ಜಾನುವಾರುಗಳಿಗೆ Lumpy skin disease; ಹೈನೋದ್ಯಮಕ್ಕೆ ಪೆಟ್ಟು

By Kannadaprabha News  |  First Published Oct 19, 2022, 3:07 PM IST
  • ಚರ್ಮಗಂಟು ರೋಗದಿಂದ ಹೈನೋದ್ಯಮಕ್ಕೆ ಪೆಟ್ಟು
  • ಹಾಲು ಖರೀದಿಗೆ ಗ್ರಾಹಕ ಹಿಂದೇಟು
  • ಅಘೋಚರ ಕೆಚ್ಚಲು ಬಾವು ರೋಗದಿಂದಲೂ ರೈತರು ಹೈರಾಣ

ಚಂದ್ರು ಕೊಂಚಿಗೇರಿ

 ಹೂವಿನಹಡಗಲಿ (ಅ.19) : ಕಳೆದೊಂದು ತಿಂಗಳಿನಿಂದ ಜಾನುವಾರುಗಳಿಗೆ ಚರ್ಮಗಂಟು ರೋಗ ಬೆನ್ನಿಗೆ ಬಿದ್ದ ಬೇತಾಳಂತೆ ಕಾಡುತ್ತಿದೆ. ಇದರಿಂದ ಹೈನೋದ್ಯಮಕ್ಕೆ ಪೆಟ್ಟು ಬೀಳುವ ಜತೆಗೆ, ಹಾಲು ಖರೀದಿ ಮಾಡುವ ಗ್ರಾಹಕರು ಕೂಡಾ ಹಿಂದೇಟು ಹಾಕುತ್ತಿದ್ದಾರೆ.

Tap to resize

Latest Videos

undefined

Lumpy skin disease: ರಾಸುಗಳಿಗೆ ಚರ್ಮಗಂಟು ರೋಗ; ಆತಂಕದಲ್ಲಿ ರೈತರು

ಕೃಷಿ ಕ್ಷೇತ್ರದ ಜತೆಗೆ ಉಪ ಜೀವನಕ್ಕಾಗಿ ರೈತ ಸಮುದಾಯ ಹೈನೋದ್ಯಮದತ್ತ ದಾಪುಗಾಲಿಟ್ಟಿದೆ. ಸಹಕಾರ ಸಂಘ, ಸಂಸ್ಥೆ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ದುಬಾರಿ ರಾಸುಗಳನ್ನು ಖರೀದಿ ಮಾಡಿ ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಆದರೆ, ಚರ್ಮಗಂಟು ರೋಗದಿಂದ ಈ ವರೆಗೂ 319 ಜಾನುವಾರುಗಳು ಮೃತಪಟ್ಟಿವೆ. ಇದರಲ್ಲಿ ಹಾಲು ಕೊಡುವ 104 ಹಸುಗಳು ಸಾವನ್ನಪ್ಪಿವೆ. ಚರ್ಮಗಂಟು ರೋಗ ವಾಸಿ ಮಾಡಲು ರೈತರು ಹರಸಾಹಸ ಮಾಡುತ್ತಿದ್ದಾರೆ. ಜತೆಗೆ ಹಾಲು ಕರೆಯುವ ರಾಸುಗಳು ಸರಿಯಾಗಿ ಮೇವು ತಿಂದು ನೀರು ಕುಡಿಯುತ್ತಿಲ್ಲ. ಇದರಿಂದ ಹಾಲಿನ ಉತ್ಪಾದನೆಗೆ ಪೆಟ್ಟು ಬಿದ್ದಿದೆ.

ಚರ್ಮಗಂಟು ರೋಗ ಬೇಗನೆ ವಾಸಿಯಾಗುತ್ತಿಲ್ಲ, ಹಾಲು ಕೊಡುವ ಹಸುಗಳನ್ನು ರೈತರು ಸಾಕಷ್ಟುಆರೈಕೆ ಮಾಡುತ್ತಿದ್ದಾರೆ. ಇದರಿಂದ ಹಾಲು ಉತ್ಪಾದನೆಯೂ ಕಡಿಮೆಯಾಗುತ್ತಿದೆ. ಈ ರೋಗದಿಂದ ಶೇ. 10ರಷ್ಟುಹಾಲಿನ ಉತ್ಪಾದನೆ ಕಡಿಮೆಯಾಗುತ್ತಿದೆ. ಆರೋಗ್ಯದಲ್ಲಿ ಚೇತರಿಕೆಯ ನಂತರವೂ ಹಾಲು ಉತ್ಪಾದನೆಯಲ್ಲಿ ಏರಿಕೆ ಕಂಡು ಬರುತ್ತಿಲ್ಲ.

ಚರ್ಮಗಂಟು ರೋಗ ಬಂದಿರುವ ಹಸುಗಳ ಹಾಲು ಬಳಕೆ ಮಾಡಿದರೆ ಜನರಿಗೂ ನಾನಾ ರೀತಿಯ ಕಾಯಿಲೆ ಬರುತ್ತದೆ ಎಂದು ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿತ್ತು. ಇದನ್ನು ನೋಡಿದ ಜನ, ಭಯಭೀತರಾಗಿ ಹಾಲು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹಾಲು ಇಲ್ಲದೇ ಕರಿ ಚಹಾ ಸೇವಿಸುದ್ದಾರೆ.

