* ಶಾಸಕರಿಂದಲೇ ಉದ್ಘಾಟನೆ ಆಗಬೇಕೆಂಬ ಹುಂಬತನ
* ರಸ್ತೆಗೆ ಬ್ಯಾರಿಕೇಡ್ ಅಡ್ಡ ಇಟ್ಟು ಬೀಗ ಜಡಿದ ಮಹಾನುಭಾವರು
,* ರಸ್ತೆಗೆ ತಂತಿ ಬೇಲಿ ಹಾಕಿ ದಿಗ್ಬಂದನ
ವರದಿ :ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು, (ಮೇ.17) : ಈ ಗ್ರಾಮಕ್ಕೆ ರಸ್ತೆ ಬೇಕೆಂಬ ಕೂಗು ಹಲವು ದಶಕಗಳದ್ದು , ಗ್ರಾಮದಲ್ಲಿ ಸಂಪರ್ಕವಾದಂತಹ ರಸ್ತೆಯಲ್ಲದೇ ಜನರು ಪರದಾಟ ನಡೆಸುತ್ತಿದ್ದರು. ಕೊನೆಗೂ ಎಚ್ಚೆತ್ತುಕೊಂಡ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಿ ರಸ್ತೆ ಕಾಮಗಾರಿಯನ್ನು ಮಾಡ್ತು. ಆದರೆ ರಸ್ತೆ ಕಾಮಗಾರಿ ಮುಗಿದು ಹಲವು ದಿನಗಳೇ ಕಳೆದರೂ ಮಾತ್ರ ಸಾರ್ವಜನಿಕರು ಉಪಯೋಗ ಮಾಡಿದ್ದಂತೆ ಬಿಜೆಪಿ ಮುಖಂಡರು ರಸ್ತೆಗೆ ಅಡ್ಡಲಾಗಿ ಬಂಡೆ, ಬ್ಯಾರಿಕೇಟ್ ಗೆ ಬೀಗ ಹಾಕಿದ್ದಾರೆ.
ಶಾಸಕರೇ ಬಂದು ರಸ್ತೆ ಉದ್ಘಾಟನೆ ಮಾಡಬೇಕು
ಶಾಸಕರೇ ಬಂದು ಉದ್ಘಾಟನೆ ಮಾಡಬೇಕು ಎಂದು ಮೂರು ಕೋಟಿ ವೆಚ್ಚದ ನೂತನ ಕಾಂಕ್ರೀಟ್ ರಸ್ತೆಗೆ ಸ್ಥಳಿಯ ಬಿಜೆಪಿ ಸದಸ್ಯರು ಬೇಲಿ ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮಾವಿನಹೊಲ, ಮಣ್ಣಿನಪಾಲ್ ಗ್ರಾಮದಲ್ಲಿ ನಡೆದಿದೆ. ಕಳಸ ತಾಲೂಕಿನ ಮಾವಿನಹೊಲ ಹಾಗೂ ಮಣ್ಣಿನಪಾಲ್ ಗ್ರಾಮಗಳು ನಕ್ಸಲ್ ಪೀಡಿತ ಪ್ರದೇಶ. ಇಲ್ಲಿನ ರಸ್ತೆ ತುಂಬಾ ಹಾಳಾಗಿತ್ತು ಎಂದು 2018ರಲ್ಲಿ ರೇವಣ್ಣ ಲೋಕೋಪಯೋಗಿ ಸಚಿವ ಆದ ಸಂದರ್ಭದಲ್ಲಿ 3 ಕೋಟಿ 20 ಲಕ್ಷ ವೆಚ್ಚದಲ್ಲಿ ನಾಲ್ಕು ಕಿ.ಮೀ. ಕಾಂಕ್ರೀಟ್ ರಸ್ತೆ ಮಂಜೂರಾಗಿ ಈಗ ರಸ್ತೆ ಕೂಡ ನಿರ್ಮಾಣವಾಗಿದೆ. ರಸ್ತೆ ಮುಗಿದು ಹತ್ತಿರ-ಹತ್ತಿರ ತಿಂಗಳೇ ಕಳೆದಿದೆ. ಆದರೆ, ಇಲ್ಲಿನ ಬಿಜೆಪಿ ಸದಸ್ಯರು ರಸ್ತೆ ಉದ್ಘಾಟನೆಗೆ ಶಾಸಕ ಎಂ.ಪಿ.ಕುಮಾರಸ್ವಾಮಿಯೇ ಬರಬೇಕು ಎಂದು ರಸ್ತೆಗೆ ಬೇಲಿ ಹಾಕಿದ್ದಾರೆ.
