ಮೈಸೂರು(ಡಿ.14): ದಲಿತರು, ಹಿಂದುಳಿದವರು ಬಿಜೆಪಿಗೆ (BJP) ಹೋಗಬೇಡಿ ಎಂದು ಹೇಳಲು ಸಿದ್ದರಾಮಯ್ಯ (Siddaramaiah) ಯಾರು? ಅವರು ಎಲ್ಲರನ್ನು ಕೊಂಡು ಕೊಂಡಿದ್ದಾರಾ? ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ (H Vishwanath) ಕಿಡಿಕಾರಿದರು. ಕರ್ನಾಟಕದಲ್ಲಿ ಪ್ರತಿಪಕ್ಷ ಇದೆಯಾ? ಗೊತ್ತಿಲ್ಲ ನನಗೆ. ಬಿಜೆಪಿಗೆ ದಲಿತರು ಹೋಗಬೇಡಿ, ಹಿಂದುಳಿದವರು ಹೋಗಬೇಡಿ ಎನ್ನಲು ಸಿದ್ದರಾಮಯ್ಯ ಯಾರು? ನಿಮ್ಮದೇನು ಕೊಡುಗೆ ಈ ಸಮಾಜಕ್ಕೆ. ಏನಿಲ್ಲದೆ ಬರಿ ಬೋಳು ಮಾತಿನಲ್ಲಿ ಹೊಟ್ಟೆಪಾಡಿಗೆ ದಲಿತರು ಬಿಜೆಪಿಗೆ ಹೋಗಿದ್ದಾರೆ ಎಂದರೆ ಸರಿಯೇ ಎಂದುಪ್ರಶ್ನೆ ಮಾಡಿದರು.
ಸಿದ್ದರಾಮಯ್ಯ (Siddaramaiah) ಎಲ್ಲರನ್ನು ಕೊಂಡುಕೊಂಡಿದ್ದಾರೋ. ಐದು ವರ್ಷ ಆಡಳಿತ ನಡೆಸಿ ಕುರುಬರಿಗೆ ಏನೂ ಮಾಡಲಿಲ್ಲ. ಪಾಪ ಚಿಮ್ಮನಕಟ್ಟಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಎಚ್.ಎಂ. ರೇವಣ್ಣನ (HM Revanna) ಮನೆ ಹಾಳಾಯಿತು. ಚಾಮುಂಡೇಶ್ವರಿ ಸೋಲಿಗೆ ಎಲ್ಲರ ಮೇಲೆ ಎಗರಾಡುತ್ತಾರೆ. ನಿಮ್ಮ ಅಹಂ ನಿಮ್ಮ ದುರಂಹಕಾರ ನಿಮ್ಮನ್ನು ಸೋಲಿಸಿದ್ದು. ಬೇರೆ ಯಾರು ನಿಮ್ಮನ್ನು ಸೋಲಿಸಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಮೊದಲಿಸಿದರು.
ಬಿಜೆಪಿಯವರು (BJP) ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಕಿಡಿಕಾರಿದ ಅವರು, ನೀನು ಅಥವಾ ನಿಮ್ಮ ಮನೆಯವರು ಯಾರಾದರೂ ಜೈಲಿಗೆ ಹೋಗಿದ್ದೀರಾ? ಸಿದ್ದರಾಮಯ್ಯಯಾವ ಹೋರಾಟ ಮಾಡಿದ್ದಾನೋ ಗೊತ್ತಿಲ್ಲ. ಕನ್ನಡ ಚಳುವಳಿಗೆ ಬಂದಿದ್ದನಾ? ಬರೀ ಬೊಗಳೆ ಬಿಟ್ಟುಕೊಂಡು ತಿರುಗುತ್ತಾನೆ ಅಷ್ಟೇ ಎಂದು ವಿಶ್ವನಾಥ್ ಗುಡುಗಿದರು.
ಕೃತಜ್ಞತೆ ಇಲ್ಲದ ನಾಯಕ :
ಈ ನಾಡಿನಲ್ಲಿ ಕೃತಜ್ಞತೆ ಇಲ್ಲದ ನಾಯಕ ಅಂದರೆ ಸಿದ್ದರಾಮಯ್ಯ (Siddaramaiah) ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್ (H Vishwanath) ವಾಗ್ದಾಳಿ ನಡೆಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಡಿ. ದೇವೇಗೌಡ (HD Devegowda) ಅವರು ನಿಮ್ಮನ್ನು (ಸಿದ್ದರಾಮಯ್ಯ) ಆಚೆಗೆ ಹಾಕಿದಾಗ ನಿಮ್ಮ ಕೈ ಹಿಡಿದವನು ನಾನು. ನಂತರ ಎಸ್.ಎಂ. ಕೃಷ್ಣ (SM Krishna), ಎಚ್.ಎಂ. ರೇವಣ್ಣ (HM Revanna), ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಕಾಂಗ್ರೆಸ್‌ಗೆ ಕರೆ ತಂದಿದ್ದರಿಂದ ವಿರೋಧ ಪಕ್ಷದ ನಾಯಕ ಆದ್ರಿ, ನಂತರ ಮುಖ್ಯಮಂತ್ರಿ ಆದ್ರಿ ಎಂದರು.
'ಬೈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್, ಜೆಡಿಎಸ್‌ಗೆ ಠೇವಣಿ ಸಹ ಸಿಗಲ್ಲ'
ಸಿದ್ದರಾಮಯ್ಯ ಒಂಥರ ಇಂಗ್ಲಿಷ್‌ನವರ (English) ರೀತಿ. ನಿಮ್ಮನ್ನ ಒಳಗೆ ಕರೆ ತಂದರೆ, ನೀವು ನಮ್ಮನ್ನು ಹೊರ ಹಾಕಿದ್ರಿ. ಶ್ರೀನಿವಾಸಪ್ರಸಾದ್ ಮನೆಗೆ ಹೋಗುವಾಗ ನಾನು ನಿಮಗೆ ಗನ್‌ಮ್ಯಾನ್ (Gun man) ಆಗಿದ್ದೆ. ಆದರೆ, ನೀವು ಯಾರನ್ನೂ ಬಿಡಲಿಲ್ಲ, ಹೊರ ಹಾಕಿದ್ರಿ. ಎಸ್.ಎಂ. ಕೃಷ್ಣ ನಿಮ್ಮನ್ನ ಅನ್ ಪಾಲಿಸ್ಡ್ ಡೈಮಂಡ್ ಅಂದ್ರು. ಆದರೆ, ನೀವು ಅವರನ್ನೂ ಏಕವಚನದಲ್ಲಿ ಮಾತನಾಡಿದ್ರಿ. ಸಿದ್ದರಾಮಯ್ಯಗೆ ಕೃತಜ್ಞತೆ ಎಂಬುದೇ ಗೊತ್ತಿಲ್ಲ ಎಂದು ಕಿಡಿಕಾರಿದರು.
ಜಾತಿ ವಿಚಾರ ಅನಾವಶ್ಯಕ ಚರ್ಚೆ
ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆ (BY Election) ಪ್ರಚಾರದಲ್ಲಿ ಕುರುಬರು, ಕಂಬಳಿ, ಕುರಿ, ಜಾತಿ ಸೇರಿದಂತೆ ಅನಾವಶ್ಯಕ ಚರ್ಚೆಗಳು ಆರಂಭವಾಗಿದೆ. ಜಾತಿ ವಿಚಾರವನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿರುವುದು ಸರಿಯಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು (Basavaraja bommai) ಆ ಭಾಗದವರು. ಅವರಿಗೆ ಕುರುಬ ಸಮುದಾಯದವರು ಕಂಬಳಿ ಹೊದಿಸಿ ಶುಭ ಹಾರೈಸಿದ್ದಾರೆ. ಆದರೆ, ಇದನ್ನು ಸಿದ್ದರಾಮಯ್ಯ (Siddaramaiah) ಸಹಿಸುತ್ತಿಲ್ಲ. ಅದನ್ನೇ ಸಿದ್ದರಾಮಯ್ಯ ಅನಗತ್ಯವಾಗಿ ಹಾದಿರಂಪ ಬೀದಿರಂಪ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸಿದ್ದರಾಮಯ್ಯಗೆ ರಾಜಕೀಯ ಪುಕ್ಕಲುತನ ಇದೆ ಎಂದ ಹಳ್ಳಿಹಕ್ಕಿ
ಕಂಬಳಿ ಹೊದ್ದುಕೊಳ್ಳಲು ಇವರಾರಯರು? ಕಂಬಳಿಗೂ ಇವರಿಗೂ ಏನು ಸಂಬಂಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಬಗ್ಗೆ ಮಾತನಾಡಿರುವುದು ಸರಿಯಲ್ಲ. ಇದು ಸಿದ್ದರಾಮಯ್ಯರ ಸಣ್ಣತನವನ್ನು ತೋರಿಸಿದೆ. ಇವರು ಸಹ ಮುಖ್ಯಮಂತ್ರಿಯಾಗಿದ್ದವರು. ನೀವು ಸಮಾಜದ ಗೌರವವನ್ನು ಕಳೆಯುತ್ತಿದ್ದೀರಿ. ಬಸವರಾಜ ಬೊಮ್ಮಾಯಿಯವರು ಕಂಬಳಿ ಹೊದ್ದುಕೊಂಡಾಗ ಅದರ ಗೌರವವನ್ನು ಹೆಚ್ಚಿಸುತ್ತೇನೆ. ಕುರುಬ ಸಮುದಾಯದ ಹಿತ ಕಾಯುತ್ತೇನೆಂದು ಭರವಸೆ ನೀಡಿದ್ದಾರೆ. ಆದರೆ, ಸಿದ್ದರಾಮಯ್ಯ ಏಕವಚನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರಧಾನಿಯನ್ನು ನಿಂದಿಸುತ್ತಿರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.
