ಕೊಡಗಿನಲ್ಲಿ ಕೋಟೆ ಭದ್ರಪಡಿಸಿಕೊಳ್ಳಲು ಬಿಜೆಪಿ ಪ್ಲಾನ್ ಮಾಡಿದೆ. ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಸಂಚರಿಸಲಿರುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಾವಿರಾರು ಜನರನ್ನು ಸೇರಿಸಲು ಸಿದ್ಧತೆ ನಡೆಸಿದೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮಾ.9): ಕೊಡಗು ಜಿಲ್ಲೆ ಬಿಜೆಪಿಯ ಭದ್ರಕೋಟೆ. ಈ ಭದ್ರಕೋಟೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಎರಡು ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲೇಬೇಕೆಂಬ ಹಠಕ್ಕೆ ಬಿದ್ದಿದೆ. ಅದರಲ್ಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಳೆಹಾನಿ ಸಂಬಂಧ ವೀಕ್ಷಣೆಗಾಗಿ ಕೊಡಗಿಗೆ ಆಗಮಿಸಿದ್ದ ವೇಳೆ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದು ತೀವ್ರ ಗಲಾಟೆ ಮಾಡಲಾಗಿತ್ತು. ಈ ಗಲಾಟೆ ಬಳಿಕ ಕಾಂಗ್ರೆಸ್ ಎರಡು ಕ್ಷೇತ್ರಗಳನ್ನು ಗೆಲ್ಲಲೇಬೇಕೆಂಬ ಜಿದ್ದಿಗೆ ಬಿದ್ದಿದೆ. ಇತ್ತ ಎರಡೂವರೆ ದಶಕಗಳಿಂದ ಭದ್ರಕೋಟೆ ನಿರ್ಮಿಸಿಕೊಂಡಿರುವ ಬಿಜೆಪಿಗೆ ತನ್ನ ಕೋಟೆಯನ್ನು ಉಳಿಸಿಕೊಳ್ಳಲೇಬೇಕೆಂಬ ಅನಿವಾರ್ಯತೆ ಎದುರಾಗಿದೆ. ಹೀಗಾಗಿಯೇ ಶುಕ್ರವಾರದಿಂದ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಸಂಚರಿಸಲಿರುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಾವಿರಾರು ಜನರನ್ನು ಸೇರಿಸಲು ಸಿದ್ಧತೆ ನಡೆಸಿದೆ. ಜೊತೆಗೆ ಮಾರ್ಚ್ ತಿಂಗಳ ಕೊನೆಯವರೆಗೆ ರಾಜ್ಯ ನಾಯಕರನ್ನು ಕರೆಸಿ ನಿರಂತರವಾಗಿ ಎಲ್ಲಾ ಮೋರ್ಚಾಗಳ ಸಮಾವೇಶ ಮಾಡಲು ಈಗಾಗಲೇ ಡೇಟ್ ಫಿಕ್ಸ್ ಮಾಡಲಾಗಿದೆ.
undefined
ಆ ಮೂಲಕ ಬಿಜೆಪಿಯು ಎರಡು ಕ್ಷೇತ್ರಗಳಲ್ಲೂ ಗೆಲುವಿನ ನಾಗಲೋಟ ಮುಂದುವರಿಸಲು ಸಿದ್ಧತೆ ನಡೆಸಿದ್ದಾರೆ. ಜಿಲ್ಲೆಯಲ್ಲಿರುವ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಭರ್ಜರಿ ಸಿದ್ಧತೆ ನಡೆಸಿದೆ. ಶುಕ್ರವಾರ ಸಂಜೆ ಐದುಗಂಟೆಗೆ ಗೋಣಿಕೊಪ್ಪಕ್ಕೆ ಆಗಮಿಸಲಿರುವ ಮಾಜಿ ಸಚಿವ ಈಶ್ವರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ನೇತೃತ್ವದ ವಿಜಯ ಸಂಕಲ್ಪ ಯಾತ್ರೆ ಅಲ್ಲಿ ಬೃಹತ್ ಸಮಾವೇಶ ನಡೆಸಲಿದೆ. ನಂತರ ರಾತ್ರಿ ಮಡಿಕೇರಿಯಲ್ಲಿ ವಾಸ್ತವ ಹೂಡಲಿರುವ ತಂಡ ಶನಿವಾರ ಬೆಳಿಗ್ಗೆ ಮಡಿಕೇರಿ ನಗರದಲ್ಲಿ ರೋಡ್ ಶೋ ನಡೆಸಲಿದೆ. ಮಡಿಕೇರಿಯ ಚೌಡೇಶ್ವರಿ ದೇವಾಲಯದ ಬಳಿಯಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ರೋಡ್ ಶೋ ನಡೆಯಲಿದೆ. ನಂತರ ನಗರದ ಮಲ್ಲಿಕಾರ್ಜುನ ನಗರದಲ್ಲಿ ಎಸ್.ಟಿ. ಮೋರ್ಚಾದ ಮುಖಂಡರೊಂದಿಗೆ ಸಭೆ ನಡೆಯಲಿದೆ ಎಂದು ಬಿಜೆಪಿ ಕೊಡಗು ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಹೇಳಿದ್ದಾರೆ.
