ಬಿಬಿಎಂಪಿಯ ಸುಮಾರು 30 ಸಾವಿರಕ್ಕೂ ಅಧಿಕ ಅಧಿಕಾರಿ ಸಿಬ್ಬಂದಿ ತಮ್ಮ ವಿವರವಾದ ವೈಯಕ್ತಿಕ ಮತ್ತು ವೃತ್ತಿ ಆಧಾರಿತ ಮಾಹಿತಿಯನ್ನು ಥರ್ಡ್ ಪಾರ್ಟಿಗೆ ಹಂಚಿಕೊಳ್ಳುವ ಷರತ್ತಿಗೆ ಒಪ್ಪಿದರಷ್ಟೇ ಪಾಲಿಕೆ ನೌಕರರಿಗೆ ಹಾಜರಾತಿ ಸಿಗಲಿದೆ!
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಡಿ.01): ಬಿಬಿಎಂಪಿಯ ಸುಮಾರು 30 ಸಾವಿರಕ್ಕೂ ಅಧಿಕ ಅಧಿಕಾರಿ ಸಿಬ್ಬಂದಿ ತಮ್ಮ ವಿವರವಾದ ವೈಯಕ್ತಿಕ ಮತ್ತು ವೃತ್ತಿ ಆಧಾರಿತ ಮಾಹಿತಿಯನ್ನು ಥರ್ಡ್ ಪಾರ್ಟಿಗೆ ಹಂಚಿಕೊಳ್ಳುವ ಷರತ್ತಿಗೆ ಒಪ್ಪಿದರಷ್ಟೇ ಪಾಲಿಕೆ ನೌಕರರಿಗೆ ಹಾಜರಾತಿ ಸಿಗಲಿದೆ! ಇತ್ತೀಚೆಗೆ ಪಾಲಿಕೆಯ ಅಧಿಕಾರಿ ಸಿಬ್ಬಂದಿಯ ಹಾಜರಾತಿ ದಾಖಲಿಸಲು ಸೂಚಿಸಲಾದ ‘ಮೊಬೈಲ್ ಬಯೋಮೆಟ್ರಿಕ್ ಆ್ಯಪ್’ನಲ್ಲಿ ಇಂತಹದೊಂದು ವಿಚಿತ್ರವಾದ ಷರತ್ತನ್ನು ವಿಧಿಸಲಾಗಿದೆ. ಬಿಬಿಎಂಪಿಯಿಂದ ಆ್ಯಪ್ ಅಭಿವೃದ್ಧಿ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಪಡೆದುಕೊಂಡಿರುವ ಲಾಗ್ ಸೇಫ್ ಎಂಬ ಖಾಸಗಿ ಸಂಸ್ಥೆ ಇಂತಹ ಷರತ್ತು ವಿಧಿಸಿರುವುದು ಅಧಿಕಾರಿ, ಸಿಬ್ಬಂದಿಯ ಆತಂಕಕ್ಕೆ ಕಾರಣವಾಗಿದೆ.
ಕಳೆದ ನ.21ರಂದು ಪಾಲಿಕೆ ಅಧಿಕಾರಿ, ಸಿಬ್ಬಂದಿಗೆ ಮೊಬೈಲ್ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಿ ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ. ಹೀಗಾಗಿ ಬಿಬಿಎಂಪಿ ಆಯುಕ್ತರ ಸೂಚನೆಯಂತೆ ಲಾಗ್ ಸೇಫ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಮೊಬೈಲ್ ಬಯೋಮೆಟ್ರಿಕ್ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಅಧಿಕಾರಿ, ಸಿಬ್ಬಂದಿ ಆರಂಭಿಸಿದ್ದಾರೆ. ನೋಂದಣಿ ಮಾಡಿಕೊಳ್ಳುವ ವೇಳೆ ಇಂತಹ ಷರತ್ತಿಗೆ ಒಪ್ಪಿಗೆ ನೀಡಿದರೆ ಮಾತ್ರ ಆ್ಯಪ್ ಕಾರ್ಯೋನ್ಮುಖಗಿ ಹಾಜರಾತಿ ದಾಖಲಾಗಲಿದೆ ಎಂದು ಹೇಳಲಾಗಿದೆ.
