• ಕಷ್ಟದಲ್ಲಿ ನೊಂದು ಬೆಂದಿದ್ದ ಮಲ್ಲಮ್ಮಳಿಗೆ ಸಿಕ್ಕಿತು ಆಸರೆ
• ಬಿಗ್ 3 ತಂಡಕ್ಕೆ ಮಲ್ಲಮ್ಮ ಆನಂದ ಭಾಷ್ಪದ ಅಭಿನಂದನೆ
• ಮರಳಿ ಕೆಲಸ ಸಿಕ್ಕಿದ್ದಾಯ್ತು, ಮಲ್ಲಮ್ಮಳಿಗೆ ಮನೆ ಕೊಡಿಸಲು ಬಿಗ್ 3 ಪಣ
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಜೂ.03): ತನಗೆ ತಿಳಿಯದೇ ಅಚಾತುರ್ಯದಿಂದ ನಗರದ ಹೊರವಲಯದಲ್ಲಿರುವ ಸುವರ್ಣ ವಿಧಾನಸೌಧದ ಎದುರು ಶಾವಿಗೆ ಒಣಹಾಕಿದ್ದ ಕಾರ್ಮಿಕ ಮಹಿಳೆ ಮಲ್ಲಮ್ಮಳನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಇದರ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ನೆಟ್ಟಿಗರು ಸಹ ಐ ಸ್ಟ್ಯಾಂಡ್ ವಿತ್ ಮಲ್ಲಮ್ಮ ಅಭಿಯಾನ ಶುರು ಮಾಡಿದ್ರು. ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ಬಿಗ್3ಯಲ್ಲಿ ವಿಸ್ತೃತ ವರದಿ ಪ್ರಸಾರ ಆಗುತ್ತಿದ್ದಂತೆ ಮಲ್ಲಮ್ಮಗೆ ಸುವರ್ಣಸೌಧದಲ್ಲೇ ಮರಳಿ ಕೆಲಸ ಸಿಕ್ಕಿದೆ.
ಅಷ್ಟೇ ಅಲ್ಲದೇ ಮಲ್ಲಮ್ಮಳಿಗೆ ಮನೆ ಇಲ್ಲದೇ ಸಹೋದರನ ಮನೆಯ 10 by 10ಗೂ ಚಿಕ್ಕ ಜಾಗವಿರುವ ಕೋಣೆಯಲ್ಲಿ ಆಶ್ರಯ ಪಡೆದಿದ್ದಳು. ಈ ನಿಟ್ಟಿನಲ್ಲಿ ಮಲ್ಲಮ್ಮಳಿಗೆ ಕೊಂಡಸಕೊಪ್ಪ ಗ್ರಾಮದಲ್ಲೇ ಸರ್ಕಾರಿ ಗೈರಾಣು ಜಮೀನು ಗುರುತಿಸಲು ಬೆಳಗಾವಿ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದೆ. ಮಲ್ಲಮ್ಮಳಿಗೆ ಮರಳಿ ಕೆಲಸ ಕೊಡಿಸಿರುವ ಬಿಗ್3 ತಂಡ ಈಗ ಮನೆ ಕಟ್ಟಿಸಿಕೊಡಲು ಜಿಲ್ಲಾಡಳಿತ ಬೆನ್ನುಬಿದ್ದಿದೆ. ಸದ್ಯ ಮಲ್ಲಮ್ಮ ವಾಸವಿರುವ ಬೆಳಗಾವಿ ಕೊಂಡಸಕೊಪ್ಪ ಗ್ರಾಮದಲ್ಲಿ ಸರ್ಕಾರಿ ಗೈರಾಣು ಜಮೀನು ಗುರುತಿಸಲು ಡಿಸಿ ನಿತೇಶ್ ಪಾಟೀಲ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೂಚನೆ ಮೇರೆಗೆ ಕೊಂಡಸಕೊಪ್ಪ ಗ್ರಾಮಕ್ಕೆ ಹಿರೇಬಾಗೇವಾಡಿ ಕಂದಾಯ ನಿರೀಕ್ಷಕ ಶಶಿಧರ್ ಗುರವ್, ಬಸ್ತವಾಡ ಪಿಡಿಒ ಶ್ವೇತಾ, ಗ್ರಾಮ ಲೆಕ್ಕಾಧಿಕಾರಿ ಮಹಾಂತೇಶ ಅಂಗಡಕಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಂಡಸಕೊಪ್ಪ ಗ್ರಾಮದಲ್ಲಿ ಸರ್ಕಾರಿ ಗೈರಾಣು ಜಮೀನು ಗುರುತುಪಡಿಸಲು ಆಗಮಿಸಿದ ಅಧಿಕಾರಿಗಳು ಕೊಂಡಸಕೊಪ್ಪ ಗ್ರಾಮದಲ್ಲಿ ಎರಡು ಜಾಗ ಗುರುತಿಸಿದ್ದಾರೆ. 