ಟಿಕೆಟ್ ಕಾಳಗದಲ್ಲಿ ನುಗ್ಗಿ ಬಂತು ಜಾತಿ ಮಿಸೈಲ್..!
ಜಿಲ್ಲೆಯಲ್ಲಿ ಯುವ ಮತದಾರರೇ ಹೆಚ್ಚಿರುವುದರಿಂದ ಅವರ ಮತಗಳನ್ನು ಸೆಳೆಯುವುದಕ್ಕಾಗಿ ಸಚಿವ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ 13 ರಂದು ಸೋಮವಾರಪೇಟೆಯಲ್ಲಿ ಯುವ ಮೋರ್ಚಾದ ಸಮಾವೇಶ ನಡೆಯಲಿದೆ. ಇನ್ನು ರೈತರನ್ನು ಸೆಳೆಯುವ ದೃಷ್ಟಿಯಿಂದ ಮೂರ್ನಾಡಿನಲ್ಲಿ ಸಚಿವ ಅರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ರೈತ ಮೋರ್ಚಾದ ಸಮಾವೇಶ ನಡೆಯಲಿದೆ. 15 ರಂದು ವಿರಾಜಪೇಟೆಯಲ್ಲಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಮಹಿಳಾ ಮೋರ್ಚಾ, 16 ರಂದು ಸಚಿವ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ಎಸ್.ಸಿ ಮೋರ್ಚಾದ ಸಮಾವೇಶಗಳು ನಡೆಯಲಿವೆ. 18 ರಂದು ಮಡಿಕೇರಿಯಲ್ಲಿ ಫಲಾನುಭವಿಗಳ ಸಮಾವೇಶ ನಡೆಯಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸಲಿದ್ದಾರೆ.
ಕರ್ನಾಟಕದಲ್ಲಿ 140ಕ್ಕೂ ಹೆಚ್ಚು ಬಿಜೆಪಿ ಅಭ್ಯರ್ಥಿಗಳು ಜಯ: ಬಿ.ಎಸ್.ಯಡಿಯೂರಪ್ಪ
ಅಂದೇ ಮಧ್ಯಾಹ್ನ ನಾಪೋಕ್ಲಿನಲ್ಲಿ ನಡೆಯಲಿರುವ ಕೊಡವ ಕೌಟಂಬಿಕ ಹಾಕಿ ಪಂದ್ಯಾವಳಿಗೆ ಸಿಎಂ ಚಾಲನೆ ನೀಡಲಿದ್ದಾರೆ. ಈಗಾಗಲೇ ಹಾಕಿ ಉತ್ಸವಕ್ಕೆ 1 ಕೋಟೆ ಅನುದಾನ ನೀಡಿರುವ ಸಿಎಂ ಆ ಮೂಲಕ ಕೊಡವ ಮತಗಳನ್ನು ಸೆಳೆಯಲು ಸಜ್ಜಾಗುತ್ತಿದ್ದಾರೆ. 20 ರಂದು ಎಸ್.ಟಿ. ಮೋರ್ಚಾದ ಸಮಾವೇಶವೂ ನಡೆಯಲಿದೆ. ಈಗಾಗಲೇ ಬೂತ್ ಮಟ್ಟದ ವಿಜಯ ಸಂಕಲ್ಪ ಯಾತ್ರೆ ಮಾಡಿ ಮುಗಿಸಿರುವ ಬಿಜೆಪಿ, ಮಂಡಲ ಮಟ್ಟದ ಸಮಾವೇಶಗಳನ್ನು ಯಶಸ್ವಿಯಾಗಿ ಮುಗಿಸಿದೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಬಿಜೆಪಿ ತನ್ನ ಭದ್ರಕೋಟೆಯನ್ನು ಇನ್ನಷ್ಟು ಗಟ್ಟಿಸಿಕೊಳ್ಳಲು ಎಲ್ಲಾ ಪ್ಲಾನ್ ರೂಪಿಸಿಕೊಂಡಿದೆ.