ಮಹಾರಾಷ್ಟ್ರ ರಾಜಕೀಯ ಲಾಭಕ್ಕಾಗಿ ಗಡಿ ಕ್ಯಾತೆ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಹಾರಾಷ್ಟ್ರ ವಿರುದ್ಧ ವಾಗ್ದಾಳಿ
ವಿಜಯಪುರ(ಡಿ.08): ಮಹಾರಾಷ್ಟ್ರವು ರಾಜಕೀಯ ಲಾಭಕ್ಕಾಗಿ ಪದೇ ಪದೇ ಗಡಿ ಕ್ಯಾತೆ ತೆಗೆಯುತ್ತಿದೆ ಎಂದು ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದರು. ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಗಡಿ ತಂಟೆಯಿಂದ ಜನರ ಭಾವನೆಗಳನ್ನು ಕೆರಳಿಸಿ ಮಹಾರಾಷ್ಟ್ರ ಸರ್ಕಾರ ರಾಜಕೀಯ ಲಾಭಕ್ಕಾಗಿ ಯತ್ನಿಸುತ್ತಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ವೋಟ್ ಬ್ಯಾಂಕ್‌ಗಾಗಿ ಮಾಡುತ್ತಿರುವ ಕುತಂತ್ರವಿದು. ಮಹಾರಾಷ್ಟ್ರದ ಬಿಜೆಪಿ ಇರಬಹುದು, ಶಿವಸೇನೆ ಇರಬಹುದು, ಎಂಇಎಸ್ ಇರಬಹುದು. ಇವರೆಲ್ಲರೂ ವೋಟ್ ರಾಜಕಾರಣ ಮಾಡುತ್ತಿದ್ದಾರೆ ಆರೋಪಿಸಿದರು.
ಕರ್ನಾಟಕ- ಮಹಾರಾಷ್ಟ್ರ ಗಡಿ ತಂಟೆ ಮುಗಿದ ಅಧ್ಯಾಯ. ಮಹಾಜನ ವರದಿಯೇ ಅಂತಿಮವಾಗಿದೆ. ಮಹಾಜನ ಆಯೋಗ ಮಾಡಿಸಿದವರೇ ಮಹಾರಾಷ್ಟ್ರದವರು. ಮಹಾಜನ ಕೂಡ ಮಹಾರಾಷ್ಟ್ರದವರೇ. ಮಹಾಜನ ಅವರು ಸಲ್ಲಿಸಿದ ವರದಿಯನ್ನು ಸ್ವತಃ ಮಹಾರಾಷ್ಟ್ರದವರೆ ಒಪುತ್ತಿಲ್ಲ. ಇದು ಹಾಸ್ಯಾಸ್ಪದವಾಗಿದೆ. ಮಹಾಜನ ಆಯೋಗದ ವರದಿ ಒಪ್ಪುವುದೇ ಇದಕ್ಕೆ ಅಂತಿಮ ಪರಿಹಾರ ಎಂದು ಹೇಳಿದರು.