20 by 30 ಜಾಗದಲ್ಲಿ ಮನೆ ಕಟ್ಟಿಸಿಕೊಡಲು ಚಿಂತನೆ ನಡೆಸಿದ್ದು ಜಾಗ ಮಂಜೂರು ಆದ ಬಳಿಕ ಬಸವ ವಸತಿ ಯೋಜನೆ ಅಥವಾ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಕಟ್ಟಿಸಿಕೊಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಬೆಳಗಾವಿ ಸುವರ್ಣಸೌಧದೆದುರು ಸಂಡಿಗೆ, ಶ್ಯಾವಿಗೆ ಒಣಹಾಕಿದ್ದ ನೌಕರೆ ವಜಾ
ಮಲ್ಲಮ್ಮನ ಸ್ಥಿತಿ ನೋಡಿದ್ರೆ ಕಣ್ಣೀರು ಬರುತ್ತೆ: ಅಷ್ಟಕ್ಕೂ ಮಲ್ಲಮ್ಮ ಭಾತ್ಕಾಂಡೆ ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದ ನಿವಾಸಿ. ಸುವರ್ಣಸೌಧದಿಂದ ಒಂದೇ ಕಿಲೋ ಮೀಟರ್ ಅಂತರ ಇರುವ ಗ್ರಾಮ. ಮಲ್ಲಮ್ಮಳನ್ನು ಖಾನಾಪುರ ತಾಲೂಕಿನ ಕೊಡಚಾಡ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಇಬ್ಬರು ಪುತ್ರಿಯರು, ಓರ್ವ ಪುತ್ರನಿದ್ದು ಮಕ್ಕಳು ಚಿಕ್ಕವರಿದ್ದಾಗಲೇ ಗಂಡ ತೀರಿ ಹೋಗಿದ್ದಾರೆ. ಬಳಿಕ ತವರುಮನೆಯಾದ ಕೊಂಡಸಕೊಪ್ಪ ಗ್ರಾಮದಲ್ಲಿ ಅಣ್ಣ ರಾಯಪ್ಪ ಮನೆಯಲ್ಲಿ ವಾಸವಿದ್ದಾಳೆ.
ಆ ಮನೆಯಲ್ಲಿ ಒಬ್ಬರೇ ಮಲಗುವಷ್ಟು ಕೋಣೆಯಲ್ಲಿ ಮಲ್ಲಮ್ಮ ವಾಸವಿದ್ದಾಳೆ. ಇಬ್ಬರು ಪುತ್ರಿಯರನ್ನು ಮಲ್ಲಮ್ಮ ಅಣ್ಣ ರಾಯಪ್ಪರವರೇ ಮುಂದೆ ನಿಂತು ಮದುವೆ ಮಾಡಿಸಿದ್ದಾನೆ. ಇತ್ತ ಮಗ ನಾಲ್ಕು ದಿನ ಮನೆಯಲ್ಲಿ ಇದ್ರೆ ನಾಲ್ಕು ದಿನ ಅಲ್ಲಿ ಕೆಲಸ ಮಾಡಿ ಮದ್ಯಪಾನ ಮಾಡ್ತಾ ಅಡ್ಡಾಡ್ತಾನಂತೆ. ತಾಯಿ ಮಲ್ಲಮ್ಮಗೆ ದುಡ್ಡು ಕೊಡಲ್ವಂತೆ. ಅಷ್ಟಕ್ಕೂ ಈ ಮಲ್ಲಮ್ಮ ಸುವರ್ಣಸೌಧ ಕಟ್ಟಡ ಕಾಮಗಾರಿ ಆರಂಭವಾದ ದಿನದಿಂದಲೂ ಸುವರ್ಣಸೌಧದಲ್ಲೇ ದಿನಕ್ಕೆ 200 ರೂಪಾಯಿ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾಳೆ.
