
ಬೆಂಗಳೂರು (ಅ. 19): ತಾವು ಸ್ವಚ್ಛಗೊಳಿಸಿ, ಬಣ್ಣ ಬಳಿದಿದ್ದ ಗೋಡೆಗಳ ಮೇಲೆ ನಟನ ಹುಟ್ಟುಹಬ್ಬಕ್ಕೆ ಶುಭಕೋರಿ ಅಭಿಮಾನಿಗಳು ಭಿತ್ತಿಚಿತ್ರಗಳನ್ನು ಅಂಟಿಸಿರುವ ಬಗ್ಗೆ ಯೂಥ್ ಫಾರ್ ಪರಿವರ್ತನ್ (Youth for Parivarthan) ತಂಡ ಬೇಸರ ವ್ಯಕ್ತಪಡಿಸಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವ ತಂಡ ತಾವು ಸ್ವಚ್ಛಗೊಳಿಸಿದ್ದ ಗೋಡೆಗಳ ಮೇಲೆ ನಟ ವಸಿಷ್ಠ ಸಿಂಹ (Vasishta Simha) ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಶುಭಾಶಯ ಕೋರಿ ಭಿತ್ತಿಚಿತ್ರಗಳನ್ನು ಅಂಟಿಸಿರುವ ಬಗ್ಗೆ ಆಕ್ರೋಶ ಹೊರಹಾಕಿದೆ. ಸ್ವಚ್ಛತೆ ಮತ್ತು ಸಮುದಾಯ ಚಟುವಟಿಕೆಯಲ್ಲಿ ತೊಡಗಿರುವ ಯೂಥ್ ಫಾರ್ ಪರಿವರ್ತನ್ ಗಾಂಧಿ ಜಯಂತಿಯಂದು ಬೆಂಗಳೂರಿನ (Bengaluru) ಬಿನ್ನಿಪೇಟೆಯಲ್ಲಿರುವ ವಿರೂಪಗೊಂಡಿದ್ದ ಗೋಡೆಯನ್ನು ಸ್ವಚ್ಛಗೊಳಿಸಿ ಹೊಸ ರೂಪ ನೀಡಿತ್ತು. ಆದರೆ ಈಗ ಸ್ವಚ್ಛಗೊಳಿಸಿದ್ದ ಗೋಡೆಗಳ ಮೇಲೆ ಭಿತ್ತಿಚಿತ್ರಗಳನ್ನು ಅಂಟಿಸಿರುವುದು ಇಡೀ ತಂಡಕ್ಕೆ ಬಹಳ ಬೇಸರವಾಗಿದೆ ಎಂದು ಸಂಸ್ಥೆ ತಿಳಿಸಿದೆ. ಅಲ್ಲದೇ ಇದೇ ಭಾನುವಾರ ಗೋಡೆಯಿಂದ ಭಿತ್ತಿಚಿತ್ರಗಳನ್ನು ತೆಗೆದು ಮತ್ತೆ ಆ ಗೋಡೆಗೆ ಬಣ್ಣ ಬಳಿದು, ಜಾಗವನ್ನು ಸ್ವಚ್ಚ ಮಾಡುವುದಾಗಿ ತಿಳಿಸಿದೆ.
"ಯೂಥ್ ಫಾರ್ ಪರಿವರ್ತನ ಸಂಸ್ಥೆಯ ನೂರಾರು ಯುವ ಸದಸ್ಯರು ಬಿಸಿಲು ಮಳೆಯನ್ನು ಲೆಕ್ಕಿಸದೆ, ತಮ್ಮ ನಗರದ ಸ್ವಚ್ಛತೆಗಾಗಿ ತಾವು ತಮ್ಮ ಕುಟುಂಬದ ಜೊತೆಗೆ ಕಳೆಯಬಹುದಾಗಿದ್ದ ತಮ್ಮ ವಾರಾಂತ್ಯದ ಅಮೂಲ್ಯವಾದ 7 ಗಂಟೆಗಳ ಸಮಯವನ್ನು ನಮ್ಮ ಬೆಂಗಳೂರು ನಗರ ಸ್ವಚ್ಚವಾಗಿರಬೇಕೆಂಬ ಭಾವನೆಯಿಂದ ಬಿನ್ನಿಪೇಟೆಯಲ್ಲಿರುವ ಒಂದು ವಿರೂಪಗೊಂಡಿದ್ದ ಗೋಡೆಯನ್ನು ಸ್ವಚ್ಛಗೊಳಿಸಿ, ಬಣ್ಣ ಬಳಿದು, ಸುಂದರವಾದ ಚಿತ್ತಾರಗಳನ್ನು ಬಿಡಿಸುವ ಮೂಲಕ ಆ ಜಾಗಕ್ಕೆ ಒಂದು ಹೊಸ ರೂಪವನ್ನು ನೀಡಿದ್ದರು. ಇವೆಲ್ಲ ಆಗಿದ್ದು ಇದೆ ಅಕ್ಟೋಬರ್ ತಿಂಗಳ 2ನೇ ತಾರೀಖು ಅಂದರೆ ಗಾಂಧಿ ಜಯಂತಿಯಂದು"
