ದೇಶ ಹಾಗೂ ರಾಜ್ಯದಲ್ಲಿ ಯಾವುದಾದರೂ ವಚನ ಭ್ರಷ್ಟಹಾಗೂ ಅವಕಾಶವಾದಿ ರಾಜಕೀಯ ಪಕ್ಷ ಇದ್ದರೆ ಅದು ಬಿಜೆಪಿ ಮಾತ್ರ. ಪ್ರಧಾನಿ ಮೋದಿ ಕೂಡ ಒಬ್ಬ ಅವಕಾಶವಾದಿ ರಾಜಕಾರಣಿಯೆಂದು ಕಾಂಗ್ರೆಸ್ ವಕ್ತಾರ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು
ಚಿಕ್ಕಬಳ್ಳಾಪುರ : ದೇಶ ಹಾಗೂ ರಾಜ್ಯದಲ್ಲಿ ಯಾವುದಾದರೂ ವಚನ ಭ್ರಷ್ಟಹಾಗೂ ಅವಕಾಶವಾದಿ ರಾಜಕೀಯ ಪಕ್ಷ ಇದ್ದರೆ ಅದು ಬಿಜೆಪಿ ಮಾತ್ರ. ಪ್ರಧಾನಿ ಮೋದಿ ಕೂಡ ಒಬ್ಬ ಅವಕಾಶವಾದಿ ರಾಜಕಾರಣಿಯೆಂದು ಕಾಂಗ್ರೆಸ್ ವಕ್ತಾರ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗಾಳಿ ಇದ್ದು ಬಿಜೆಪಿ ವಿರೋದ ಅಲೆ ಇದೆ. ಬರುವಯಲ್ಲಿ ಜನ ವಿರೋಧಿ ಬಿಜೆಪಿಯನ್ನು ಮನೆಗೆ ಕಳುಹಿಸಲು ಜನ ತುದಿಗಾಲಲ್ಲಿದ್ದಾರೆ. ಕಾಂಗ್ರೆಸ್‌ಗೆ ಕನಿಷ್ಠ 140 ಸೀಟು ಬರುವುದು ಖಚಿತ ಎಂದರು.
ಬಿಜೆಪಿಯ ಹುಸಿ ಭರವಸೆಗಳು
ವಿದೇಶದಲ್ಲಿರುವ ಕಪ್ಪು ಹಣ ತರುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸುತ್ತೇವೆ, ಬೆಲೆ ಏರಿಕೆ ನಿಯಂತ್ರಿಸುತ್ತೇವೆಂಬ ಬಿಜೆಪಿ ಭರವಸೆಗಳು ಹುಸಿಯಾಗಿವೆ. ಬಿಪಿಎಲ್ ಕುಟುಂಬದ ಪ್ರತಿ ಕುಟುಂಬದ ಗೃಹಿಣಿಗೆ ಮಾಸಿಕ 2000 ರು, ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ಕರೆಂಟ್ ಕೊಡುತ್ತೇವೆಂದು ಕಾಂಗ್ರೆಸ್ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿಗೆ ಭಯ, ನಡುಕು ಶುರುವಾಗಿದೆ. ನಾವು ಕೊಟ್ಟಮಾತು ತಪ್ಪವರಲ್ಲ. ನುಡಿದಂತೆ ನಡೆದಿರುವ ಪಕ್ಷ ಇದ್ದರೆ ಕಾಂಗ್ರೆಸ್ ಮಾತ್ರ. ರಾಜ್ಯದಲ್ಲಿ ನೆರೆ ಸಂಕಷ್ಟ, ಅತಿವೃಷ್ಟಿ, ಕೋವಿಡ್ ಸಂಕಷ್ಟದಲ್ಲಿ ರೈತರು, ಕಾರ್ಮಿಕರು ತೊಂದರೆ ಇದ್ದಾಗ ಮೋದಿ ಏಕೆ ರಾಜ್ಯಕ್ಕೆ ಬರಲಿಲ್ಲ. ಚುನಾವಣೆ ಇದೆಯೆಂದು ಪದೇ ಪದೇ ಕರ್ನಾಟಕಕ್ಕೆ ಬರುವ ಉದ್ದೇಶವೇನು, ಇದು ಅವಕಾಶವಾದಿ ರಾಜಕಾರಣ ಅಲ್ಲವೇ ಎಂದು ವಿ.ಎಸ್.ಉಗ್ರಪ್ಪ ಪ್ರಶ್ನಿಸಿದರು.
