ಅರಾಜಕತೆ ಸೃಷ್ಟಿ ಮಾಡೋದಿ ನಿಜವಾದ ನಾಯಕತ್ವ ಅಲ್ಲ. ಇಷ್ಟು ದಿನ ರೈತ ನಾಯಕ, ಈಗ ಕಾರ್ಮಿಕ ನಾಯಕರಾಗಿ ಕೋಡಿಹಳ್ಳಿ ಬದಲಾಗಿದ್ದಾರೆ. ಸಂದರ್ಭ-ಪರಿಸ್ಥಿತಿ ಅರ್ಥೈಸಿಕೊಂಡು ಬೇಡಿಕೆ ಈಡೇರಿಕೆಗೆ ಮುಂದಾಗಬೇಕು. ಅತಿ ಒತ್ತಡ ಹೇರಿದರೆ ಸಂಬಂಧ ಹರಿದು ಹೋಗುತ್ತದೆ ಎಂದು ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದರು.
ಚಿಕ್ಕಮಗಳೂರು (ಏ.07) : ಅರಾಜಕತೆ ಸೃಷ್ಟಿಸೋದೆ ನಾಯಕತ್ವದ ಲಕ್ಷಣ ಅಲ್ಲ. ಎತ್ತಿಕಟ್ಟೋದು, ಅರಾಜಕತೆ ಸೃಷ್ಟಿಸೋದು ಸುಲಭ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿಂದು ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೋಡಿಹಳ್ಳಿ ಚಂದ್ರಶೇಖರ್ ಇಷ್ಟು ದಿನ ರೈತ ನಾಯಕ, ಈಗ ಕಾರ್ಮಿಕ ನಾಯಕರಾಗಿ ಬದಲಾಗಿದ್ದಾರೆ. ಸಂದರ್ಭ-ಪರಿಸ್ಥಿತಿ ಅರ್ಥೈಸಿಕೊಂಡು ಬೇಡಿಕೆ ಈಡೇರಿಕೆಗೆ ಮುಂದಾಗಬೇಕು. ಅತಿ ಒತ್ತಡ ಹೇರಿದರೆ ಸಂಬಂಧ ಹರಿದು ಹೋಗುತ್ತದೆ ಎಂದರು.
ಇದೆಲ್ಲಾ ಬೇಕಿತ್ತಾ..? : ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಆಕ್ರೋಶ
ಸಂಬಂಧ ಹರಿದರೆ ಸರ್ಕಾರಕ್ಕಿಂತ ದೊಡ್ಡವರು ಯಾರೂ ಇಲ್ಲ. ಬೆದರಿಕೆ ಮೂಲಕ ಸರ್ಕಾರ ಮಣಿಸುವುದು ಅಸಾಧ್ಯ. ಸರ್ಕಾರ ರೈತರ ಪರ ತೆಗೆದುಕೊಂಡ ತೀರ್ಮಾನಗಳನ್ನು ರೈತ ವಿರೋಧಿ ಎನ್ನುತ್ತಿದ್ದರು. ಸರ್ಕಾರದ ಮೂರು ಮಸೂದೆ ರೈತರ ಪರವಾಗಿಯೇ ಮಾಡಲಾಗಿದೆ. ರೈತರು ತಾವು ಬೆಳೆದ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಲು ಅವಕಾಶ ಕೇಳಿದ್ದರು. ಈಗ ಮುಕ್ತ ಅವಕಾಶ ಸಿಕ್ಕ ಮೇಲೆ ರೈತ ವಿರೋಧಿ ಎಂದು ಹೇಳುತ್ತಿದ್ದಾರೆ ಎಂದರು.
ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಸಚಿವರು ನೌಕರರ ಜೊತೆ ಮಾತನಾಡಿ ಸಮಯ ಕೇಳಿದ್ದಾರೆ. ರಾಜ್ಯದ ಸಾರಿಗೆ ನೌಕರರು ಒಂದು ತಿಂಗಳು ಸಮಯ ಕೊಟ್ಟು ಕಾದು ನೋಡಬೇಕು ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.