
ಹುಬ್ಬಳ್ಳಿ: ರಾಜ್ಯದಲ್ಲಿ 2028ರ ವರೆಗೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್‌ನಿಂದ ಮಾತ್ರ ಸಾಧ್ಯ. ಹಾದಿಯಲ್ಲಿ ಹೋಗುವ ಬೀದಿ ದಾಸಯ್ಯನನ್ನು ಹೈಕಮಾಂಡ್ ಮುಖ್ಯಮಂತ್ರಿ ಮಾಡಿದರೂ ನಾವು ಒಪ್ಪುತ್ತೇವೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯದಲ್ಲಿ ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ. ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದ್ದು ಡಿ.ಕೆ. ಶಿವಕುಮಾರ ಅವರನ್ನು ಮುಖ್ಯಮಂತ್ರಿ ಮಾಡಿದರೂ ಸ್ವಾಗತ ಎಂದರು.
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ (2019ರಿಂದ 2023) ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಒಂದೇ ಒಂದು ಮನೆ ನಿರ್ಮಿಸಿ ಕೊಟ್ಟಿಲ್ಲ. ಒಂದು ವೇಳೆ ಮನೆ ನಿರ್ಮಿಸಿಕೊಟ್ಟಿರುವುದನ್ನು ಸಾಬೀತುಪಡಿಸಿದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲೆಸೆದರು.
ನಮ್ಮ ಸರ್ಕಾರ ಯಾವ ಜಿಲ್ಲೆಗಳಲ್ಲಿ ಎಷ್ಟು ಮನೆ ನಿರ್ಮಿಸಿದೆ ಎಂಬುದನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಹೋಗಿ ಪರಿಶೀಲಿಸಲಿ ಎಂದ ಅವರು, ನಮಗೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವ ಒತ್ತಡವಿದೆ. ಆದರೆ, ಬಿಜೆಪಿ ಸರ್ಕಾರ ಇದ್ದಾಗ ಯಾವುದೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರಲಿಲ್ಲ. ಯಾವುದೇ ಒತ್ತಡವಿರಲಿಲ್ಲ. ಆದರೂ ಅವರು ಮನೆಗಳನ್ನು ಏಕೆ ನಿರ್ಮಿಸಿಕೊಡಲಿಲ್ಲ. ಅವರಿಂದ ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು. ಅವರಿಗೆ ಬಡವರ ಬಗ್ಗೆ ಕಾಳಜಿ ಇರಲಿಲ್ಲ. ಹೀಗಾಗಿ ಅವರು ಮನೆ ನಿರ್ಮಿಸಿಕೊಟ್ಟಿಲ್ಲ. ಈಗ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಅಷ್ಟೇ ಎಂದರು.
ಬಳ್ಳಾರಿಯಲ್ಲಿ ಸಣ್ಣ ಬ್ಯಾನರ್ ಕಟ್ಟುವ ವಿಚಾರಕ್ಕೆ ಗಲಾಟೆ ನಡೆಯಿತು. ಆದರೆ, ಅದು ನಡೆಯಬಾರದಿತ್ತು. ಜನಾರ್ದನ ರೆಡ್ಡಿ ಅವರು ದೊಡ್ಡ ಮನಸ್ಸು ಮಾಡಿ ಬ್ಯಾನರ್ ಕಟ್ಟಲು ಅವಕಾಶ ಮಾಡಿಕೊಟ್ಟಿದ್ದರೆ ಗಲಾಟೆ ಆಗುತ್ತಿರಲಿಲ್ಲ. ಬಳ್ಳಾರಿಯಲ್ಲಿ ವಾಲ್ಮೀಕಿ ಪ್ರತಿಮೆ ನಿರ್ಮಿಸಬೇಕು ಎಂಬುದು ಬಹು ದಿನಗಳ ಬೇಡಿಕೆಯಾಗಿತ್ತು. ಅದನ್ನು ಬಿಜೆಪಿಯವರಿಗೆ ಮಾಡಲು ಸಾಧ್ಯವಾಗಿರಲಿಲ್ಲ. ಶಾಸಕ ಭರತ್ ರೆಡ್ಡಿ ಅವರು ಪ್ರತಿಮೆ ನಿರ್ಮಿಸಿದರು. ಅದನ್ನು ಅವರಿಗೆ ಸಹಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿರುವ ಜಮೀರ್ ಅಹಮದ್‌ಖಾನ್, ಬಳ್ಳಾರಿಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ನಾವು ಪಾದಯಾತ್ರೆ ಮಾಡಿದ್ದೆವು. ಈಗ ಬಿಜೆಪಿಯವರು ಯಾವ ಉದ್ದೇಶಕ್ಕೆ ಪಾದಯಾತ್ರೆ ಮಾಡುತ್ತಾರೆ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸುಳ್ಳು ಸುದ್ದಿ: ₹20 ಕೋಟಿ ಮಾನನಷ್ಟ ಕೇಸ್