
ಹಾಸನ (ಜ.31): ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಸೈಟ್ ಒತ್ತುವರಿ ಮಾಡಿದ್ದಾರೆ ಎನ್ನುವ ಆರೋಪ ಮತ್ತೆ ಜೀವಂತವಾಗಿದೆ. ನಿರ್ಮಾಪಕಿಯೂ ಆಗಿರುವ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್, ವಿವಾದಿತ ಜಾಗದಲ್ಲಿ ಮತ್ತೆ ಕಂಪೌಂಡ್ ಹಾಕಲು ಮುಂದಾಗಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತಾಗಿ ಯಶ್ ತಾಯಿ ಮತ್ತು ಜಿಪಿಎ ಹೋಲ್ಡರ್ ದೇವರಾಜ್ ನಡುವೆ ಭಾರೀ ಜಗಳ ನಡೆದಿದೆ. ವಿದ್ಯಾನಗರದಲ್ಲಿರುವ ಯಶ್ ಮನೆಯ ಪಕ್ಕದಲ್ಲಿರುವ ಸೈಟ್ ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ದೇವರಾಜ್, ಪುಷ್ಪಾ ಅರುಣ್‌ಕುಮಾರ್ ಹಾಕಿದ್ದ ಕಾಂಪೌಂಡ್ ತೆರವು ಮಾಡಿದ್ದರು. ಈಗ ಮತ್ತೆ ಕಾಂಪೌಂಡ್ ಹಾಕಲು ಪುಷ್ಪ ಅರುಣ್‌ಕುಮಾರ್ ಮುಂದಾಗಿದ್ದರು, ಅಕ್ರಮ ಪ್ರವೇಶಿಸಿದ್ದಾನೆ ಎಂದು ದೇವರಾಜ್ ವಿರುದ್ದ ಯಶ್ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋರ್ಟ್ ಆದೇಶ ಇದೆ ಎಂದು ಯಶ್ ತಾಯಿ ಹಾಕಿದ್ದ ಕಾಂಪೌಂಡ್‌ಅನ್ನು ಜಿಪಿಎ ಹೋಲ್ಡರ್ ದೇವರಾಜ್ ಒಡೆದು ಹಾಕಿದ್ದರು. ಆದರೆ, ಆರು ವರ್ಷದ ಹಿಂದೆ ಸೈಟ್ ಖರೀದಿಸಿದ್ದೇನೆ ಎಂದಿರುವ ಪುಷ್ಪಾ ಅರುಣ್ ಕುಮಾರ್ ಇದೇ ಕಾರಣಕ್ಕೆ ಕಂಪೌಂಡ್ ಹಾಕಿದ್ದೇನೆ ಎಂದಿದ್ದರು. ಆದರೆ, ಅದನ್ನು ಒಡೆದು ಜಿಪಿಎ ಹೋಲ್ಡರ್ ದೇವರಾಜ್, ತಂತಿಬೇಲಿ ಹಾಕಿದ್ದರು.
ಇಂದು ಮತ್ತೆ ದೇವರಾಜ್ ಹಾಕಿದ್ದ ತಂತಿ ಬೇಲಿಯನ್ನು ಯಶ್ ತಾಯಿ ತೆರವುಗೊಳಿಸಿದ್ದರು. ಮತ್ತೆ ಸೈಟ್ ಗೆ ಕಾಂಪೌಂಡ್ ಹಾಕಲು ಪುಷ್ಪ ತಯಾರಿ ಮಾಡಿಕೊಂಡಿದ್ದಾರೆ. ಕೋರ್ಟ್ ಆದೇಶವಿದೆ ಎಂದು ದೇವರಾಜ್ ಹಾಕಿದ್ದ ಬೋರ್ಡ್ಅನ್ನು ಪುಷ್ಪಾ ಅವರು ಕಿತ್ತುಹಾಕಿದ್ದಾರೆ. ಇದೇ ವೇಳೆ ಮನೆ ಮುಂದೆ ಬಂದ ದೇವರಾಜ್‌ಗೆ ಯಶ್ ತಾಯಿ ತರಾಟೆ ತೆಗೆದುಕೊಂಡಿದ್ದಾರೆ.
ಯಾವುದೋ ಜಾಗಕ್ಕೆ ಸಂಬಂಧಿಸಿದ ದಾಖಲಾತಿ ತಂದಿದ್ದೀಯಾ, ನೀನು ಬಂದು ರೌಡಿಸಂ ಮಾಡ್ತಿದ್ದೀಯಾ. ನಾನು ಇದೇ ಊರ ಮಗಳು ನನ್ನನ್ನ ಹೆದರಿಸೋಕೆ ಬರಬೇಡ. ನಾನು ಇದೇ ಊರ ಮಗಳು ನಾನು ಹೆದರೊಲ್ಲ ಎಂದು ಆವಾಜ್ ಹಾಕಿದ್ದಾರೆ. ಇದು ನಮ್ಮ ಜಾಗ ನಾನು ಖರೀದಿ ಮಾಡಿದ್ದೇನೆ. ಕೋರ್ಟ್ ಆದೇಶ ಇರೋದಿದ್ರೆ ನ್ಯಾಯಾಲಯದ ಮೂಲಕ ಬಾ ಎಂದು ಪುಷ್ಪಾ ಅರುಣ್‌ಕುಮಾರ್ ತರಾಟೆ ತೆಗೆದುಕೊಂಡಿದ್ದಾರೆ.