ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ| ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ನಡೆದ ಘಟನೆ| ಗಲಾಟೆ, ಗೊಂದಲಗಳ ಮಧ್ಯೆ ಸರ್ಕಾರಿ ಐಟಿಐ ಕಾಲೇಜು ಕಟ್ಟಡ ಉದ್ಘಾಟನೆ|
ಹೂವಿನಹಡಗಲಿ(ಜ.29): ತಾಲೂಕಿನ ಹೊಳಲು ಗ್ರಾಮದಲ್ಲಿರುವ ಐಟಿಐ ಕಾಲೇಜಿನ ಲೋಕಾರ್ಪಣೆ ವಿಚಾರವಾಗಿ ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ, ಗೊಂದಲ, ಮಾತಿನ ಚಕಮಕಿ ನಡೆದು, ಕೊನೆಗೂ ಸರ್ಕಾರಿ ಐಟಿಐ ಕಾಲೇಜು ಕಟ್ಟಡವನ್ನು ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಲೋಕಾರ್ಪಣೆ ಮಾಡಿದ್ದಾರೆ.
ಸರ್ಕಾರಿ ಐಟಿಐ ಕಾಲೇಜು ಉದ್ಘಾಟನೆಗೆ ಜಿಪಂ ಹಾಗೂ ತಾಪಂ ಸದಸ್ಯರನ್ನು ಆಹ್ವಾನಿಸಿಲ್ಲವೆಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಉದ್ಘಾಟನೆ ಆಗಬೇಕಿದ್ದ ಕಾಲೇಜಿಗೆ ಬೀಗ ಹಾಕಿದ್ದರು. ಉದ್ಘಾಟನೆಗೆ ಆಗಮಿಸಿದ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ, ಬಿಜೆಪಿಯ ಜಿಪಂ ಸದಸ್ಯ ಕೊಟ್ರೇಶ, ತಾಪಂ ಸದಸ್ಯ ನಾರಮ್ಮನವರ್ ಬಸವರಾಜ ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಈ ಸಂದರ್ಭದಲ್ಲಿ ಅತ್ತ ಕಾಂಗ್ರೆಸ್ ಕಾರ್ಯಕರ್ತರು ಜೈಕಾರ ಹಾಕಿದರೆ, ಇತ್ತ ಬಿಜೆಪಿ ಕಾರ್ಯಕರ್ತರು ಶಾಸಕರ ದೌರ್ಜನ್ಯಕ್ಕೆ ಧಿಕ್ಕಾರ ಕೂಗಿದರು.
ಸಮಾರಂಭದಲ್ಲಿಯೇ ಕಾಲೇಜು ಪ್ರಾಚಾರ್ಯ ನಾಗೇಂದ್ರಪ್ಪ ಅವರನ್ನು ಕರೆದ ಶಾಸಕ, ಎಲ್ಲ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಸಮಾರಂಭ ಮಾಡಬೇಕಿತ್ತು. ಈ ರೀತಿ ಗೊಂದಲಗಳನ್ನು ಸೃಷ್ಟಿಮಾಡಿದರೆ ಹೇಗೆ? ಬಿಜೆಪಿಯವರನ್ನು ಯಾಕೆ ಆಹ್ವಾನಿಸಿಲ್ಲ? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಪ್ರಾಚಾರ್ಯ, ಬಿಜೆಪಿ ಜಿಪಂ ಹಾಗೂ ತಾಪಂ ಸದಸ್ಯರಿಗೆ ದೂರವಾಣಿ ಕರೆ ಮಾಡಿದ್ದೇವೆ. ಆದರೆ ಅವರ ಗಮನಕ್ಕೆ ತರದೇ ಸಿದ್ಧತೆ ಮಾಡಿರುವುದು ನಮ್ಮಿಂದ ತಪ್ಪಾಗಿದೆ, ಎಲ್ಲರೂ ಕ್ಷಮಿಸಿ ಎಂದು ಬಹಿರಂಗವಾಗಿಯೇ ಕ್ಷಮೆಯಾಚಿಸಿದರು.
ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಗ್ರಾಮಸ್ಥರ ಮಧ್ಯೆ ಪ್ರಾಚಾರ್ಯರು ಕ್ಷಮೆ ಕೇಳಿದ್ದಾರೆ. ತಾವು ಕೂಡಾ ಶೈಕ್ಷಣಿಕ ಕೆಲಸಕ್ಕೆ ಸಹಕಾರ ನೀಡಬೇಕಿದೆ ಎಂದು ಶಾಸಕರು ಹೇಳಿದಾಗ, ಬಿಜೆಪಿ ನಾಯಕರು ಮತ್ತೆ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮತ್ತೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಅತ್ತ ಶಾಸಕರು ಗಲಾಟೆಯ ಮಧ್ಯೆಯೇ ನೂತನ ಕಟ್ಟಡವನ್ನು ಉದ್ಘಾಟಿಸಿದರು.
