ಹೆಸರು ಖರೀದಿ ವಿಳಂಬ: ತಹಸೀಲ್ದಾರ್‌ ಕಚೇರಿಗೆ ರೈತರ ಮುತ್ತಿಗೆ

By Kannadaprabha News  |  First Published Oct 19, 2022, 2:57 PM IST
  •  ಹೆಸರು ಖರೀದಿ ವಿಳಂಬ: ತಹಸೀಲ್ದಾರ್‌ ಕಚೇರಿಗೆ ರೈತರ ಮುತ್ತಿಗೆ
  • -ಹೆಸರು ಚೀಲ ತುಂಬಿದ ಟ್ರ್ಯಾಕ್ಟರ್‌ಗಳೊಂದಿಗೆ ಪ್ರತಿಭಟನೆ ನಡೆಸಿದ ರೈತರು
  • -ರಾತ್ರಿಯ ವರೆಗೂ ಮುಂದುವರೆದ ಪ್ರತಿಭಟನೆ

ರೋಣ (ಅ.19) : ಬೆಂಬಲ ಬೆಲೆಯಲ್ಲಿ ಹೆಸರು ಖರೀದಿಸಲು ಮತ್ತೆ ವಿಳಂಬ ಧೋರಣೆ ಅನುಸರಿಸಿರುವುದನ್ನು ಖಂಡಿಸಿ ರೈತರು ಹೆಸರು ಚೀಲ ತುಂಬಿಕೊಂಡ ಟ್ರ್ಯಾಕ್ಟರ್‌ ತೆಗೆದುಕೊಂಡು ತಹಸೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತೇವಾಂಶದ ನೆಪ ಹೆಸರು ಖರೀದಿಸದ ಅಧಿಕಾರಿಗಳು; ಮಾರಾಟಕ್ಕೆ ರೈತರ ಪರದಾಟ

Tap to resize

Latest Videos

undefined

ನಾಲ್ಕು ದಿನಗಳ ಹಿಂದೆ ಹೆಸರು ಖರೀದಿಯಲ್ಲಿ ವಿಳಂಬ ಮಾಡಿದ್ದರಿಂದ ರೈತರು ಅಂದು ತಹಸೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಆಗ ತಹಸೀಲ್ದಾರ್‌ ಮಧ್ಯ ಪ್ರವೇಶಿಸಿ ಖರೀದಿ ಪ್ರಕ್ರಿಯೆಗೆ ವ್ಯವಸ್ಥೆ ಕಲ್ಪಿಸಿದ್ದರು. ಆದರೆ, ಎರಡು ದಿನಗಳ ಬಳಿಕ ಮತ್ತೆ ಖರೀದಿಗೆ ಕೇಂದ್ರದ ವ್ಯವಸ್ಥಾಪಕರು ಮುಂದಾಗದಿದ್ದರಿಂದ 2ದಿನ ಕಾಯ್ದ ರೈತರು ಬೇಸತ್ತು ಮಂಗಳವಾರ ಹೆಸರು ಚೀಲ ತುಂಬಿದ್ದ ಟ್ರ್ಯಾಕ್ಟರ್‌ ಸಮೇತ ತಹಸೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ರೈತ ಮಹಿಳೆ ಶಂಕ್ರಮ್ಮ ಬಾವಿ ಮಾತನಾಡಿ, ಕಳೆದ ಮೂರು ದಿನಗಳಿಂದ ಹೆಸರು ತಂದು ಸರದಿ ಸಾಲಲ್ಲಿ ನಿಂತಿದ್ದು, ಖರೀದಿಗೆ ಮುಂದಾಗುತ್ತಿಲ್ಲ. ಇದರಿಂದ ಖರೀದಿ ಕೇಂದ್ರಕ್ಕೆ ಅಲೆದು ಸಾಕಾಗಿದೆ. ಇಂದು ಬಾ ನಾಳೆ ಬಾ ಎಂದು ನಮ್ಮನ್ನು ಸತಾಯಿಸುತ್ತಿದ್ದಾರೆ. 12 ಗಂಟೆಯ ಒಳಗೆ ಬರಬೇಕಿತ್ತು, ಇಂದು ಸಮಯವಾಗಿದೆ, ನಾಳೆ ಬನ್ನಿ ಎಂದು ಖರೀದಿ ಕೇಂದ್ರದವರು ಸತಾಯಿಸುತ್ತಿದ್ದಾರೆ. ಬೆಳಗ್ಗೆ ಬೇಗ ಬಂದರೂ ಸಹ ಏನಾದರೊಂದು ಕಾರಣ ಹೇಳಿ ನಮ್ಮನ್ನು ಮರಳಿ ಕಳುಹಿಸುತ್ತಿದ್ದಾರೆ.

