ಜಮಖಂಡಿ: ಕಸದ ತಿಪ್ಪೆಗುಂಡಿಯಲ್ಲಿ ಶೈವ ಶಾಸನ ಪತ್ತೆ!

By Kannadaprabha News  |  First Published Dec 8, 2022, 9:00 PM IST

ಕಸದ ತಿಪ್ಪೆಗುಂಡಿಯಲ್ಲಿ ಸುಮಾರು 1050ನೇ ಇಸ್ವಿಯಲ್ಲಿನ ಕಲ್ಯಾಣ ಚಾಲುಕ್ಯರ ಸಾಮಂತ ಅರಸರ ಸವದತ್ತಿ ರಟ್ಟರ ಕಾಲದಲ್ಲಿ ಬರೆಯಲಾದ ಶೈವ ಶಾಸನ ಪತ್ತೆ. 


ಜಮಖಂಡಿ(ಡಿ.08): ನಗರದ ಹಳೆ ತಹಸೀಲ್ದಾರ ಕಚೇರಿ ಆವರಣದ ಕಸದ ತಿಪ್ಪೆಗುಂಡಿಯಲ್ಲಿ ಸುಮಾರು 1050ನೇ ಇಸ್ವಿಯಲ್ಲಿನ ಕಲ್ಯಾಣ ಚಾಲುಕ್ಯರ ಸಾಮಂತ ಅರಸರ ಸವದತ್ತಿ ರಟ್ಟರ ಕಾಲದಲ್ಲಿ ಬರೆಯಲಾದ ಶೈವ ಶಾಸನ ಪತ್ತೆಯಾಗಿದೆ.

ಮೋಡಿಲಿಪಿ, ಸಂಶೋಧಕ ಡಾ.ಸಂಗಮೇಶ ಕಲ್ಯಾಣಿ ಮಾತನಾಡಿ, ಹಳೆಗನ್ನಡದಲ್ಲಿ ಬರೆದಿರುವ ಸುಮಾರು 6ರಿಂದ 7 ಸಾಲುಗಳ ಬರಹ ಕಾಣಿಸುತ್ತಿದೆ. ಹಸಿರು ಕಲ್ಲಿನಲ್ಲಿ ಕೆತ್ತಿದ ಅಂದಾಜು 1050ನೇ ಇಸವಿಯ ಶಾಸನ ಇದಾಗಿದೆ. ಶಾಸನದಲ್ಲಿ ಮೊದಲನೇ ಸಾಲು ಸಂಪೂರ್ಣ ಮಸುಕಾಗಿದ್ದು, ಓದಲು ಆಗುತ್ತಿಲ್ಲ. ಉಳಿದ ಸಾಲುಗಳಲ್ಲಿ ಶೈವ ಶಾಸನದ ಸ್ತೋತ್ರವನ್ನು- ನಮಸ್ತುಂಗ ಶಿರಸುಂಬಿ ಚಂದ್ರ ಚಾಮರ, ಚಾರವೇ ತ್ರೈಲೋಕ್ಯ ನಗರಾರಂಭ ಮೂಲಸ್ಥಂವಾಯ- ಎಂದು ಉಲ್ಲೇಖಿಸಲಾಗಿದೆ. ಶಾಸನದ ನಾಲ್ಕನೇ ಸಾಲಿನಲ್ಲಿ ಶಿವಾಲಯದ ಹೆಸರು ಕೂಡ ಮಸುಕಾಗಿ ಹೋಗಿದೆ. ಆದರೆ, ಈ ಸ್ತಂಭ ಶಾಸನದಲ್ಲಿನ ಇತರೆ ಉಲ್ಲೇಖಗಳನ್ನು ನೋಡಿದಾಗ ಇದು ಶಿವಾಲಯಕ್ಕೆ ಸಂಬಂಧಿಸಿದ ಶಾಸನ ಎಂಬುದು ದೃಢಪಡುತ್ತದೆ ಎಂದು ತಿಳಿಸಿದ್ದಾರೆ.

Tap to resize

Latest Videos

undefined

ಕನಕ ಮೂರ್ತಿ ಪ್ರತಿಷ್ಠಾಪನೆ: ಹುನಗುಂದ ಶಾಸಕರ ನಡೆಗೆ ಖಂಡನೆ, ಕುರುಬ ಸಮಾಜದಿಂದ ತಕ್ಕ ಪಾಠದ ಎಚ್ಚರಿಕೆ

ಈ ಶಾಸನದಲ್ಲಿ ಆಕಳು ಕರುವಿಗೆ ಹಾಲು ಕುಡಿಸುತ್ತಿರುವುದು, ಮಂಡಿಗಾಲು ಊರಿ ಕುಳಿತು ಒಂದು ಕಾಲನ್ನು ಮುಂದೆ ಚಾಚಿದ ಆಕಳು, ಮಧ್ಯ ಭಾಗದಲ್ಲಿ ಶಿವಲಿಂಗ, ಮೇಲ್ಭಾಗದಲ್ಲಿ ಸೂರ್ಯ, ಚಂದ್ರರ ಚಿತ್ರಗಳನ್ನು ಕೆತ್ತಲಾಗಿದೆ. ಇವುಗಳು ಕೂಡ ಮಸುಕಾಗಿವೆ. ಸಮೀಪದಲ್ಲಿರುವ ಕುಂಬಾರ ಕೆರೆಯ ಉತ್ತರ ದಿಕ್ಕಿನಲ್ಲಿ ಹಳೆಯ ಶಿವಾಲಯವಿದ್ದ ಕುರುಹುಗಳು ಕಂಡುಬಂದಿದ್ದು, ಈ ಶಾಸನ ಅದೇ ದೇಗುಲಕ್ಕೆ ಸಂಬಂಧಿಸಿರಬಹುದು. ಇದು ಅಪೂರ್ಣ ಶಾಸನವಾಗಿದ್ದು, ಇನ್ನೂ ಅರ್ಧ ಶಾಸನ ದೊರೆಯಬೇಕಿದೆ. ಈ ಹಿಂದೆಯೂ ಜಮಖಂಡಿಯಲ್ಲಿ ಒಂದು ಶಾಸನ ಪತ್ತೆಯಾಗಿತ್ತು. ಅದು ಮರಾಠಿ ಲಿಪಿಯಲ್ಲಿ ಬರೆದ ಶಾಸನವಾಗಿತ್ತು ಎಂದು ಕಲ್ಯಾಣಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಸದ ತಿಪ್ಪೆಯಲ್ಲಿ ಪತ್ತೆಯಾದ ಶಾಸನವನ್ನು ವಿಠಲ ಪರೀಟ, ರುದ್ರಯ್ಯ ಕರಡಿ ಸೇರಿದಂತೆ ಕೆಲ ಯುವಕರು ಸ್ವಚ್ಛಗೊಳಿಸಿ, ಜಿಪಂ ಕಚೇರಿಯ ದ್ವಾರದ ಬಳಿ ಸಂರಕ್ಷಿಸಿಟ್ಟರು. ಸರ್ಕಾರ ಇಂಥ ಹಳೆ ಶಾಸನಗಳನ್ನು ಸಂರಕ್ಷಣೆ ಮಾಡಲು ಸಂಗ್ರಹಾಲಯ ನಿರ್ಮಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳನ್ನು ಅವರು ಒತ್ತಾಯಿಸಿದರು.
 

click me!