ಈ ಹಿಂದೆ 2017ರಲ್ಲಿ ಹೊಳಲು ಗ್ರಾಮಕ್ಕೆ ಹೊಸ ಐಟಿಐ ಕಾಲೇಜು ಮಂಜೂರು ಮಾಡಿದ್ದೇವೆ. ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ ತಾವು ಮಂತ್ರಿಯಾಗಿದ್ದಾಗ 2.50 ಕೋಟಿ ಕಟ್ಟಡಕ್ಕೆ ಅನುದಾನ ನೀಡಲಾಗಿತ್ತು. ಈಗ ಸುಂದರ ಕಟ್ಟಡ ನಿರ್ಮಾಣವಾಗಿದೆ. ನಾಮಫಲಕದಲ್ಲಿ ಶಿಷ್ಟಾಚಾರದ ಪ್ರಕಾರ ಎಲ್ಲ ಜನಪ್ರತಿನಿಧಿಗಳ ಹೆಸರುಗಳನ್ನು ಹಾಕಿಸಲಾಗಿದೆ. ಆಹ್ವಾನಿಸಿಲ್ಲವೆಂಬ ಒಂದೇ ಕಾರಣಕ್ಕೆ ಈ ರೀತಿ ಧಿಕ್ಕಾರ ಕೂಗುವುದು, ಗಲಾಟೆ ಮಾಡುವುದು ಸರಿಯಲ್ಲ ಎಂದು ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಹೇಳಿದರು.
ಜನಪ್ರತಿನಿಧಿಗಳನ್ನು ಆಹ್ವಾನಿಸದೇ ಕಾಲೇಜು ಉದ್ಘಾಟನೆಗೆ ಪ್ರಾಚಾರ್ಯರು ಮುಂದಾಗಿರುವ ವಿಷಯವನ್ನು ಸಂಸದ ದೇವೇಂದ್ರಪ್ಪ ಅವರಿಗೆ ದೂರವಾಣಿ ಮೂಲಕ ಹೇಳಿದ್ದೇವೆ. ಅವರು ಮುಂದೆ ಯಾವ ಕ್ರಮ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧರಾಗಿದ್ದೇವೆ. ಪ್ರಾಚಾರ್ಯರು ಶಾಸಕರನ್ನು ಮುಂದಿಟ್ಟುಕೊಂಡು ಕಾರ್ಯಕ್ರಮ ಮಾಡುತ್ತಿರುವುದು ಸರಿಯಲ್ಲ ಎಂದು ಹೊಳಲು ಕ್ಷೇತ್ರದ ತಾಪಂ ಸದಸ್ಯ ನಾರಮ್ಮನವರ್ ಬಸವರಾಜ ಆರೋಪಿಸಿದರು.
ವೈಯಕ್ತಿಕ ಕಾರಣಗಳಿಂದ ನಿಮಗೆ ವಿಷಯ ಮುಟ್ಟಿಸಲು ಸಾಧ್ಯವಾಗಿಲ್ಲವೆಂದು ಹೇಳುವ ಪ್ರಾಚಾರ್ಯರ ವಿರ್ಧುದ ಕ್ರಮ ಕೈಗೊಳ್ಳಬೇಕೆಂದು ಸಂಸದರಿಗೆ ತಿಳಿಸಿದ್ದೇವೆ ಎಂದು ಜಿಪಂ ಸದಸ್ಯ ಸಿಂಗಟಾಲೂರು ಕೊಟ್ರೇಶ ಹೇಳಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಅಂಬ್ಲಿ ಮಲ್ಲಿಕಾರ್ಜುನ, ಗ್ರಾಪಂ ಅಧ್ಯಕ್ಷ ಹನುಮಂತಪ್ಪ, ಮುಖಂಡರಾದ ಅಟವಾಳಗಿ ಕೊಟ್ರೇಶ, ಅರವಳ್ಳಿ ವೀರಣ್ಣ, ಬಾಬಣ್ಣ ಹಿರೇಮಠ, ಚನ್ನವೀರಗೌಡ ಸೇರಿದಂತೆ ಇತರರಿದ್ದರು.