100 ದಿನ ಅವಕಾಶ ಕೊಡಿ ಕಪ್ಪು ಹಣ ತರುತ್ತೇವೆ. ರೈತರ ಆದಾಯ ದ್ವಿಗುಣಗೊಳಿಸುತ್ತೇವೆ. ಬೆಲೆ ಏರಿಕೆ ನಿಯಂತ್ರಿಸ್ತೀವಿ ಎಂದು ಪ್ರಧಾನಿ ಮೋದಿ ಘೋಷಿಸಿದ್ದರು. ಆದರೆ ಅವರ ಕೈಯಲ್ಲಿ ಏನು ಆಗಲಿಲ್ಲ. ರಾಜ್ಯದ ಜನತೆ ಅವರಿಗೆ ಪಾಠ ಕಲಿಸುವ ದಿನಗಳು ಬಂದಿವೆ. ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳ ಬಗ್ಗೆ ಅರಿವು ಮೂಡಿಸಲು ರಾಜ್ಯದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆಸುತ್ತಿದೆಯೆಂದು ಉಗ್ರಪ್ಪ, ಬಿಜೆಪಿ ಕೊಟ್ಟಯಾವ ಭರವಸೆ ಕೂಡ ಈಡೇರಿಸಿಲ್ಲ ಎಂದರು.
ಮೋದಿ ಕಾರ್ಯಕ್ರಮದಲ್ಲಿ ಶಿಷ್ಟಚಾರ ಇಲ್ಲ
ಪ್ರಧಾನಿ ಮೋದಿ ರಾಜ್ಯಕ್ಕೆ ಬರುವ ಸರ್ಕಾರದ ಕಾರ್ಯಕ್ರಮಗಳಲ್ಲಿ ಶಿಷ್ಟಚಾರ ಪಾಲನೆ ಆಗುತ್ತಿಲ್ಲ. ಸರ್ಕಾರದ ಕಾರ್ಯಕ್ರಮಗಳನ್ನು ಪಕ್ಷದ ಕಾರ್ಯಕ್ರಮಗಳಾಗಿ ಆಚರಿಸಲಾಗುತ್ತಿದೆ. ಸರ್ಕಾರಿ ಕಾರ್ಯಕ್ರಮ ಅಂದ ಮೇಲೆ ಯಾರೇ ಸ್ಥಳೀಯ ಶಾಸಕರು ಇರಲಿ ಅಥವಾ ಸಂಸದರನ್ನು ಆಹ್ವಾನಿಸಬೇಕು. ಆದರೆ ಅದು ಮಾಡದೇ ಶಿಷ್ಟಚಾರ ಉಲ್ಲಂಘನೆ ಮಾಡಲಾಡಗುತ್ತಿದೆ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಎಲ್ಲಾ ಭ್ರಷ್ಟಾಚಾರ ಪ್ರಕರಣಗಳಿಗೆ ಕಾಂಗ್ರೆಸ್ ಮೂಲ ಎಂದು ಹೇಳುವ ಬಿಜೆಪಿಗೆ ತಾಕತ್ತು ಇದ್ದರೆ ಎಲ್ಲರನ್ನು ಜೈಲಿಗೆ ಕಳುಹಿಸಲಿ, ಮುಖ್ಯಮಂತ್ರಿಯಿಂದ ಹಿಡಿದು ಹಿಂದಿನ ಮುಖ್ಯಮಂತ್ರಿಗಳ, ಮಾಜಿ ಸಚಿವರ, ಹಾಲಿ ಸಚಿವರ ಆಸ್ತಿ ತನಿಖೆ ನಡೆಸಲಿ ಎಂದು ಉಗ್ರಪ್ಪ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ಹಿರಿಯ ಮುಖಂಡರಾದ ಯಲುವಹಳ್ಳಿ ರಮೇಶ್, ವಕೀಲ ನಾರಾಯಣಸ್ವಾಮಿ, ಗಂಗರೇಕಾಲುವೆ ನಾರಾಯಣಸ್ವಾಮಿ, ನಾಯನಹಳ್ಳಿ ನಾರಾಯಣಸ್ವಾಮಿ, ಪೆದ್ದಣ, ಹನುಮಂತಪ್ಪ, ಕೋನಪಲ್ಲಿ ಕೋದಂಡ, ಲಕ್ಷ್ಮಣ್ ಸೇರಿದಂತೆ ಮತ್ತಿತರರು ಇದ್ದರು.
ನಾಳೆ ಜಿಲ್ಲೆಗೆ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ
ಜ.23 ರಂದು ಸೋಮವಾರ ಮಧ್ಯಾಹ್ನ 3 ಗಂಟೆಗೆಚಿಕ್ಕಬಳ್ಳಾಪುರ ನಗರಕ್ಕೆ ಕಾಂಗ್ರೆಸ್ ಹಮ್ಮಿಕೊಂಡಿರುವ ಪ್ರಜಾಧ್ವನಿ ಯಾತ್ರೆ ಆಗಮಿಸಲಿದ್ದು ಅಂದು ನಗರದ ಹೊರ ವಲಯದ ಸಿವಿವಿ ಕ್ಯಾಂಪಸ್ ಬಳಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಪಕ್ಷದ ಉಸ್ತುವಾರಿಗಳಾದ ಸುರ್ಜೇವಾಲಾ, ಮಾಜಿ ಸಿಎಂ ಸಿದ್ದರಾಮಯ್ಯ, ಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದ ಹಲವು ಹಿರಿಯ ನಾಯಕರು ಭಾಗವಹಿಸಲಿದ್ದಾರೆಂದು ವಿ.ಎಸ್.ಉಗ್ರಪ್ಪ ಮಾಹಿತಿ ನೀಡಿದರು.