ಸಿದ್ದರಾಮಯ್ಯರ ಈ ವರ್ತನೆಯನ್ನು ಕುರುಬ ಸಮುದಾಯ ಗಮನಿಸಿದೆ. ಸಿದ್ದರಾಮಯ್ಯ ವರ್ತನೆಯನ್ನು ಕುರುಬ ಸಮುದಾಯ ಒಪ್ಪುವುದಿಲ್ಲ. ಕುರುಬ (Kuruba) ಸಮುದಾಯ, ಕಂಬಳಿ ಸಿದ್ದರಾಮಯ್ಯ ಸ್ವತ್ತಲ್ಲ. ಕುರಿ, ಕಂಬಳಿ ಸಮುದಾಯದ ಸೊತ್ತು. ಯಾವುದೇ ಜಾತಿಯ ಸ್ವತ್ತಲ್ಲ.
ನೀವು ಸಂಕುಚಿತವಾದಂತೆ ಕುರುಬರು ರಾಜಕೀಯವಾಗಿ, ಸಾಮಾಜಿಕವಾಗಿ ಏಕಾಂಗಿ ಆಗುವ ಅಪಾಯವಿದೆ. ಯಾವುದೇ ಜಾತಿ ಏಕಾಂಗಿಯಾಗಿ ಏನು ಮಾಡಲು ಸಾಧ್ಯವಿಲ್ಲ. ಇದನ್ನು ನೀವು ಗಮನದಲ್ಲಿ ಇಟ್ಟುಕೊಂಡು ಮಾತನಾಡಿ ಎಂದು ಅವರು ಹೇಳಿದರು.
ಏನ್ಲಾ ರಾಹುಲ್ ಗಾಂಧಿ, ಏನಮ್ಮ ಅನ್ನಿ
ಏಕವಚನದಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳನ್ನು ಸಂಭೋದಿಸೋದು ಎಷ್ಟುಸರಿ? ನಾನು ಮಾತನಾಡೋದೇ ಹೀಗೆ ಅಂತೀರಿ. ಹಾಗಾದ್ರೆ ಏನ್ಲಾ ರಾಹುಲ್ ಗಾಂಧಿ ಅನ್ನಿ. ಏನಮ್ಮ ಅನ್ನಿ ನಿಮ್ಮ ಅಧಿನಾಯಕಿಗೆ ಎಂದು ಅವರು ಸವಾಲು ಹಾಕಿದರು.
ನಾನೇ ನಾನೇ ಅಂತ ಹೇಳ್ತಿರಾ. ಚಾಮುಂಡೇಶ್ವರಿ (chamundeshwari) ಕ್ಷೇತ್ರದಲ್ಲಿ 36 ಸಾವಿರ ಮತಗಳ ಅಂತರದಲ್ಲಿ ಸೋತ್ರಿ. ಸೆಕೆಂಡ್ ಲೈನ್ ನಾಯಕರನ್ನು ಬೆಳೆಸಲಿಲ್ಲ. ನಾನು ನಾನು ಅಂತ ಮಾತಾಡ್ತಾರೆ. ನೀನು ಯಾವ ಸೀಮೆ ಅಹಿಂದ. ನನ್ನನ್ನೆ ಬಲಿಯಾಕ್ದೆ. ಚಿಮ್ಮನಕಟ್ಟಿಸೀಟ್ ಕಿತ್ಕೊಂಡ್ರಿ. ಅಲ್ಪಸಂಖ್ಯಾತರನ್ನು ಮುಗಿಸುತ್ತಿದ್ದೀರಿ. ನಿಮ್ಮದು ಯಾವ ಅಹಿಂದ. ಅಹಿಂದವನ್ನೇ ಮುಗಿಸುತ್ತಾ ಬಂದ್ರಿ. ನಿಮ್ಮ ಮಾತು ಕುರುಬ ಸಮಾಜವನ್ನು ಸಡಿಲ ಮಾಡುತ್ತಿದೆ ಎಂದು ಅವರು ದೂರಿದರು.