"ಆದರೆ, ಇಂದು ಬೆಳಿಗ್ಗೆ ಈ ದೃಶ್ಯವನ್ನು ಕಂಡು ನಮ್ಮ ಇಡೀ ತಂಡಕ್ಕೆ ಬಹಳ ಬೇಸರವಾಗಿದೆ. ಆ ಜಾಗವನ್ನು ಸ್ವಚ್ಛಗೊಳಿಸಿ ಒಂದು ಸುಂದರ ರೂಪವನ್ನು ನೀಡುವುದಕ್ಕೆ ನಮಗೆ 7 ಗಂಟೆ ತೆಗೆದುಕೊಂಡಿತ್ತು ಆದರೆ ಅಲ್ಲಿ ಭಿತ್ತಿಚಿತ್ರಗಳನ್ನು ಅಂಟಿಸಿದ ಪುಣ್ಯಾತ್ಮ ಆ 7 ಗಂಟೆಗಳ ಪರಿಶ್ರಮವನ್ನು ಬರೀ ಎರಡು ಕ್ಷಣಗಳಲ್ಲಿ ಕೆಡವಿಹಾಕಿದ್ದಾನೆ." ಎಂದು ಯೂಥ್ ಫಾರ್ ಪರಿವರ್ತನ್ ಬೇಸರ ವ್ಯಕ್ತಪಡಿಸಿದೆ
ಅಲ್ಲದೇ "ಈ ರೀತಿ ಭಿತ್ತಿಚಿತ್ರಗಳನ್ನು ಅಂಟಿಸಿ ಬೇರೊಬ್ಬರ ಪರಿಶ್ರಮವನ್ನು ಕೆಡಿಸುವುದರ ಬದಲಿಗೆ ನಾಲ್ಕು ಜನರಿಗೆ ಉಪಯೋಗ ಅಥವಾ ಸಹಾಯವಾಗುವಂತಹ ಕೆಲಸ ಮಾಡಿದರೆ ಅಭಿಮಾನಿಗಳ ತಮ್ಮ ಅಚ್ಚು ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬಹುದು. ಇದು ನಮ್ಮ ಅನಿಸಿಕೆ ಅಷ್ಟೇ" ಎಂದು ಸಂಸ್ಥೆ ಹೇಳಿದೆ
Mann Ki Baat: ಬೆಂಗಳೂರಿನ ಯೂಥ್ ಫಾರ್ ಪರಿವರ್ತನ್ ಸಂಸ್ಥೆಗೆ ಮೋದಿ ಭೇಷ್
"ವಸಿಷ್ಠ ಸಿಂಹರವರು ನಮ್ಮ ಕನ್ನಡ ಚಲನಚಿತ್ರರಂಗದ ಉದಯೋನ್ಮುಖ ನಟರು ಹಾಗೂ ಅವರ ನಟನೆಗೆ ನಾವೆಲ್ಲರೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದೇವೆ. ವಸಿಷ್ಠ ಸಿಂಹರಲ್ಲಿ ನಮ್ಮ ಮನವಿಯೊಂದಿದೆ, ಅದೇನೆಂದರೆ ಅವರು ತಮ್ಮ ಅಭಿಮಾನಿಗಳಲ್ಲಿ ಈ ರೀತಿಯ ಭಿತ್ತಿಚಿತ್ರಗಳನ್ನು ಅಂಟಿಸುವ ಬದಲು ನಮ್ಮ ನಗರದ ಸ್ವಚ್ಛತೆಗಾಗಿ ಏನಾದರೂ ಮಾಡುವ ಮೂಲಕ ಬೇರೆಯವರಿಗೆ ಮಾದರಿ ಆಗಬೇಕೆಂದು ಮನವಿ ಮಾಡಬೇಕಿದೆ"
"ಆ ಭಿತ್ತಿಚಿತ್ರದಲ್ಲಿ ನಮ್ಮ ರಾಜ್ಯದ ಯುವ ನಾಯಕರು ಹಾಗೂ ಜನಪ್ರಿಯ ಮಾಜಿ ಶಾಸಕರು ಶ್ರೀ.ಪ್ರಿಯಾಕೃಷ್ಣ ರವರ ಭಾವಚಿತ್ರ ಕೂಡ ಕಾಣುತ್ತದೆ. ಸಮಾಜದಲ್ಲಿರುವ ಎಷ್ಟೋ ಜನ ಯುವಕರಿಗೆ ಸ್ಫೂರ್ತಿ ಹಾಗೂ ಮಾದರಿಯಾಗಿರುವ ಪ್ರಿಯಾಕೃಷ್ಣ ಅವರು ತಮ್ಮ ಬೆಂಬಲಿಗರಲ್ಲಿ ಈ ರೀತಿಯ ಕೆಲಸವನ್ನು ಮಾಡುವುದು ತಪ್ಪು ಎಂದು ಮನವಿ ಮಾಡಬೇಕೆಂಬುದು ನಮ್ಮ ಕಳಕಳಿಯ ಪ್ರಾರ್ಥನೆ" ಎಂದು ಸಂಸ್ಥೆ ತಿಳಿಸಿದೆ