ಅಷ್ಟಕ್ಕೂ ಏನಿದು ಘಟನೆ?: ಮಲ್ಲಮ್ಮ ಭಾತ್ಕಾಂಡೆ ಬೆಳಗಾವಿಯ ಸುವರ್ಣಸೌಧದಲ್ಲಿ ಕಸಗೂಡಿಸುವುದು ಸೇರಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದಳು. ಕಳೆದ ನಾಲ್ಕು ದಿನಗಳ ಹಿಂದೆ ತಾರಿಹಾಳ ಗ್ರಾಮದ ಕಾರ್ಮಿಕ ಮಹಿಳೆ ಸುರೇಖಾ ಸಂಬಂಧಿಕರು ಸಾಂಬ್ರಾದಿಂದ ಶಾವಿಗೆ ತಂದು ನೀಡಿದ್ರು. ಸುಮಾರು ಒಂದು ಕೆಜಿ ಶಾವಿಗೆಯನ್ನು ತಾರಿಹಾಳ ಗ್ರಾಮದ ಸುರೇಖಾ ಮಲ್ಲಮ್ಮಳಿಗೆ ತಂದು ನೀಡಿದ್ದಳು. ಆದ್ರೆ ಬುತ್ತಿ ಚೀಲದಲ್ಲಿ ಶಾವಿಗೆ ಇಟ್ಟುಕೊಂಡ ವೇಳೆ ನೀರಿನ ಬಾಟಲ್ ಸೋರಿ ಶಾವಿಗೆ ಒದ್ದೆಯಾಗಿತ್ತು. ಅದಕ್ಕಾಗಿ ಊಟದ ವೇಳೆ ಒದ್ದೆಯಾಗಿದ್ದ ಶಾವಿಗೆಯನ್ನು ಗಮನಿಸಿ ಸುವರ್ಣಸೌಧ ಮುಖ್ಯದ್ವಾರದ ಮೆಟ್ಟಿಲುಗಳ ಜಾಗ ಖಾಲಿ ಇದ್ದ ಕಾರಣ ಅದರ ಮೇಲೆ ಸೀರೆ ಹಾಕಿ ಒಣ ಹಾಕಿದ್ದಳು.
ಈ ವೇಳೆ ಯಾರೋ ಅಪರಿಚಿತರು ಫೋಟೋ ತಗೆದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ರು. ಈ ಫೋಟೋ ವೈರಲ್ ಆಗುತ್ತಿದ್ದಂತೆ ಶಾವಿಗೆ ಒಣಹಾಕಿದ ಮಲ್ಲಮ್ಮ ಹಾಗೂ ಶಾವಿಗೆ ನೀಡಿದ ಸುರೇಖಾಳನ್ನು ಕೆಲಸದಿಂದ ಗುತ್ತಿಗೆದಾರ ವಜಾ ಮಾಡಿದ್ದಾರೆ ಎಂಬ ಪತ್ರವನ್ನು ಲೋಕೋಪಯೋಗಿ ಇಲಾಖೆ ಸುವರ್ಣ ವಿಧಾನಸೌಧ ಉಪವಿಭಾಗದ ಎಇಇ ಭೀಮಾ ನಾಯ್ಕ್ ಬೆಳಗಾವಿ ಲೋಕೋಪಯೋಗಿ ಇಲಾಖೆ ಉಪವಿಭಾಗದ ಇಇ ಸಂಜೀವಕುಮಾರ್‌ರವರಿಗೆ ಪತ್ರ ಬರೆದಿದ್ದರು. ಈ ಪತ್ರ ವೈರಲ್ ಆಗುತ್ತಿದ್ದಂತೆ ಅಧಿಕಾರಿಗಳು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ ಎಂದು