ಶಿವಮೊಗ್ಗ (ಜು.30): ಸಿಎಂ ಬೊಮ್ಮಾಯಿ ಸಂಪುಟ ಸೇರಲು ಆಕಾಂಕ್ಷಿಗಳ ಪರ ವಿವಿಧ ಸಂಘಟನೆಯ ಲಾಬಿ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಒಕ್ಕೂಟದಿಂದ ಜಿಲ್ಲೆಯ ಇಬ್ಬರಿಗೆ ನೂತನ ಸಿಎಂ ಬೊಮ್ಮಾಯಿ ಅವರ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಲು ಬೇಡಿಕೆ ಸಲ್ಲಿಸಿದೆ.
ಇಂದು ಶಿವಮೊಗ್ಗದಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಗೋ.ರಮೇಶ್ ಗೌಡ, ಕೆ.ಎಸ್ . ಈಶ್ವರಪ್ಪರವರಿಗೆ ಉಪ ಮುಖ್ಯಮಂತ್ರಿ ಹಾಗೂ ಆರಗ ಜ್ಞಾನೇಂದ್ರರವರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿದರು.
'ಡಿಸಿಎಂ, ಸಚಿವ ಸ್ಥಾನ ಕೊಡದಿದ್ರೆ ಶಾಸಕನಾಗೇ ಇರ್ತೀನಿ, ಲಾಬಿ ಕೂಡಾ ಮಾಡಲ್ಲ'
ಬಿ.ಜೆ.ಪಿ ಪಕ್ಷದ ತವರು ಜಿಲ್ಲೆ ಎಂದು ಹೆಸರಾಗಿರುವ ಶಿವಮೊಗ್ಗ ಜಿಲ್ಲೆಯ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನೂತನ ಸರ್ಕಾರದಲ್ಲಿ ಕೆ.ಎಸ್ ಈಶ್ವರಪರವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ಈ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ಸಾವಿರಾರು ಕೋಟಿ ರೂ. ವಿಮಾನ ನಿಲ್ದಾಣ , ಹೆದ್ದಾರಿಗಳು , ಸೇತುವೆ ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳಿಗೆ ಮತ್ತಷ್ಟು ವೇಗ ನೀಡಬೇಕು ಎಂದರು.
ಶಾಸಕ ಜ್ಞಾನೇಂದ್ರಗೆ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಕನ್ಫರ್ಮ್..?
ಅದೇ ರೀತಿಯಲ್ಲಿ ನಾಲ್ಕು ಬಾರಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಶಾಸಕರಾಗಿ ಸಭಾಧ್ಯಕ್ಷರಾಗಿ ಕೆಲಸ ಮಾಡಿದ ಅನುಭವವಿರುವ ಜ್ಞಾನೇಂದ್ರರವರಿಗೆ ಸಚಿವ ಸ್ಥಾನ ನೀಡಬೇಕು ಎಂದರು.
ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಒಕ್ಕೂಟದಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಕೇಂದ್ರದ ಬಿ.ಜೆ.ಪಿ ಮುಖಂಡರುಗಳಿಗೆ ಬೇಡಿಕೆ ಸಲ್ಲಿಸಲಾಯಿತು.
ರುದ್ರೇಗೌಡರಿಗೆ ಸಚಿವ ಸ್ಥಾನಕ್ಕೆ ಆಗ್ರಹ : ಇನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಕೈಗಾರಿಕೋದ್ಯಮಿ , ವಿಧಾನ ಪರಿಷತ್ ಶಾಸಕ ಎಸ್ . ರುದ್ರೇಗೌಡರನ್ನು ಸಚಿವರನ್ನಾಗಿ ಮಾಡಬೇಕೆಂದು ಆಗ್ರಹಿಸಲಾಗಿದೆ. ಈ ಬಗ್ಗೆ ಜಿಲ್ಲಾ ಕೈಗಾರಿಕಾ ಸಂಘ ಒತ್ತಾಯ ಮಾಡಿದೆ.
ರುದ್ರೇಗೌಡರು ಅಧಿಕಾರವಿಲ್ಲದೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಇಂತಹ ವ್ಯಕ್ತಿಗೆ ಸಚಿವ ಸ್ಥಾನ ಸಿಕ್ಕರೆ ಮತ್ತಷ್ಟು ಅಭಿವೃದ್ಧಿ ಕೆಲಸಗಳಿಗೆ ಪೂರಕವಾಗಲಿದೆ. ಈ ಹಿನ್ನಲೆಯಲ್ಲಿ ಹಿರಿಯರಾದ ಹಾಗೂ ಅನುಭವಿ ಕೈಗಾರಿಕೋದ್ಯಮಿ ಹಾಗೂ ಶಾಸಕರಾಗಿರುವ ಇವರಿಗೆ ಸಚಿವ ಸ್ಥಾನವನ್ನು ನೀಡುವುದು ಸೂಕ್ತ ಎಂದರು.
ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ಸಾವಿರಾರೂ ಜನರಿಗೆ ಉದ್ಯೋಗವನ್ನು ನೀಡಿರುವ ಹಿರಿಮೆಯನ್ನು ಹೊಂದಿದ್ದಾರೆ. ಅಲ್ಲದೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿ , ಬಿಜೆಪಿ ಜಿಲ್ಲಾಧ್ಯಕ್ಷರಾಗಿ , ಕೈಗಾರಿಕೋದ್ಯಮಿಯಾಗಿ , ವಿಧಾನ ಪರಿಷತ್ ಶಾಸಕರಾಗಿ ಕಾರ್ಯನಿರ್ವಹಿಸಿರುವ ಇವರು ಸಾಕಷ್ಟು ಅನುಭವವನ್ನು ಹೊಂದಿದ್ದಾರೆ ಎಂದರು.