ತಾಲೂಕಿನಲ್ಲಿ ಒಟ್ಟು 70 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಹೊಳಲು ಗ್ರಾಮದಲ್ಲೇ ಗುರಿ ಮೀರಿ ಹಾಲು ಉತ್ಪಾದನೆಯಾಗುತ್ತಿದೆ. ರೋಗ ಬರುವುದಕ್ಕೆ ಮುನ್ನ ಎಲ್ಲ ಕೇಂದ್ರಗಳಿಂದ ನಿತ್ಯ 28 ರಿಂದ 30 ಸಾವಿರ ಲೀ ಹಾಲು ಸಂಗ್ರಹವಾಗುತ್ತಿತ್ತು. ಈ ಶೇ. 10 ರಷ್ಟುಹಾಲು ಉತ್ಪಾದನೆ ಕಡಿಮೆಯಾಗಿದೆ. ಜತೆಗೆ ಕೇಂದ್ರದಲ್ಲಿ ಹಾಲು ಖರೀದಿ ಮಾಡುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಶೇ. 20ರಷ್ಟುಜನ ಹಾಲು ಖರೀದಿ ಮಾಡುತ್ತಿಲ್ಲ. ಈಚೆಗೆ ಚರ್ಮಗಂಟು ರೋಗದ ಜತೆಗೆ ಹಾಲು ಕೊಡುವ ರಾಸುಗಳಿಗೆ ಅಘೋಚರ ಕೆಚ್ಚಲು ಬಾವು ಬರುತ್ತಿದೆ. ಇಂತಹ ರಾಸುಗಳ ಹಾಲು ಚೆನ್ನಾಗಿರುವ ಹಾಲನ್ನೂ ಕೆಡಿಸುತ್ತದೆ. ಆದರಿಂದ ಅಘೋಚರ ಕೆಚ್ಚಲ ಬಾವು ಬಂದಿರುವ ರಾಸುಗಳ ಹಾಲನ್ನು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಪರೀಕ್ಷೆ ಮಾಡಲಾಗುತ್ತಿದೆ. 2 ಎಂಎಲ್‌ ಹಾಲು, 2 ಎಂಎಲ್‌ ಸಿಎಂಟಿ ದ್ರವ ಹಾಕಿ ಪರೀಕ್ಷೆ ಮಾಡಲಾಗುತ್ತಿದೆ. ಅಘೋಚರ ಕೆಚ್ಚಲು ಬಾವು ಬಂದಿರುವ ರಾಸುಗಳಿಗೆ ಕೆಎಂಎಫ್‌ನಿಂದ ಉಚಿತವಾಗಿ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

Raita Ratna award 2022: 13 ವರ್ಷಗಳಿಂದ ದೇಸಿ ಹೈನೋದ್ಯಮದಲ್ಲಿ ಸಾಧನೆ ಮೆರೆದ ಕೆ.ಡಿ. ಕುಮಾರ್‌

ತಾಲೂಕಿನಲ್ಲಿ 70 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಈ ಹಿಂದೆ ನಿತ್ಯ 28 ರಿಂದ 30 ಸಾವಿರ ಲೀ. ನಷ್ಟುಹಾಲು ಸಂಗ್ರಹವಾಗುತಿತ್ತು. ಈಗ ಶೇ.10-15ರಷ್ಟುಹಾಲಿನ ಉತ್ಪಾದನೆ ಕುಂಠಿತವಾಗಿದೆ. ಜತೆಗೆ ಸಂಘಗಳಲ್ಲಿ ಹಾಲು ಖರೀದಿಸುವವರ ಸಂಖ್ಯೆ ಶೇ. 20ರಷ್ಟುಕಡಿಮೆಯಾಗಿದೆ. ಚರ್ಮಗಂಟು ರೋಗ ಬಂದಿರುವ ರಾಸುಗಳ ಹಾಲು ಬಳಕೆಯಿಂದ ಜನರಿಗೆ ಯಾವುದೇ ರೋಗ ಬರುವುದಿಲ್ಲ.

ಎಂ. ಕೊಟ್ರೇಶ, ಪ್ರಭಾರ ಉಪ ವ್ಯವಸ್ಥಾಪಕ, ಹೂವಿನಹಡಗಲಿ.

ಚರ್ಮಗಂಟು ರೋಗಕ್ಕೆ ಈ ವರೆಗೂ ತಾಲೂಕಿನಲ್ಲಿ 319 ಜಾನುವಾರುಗಳು ಸಾವನ್ನಪ್ಪಿವೆ. ಇದರಲ್ಲಿ 104 ಹಾಲು ಕೊಡುವ ಹಸುಗಳು ಮೃತಪಟ್ಟಿವೆ. ರೋಗ ಬಂದ ರಾಸುಗಳು ಸರಿಯಾಗಿ ಹಾಲು ಕೊಡುವುದಿಲ್ಲ. ಹಾಲಿನ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ.

ನಾರಾಯಣ ಬಣಕಾರ, ಸಹಾಯಕ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ, ಹೂವಿನಹಡಗಲಿ.

click me!