* ಯಡಿಯೂರಪ್ಪ ಹೋಗಿರಲಿಲ್ಲವಾ?, ಬೊಮ್ಮಾಯಿ ಮೂಲ ಬಿಜೆಪಿಗರಾ?
* ಬಿಎಸ್‌ವೈ ವಿರುದ್ಧ ಹರಿಹಾಯ್ದ ಯತ್ನಾಳ್
* ಯತ್ನಾಳ್‌ನನ್ನು ಮುಗಿಸಬೇಕು ಎಂದು ಯಾವನೋ ಅನನುಭವಿಯನ್ನು ತಂದ್ರೆ ಆಗುತ್ತಾ?
ವಿಜಯಪುರ(ಜು.30): ಪ್ರಾಮಾಣಿಕರು, ಹಿಂದುತ್ವ ಉಳ್ಳವರು, ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಶಕ್ತಿಯುಳ್ಳವರನ್ನು ಮಂತ್ರಿ ಮಾಡಬೇಕು. ಮಂತ್ರಿಗಿರಿಗಾಗಿ ದೆಹಲಿಗೆ ಹೋಗಿ ಲಾಬಿ ಮಾಡುವ ಅವಶ್ಯಕತೆ ಇಲ್ಲ. ನನಗೆ ಹೈಕಮಾಂಡ್ ಮೇಲೆ ವಿಶ್ವಾಸವಿದೆ. ಯಡಿಯೂರಪ್ಪನವರು ಹೇಳಿದ್ದೇ ಎಲ್ಲವೂ ಆಗೋದಿಲ್ಲ. ಅವರು ಹೇಳಿದ್ದೇ ಆಗೋದಿದ್ರೆ ಅವರನ್ನು ತೆಗೆಯುವ ಅವಶ್ಯಕತೆಯೂ ಇರಲಿಲ್ಲ ಎಂದು ಹೇಳುವ ಮೂಲಕ ಮತ್ತೆ ಬಿಎಸ್‌ವೈ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದಿದ್ದಾರೆ.
ಯಡಿಯೂರಪ್ಪ ಹೇಳಿದವರನ್ನೇ ಮುಖ್ಯಮಂತ್ರಿ ಮಾಡಿದ್ದಾರೆ ಎಂಬ ಪ್ರಶ್ನೆಗೆ ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ಪ್ರಾಣ ಹೋದರೂ ಪರವಾಗಿಲ್ಲ, ಯತ್ನಾಳ್‌ನನ್ನು ಸಿಎಂ ಮಾಡಬಾರದು ಎಂಬ ಬಿಎಸ್‌ವೈ ಕಂಡೀಷನ್ ಇತ್ತು. ಹಾಗಾಗಿ ಯತ್ನಾಳ್ ಸಿಎಂ ಆಗಿಲ್ಲ ಅಂತ ಹೇಳಿದ್ದಾರೆ.
ಇನ್ನು ಇಡೀ ಸಚಿವ ಸಂಪುಟದಲ್ಲಿ ನಿಷ್ಠಾವಂತರು, ಪಕ್ಷದ ಕಾರ್ಯಕರ್ತರು, ಬಿಜೆಪಿ ಕಟ್ಟಿ ಬೆಳೆಸಿದವರು, ಹಿಂದುತ್ವ ಉಳ್ಳವರನ್ನ ಮಂತ್ರಿ ಮಾಡಬೇಕು ಎಂಬುದು ನನ್ನ ಆಗ್ರಹವಾಗಿದೆ ಸಚಿವ ಸಂಪುಟದಲ್ಲಿ ವಿಜಯಪುರ ಜಿಲ್ಲೆಯನ್ನು ಕಡೆಗಣಿಸಿದ್ರೆ ಮುಂದಿನ ದಿನಗಳಲ್ಲಿ ಅದರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯ ಸಂದೇಶವನ್ನ ರವಾನಿಸಿದ್ದಾರೆ.
'ಗಡ್ಡ ಬಿಟ್ಟು ಶಿವಾಜಿಯಾಗಿದ್ದೆ, ಈಗ ಗಡ್ಡ ತೆಗೆಸಿ ಬಸವಣ್ಣ ಆಗಿದ್ದೇನೆ'
ಪಂಚಮಸಾಲಿ ಹೋರಾಟದಲ್ಲಿ ಬಿಎಸ್‌ವೈ ಹಾಗೂ ಮುರುಗೇಶ್ ನಿರಾಣಿಗೆ ಹಿನ್ನೆಡೆ ಆಯ್ತಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಯತ್ನಾಳ್, ಜಾತಿಗೂ ಇದಕ್ಕೂ ಸಂಭಂದವಿಲ್ಲ, ಅವರವರ ಜನಪ್ರಿಯತೆ, ಅನುಭವದ ಮೇಲೆ ಅಳೆಯಬೇಕು. ಅನುಭವ ಇಲ್ಲದವರನ್ನು ತಂದು ಏನೋ ಮಾಡಿದ್ರೆ ಪಕ್ಷ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಯತ್ನಾಳ್‌ನನ್ನು ಮುಗಿಸಬೇಕು ಎಂದು ಯಾವನೋ ಅನನುಭವಿಯನ್ನು ತಂದ್ರೆ ಆಗುತ್ತಾ? ಯತ್ನಾಳ್‌ಗೆ ಇರುವಂತಹ ಸಿನಿಯಾರಿಟಿ ಯಾರಿಗಾದರೂ ಇದೆಯಾ ಬಿಜೆಪಿಯಲ್ಲಿ?. ಅನಂತಕುಮಾರ, ಯಡಿಯೂರಪ್ಪ, ಈಶ್ವರಪ್ಪ ಬಿಟ್ಟರೆ ಬೇರೆ ಯಾರಿದ್ದಾರೆ? ಅಂತ ಹೇಳಿ ನೋಡೋಣ ಅಂತ ಪತ್ರಕರ್ತರಿಗೆ ಯತ್ನಾಳ್ ಪ್ರಶ್ನಿಸಿದ್ದಾರೆ.
ಯತ್ನಾಳ್ ಬಿಜೆಪಿ ಬಿಟ್ಟು ಹೋಗಿದ್ದರು ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಯಡಿಯೂರಪ್ಪ ಹೋಗಿರಲಿಲ್ಲವಾ?, ಬೊಮ್ಮಾಯಿ ಮೂಲ ಬಿಜೆಪಿಗರಾ? ಅಥವಾ ಆರ್‌ಎಸ್‌ಎಸ್‌ನಲ್ಲಿ ಧ್ವಜ ಪ್ರಣಾಮ ಮಾಡಿದ್ದಾರಾ, ಅದೆಲ್ಲಾ ನೆಪಮಾತ್ರ, ನೆಪದಿಂದ ಏನೂ ಅಗೋದಿಲ್ಲ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ, ಹಿಂದುತ್ವ ಉಳಿಯಬೇಕಾದರೆ, ನಿಷ್ಠಾವಂತರು ಉಳಿಯಬೇಕಾದರೆ ಪಕ್ಷ ಸೂಕ್ತವಾದ ನಿರ್ಣಯ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.