ಬಿ.ಎಸ್.ಯಡಿಯೂರಪ್ಪ ತಿರುಕನ ಕನಸು ಕಾಣುತ್ತಿದ್ದಾರೆ: ಶಾಸಕ ಕೆ.ಎಂ.ಉದಯ್ ಲೇವಡಿ
ಷರತ್ತಿನಲ್ಲಿ ಏನಿದೆ?: ಸಂಗ್ರಹಿಸುವ ಹೆಸರು, ಮೊಬೈಲ್ ನಂಬರ್, ಪಾನ್ ಕಾರ್ಡ್, ಆಧಾರ್ ಸಂಖ್ಯೆ, ಜನ್ಮ ದಿನಾಂಕ ಸೇರಿದಂತೆ ಈ ಎಲ್ಲ ಮಾಹಿತಿಯನ್ನು ಜಾಹೀರಾತು ಸಂಸ್ಥೆಗಳಿಗೆ, ಮಾರ್ಕೆಟಿಂಗ್ ಪಾಲುದಾರರು, ಕ್ರೆಡಿಟ್ ಕಾರ್ಡ್ ಪ್ರಕ್ರಿಯೆಗೆ, ಗ್ರಾಹಕ ಸೇವಾ ಸಂಸ್ಥೆಗಳಿಗೆ ಸೇರಿದಂತೆ ಖಾಸಗಿ ಸಂಸ್ಥೆಗಳಿಗೆ ಸಂಸ್ಥೆಯು ತಮ್ಮ ಸ್ವಂತ ವಿವೇಚನೆಯಿಂದ ಹಂಚಿಕೊಳ್ಳುವ ಹಕ್ಕನ್ನು ಉಳಿಸಿಕೊಂಡಿದೆ. ಜತೆಗೆ ಅವರ ಉತ್ಪನ್ನ ಮತ್ತು ಸೇವೆಗಳ ಬಗ್ಗೆ ನಿಮಗೆ ಆಸಕ್ತಿ ಇದೆ ಎಂದು ನಾವು ಭಾವಿಸಿದ್ದೇವೆ ಎಂದು ಒಪ್ಪಿಗೆ ಪಡೆಯಲಾಗುತ್ತಿದೆ.
ಮಾಹಿತಿ ಮಾರಾಟದ ದುರುದ್ದೇಶ?: ಹಾಜರಾತಿ ನೆಪದಲ್ಲಿ ಖಾಸಗಿ ಸಂಸ್ಥೆಯೊಂದಕ್ಕೆ ಬಿಬಿಎಂಪಿ ಅಧಿಕಾರಿ, ಸಿಬ್ಬಂದಿಯ ಎಲ್ಲಾ ದಾಖಲೆಗಳ ಮಾಹಿತಿಯನ್ನು ನೀಡುವುದು ಎಷ್ಟು ಸುರಕ್ಷಿತ, ಕೇವಲ ಹಾಜರಾತಿ ದಾಖಲಿಸಲು ಇಷ್ಟೆಲ್ಲಾ ಮಾಹಿತಿ ದಾಖಲಿಸುವುದು ಅವಶ್ಯಕತೆ ಇದೆಯೇ, ಲಾಗ್ ಸೇಫ್ ಸಂಸ್ಥೆಯು ಕೇವಲ ₹5 ಲಕ್ಷಕ್ಕೆ ಮೊಬೈಲ್ ಬಯೋಮೆಟ್ರಿಕ್ ಆ್ಯಪ್ ಅನ್ನು ಅಭಿವೃದ್ಧಿ ಪಡಿಸುವುದರೊಂದಿಗೆ ಒಂದು ವರ್ಷ ನಿರ್ವಹಣೆ ಮಾಡಬೇಕಿದೆ. ಇದು ಅಧಿಕಾರಿ- ಸಿಬ್ಬಂದಿಯ ಮಾಹಿತಿ ಸಂಗ್ರಹಿಸಿ ಮಾರಾಟ ಮಾಡುವ ದುರುದ್ದೇಶ ಹೊಂದಿದೆ ಎಂಬುದು ಕೆಳ ಅಧಿಕಾರಿ, ಸಿಬ್ಬಂದಿಯ ಆರೋಪವಾಗಿದೆ.
