ಮೊದಲು ಆತನನ್ನು ನಿಮ್ಮಿಂದ ದೂರ ಇಡಿ. ಆತನಿಗೂ ನಿಮಗೂ ಏನ್ ಸಂಬಂಧ ಎಂದು ಹೊನ್ನಾಳಿ ಶಾಸಕ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದರು. ಕೋಡಿಹಳ್ಳಿ ವಿರುದ್ಧ ಅಸಮಾಧಾನ ಹೊರಹಾಕಿದರು.
ದಾವಣಗೆರೆ (ಏ.17): ದೇಶ, ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಶುರುವಾಗಿದ್ದು, ಇಂತಹ ಸಂದರ್ಭದಲ್ಲಿ ಸಾರಿಗೆ ನೌಕರರ ಮ್ಕುರ ಸರಿಯಲ್ಲ. ಭ್ರಷ್ಟಕೋಡಿಹಳ್ಳಿ ಚಂದ್ರಶೇಖರ ಮಾತು ಕೇಳಿ ಮುಷ್ಕರಕ್ಕೆ ನೀವೆಲ್ಲರೂ ಇಳಿದಿದ್ದು, ಸಾರಿಗೆ ನೌಕರರ ದಾರಿ ತಪ್ಪಿಸುವ ಕೆಲಸವನ್ನು ಕೋಡಿಹಳ್ಳಿ ಮಾಡುತ್ತಿದ್ದಾನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಹೊನ್ನಾಳಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಮುಷ್ಕರ ನಿರತ ಸಾರಿಗೆ ನೌಕರರ ಮನವಿ ಆಲಿಸಿದ ನಂತರ ಮಾತನಾಡಿದ ಅವರು, ಸಾರಿಗೆ ನೌಕರರಿಗೂ, ಸಾರಿಗೆ ನೌಕರರ ಸಮಸ್ಯೆಗೂ, ಕೋಡಿಹಳ್ಳಿ ಚಂದ್ರಶೇಖರಗೂ ಏನು ಸಂಬಂಧ? ಮೊದಲು ಆತನನ್ನು ನಿಮ್ಮಿಂದ ದೂರ ಇಡಿ ಎಂದರು.
ಕಾಂಗ್ರೆಸ್ ಬೆಂಕಿ ಹಚ್ಚುವ ಕೆಲಸ ನಿಲ್ಲಿಸಲಿ: ರೇಣುಕಾಚಾರ್ಯ .
ಕೋಡಿಹಳ್ಳಿ ಚಂದ್ರಶೇಖರ ಈಗಾಗಲೇ ರೈತರಿಗೆ ವಂಚಿಸಿದ್ದಾನೆ. ಇಂತಹ ನಂಬಿಕೆ ದ್ರೋಹಿಯನ್ನು ನೀವು ಜೊತೆಯಲ್ಲಿಟ್ಟುಕೊಂಡು, ಕರ್ತವ್ಯಕ್ಕೆ ಹಾಜರಾಗದೇ ಹೋರಾಟಕ್ಕಿಳಿದರೆ ನಿಮ್ಮ ಭವಿಷ್ಯವೇ ಹಾಳಾಗುತ್ತದೆಂಬುದನ್ನೂ ಮರೆಯಬೇಡಿ. ನೀವು ಹೋರಾಟ ಬಿಟ್ಟು, ಕೇಂದ್ರ ಸಂಘಟನೆಯ ಮುಖಂಡರ ಜೊತೆಗೆ ಸರ್ಕಾರದ ಮುಂದೆ ಮುಕ್ತವಾಗಿ ಮಾತುಕತೆಗೆ ಬನ್ನಿ ಎಂದು ಅವರು ಕಿವಿಮಾತು ಹೇಳಿದರು.
ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗಲೇ ಕಾಂಗ್ರೆಸ್ಸಿನವರೇ ಈ ಸಮಸ್ಯೆ ಪರಿಹರಿಸಬಹುದಿತ್ತಲ್ಲವೇ? ಈಗ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಕಾಂಗ್ರೆಸ್ಸಿನವರು ಮಾಡುತ್ತಿದ್ದಾರೆ. ಹಿಂದೆ ರಾಮಲಿಂಗಾರೆಡ್ಡಿ ಸಾರಿಗೆ ಸಚಿವರಿದ್ದಾಗ ನಿಮ್ಮ ಸಮಸ್ಯೆ ಕಣ್ಣಿಗೆ ಕಾಣಲಿಲ್ಲವೇ? ಆಗ ಸಾರಿಗೆ ನೌಕರರ ಸಮಸ್ಯೆ ಈಡೇರಿಸುವುದನ್ನು ಬಿಟ್ಟು, ಕಾಂಗ್ರೆಸ್ಸಿನವರೇನು ಕತ್ತೆ ಕಾದರಾ ಎಂದು ರೇಣುಕಾಚಾರ್ಯ ಹರಿಹಾಯ್ದರು.