ನೆಟ್ಟಿಗರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದ ಮಲ್ಲಮ್ಮ, 'ಶಾವಿಗೆ ಒದ್ದೆ ಆಗಿತ್ತು ಅಂತಾ ಒಣಹಾಕಿದ್ದೆ. ಆಗ ಅಧಿಕಾರಿಗಳು ನಿನಗೆ ತಿಳಿಯಲ್ವಾ ಅಂತಾ ಹೇಳಿದ್ರು. ಬಳಿಕ ಕೆಲಸದಿಂದ ತಗೆದು ಹಾಕಿ ಮನೆಗೆ ಕಳಿಸಿದ್ರು, ನನಗೆ ಶಾವಿಗೆ ನೀಡಿದ ನನ್ನ ಜೊತೆ ಕೆಲಸ ಮಾಡುತ್ತಿದ್ದ ತಾರಿಹಾಳ ಮೂಲದ ಕಾರ್ಮಿಕ ಮಹಿಳೆ ಸುರೇಖಾಳನ್ನು ಸಹ ಕೆಲಸದಿಂದ ತಗೆದು ಹಾಕಿದ್ರು. ನಾವಿಬ್ಬರೂ ಅಳುತ್ತಾ ವಾಪಸ್ ಆದೆವು. ನನಗೂ ಯಾರೂ ಇಲ್ಲ, ಆಕೆಗೂ ಯಾರೂ ಇಲ್ಲ. ನನ್ನ ಇಬ್ಬರು ಪುತ್ರಿಯರನ್ನು ಮದುವೆ ಮಾಡಿ ಕೊಟ್ಟಿದ್ದು ಮಗ ನಾಲ್ಕು ದಿನ ಮನೆಗೆ ಬರ್ತಾನೆ, ನಾಲ್ಕು ದಿನ ಬರಲ್ಲ. ನಾನು ದುಡಿದರೇನೇ ಹೊಟ್ಟೆ ತುಂಬೋದು. ನಮಗೆ ಸುವರ್ಣಸೌಧದಲ್ಲೇ ಕೆಲಸ ಕೊಡಿಸಿ ಅಂತಾ ಕಣ್ಷೀರಿಟ್ಟಿದ್ದರು.
ಇನ್ನು ಮಲ್ಲಮ್ಮಳಿಗೆ ಸುವರ್ಣಸೌಧ ದಲ್ಲೆ ಕೆಲಸ ಮಾಡುವ ಕೆಲವರು ಬೆಳಗಾವಿಯ ಮಹಾಂತೇಶ ನಗರದಲ್ಲಿ ಕಸಗೂಡಿಸುವ ಕೆಲಸ ಕೊಡಿಸಿದ್ರು. ಆದ್ರೆ ಅಲ್ಲಿಯವರೆಗೆ ಹೋಗಲು 40 ರೂ. ಬಸ್ ಚಾರ್ಜ್ ಆಗುತ್ತೆ. ತುಂಬಾ ದೂರವೂ ಆಗುತ್ತೆ. ಅಲ್ಲಿಂದ ವಾಪಸ್ ಮನೆಗೆ ಹೇಗೆ ಬರೋದು ಅಂತಾನೇ ಗೊತ್ತಾಗಲ್ಲ. ಸುವರ್ಣಸೌಧ ಕಟ್ಟಡ ಕಾಮಗಾರಿ ಆರಂಭವಾದ ದಿನದಿಂದ ಅಲ್ಲೇ ಕೆಲಸ ಮಾಡ್ತಿದೇನೆ ದಯವಿಟ್ಟು ಅಲ್ಲೇ ಕೆಲಸ ಕೊಡಿಸಿ ಅಂತಾ ಕಣ್ಣೀರಿಟ್ಟಿದ್ದಳು. ಇನ್ನು ಮಲ್ಲಮ್ಮ ಅಣ್ಣ ರಾಯಪ್ಪ ಸಹ ಇದನ್ನೇ ಹೇಳಿದ್ದ. ಗಂಡ ಕಳೆದುಕೊಂಡ ತಂಗಿ ನನ್ನ ಮನೆಯಲ್ಲೇ ವಾಸವಿದ್ದಾಳೆ. ದಯವಿಟ್ಟು ಅವರಿಗೆ ಸಹಾಯ ಮಾಡಿ ಅಂತಾ ಮನವಿ ಮಾಡಿದ್ರು.
