ಜನಾರ್ದನ ರೆಡ್ಡಿ, ಶ್ರೀರಾಮುಲು ಬರುವಿಕೆಗೆ ಕಾಯುತ್ತಿರುವ ಮೈಲಾಪುರದ ದೇವರಾಜ
ಕಾರಟಗಿ(ಆ.07): ತಾಲೂಕಿನ ಮೈಲಾಪುರ ಗ್ರಾಮದ ಬಿಜೆಪಿ ಅಭಿಮಾನಿಯೊಬ್ಬರು ತಮ್ಮ ಪುತ್ರಿಗೆ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಹೆಸರಿಡಲು ನಿರ್ಧರಿಸಿದ್ದು, ಈ ನಾಮಕರಣವನ್ನು ಖುದ್ದಾಗಿ ಗಣಿ ಧಣಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಸಚಿವ ಬಿ. ಶ್ರೀರಾಮಲು ನಡೆಸಬೇಕೆಂದು ಕಾಯುತ್ತಿದ್ದಾರೆ. ಮೈಲಾಪುರ ಗ್ರಾಮದ ಬಿ. ದೇವರಾಜ್ ಶಿವಣ್ಣನವರ್ ಮಗಳ ನಾಮಕರಣಕ್ಕೆ ಸಿದ್ಧತೆ ನಡೆಸಿದ್ದಾರೆ.
ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ವಿಶೇಷ ಅಭಿಮಾನಿಯಾಗಿರುವ ದೇವರಾಜ್ ದಂಪತಿಗೆ ಇತ್ತೀಚಿಗೆ ಹೆಣ್ಣು ಮಗು ಜನಿಸಿದೆ. ತಮ್ಮ ಮಗಳಿಗೆ ‘ಸುಷ್ಮಾ ಸ್ವರಾಜ್’ ಹೆಸರಿಡಲು ಸಿದ್ಧವಾಗಿರುವ ದಂಪತಿ, ನಾಮಕರಣ ಕಾರ್ಯಕ್ರಮಕ್ಕೆ ಮಾತ್ರ ಸುಷ್ಮಾ ಸ್ವರಾಜ್ ಅವರ ಮಾನಸ ಪುತ್ರರು ಎಂದೇ ಈ ಭಾಗದಲ್ಲಿ ಖ್ಯಾತರಾಗಿರುವ ಸಚಿವ ಶ್ರೀರಾಮುಲು ಮತ್ತು ಮಾಜಿ ಸಚಿವ ಜನಾರ್ದನ ರೆಡ್ಡಿ ಬಂದು ಈ ಶುಭ ಕಾರ್ಯ ನೆರವೇರಿಸಬೇಕೆಂದು ಕಂಕಣತೊಟ್ಟು ಕುಳಿತಿದ್ದಾರೆ.
ನನ್ನ ಮಗಳಿಗೆ ಅವರೇ ನಾಮಕರಣ ಮಾಡಬೇಕು. ಅವರು ಬರುವ ವರೆಗೂ ಮಗಳಿಗೆ ನಾಮಕರಣ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಶನಿವಾರಕ್ಕೆ ಮಗು ಜನಿಸಿ 10 ದಿನಗಳಾಗಿವೆ. ಮನೆಯಲ್ಲಿ ಸಂಪ್ರದಾಯ ಪೂಜೆಗಳು ಪೂರ್ಣವಾಗಿವೆ. ಆದರೆ ನಾಮಕರಣ ಮಾಡಿಲ್ಲ ಎಂದು ದೇವರಾಜ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
undefined
KOPPAL: ಮುಸ್ಲಿಂ ಕುಟುಂಬದಿಂದ ವರಮಹಾಲಕ್ಷ್ಮೀ ಹಬ್ಬ ಆಚರಣೆ
ಮಗು ಹುಟ್ಟುವುದಕ್ಕೂ ಮುಂಚೆ, ಹೆಣ್ಣು ಮಗು ಜನಿಸಿದರೆ ‘ಸುಷ್ಮಾ ಸ್ವರಾಜ್’ ಎಂದೇ ನಾಮಕಾರಣ ಮಾಡಲು ದಂಪತಿ ನಿಶ್ಚಯ ಮಾಡಿಕೊಂಡಿದ್ದೆವು. ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮಲು ಬಂದೇ ಬರುತ್ತಾರೆ. ಮಗಳಿಗೆ ಸುಷ್ಮಾ ಸ್ವರಾಜ್ ಎಂದು ಹೆಸರಿಡುತ್ತಾರೆ ಎನ್ನುವ ಪೂರ್ಣ ವಿಶ್ವಾಸವಿದೆ ಎನ್ನುತ್ತಾರೆ ದೇವರಾಜ್.
ಈಗಾಗಲೇ ಶ್ರೀರಾಮುಲು ಆಪ್ತ ಸಹಾಯಕರ ಗಮನಕ್ಕೆ ತರಲಾಗಿದೆ. ಶನಿವಾರ ಸಂಜೆ ಜನಾರ್ದನ ರಡ್ಡಿ ಅವರ ಆಪ್ತ ಸಹಾಯಕರು ದೂರವಾಣಿಯ ಮೂಲಕ ವಿಷಯ ವಿಚಾರಣೆ ಮಾಡಿದ್ದಾರೆ. ರೆಡ್ಡಿ ಮಾತನಾಡುವ ಸಾಧ್ಯತೆ ಇದೆ. ಆನಂತರ ಮುಂದಿನ ನಿರ್ಧಾರ ಎಂದು ದೇವರಾಜ್ ಹೇಳಿದರು. ಈ ಕಾರ್ಯಕ್ರಮಕ್ಕೆ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರ ದಾರಿಯನ್ನು ದೇವರಾಜ್ ದಂಪತಿ ಕಾಯುತ್ತಿದೆ.