
ಬೆಳಗಾವಿ: ಅಸ್ತಿತ್ವದಲ್ಲಿ ಇಲ್ಲದ ಖಾಸಗಿ ಮಾಧ್ಯಮದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಆರೋಗ್ಯದ ಬಗ್ಗೆ ಇಲ್ಲಸಲ್ಲದ ಸುದ್ದಿಯನ್ನು ಅಪಪ್ರಚಾರ ಮಾಡಿದ್ದು, ಅವರ ಮೇಲೆ ₹ 20ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿರುವುದಾಗಿ ಸಾಹುಕಾರ ಅಭಿಮಾನಿಗಳ ಒಕ್ಕೂಟದ ಕಾನೂನು ಸಲಹೆಗಾರ್ತಿ ರಂಜಿತಾ ರೆಡ್ಡಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಾಹುಕಾರ ಅಭಿಮಾನಿಗಳ ಒಕ್ಕೂಟದಿಂದ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯದಲ್ಲಿ ಮಾಧ್ಯಮಗಳ ಮುಂದೆ ಕೆಸರೆರಚಾಟ ಮಾಡುವುದು ಸಾಮಾನ್ಯ. ವೈಯಕ್ತಿಕವಾಗಿ ತೆಜೋವಧೆ ಮಾಡುತ್ತಿರುವುದು ತಪ್ಪು. ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಂತೆ ವಿಡಿಯೋ ಬಿತ್ತರಿಸುವುದು. ಹಳೆಯ ವಿಡಿಯೋ ಬಳಸಿ ಸಚಿವ ಸತೀಶ ಜಾರಕಿಹೊಳಿ ಬಗ್ಗೆ ಶಾಸಕ ರಮೇಶ ಜಾರಕಿಹೊಳಿ ಅವರು ಅಧಿಕೃತವಾಗಿ ಮಾಧ್ಯಮಗಳ ಮುಂದೆ ನೀಡಲಾದ ಹೇಳಿಕೆಗಳನ್ನು ಎಡಿಟ್ ಮಾಡಿ ಜಾರಕಿಹೊಳಿ ಸಹೋದರರ ತೇಜೋವಧೆ ಮಾಡಲಾಗುತ್ತಿದೆ. ಇದರ ಹಿಂದಿರುವವರು ಮತ್ತು ಮಾಧ್ಯಮಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಳಸಿಕೊಳ್ಳುತ್ತಿರುವವರ ವಿರುದ್ಧ ದೂರು ದಾಖಲಿಸಲಾಗುತ್ತಿದೆ ಎಂದರು.
ಶಾಸಕ ರಮೇಶ ಜಾರಕಿಹೊಳಿ ಅವರು ವಿದೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಸ್ತಿತ್ವದಲ್ಲಿ ಇಲ್ಲದ ಟಿವಿ ಹೆಸರಿನಲ್ಲಿ ಹೇಮಂತಕುಮಾರ ಕಂಬಾರ ಎಂಬುವರು ಶಾಸಕರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಬಿತ್ತರಿಸಿದ್ದಾರೆ. ಅಲ್ಲದೇ, 2019ರಲ್ಲಿ ರಾಜಕಾರಣಿಯೊಬ್ಬರಿಗೆ ಆಡಿಯೋ ಕಾಲ್ ರೇಕಾರ್ಡಿಂಗ್ ಮಾಡಿ, ಬ್ಲಾಕ್ ಮೇಲ್ ಮಾಡಿ ತಮ್ಮ ನ್ಯೂಜ್ ಚಾನಲ್ ಪರವಾನಗಿ ರದ್ದುಗೊಳಿಸಿಕೊಂಡಿದ್ದು, ಜೈಲಿಗೂ ಹೋಗಿ ಬಂದಿದ್ದಾರೆ. ಜಾರಕಿಹೊಳಿ ಸಹೋದರರ ಅಭಿಮಾನಿಗಳ ಬಳಗದಿಂದ ಅವರ ವಿಳಾಸ ಪತ್ತೆ ಹಚ್ಚಿದ್ದು ₹ 20 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ ಎಂದು ಹೇಳಿದರು.
ಒಕ್ಕೂಟದ ರಾಜ್ಯಾಧ್ಯಕ್ಷ ಕಿರಣ ಡಮಾಮಗರ ಮಾತನಾಡಿ, ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ನಂತರ ಇಂತಹ ಅಪಪ್ರಚಾರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿದೆ. ಕಳೆದ ಕೆಲ ದಿನಗಳ ಹಿಂದೆ ರಮೇಶ ಕತ್ತಿ ಅವರು ಅಶ್ಲೀಲ ಪದ ಬಳಸಿ ಜಿಲ್ಲಾ ಉಸ್ತುವಾರಿ ಸಚಿವರ ತೇಜೋವಧೆ ಮಾಡಲು ಪ್ರಯತ್ನಿಸಿದರು. ಆ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಳಕೆ ಮಾಡಲಾಗಿದೆ. ಸಾಮಾಜಿಕ ಮಾಧ್ಯಮವನ್ನು ಮಹಿಳೆಯರು ಬಳಕೆ ಮಾಡುತ್ತಾರೆ ಎಂಬುದು ಅರಿವಿಲ್ಲದೆ ಹೇಳಿಕೆ ನೀಡಿದ ರಮೇಶ ಕತ್ತಿ ಮತ್ತು ಬಿತ್ತರಿಸಿದವರ ವಿರುದ್ಧವು ಕಾನೂನು ಹೋರಾಟ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಸೋಹೇಲ ಜಮಾದಾರ, ನಗರಸಭೆ ಸದಸ್ಯರಾದ ಪ್ರಕಾಶ ಮುರಾರಿ, ಕುತ್ಬುದ್ಧೀನ ಗೋಕಾಕ, ಅಬ್ಬಾಸ ದೇಸಾಯಿ, ಹುಬ್ಬಳ್ಳಿಯ ಸಿದ್ಧಾರೂಢ ಮಠದ ಧರ್ಮದರ್ಶಿ ಶಾಮಾನಂದ ಪೂಜಾರಿ, ಜಮಾದಾರ ಸೇರಿದಂತೆ ಇತರರು ಇದ್ದರು.-