ಮಸಗಲಿ ಮೀಸಲು ಅರಣ್ಯ ವ್ಯಾಪ್ತಿ ಪ್ರದೇಶದ ಜನರಲ್ಲಿ ನಿತ್ಯವೂ ಆತಂಕ
ರಸ್ತೆಗೆ ತಂತಿ ಬೇಲಿ ಹಾಕಿ ದಿಗ್ಬಂದನ
ರಸ್ತೆಗೆ ತಂತಿ ಬೇಲಿ ಹಾಕಿರುವ ಬಿಜೆಪಿ ಸದಸ್ಯರು ಜೆಸಿಬಿ ತರಿಸಿ ರಸ್ತೆ ಮೇಲೆ ಬಂಡೆಯಂತಹಾ ದೊಡ್ಡ-ದೊಡ್ಡ ಕಲ್ಲುಗಳನ್ನ ನಿಲ್ಲಿಸಿದ್ದಾರೆ. ರಸ್ತೆಯ ಆರಂಭದಲ್ಲಿ ಪೊಲೀಸ್ ಇಲಾಖೆಯ ಬ್ಯಾರೀಕೇಡ್ ಇಟ್ಟು ಬೀಗ ಹಾಕಿದ್ದಾರೆ. ಈ ಮಾರ್ಗ ಬಹುಪಯೋಗಿ ಮಾರ್ಗವಾಗಿದ್ದು ಈ ರಸ್ತೆಯ ಮೇಲೆ ಸ್ಥಳೀಯರು, ಪ್ರವಾಸಿಗರು ಅವಲಂಬಿರಾಗಿದ್ದಾರೆ. ಈ ಮಾರ್ಗ ಬಸರೀಕಟ್ಟೆ ಹಾಗೂ ಬಾಳೆಹೊನ್ನೂರಿಗೂ ಸಂಪರ್ಕ ಕಲ್ಪಿಸಿದೆ. ಈ ಮಾರ್ಗ ಸುಮಾರು 10ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ. ಈ ಮಾರ್ಗದಿಂದ ಶಾರ್ಟ್ ಕಟ್ ಎಂದು ಪ್ರವಾಸಿಗರು ಹೆಚ್ಚಾಗಿ ಓಡಾಡುತ್ತಾರೆ. ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೂ ಈ ಮಾರ್ಗ ಹತ್ತಿರದ ದಾರಿಯಾಗಿದೆ. ಆದರೆ, ನಿರ್ಮಾಣವಾಗಿ ಸಂಚಾರಕ್ಕೆ ರೆಡಿಯಾಗಿರುವ ಈ ರಸ್ತೆ ಉದ್ಘಾಟನೆಗೆ ಮೂಡಿಗೆರೆ ಶಾಸಕ ಕುಮಾರಸ್ವಾಮಿಯೇ ಬರಬೇಕು ಎಂದು ಕಾದು ರಸ್ತೆಗೆ ಬೇಲಿ ಹಾಕಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆಗೆ ಹಣ ಕೊಟ್ಟಿರುವುದು ಸರ್ಕಾರವೋ ಅಥವ ಶಾಸಕರೋ ಎಂದು ಸ್ಥಳೀಯರು ಬೇಲಿ ಹಾಕಿರುವರ ವಿರುದ್ಧ ಕಿಡಿಕಾರಿದ್ದಾರೆ.
ಕೊನೆಗೂ ಎಚ್ಚೆತ್ತುಕೊಂಡ ಗ್ರಾಮ ಪಂಚಾಯಿತಿ
ರಸ್ತೆಗೆ ಬಂಡೆ , ಬೇಲಿ ಹಾಕಿದ ಪ್ರಕರಣದ ಬಗ್ಗೆ ಅಧಿಕಾರಿಗಳು ಕೊನೆಗೂ ಎಚ್ಚೇತುಗೊಂಡಿದ್ದಾರೆ. ಹೊರನಾಡಿನ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಕೊನೆಗೂ ಎಚ್ಚೆತ್ತುಕೊಂಡು ರಸ್ತೆಗೆ ಅಡ್ಡಲಾಗಿ ಹಾಕಿದ ಬೇಲಿಯನ್ನು ತೆರವುಗೊಳಿಸಿದ್ದಾರೆ. ಇದರ ಜೊತೆಗೆ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ಬ್ಯಾರಿಕೇಟ್ , ಬೀಗವನ್ನು ತೆರವುಗೊಳಿಸಿ ಸ್ಥಳೀಯ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ...