ಕಾಂಗ್ರೆಸ್‌ ಕೋಟೆಯಲ್ಲಿ ಬಿಜೆಪಿ, ಜೆಡಿಎಸ್‌ ದರ್ಬಾರ್‌

  •  ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಂ.ಸಿ.ಮನಗೂಳಿ ಅವರ ನಿಧನದಿಂದಾಗಿ ತೆರವಾಗಿರುವ ಸಿಂದಗಿ
  • ಚುನಾವಣೆಯಲ್ಲೇನಿದ್ದರೂ ಈ ಬಾರಿ ತ್ರಿಕೋನ ಸ್ಪರ್ಧೆ ಖಚಿತ

ವರದಿ :  ರುದ್ರಪ್ಪ ಆಸಂಗಿ 

ವಿಜಯಪುರ (ಸೆ.02):  ಜೆಡಿಎಸ್‌ (JDS) ಮುಖಂಡ, ಮಾಜಿ ಸಚಿವ ಎಂ.ಸಿ.ಮನಗೂಳಿ ಅವರ ನಿಧನದಿಂದಾಗಿ ತೆರವಾಗಿರುವ ಸಿಂದಗಿ (Sindagi) ವಿಧಾನಸಭಾ ಉಪ ಚುನಾವಣೆಯಲ್ಲೇನಿದ್ದರೂ ಈ ಬಾರಿ ತ್ರಿಕೋನ ಸ್ಪರ್ಧೆ ಖಚಿತ. ಒಂದು ಕಾಲದಲ್ಲಿ ಕಾಂಗ್ರೆಸ್‌ನ (Congress) ಭದ್ರಕೋಟೆಯಾಗಿದ್ದ ಸಿಂದಗಿಯಲ್ಲಿ ಕಳೆದೊಂದು ದಶಕದಿಂದ ಬಿಜೆಪಿ (BJP) ಮತ್ತು ಜೆಡಿಎಸ್‌ ಬಲಿಷ್ಠವಾಗುತ್ತಿದೆ.

Latest Videos

ಕ್ಷೇತ್ರದಲ್ಲಿ ಈವರೆಗೆ 14 ಬಾರಿ ಚುನಾವಣೆ ನಡೆದಿದೆ. ಕಾಂಗ್ರೆಸ್‌ 7 ಬಾರಿ ಜಯಭೇರಿ ಬಾರಿಸಿದ್ದರೆ, ಬಿಜೆಪಿ ಮೂರು ಬಾರಿ ಹಾಗೂ ಜೆಡಿಎಸ್‌ ಎರಡು ಬಾರಿ ಗೆಲುವು ಸಾಧಿಸಿದೆ. ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ 1957ರಲ್ಲಿ ಪಾಟೀಲ ಶಂಕರಗೌಡ ಯಶವಂತರಾಯಗೌಡ , 1962ರಲ್ಲಿ ಚನ್ನಪ್ಪ ಮಡಿವಾಳಪ್ಪ ದೇಸಾಯಿ, 1967ರಲ್ಲಿ ಸಿ.ಎಂ.ದೇಸಾಯಿ, 1978ರಲ್ಲಿ ಬೆಕಿನಾಳಕರ ಮೈಬೂಬಸಾಬ ಹಸನಸಾಬ, 1983ರಲ್ಲಿ ಪಾಟೀಲ ನಿಂಗನಗೌಡ ರಾಚಣ್ಣಗೌಡ, 1989ರಲ್ಲಿ ಚೌಧರಿ ರಾಯಗೊಂಡ ಭೀಮಣ್ಣ, 1999ರಲ್ಲಿ ಸುಣಗಾರ ಶರಣಪ್ಪ ತಿಪ್ಪಣ್ಣ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ ಪಕ್ಷಗಳು ಕ್ಷೇತ್ರದ ಮೇಲೆ ಹಿಡಿತ ಸಾಧಿಸಿಕೊಂಡು ಬಂದಿವೆ.

ಸಿಂದಗಿ ಜೆಡಿಎಸ್‌ ಅಭ್ಯರ್ಥಿ ಘೋಷಣೆ : ಮಹಿಳೆಗೆ ಮಣೆ

ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿ, ಜೆಡಿಎಸ್‌ ನಡುವೆ ನೇರ ಸ್ಪರ್ಧೆ ನಡೆದರೆ ಕಾಂಗ್ರೆಸ್‌ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. 1994 ಹಾಗೂ 2018ರಲ್ಲಿ ಜನತಾದಳದ ಮನಗೂಳಿ ಮಲ್ಲಪ್ಪ ಚನ್ನವೀರಪ್ಪ (Manuguli Mallappa channaveerappa) ಆಯ್ಕೆಯಾಗುವ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಭದ್ರ ಬುನಾದಿ ಹಾಕಿಕೊಟ್ಟರು. 2004ರಲ್ಲಿ ಅಶೋಕ ಗುರಪ್ಪ ಶಾಬಾದಿ, 2008, 2013ರಲ್ಲಿ ಭೂಸನೂರ ರಮೇಶ ಬಾಳಪ್ಪ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಕಾಂಗ್ರೆಸ್ಸಿನ ಸಿ.ಎಂ.ದೇಸಾಯಿ, ಶಂಕರಗೌಡ ಪಾಟೀಲ, ಬಿಜೆಪಿಯ ರಮೇಶ ಭೂಸನೂರ ಹಾಗೂ ಜೆಡಿಎಸ್‌ನ ಎಂ.ಸಿ.ಮನಗೂಳಿ ಈವರೆಗೆ ಎರಡು ಬಾರಿ ಆಯ್ಕೆಯಾಗಿದ್ದಾರೆ.

ಮೂರು ಪಕ್ಷಗಳಿಗೂ ಪ್ರತಿಷ್ಠೆ:  ಅ.30ರಂದು ನಡೆಯಲಿರುವ ಈ ಉಪ ಚುನಾವಣೆ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಮೂರೂ ಪಕ್ಷಗಳಿಗೂ ಪ್ರತಿಷ್ಠೆಯ ಕಣ. ಜೆಡಿಎಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ಅನಿವಾರ‍್ಯತೆಯಾದರೆ, ಆಡಳಿತಾರೂಢ ಬಿಜೆಪಿಗೆ ಉಪ ಚುನಾವಣೆಗಳಲ್ಲಿ ಗೆಲುವಿನ ಓಟ ಮುಂದುವರಿಸುವ ಪ್ರತಿಷ್ಠೆ. ಇನ್ನು ಕಾಂಗ್ರೆಸ್‌ ತನ್ನ ಗತವೈಭವ ಮರುಗಳಿಸುವ ಪ್ರಯತ್ನದಲ್ಲಿದೆ. ಕಾಂಗ್ರೆಸ್‌ ಈಗಾಗಲೇ ಅಶೋಕ ಮನಗೂಳಿ ಅವರನ್ನು ತನ್ನ ಅಭ್ಯರ್ಥಿ ಎಂದು ಘೋಷಿಸಿದೆ. ಬಿಜೆಪಿಯಲ್ಲಿ ಮಾಜಿ ಶಾಸಕ ರಮೇಶ ಭೂಸನೂರ (Ramesh Bhusanur) ಸೇರಿ ಐವರು ಟಿಕೆಟ್‌ ಆಕಾಂಕ್ಷಿಗಳು ತೆರೆಮರೆಯ ಕಸರತ್ತು ಆರಂಭಿಸಿದ್ದಾರೆ. ಯಾರಿಗೆ ಟಿಕೆಟ್‌ ಎನ್ನುವುದೇ ಕುತೂಹಲ.

ಸಿಂದಗಿಯಲ್ಲಿ ಅನುಕಂಪ ವರ್ಕೌಟ್‌ ಆಗಲ್ಲ: ಬೂಸನೂರಿಗೆ ಬಿಜೆಪಿ ಟಿಕೆಟ್‌ ಪಕ್ಕಾ?

ಜೆಡಿಎಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿದೊಡ್ಡದೇ ಇದೆ. ಈಗಾಗಲೇ 8 ಮಂದಿ ಟಿಕೆಟ್‌ ಕೋರಿ ಜಿಲ್ಲಾಧ್ಯಕ್ಷರಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇಂಡಿ ಮಾಜಿ ಶಾಸಕ ರವಿಕಾಂತ ಪಾಟೀಲ ನೇರವಾಗಿ ಪಕ್ಷದ ವರಿಷ್ಠರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಜಾತಿ ಲೆಕ್ಕಾಚಾರ:  ಸಿಂದಗಿ ವಿಧಾನಸಭೆ ಮತ ಕ್ಷೇತ್ರದಲ್ಲಿ ಪಕ್ಷಕ್ಕಿಂತ ಜಾತಿ (Cast) ಲೆಕ್ಕಾಚಾರ ಹೆಚ್ಚು. ಇದರ ಜೊತೆಗೆ ವೈಯಕ್ತಿಕ ವರ್ಚಸ್ಸು ಕೂಡ ಹಿಂದಿನ ಚುನಾವಣೆ ಮೇಲೆ ಪ್ರಭಾವ ಬೀರಿದೆ ಎಂಬುದೂ ಮುಖ್ಯ. ಕ್ಷೇತ್ರದಲ್ಲಿ ಅಂದಾಜು ದಲಿತರು-40,000, ಕುರುಬರು-33,000, ಮುಸ್ಲಿಂ-31,500, ಗಾಣಿಗರು-25,800, ತಳವಾರ-18,800, ಪಂಚಮಸಾಲಿ-17000, ಬಣಜಿಗರು- 9,500 ಹಾಗೂ ಇತರೆ ಸಮುದಾಯದ 45,000 ಮತದಾರರು ಇದ್ದಾರೆ.

2018ರ ಫಲಿತಾಂಶ ವಿವರ

ಅಭ್ಯರ್ಥಿ- ಪಕ್ಷ- ಮತಗಳು

-ಮನಗೂಳಿ ಮಲ್ಲಪ್ಪ ಚನ್ನವೀರಪ್ಪ-ಜನತಾದಳ- 70865

-ಭೂಸನೂರ ರಮೇಶ ಬಾಳಪ್ಪ -ಬಿಜೆಪಿ-61560

-ಸಾಲಿ ಮಲ್ಲಣ್ಣ ನಿಂಗಪ್ಪ-ಕಾಂಗ್ರೆಸ್‌-22818

ಒಟ್ಟು ಮತದಾರರು

ಮತದಾರರು- 2,34,309

ಪುರುಷರು-1,20,949

ಮಹಿಳೆಯರು-1,13,327

ಫೋಟೊ- 30ವಿಜೆಪಿ1- ಸಿಂದಗಿ ಮತಕ್ಷೇತ್ರ

click me!