ಮಲ್ಲಮ್ಮ ಬೆನ್ನಿಗೆ ನಿಂತಿದ್ದ ಕನ್ನಡಪರ ಹೋರಾಟಗಾರರು: ಕನ್ನಡಪರ ಹಿರಿಯ ಹೋರಾಟಗಾರ್ತಿ ಕಸ್ತೂರಿ ಭಾವಿ, ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೂಡಿ ಸೇರಿ ಕೆಲ ಕಾರ್ಯಕರ್ತರು ತಡರಾತ್ರಿ ಮಲ್ಲಮ್ಮ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದರು. ಅಂತಹ ದೊಡ್ಡ ತಪ್ಪು ಮಲ್ಲಮ್ಮ ಏನೂ ಮಾಡಿದ್ದಾಳೆ. ಅವಳನ್ನು ನೋಡಿದ್ರೆ 60 ವರ್ಷಕ್ಕೂ ಹೆಚ್ಚು ವಯಸ್ಸಾದಂಗೆ ಕಾಣುತ್ತೆ. ಹೀಗಾಗಿ ಅವಳ ಬಳಿ ಕೆಲಸ ಮಾಡುವ ಶಕ್ತಿ ಇರೋವರೆಗೂ ಸುವರ್ಣಸೌಧದಲ್ಲೇ ಕೆಲಸಕ್ಕೆ ಅವಕಾಶ ಮಾಡಬೇಕು. ಸಿಎಂ ಬಸವರಾಜ ಬೊಮ್ಮಾಯಿ ಈ ಬಗ್ಗೆ ಗಮನ ಹರಿಸಿ ಅಧಿಕಾರಿಗಳಿಗೆ ಸೂಚನೆ ನೀಡಬೇಕು.ಇಂದು ಮಧ್ಯಾಹ್ನ 12 ಗಂಟೆಯೊಳಗಾಗಿ ಮಲ್ಲಮ್ಮಳನ್ನು ಸುವರ್ಣಸೌಧಕ್ಕೆ ವಾಪಸ್ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಇಲ್ಲವಾದ್ರೆ ಸುವರ್ಣಸೌಧ ಎದುರೇ ಉಗ್ರ ಪ್ರತಿಭಟನೆ ನಡೆಸೋದಾಗಿ ಎಚ್ಚರಿಕೆ ನೀಡಿದ್ದರು.
ಏಷ್ಯಾನೆಟ್ ಸುವರ್ಣನ್ಯೂಸ್ ಬಿಗ್3 ತಂಡಕ್ಕೆ ಮಲ್ಲಮ್ಮ ಆನಂದ ಭಾಷ್ಪದ ಅಭಿನಂದನೆ: ಸುವರ್ಣ ವಿಧಾನಸೌಧದಲ್ಲೇ ಮರಳಿ ಕೆಲಸಕ್ಕೆ ಸೇರಿದ ಬಳಿಕ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ ಮಲ್ಲಮ್ಮ ಏಷ್ಯಾನೆಟ್ ಸುವರ್ಣನ್ಯೂಸ್ ಬಿಗ್3 ತಂಡಕ್ಕೆ ಧನ್ಯವಾದ ಹೇಳುವಾಗ ಆನಂದ ಭಾಷ್ಪವೇ ಬಂತು. 'ನನ್ನಿಂದ ಸಣ್ಣ ತಪ್ಪು ಆಗಿತ್ತು, ಶಾವಿಗೆ ಒದ್ದೆ ಆಗಿತ್ತು ಎಂದು ಒಣಹಾಕಿದ್ದೆ. ಮರಳಿ ಕೆಲಸ ಕೊಡಿಸಿದಕ್ಕೆ ಧನ್ಯವಾದ.ನಿಮ್ಮೆಲ್ಲರ ಆಶೀರ್ವಾದದಿಂದ ಕೆಲಸ ಸಿಕ್ಕಿದೆ. ಡಿಸಿ ಸಹ ಮನೆ ಕಟ್ಟಿಸಿ ಕೊಡ್ತೀನಿ ಅಂದಿದ್ದಾರೆ. ನನ್ನ ಜೊತೆಗಿದ್ದ ನೀವೆಲ್ಲ ನನ್ನ ಅಣ್ಣ ತಮ್ಮಂದಿರು ಇದ್ದ ಹಾಗೇ' ಎಂದರು.