ನಾನೇ ಕಟ್ಟುಬಿಟ್ಟೆಮಠ ಅಂತೀರಾ. ಕನಕ ಗುರು ಪೀಠದ ಸ್ಥಾಪಕ ಅಧ್ಯಕ್ಷ ನಾನು. ಕುರುಬರು ದಡ್ರು, ಮಠ ಕಟ್ಟಿಸ್ವಾಮೀಜಿ ಪಾದ ಹಿಡಿಸ್ತೀಯಾ ಅಂತ ಸಿದ್ದರಾಮಯ್ಯ (Siddaramaiah) ಹೇಳಿದ್ರು. ಕಾಗಿನೆಲೆಯಲ್ಲಿ 10 ಸಾವಿರ ಮನೆ ಇದೆ. ಇದರಲ್ಲಿ 9500 ಮುಸ್ಲಿಂ ಸಮುದಾಯ ಇದೆ. ಮಠ ಕಟ್ಟಿದೆ ಅಂತೀರಾ ಕಾಗಿನೆಲೆ ಊರಿನ ಒಳಗೆ ಹೋಗಿಲ್ಲ. ಕನಕ ಗೋಪುರ ಕೆಡವಿದಾಗ ಎಲ್ಲಿದ್ರಿ? ಕುರುಬ ಸಮುದಾಯಕ್ಕೆ ನಿಮ್ಮ ಕೊಡುಗೆ ಏನು? ಕುರುಬ ಎಸ್‌ಟಿ ಹೋರಾಟಕ್ಕೆ ನಿಮ್ಮ ಬೆಂಬಲ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಬಹಳ ಜನಪ್ರಿಯವಾಗಿದ್ದ ಯಶಸ್ವಿನಿ ಯೋಜನೆಯನ್ನು ರಮೇಶ್‌ಕುಮಾರ್ ರದ್ದು ಮಾಡಿದರು. ಯಶಸ್ವಿನಿ ಯೋಜನೆಯಿಂದ ಬಡ ಮಧ್ಯಮ ವರ್ಗದ ಜನರಿಗೆ ಹೆಚ್ಚು ಪ್ರಯೋಜನವಾಗಿತ್ತು. ರಮೇಶ್‌ಕುಮಾರ್ ಮಾಡಿರುವ ಅಕ್ರಮ ಪ್ರಶ್ನಿಸಿದರೆ ನನ್ನನ್ನು ಹುಚ್ಚ ಅಂತಾರೆ. ಸಿದ್ದರಾಮಯ್ಯ ಜೈಲಿಗೆ ಹೋಗೋದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಲೋಕಾಯುಕ್ತಕ್ಕೆ ಶಾಶ್ವತವಾಗಿ ಬೀಗ ಹಾಕಿದ್ರು. ಸಿದ್ದರಾಮಯ್ಯ ಎಸಗಿದ್ದ ಭ್ರಷ್ಟಾಚಾರದಿಂದ ಬಚಾವಾಗಲು ಲೋಕಾಯುಕ್ತ (Lokayukta) ಮುಚ್ಚಿದ್ರು ಎಂದು ಅವರು ಆರೋಪಿಸಿದರು.
ಹಾನಗಲ್ ಸಿಂದಗಿ ಉಪ ಚುನಾವಣೆಯಲ್ಲಿ (Election) ಕುರುಬರು ಸಮುದಾಯ ಹಾಗೂ ನಾಡಿನ ಒಳಿತಿಗಾಗಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಮತ ಹಾಕಿ. ಇನ್ನೂ ಒಂದೂವರೆ ವರ್ಷ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುತ್ತದೆ. ಕುರುಬರ ಕಲ್ಯಾಣ ಬಿಜೆಪಿಯಿಂದ (BJP) ಮಾತ್ರ ಸಾಧ್ಯ. ಬಸವರಾಜ ಬೊಮ್ಮಾಯಿ ಕುರುಬರ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದ್ದಾರೆ. ಹಾಗಾಗಿ ಸಮುದಾಯದ ಅಭಿವೃದ್ಧಿಗಾಗಿ ಕುರುಬರು ಬಿಜೆಪಿಯನ್ನು ಬೆಂಬಲಿಸಿ.