
ಬೀದರ್ (ಜ.31): ಜಿಲ್ಲೆಯ ಹುಮನಾಬಾದ್ ತಾಲೂಕಿನ ಮೋಳಕೇರಾ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಭೀಕರ ಸ್ಫೋಟ ಸಂಭವಿಸಿದ್ದು, ಶಾಲಾ ಮಕ್ಕಳು ಸೇರಿದಂತೆ ಒಟ್ಟು ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೋಳಗಿ ಮಾರಯ್ಯ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಸ್ಫೋಟದ ತೀವ್ರತೆಗೆ ನಾಲ್ವರು ಶಾಲಾ ಮಕ್ಕಳು ಹಾಗೂ ಒಬ್ಬ ವೃದ್ಧ ಸೇರಿ ಆರು ಜನರಿಗೆ ರಕ್ತದ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಬ್ಬರ ಸ್ಥಿತಿ ಅತ್ಯಂತ ಗಂಭೀರವಾಗಿದ್ದರಿಂದ ಒಬ್ಬರನ್ನು ಹೈದರಾಬಾದ್‌ಗೆ ಹಾಗೂ ಇನ್ನೊಬ್ಬರನ್ನು ಸೊಲ್ಲಾಪುರಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಬೀದರ್ ಎಸ್‌ಪಿ ಪ್ರದೀಪ್ ಗುಂಟಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟ ನಡೆದ ಜಾಗವನ್ನು ಪೊಲೀಸರು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಿದ್ದು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸ್ಫೋಟಗೊಂಡ ವಸ್ತು ಯಾವುದು ಎಂಬ ಬಗ್ಗೆ ಮಾಹಿತಿ ಕಲೆಹಾಕಲು 'ಸೋಕೋ' (SOCO) ತಂಡದ ತಜ್ಞರನ್ನು ಕರೆಸಲಾಗಿದ್ದು, ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ.
ಮೋಳಕೇರಾ ಗ್ರಾಮದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಇದು ಐದನೇ ಸ್ಫೋಟ ಎನ್ನಲಾಗುತ್ತಿದ್ದು, ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಇಲಾಖೆ ಎಚ್ಚೆತ್ತುಕೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಪ್ರಸ್ತುತ ಉದ್ವಿಗ್ನ ವಾತಾವರಣವಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.