VIJAYAPURA: ರಾಜ್ಯದ ಬಸ್‌ಗೆ ಮಸಿ ಬಳಿದಿದ್ದಕ್ಕೆ ಕರವೇ ಆಕ್ರೋಶ
ದೇಶದಲ್ಲಿ ಶಾಂತಿ ಇರಬೇಕು ಎಂಬ ಇಚ್ಛೆ ಮಹಾರಾಷ್ಟ್ರದವರಿಗಿಲ್ಲ. ಕರ್ನಾಟಕ- ಮಹಾರಾಷ್ಟ್ರ, ಕನ್ನಡ- ಮರಾಠಿ ಎಂಬ ಕ್ಷುಲ್ಲಕ ವಿಚಾರ ಮುಂದಿಟ್ಟುಕೊಂಡು ಬರುತ್ತಿದ್ದಾರೆ. ಈ ಮೂಲಕ ಮಹಾರಾಷ್ಟ್ರದವರು ದೇಶದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕದಲ್ಲಿಯೂ ಬರಲಿರುವ ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಗುಜರಾತ ಮಾದರಿ ಅನುಸರಿಸಿದರೆ ಆಶ್ಚರ್ಯವಿಲ್ಲ. ತಾನು ಈ ಬಗ್ಗೆ ಕಳೆದ ಆರು ತಿಂಗಳ ಹಿಂದೆಯೇ ಹೇಳಿದ್ದೆ. ಕರ್ನಾಟಕದ ಪ್ರತಿ ಕ್ಷೇತ್ರದ ಪ್ರತಿ ಶಾಸಕರ ಮಾಹಿತಿ ಪ್ರಧಾನಿ ಬಳಿ ಇದೆ. ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಕಡೆಗೆ ಗಮನ ಹರಿಸಲಿದ್ದಾರೆ. ಚುನಾವಣೆಗೆ ಏನೆಲ್ಲ ಬೇಕು. ಯಾವ ಬದಲಾವಣೆ ಮಾಡಬೇಕು ಎಂಬುವುದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ. ಈಗಾಗಲೇ ಈ ಸಂಬಂಧ ಹೈಕಮಾಂಡ್ ಸಾಕಷ್ಟುಸಮೀಕ್ಷೆ ಮಾಡಿದೆ. ಸಚಿವರು, ಶಾಸಕರ ಪರಿಸ್ಥಿತಿ ಏನಿದೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಹೈಕಮಾಂಡ್ ಏನೇ ನಿರ್ಧಾರ ತಗೆದುಕೊಂಡರೂ ತಾವು ಅದಕ್ಕೆ ಬದ್ಧ. ಕರ್ನಾಟಕದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿಯೂ ಬದಲಾವಣೆ ಮಾಡುತ್ತೇವೆ ಎಂದರೂ ನಮ್ಮ ಒಪ್ಪಿಗೆ ಇದೆ ಎಂದರು.
ರೌಡಿ ಕೊತ್ವಾಲನ ಶಿಷ್ಯನಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ : ಬಸವನಗೌಡ ಪಾಟೀಲ್ ಯತ್ನಾಳ್
ಹಾದಿ, ಬೀದಿಯಲ್ಲಿರುವ ಲೋಫರ್ ಬಗ್ಗೆ ನಾನು ಮಾತನಾಡಲ್ಲ
2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ನಕಲಿ ಹೋರಾಟ ಮಾಡುತ್ತಿದೆ ಎಂಬ ನಟ ಹಾಗೂ ಹೋರಾಟಗಾರ ಚೇತನ್ ಹೇಳಿಕೆಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಅಸಮಾಧಾನ ಹೊರ ಹಾಕಿದ್ದಾರೆ.
ಹಾದಿ, ಬೀದಿಯಲ್ಲಿರುವ ಲೋಫರ್ ಬಗ್ಗೆ ನಾನು ಮಾತನಾಡಲ್ಲ ಎಂದು ಯತ್ನಾಳ ಅವರು ನಟ ಚೇತನ ಅವರ ವಿರುದ್ಧ ಕಿಡಿಕಾರಿದ್ದಾರೆ. ಇಂತಹ ತಲೆ ಹಿಡುಕ ಹಾಗೂ ಸಿದ್ಧಾಂತವಿಲ್ಲದ ವ್ಯಕ್ತಿಗಳಿಗೆ ಬಹಳ ಬೆಲೆ ಕೊಡಬಾರದು. ನಟ ಚೇತನ ನಮ್ಮ ದೇಶದವನಲ್ಲ ಎಂದು ಪರೋಕ್ಷವಾಗಿ ಟೀಕಿಸಿದರು. ಅಂಬೇಡ್ಕರ ಅವರ ಜೀವನ ಮತ್ತು ಅವರ ಸಾಹಿತ್ಯವನ್ನು ಎಲ್ಲರೂ ಅಧ್ಯಯನ ಮಾಡಬೇಕಿದೆ. ಕೆಲ ಜನರು ತಮ್ಮ ಉಪ ಜೀವನಕ್ಕಾಗಿ ಅಂಬೇಡ್ಕರವರ ಹೆಸರನ್ನು ಹಾಳು ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.