ಈ ರೀತಿ ಮಾಡಿದಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ ಏಕೆ ತೆರೆಯಬೇಕು. ಕಾಟಾಚಾರಕ್ಕೆ ಖರೀದಿ ಕೇಂದ್ರ ತೆರದು ರೈತರಿಗೆ ತೊಂದರೆ ನೀಡೊದು ಸರಿಯಲ್ಲ. ವರ್ಷಪೂರ್ತಿ ಕಷ್ಟಪಟ್ಟು ಸಾಲ, ಸೂಲ ಮಾಡಿ ಬೆಳೆ ಬೆಳೆದಿದ್ದೇವೆ. ಮಳೆಗೆ ಸಿಕ್ಕು ಎಲ್ಲ ಬೆಳೆ ಹಾಳಾದರೆ ನಾವು ಏನು ಮಾಡಬೇಕು. ಕಳೆದ ಒಂದು ವಾರದಿಂದಲೂ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಅಲೆದಾಡುತ್ತಿದ್ದೇವೆ. ಮುಂಜಾನೆಯೇ ಬಂದು ಕುಳಿತಿದ್ದೇವೆ ಇದುವರೆಗೂ ಊಟವನ್ನು ಸಹ ಮಾಡಿಲ್ಲ. ಅಧಿಕಾರಿಗಳು ಕೇವಲ ಹುಸಿ ಭರವಸೆ ನೀಡಿ ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಉಪತಹಸೀಲ್ದಾರ್‌ ಜೆ.ಟಿ. ಕೊಪ್ಪದ ಅವರು, ತಹಸೀಲ್ದಾರ್‌ ಅವರೊಂದಿಗೆ ದೂರವಾಣಿಯ ಮೂಲಕ ಮಾತನಾಡಿದ್ದು, ಸಮಸ್ಯೆಯನ್ನು ಬಗೆಹರಿಸುತ್ತಾರೆ. ಖರೀದಿ ಕೇಂದ್ರದವರ ಜೊತೆ ಮಾತನಾಡುತ್ತಾರೆ ಎಂದು ಭರವಸೆ ನೀಡಿದ ಅವರು, ಪ್ರತಿಭಟನೆಯನ್ನು ಕೈ ಬಿಡುವಂತೆ ಮನವೊಲಿಸಲು ಪ್ರಯತ್ನಿಸಿದರು. ರೈತರು ಮಾತ್ರ ನಾವು ಯಾವುದೇ ಕಾರಣಕ್ಕೂ ಈ ಜಾಗ ಬಿಟ್ಟು ಕದಲುವುದಿಲ್ಲ. ನಮ್ಮ ಬೆಳೆಗಳನ್ನು ಖರೀದಿ ಮಾಡುವ ವರೆಗೂ ನಾವು ಇಲ್ಲಿಂದ ಎಲ್ಲಿಯೂ ಹೋಗುವುದಿಲ್ಲ ಎಂದು ಪಟ್ಟು ಹಿಡಿದರು.

ಸಂಜೆ 6.30 ಗಂಟೆಯ ವರೆಗೂ ಬೆಂಬಲ ಬೆಲೆ ಖರೀದಿ ಕೇಂದ್ರದ ವ್ಯವಸ್ಥಾಪಕರು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಲಿಲ್ಲ. ಕೇಂದ್ರದ ವ್ಯವಸ್ಥಾಪಕರು ಬರುವಿಕೆಗಾಗಿ ಅಧಿಕಾರಿಗಳು, ರೈತರು ಕಾಯ್ದರು. ಖರೀದಿ ಕೇಂದ್ರದವರು ಸರಿಯಾಗಿ ಸ್ಪಂಧಿಸದಿದ್ದರಿಂದ ಕೆರಳಿದ ರೈತರು, ನಮಗೆ ಸೂಕ್ತ ಪರಿಹಾರ ದೊರಕುವ ವರೆಗೂ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು. ರಾತ್ರಿ 7.40 ಗಂಟೆಗೆ ಆಗಮಿಸಿದ ಉಪತಹಸೀಲ್ದಾರ್‌ ಜೆ.ಟಿ. ಕೊಪ್ಪದ ಹಾಗೂ ಪಿಎಸ್‌ಐ ಚಂದ್ರಶೇಖರ ಹೆರಕಲ್‌ ರೈತರ ಮೊನವಲಿಸಿ ನಾಳೆ ಬೆಳಗ್ಗೆ ಖರೀದಿ ಕೇಂದ್ರಕ್ಕೆ ಆಗಮಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟು ಖರೀದಿ ಕೇಂದ್ರಕ್ಕೆ ರೈತರು ತೆರಳಿದರು.

ಬಾಗಿಲು ಮುಚ್ಚಿದ ಹೆಸರು ಖರೀದಿ ಕೇಂದ್ರಗಳು!

ಪ್ರತಿಭಟನೆಯಲ್ಲಿ ಅಮರೇಶ ಹಲಕುರ್ಕಿ, ಬಸನಗೌಡ ಹಿರೇಸಕ್ಕರಗೌಡ್ರ, ಭೀಮನಗೌಡ ಹಿರೇಕೆಂಚನಗೌಡ್ರ, ಕಲ್ಲನಗೌಡ ಮಲ್ಲಾಪೂರ, ಸಿದ್ದನಗೌಡ ಪಾಟೀಲ, ನಿಂಗಪ್ಪ ಗಾಣಿಗೇರ, ವಸಂತ ಬಾವಿ, ಈರಬಸವ್ವ ಹಿರೇಸಕ್ಕರಗೌಡ್ರ, ಶರಣಪ್ಪಗೌಡ ಬಾಲಗೌಡ್ರ, ಬಸನಗೌಡ ಹಿರೇಕೆಂಚನಗೌಡ್ರ, ರುದ್ರಗೌಡ ಬಾಳನಗೌಡ್ರ, ಸುಶೀಲಾ ಡೋಣಿ,ಗೂಳಪ್ಪ ಉಣಚಗಿ, ಕಲ್ಲಗೌಡ ಮಲ್ಲಾಪೂರ, ನಿಂಗಪ್ಪ ಗಾಣಿಗೇರ, ನಾಗಪ್ಪ ಮಲ್ಲಾಪೂರ, ಭೀಮಪ್ಪ ಜೋಗಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.

click me!