ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ, ಮಾಜಿ ಸಚಿವ ಬಸವರಾಜ ರಾಯರಡ್ಡಿ ವಿರುದ್ಧ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ವಾಗ್ದಾಳಿ| ಮಳೆಯಿಂದ ಹಾನಿಯಾಗಿರುವುದಕ್ಕೆ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿ ಮಾತನಾಡಿದರೂ ಶಿವರಾಜ ತಂಗಡಗಿ ರಾಜಕೀಯ ಮಾಡುತ್ತಾರೆ| ಬಸವರಾಜ ರಾಯರಡ್ಡಿ ದೇಶದ ಪ್ರಧಾನಿ ನರೇಂದ್ರ ಮೋದಿ ಕುರಿತು ಹಗುರವಾಗಿ ಮಾತನಾಡುತ್ತಿದ್ದು, ಇದು ಸರಿಯಲ್ಲ|
ಕೊಪ್ಪಳ(ಏ.18): ಆಲಿಕಲ್ಲು ಮಳೆಯಿಂದ ಹಾನಿಯಾಗಿರುವುದಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡುವ ಕಾರ್ಯವನ್ನು ಇಂಥ ಸಂಕಷ್ಟದ ಸ್ಥಿತಿಯಲ್ಲಿ ಮಾಡುತ್ತಿದ್ದರೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಡೋಂಗಿ ರಾಜಕಾರಣ ಎನ್ನುತ್ತಿದ್ದಾರೆ. ಆದರೆ, ನಿಜವಾದ ಡೋಂಗಿ ರಾಜಕಾರಣ ಮಾಡುವವರು ಕಾಂಗ್ರೆಸ್‌ನವರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ ಅವರು ಕಿಡಿಕಾರಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವರಾಜ ತಂಗಡಗಿ ಮತ್ತು ರಾಯರಡ್ಡಿ ವಿರುದ್ಧ ವಾಗ್ದಾಳಿ ಮಾಡಿದರು. ಹಾನಿಯಾಗಿರುವುದಕ್ಕೆ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿ ಮಾತನಾಡಿದರೂ ಶಿವರಾಜ ತಂಗಡಗಿ ಅವರು ರಾಜಕೀಯ ಮಾಡುತ್ತಾರೆ. ಇನ್ನು ಮಾಜಿ ಸಚಿವ ಬಸವರಾಜ ರಾಯರಡ್ಡಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಹಗುರವಾಗಿ ಮಾತನಾಡುತ್ತಿದ್ದು, ಇದು ಸರಿಯಲ್ಲ ಎಂದರು.
ಒಂದೇ ದಿನ 66 ಜನರ ಸ್ಯಾಂಪಲ್ ಲ್ಯಾಬ್‌ಗೆ: ಆತಂಕದಲ್ಲಿ ಕೊಪ್ಪಳ ಜನತೆ!
ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾ ವಿರುದ್ಧ ಹೋರಾಟಕ್ಕೆ ಎಲ್ಲರೂ ಒಗ್ಗೂಡಿಸುತ್ತಿದ್ದಾರೆ. ಜನರಲ್ಲಿ ಧೈರ್ಯತುಂಬುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಮೌಢ್ಯಬಿತ್ತುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಕೀಳು ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಕ್ರಮಕೈಗೊಳ್ಳಲಿ
ತಪ್ಪು ಯಾರೇ ಮಾಡಿದರೂ ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಹೀಗಾಗಿ ಗುರುಬಸವರಾಜ ಹೊಳಗುಂದಿ ತಪ್ಪು ಮಾಡಿದ್ದರೆ ಕ್ರಮಕೈಗೊಳ್ಳಲಿ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಶಿವರಾಜ ತಂಗಡಗಿ ಅವರ ವಿರುದ್ಧವೂ ವಾಗ್ದಾಳಿ ಮಾಡಿದರು. ಪರಿಹಾರದ ವಿಷಯದಲ್ಲಿಯೂ ರಾಜಕೀಯ ಮಾಡುವುದು ಸರಿಯಲ್ಲ. ಆದರಲ್ಲೂ ದೇಶವೇ ಕೊರೋನಾ ಮಹಾಮಾರಿಯಿಂದ ಬಳಲುತ್ತಿದೆ. ತೀರಾ ಸಂಕಷ್ಟಇದೆ. ಆದರೂ ಇದನ್ನು ಮೀರಿ ರೈತರ ಸಂಕಷ್ಟವನ್ನು ಆಲಿಸಿ, ಸರ್ಕಾರ ಪರಿಹಾರ ನೀಡುವುದಾಗಿ ಹೇಳಿದೆ. ಆದರೆ, ಇದರಲ್ಲಿಯೂ ರಾಜಕೀಯ ಟೀಕೆ ಮಾಡುವುದು ಸರಿಯಲ್ಲ ಎಂದರು.
ಪ್ರಚಾರ ತಗೊಳ್ಳೋ ಕ್ಯಾಟಗರಿ: ದಡೆಸೂಗೂರು
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಪ್ರಚಾರ ತೆಗೆದುಕೊಳ್ಳುವ ಕ್ಯಾಟಗಿರಿ. ಹೀಗಾಗಿ, ಬಾಯಿಗೆ ಬಂದಂತೆ ಮಾತನಾಡುತ್ತಾನೆ ಎಂದು ಕನಕಗಿರಿ ಶಾಸಕ ಬಸವರಾಜ ದಡೆಸೂಗೂರು ಅವರು ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶಿವರಾಜ ತಂಗಡಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಏಕವಚನದಲ್ಲಿಯೇ ವಾಗ್ದಾಳಿ ಮಾಡಿದರು. ಪರಿಹಾರದ ವಿಷಯದಲ್ಲಿಯೂ ಪ್ರಚಾರಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ. ಪ್ರಚಾರಕ್ಕೆ ಹೇಳಿಕೆ ನೀಡುವುದಕ್ಕೆ ಕಾಯಕ ಮಾಡಿಕೊಂಡಿರುವುದರಿಂದ ಆತನ ವಿರುದ್ಧ ಟೀಕೆ ಮಾಡುವುದೇ ಟೈಮ್ ವೆಸ್ಟ್ ಎಂದಿದ್ದಾರೆ.