ಪ್ರತಿ ಹತ್ತು ನಿಮಿಷಕ್ಕೆ ಲೋಕೇಷನ್ ಟ್ರಾಕ್: ನೊಂದಣಿ ಮಾಡಿಕೊಂಡ ಅಧಿಕಾರಿ, ಸಿಬ್ಬಂದಿಯ ಲೋಕೇಶನ್ ಅನ್ನು ಪ್ರತಿ 10 ನಿಮಿಷಕ್ಕೆ ಒಂದು ಬಾರಿ ಟ್ರ್ಯಾಕ್ ಮಾಡಲಿದೆ. ಇದರಿಂದ ಖಾಸಗಿ ಬದುಕಿಗೆ ಧಕ್ಕೆ ಆಗಲಿದೆ. ರಜೆ ದಿನಗಳಿಯೂ ಆ್ಯಪ್ ಚಲನವಲನ ಟ್ರ್ಯಾಕ್ ಮಾಡಲಿದೆ. ಪ್ರತಿದಿನ ಅಧಿಕಾರಿ, ಸಿಬ್ಬಂದಿ ತಮ್ಮ ಸೆಲ್ಫಿ ಫೋಟೋ ಅಪ್‌ಲೋಡ್ ಮಾಡಬೇಕಿದೆ. ಅಧಿಕಾರಿ ಸಿಬ್ಬಂದಿಗೆ ವೈಯಕ್ತಿಕ ಬದುಕು ಇರುವುದಿಲ್ಲವೇ, ಈ ಬಗ್ಗೆ ಮೇಲಾಧಿಕಾರಿಗಳು ಪರಿಶೀಲನೆ ನಡೆಸಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸ್ಥೆ ಜತೆ ಒಪ್ಪಂದವೇ ಆಗಿಲ್ಲ: ಮೊಬೈಲ್ ಬಯೋಮೆಟ್ರಿಕ್ ಆ್ಯಪ್ ಕಡ್ಡಾಯವಾಗಿ ಡೌನ್ ಲೋಡ್ ಮಾಡಿಕೊಂಡು ಹಾಜರಾತಿ ದಾಖಲಿಸಬೇಕು ಎಂದು ಮುಖ್ಯ ಆಯುಕ್ತರು ಆದೇಶಿಸಿದ್ದಾರೆ. ಆದರೆ, ಈ ಸಂಸ್ಥೆಯೊಂದಿಗೆ ಇದುವರೆಗೂ ಬಿಬಿಎಂಪಿ ಒಪ್ಪಂದ ಮಾಡಿಕೊಂಡಿಲ್ಲ. ಅದಕ್ಕೂ ಮುನ್ನವೇ ಆ್ಯಪ್‌ನಲ್ಲಿ ವಿವರ ನಮೂದಿಸಿ, ಹಾಜರಾತಿ ದಾಖಲಿಸುವುದಕ್ಕೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಅಧಿಕಾರಿಗಳ ಬೇಜವಾಬ್ದಾರಿತನವೇ ಹೆಣ್ಣು ಭ್ರೂಣ ಹತ್ಯೆಗೆ ಕಾರಣ: ಸಚಿವ ದಿನೇಶ್ ಗುಂಡೂರಾವ್
ಮೊಬೈಲ್ ಬಯೋಮೆಟ್ರಿಕ್ ಆ್ಯಪ್‌ನಲ್ಲಿ ದಾಖಲಿಸುವ ಅಧಿಕಾರಿ, ಸಿಬ್ಬಂದಿಯ ಮಾಹಿತಿಯನ್ನು ಥರ್ಡ್ ಪಾರ್ಟಿ ವ್ಯಕ್ತಿಗಳಿಗೆ ಹಂಚಿಕೆ ಮಾಡುವುದಕ್ಕೆ ಆ್ಯಪ್ ಅಭಿವೃದ್ಧಿ ಪಡಿಸಿದ ಸಂಸ್ಥೆಗೆ ಅವಕಾಶ ಇರುವ ಬಗ್ಗೆ ಮಾಹಿತಿ ಇಲ್ಲ. ಬಿಬಿಎಂಪಿ ಮಾಹಿತಿ ತಂತ್ರಜ್ಞಾನ ವಿಭಾಗದ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು.
-ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ, ಬಿಬಿಎಂಪಿ