ಇನ್ನು ಮಲ್ಲಮ್ಮಳನ್ನು ಕೆಲಸಕ್ಕೆ ಸೇರಿಸಿಕೊಂಡ ಬಳಿಕ ಮಾತನಾಡಿದ ಸೂಪರ್‌ವೈಸರ್ ರಮೇಶ್ ಮಿರಜನ್ನವರ್, 'ಡಿಸಿ ಸಾಹೇಬ್ರು ಮಲ್ಲಮ್ನಳನ್ನ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹೇಳಿದ್ರು. ಲೋಕೋಪಯೋಗಿ ಅಧಿಕಾರಿಗಳು ನಮ್ಮ ಗುತ್ತಿಗೆದಾರ ಸಮೀರ್‌ರವರಿಗೆ ತಿಳಿಸಿದರು. ಬಳಿಕ ಸಮೀರ್ ಅವರು ನಮಗೆ ಹೇಳಿದ್ದು ಕೆಲಸಕ್ಕೆ ಸೇರಿಸಿಕೊಂಡಿದ್ದೆವೆ. ಅಚಾತುರ್ಯದಿಂದ ಮಲ್ಲಮ್ಮ ಶಾವಿಗೆ ಒಣಹಾಕಿದ್ದಳು. 'ಅವಳ ಜೊತೆ ನಿಂತು ಕೆಲಸ ಕೊಡಿಸಿದ ಸುವರ್ಣನ್ಯೂಸ್‌ಗೆ ಧನ್ಯವಾದ ಎಂದು ತಿಳಿಸಿದರು. ಇನ್ನು ಮಲ್ಲಮ್ಮಳಿಗೆ ಶಾವಿಗೆ ತಂದುಕೊಟ್ಟಿದ್ದ ತಾರೀಹಾಳದ ಸುರೇಖಾಗೂ ಸಹ ಸೋಮವಾರದಿಂದ ಕೆಲಸಕ್ಕೆ ಹಾಜರಾಗುವಂತೆ ಗುತ್ತಿಗೆದಾರ ಸಮೀರ್ ತಿಳಿಸಿದ್ದಾರೆ ಎಂಬುದು ತಿಳಿದು ಬಂದಿದೆ.
Belagavi: ಸುವರ್ಣ ವಿಧಾನಸೌಧ ಎದುರು 'ಶಾವಿಗೆ' ಒಣಹಾಕಿದ ಮಹಿಳೆ: ಫೋಟೋ ವೈರಲ್
ದಾನಿಗಳಿಂದ ಮಲ್ಲಮ್ಮಳಿಗೆ ನೆರವಿನ ಹಸ್ತ: ಮಲ್ಲಮ್ಮಗೆ ಕೆಲಸ ಮತ್ತೆ ಸಿಕ್ತು.. ಮಲ್ಲಮ್ಮಗೆ ಮನೆ ಕಟ್ಟಿಸೋಣ ಎಂದು ಏಷ್ಯಾನೆಟ್ ಸುವರ್ಣನ್ಯೂಸ್ ಬಿಗ್3 ಕರೆ ಕೊಡುತ್ತಿದ್ದಂತೆ ಮಲ್ಲಮ್ಮಳಿಗೆ ಸಹಾಯ ಮಾಡಲು ಜನ ಮುಂದೆ ಬಂದಿದ್ದಾರೆ. ಸಮರ್ಪಣಂ ಫೌಂಡೇಶನ್ ನ ಮಹಾಂತೇಶ ವಕ್ಕುಂದ 10 ಸಾವಿರ ರೂಪಾಯಿ, ಸಾಮಾಜಿಕ ಕಾರ್ಯಕರ್ತರಾದ ವೀರೇಶ್ ಕಿವಡಸಣ್ಣವರ್ 5 ಸಾವಿರ ರೂಪಾಯಿ ಅಕೌಂಟ್‌ಗೆ ವರ್ಗಾವಣೆ ಮಾಡೋದಾಗಿ ವಾಗ್ದಾನ ಮಾಡಿದ್ದು, ಸುರೇಶ್ ಯಾದವ್ 2 ಸಾವಿರ ರೂ. ಹಣ ಸ್ವತಃ ಮಲ್ಲಮ್ಮಳನ್ನು ಭೇಟಿಯಾಗಿ ನೀಡಿದ್ದಾರೆ. ಇನ್ನೂ ಹಲವು ಜನ ಮಲ್ಲಮ್ಮಳಿಗೆ ಸಹಾಯ ಮಾಡಲು ಮುಂದೆ ಬಂದಿದ್ದು ಮಲ್ಲಮ್ಮಳ ಕಷ್ಟ ಅಂತ್ಯಗೊಳ್ಳುವ ಕಾಲ ಸನ್ನಿಹಿತವಾಗಿದೆ.
ಮಲ್ಲಮ್ಮಳಿಗೆ ಸಹಾಯ ಮಾಡಲು ಬಯಸುವವರು ಮಲ್ಲಮ್ಮಳ ಖಾತೆಗೆ ಹಣ ವರ್ಗಾವಣೆ ಮಾಡಬಹುದು
Bank Name: Bank Of India, Halaga Branch
Name: Mallavva Nagappa Bhathkande
Account No: 110910110008780
MICR: 590013005
ISFC Code: BKID0001109