ನಿಜವಾದದ್ದೇ ಆಗಿದ್ದರೆ ಕಣ್ಣೀರು ಹಾಕುವವರು ತಮ್ಮ ಆಸ್ತಿಯನ್ನು ಬಡವರಿಗೆ ಹಂಚಿ ಬಿಡಬೇಕು ಎಂದು ಈ ಸಂದರ್ಭದಲ್ಲಿ ಯತ್ನಾಳ ಸವಾಲು ಎಸೆದರು.
 

click me!