
ಬೀದರ್ (ಜ.20): ಯುವಕನ ಕಿರುಕುಳಕ್ಕೆ ಬಲಿಯಾಯಿತೇ ಬಾಲಕಿಯ ಬಾಳು. ಜಿಲ್ಲೆಯ ಭಾಲ್ಕಿ ತಾಲೂಕಿನ ಗ್ರಾಮವೊಂದರಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಚ್ಚಿಬೀಳಿಸಿದೆ. ಬಾಲಕಿಯ ಸಾವಿಗೆ ಕೃಷ್ಣ ಎಂಬ ಯುವಕ ನೀಡುತ್ತಿದ್ದ ನಿರಂತರ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಮೃತ ಬಾಲಕಿಯು ದಿನನಿತ್ಯ ಶಾಲೆಗೆ ತೆರಳುವಾಗ ಕೃಷ್ಣ ಎಂಬಾತ ಆಕೆಯನ್ನು ಹಿಂಬಾಲಿಸಿ ಚುಡಾಯಿಸುತ್ತಿದ್ದ ಎನ್ನಲಾಗಿದೆ. ಈ ವಿಷಯ ತಿಳಿದ ಬಾಲಕಿಯ ಕುಟುಂಬಸ್ಥರು, ಈ ಹಿಂದೆ ಯುವಕನ ಮನೆಗೆ ತೆರಳಿ ಕಿರುಕುಳ ನೀಡದಂತೆ ಎಚ್ಚರಿಕೆ ನೀಡಿದ್ದರು. ಆ ಸಮಯದಲ್ಲಿ ಯುವಕನ ಪೋಷಕರು 'ಇನ್ನೊಮ್ಮೆ ಹೀಗೆ ಆಗುವುದಿಲ್ಲ' ಎಂದು ಕ್ಷಮೆ ಕೇಳಿ ಪ್ರಕರಣವನ್ನು ತಿಳಿಗೊಳಿಸಿದ್ದರು. ಆದರೆ, ಪುನಃ ಜನವರಿ 18ರಂದು ಗ್ರಾಮದಲ್ಲಿ ಜಾತ್ರೆಯ ಸಂಭ್ರಮವಿತ್ತು. ಈ ವೇಳೆ ಕೃಷ್ಣ ಮತ್ತೆ ಬಾಲಕಿಯನ್ನು ಚುಡಾಯಿಸಿ ಕಿರುಕುಳ ನೀಡಿದ್ದಾನೆ ಎಂದು ಹೇಳಲಾಗಿದೆ. ಅಂದೇ ಸಂಜೆ ಬಾಲಕಿ ನಾಪತ್ತೆಯಾಗಿದ್ದಾಳೆ. ಗಾಬರಿಗೊಂಡ ಕುಟುಂಬಸ್ಥರು ರಾತ್ರಿಯಿಡೀ ಗ್ರಾಮದ ಮೂಲೆ ಮೂಲೆಗಳಲ್ಲಿ ಹುಡುಕಾಡಿದರೂ ಆಕೆ ಪತ್ತೆಯಾಗಿರಲಿಲ್ಲ. ಆದರೆ, ಮರುದಿನ ಬೆಳಿಗ್ಗೆ ಗ್ರಾಮದ ಬಾವಿಯೊಂದರಲ್ಲಿ ಬಾಲಕಿಯ ಶವ ತೇಲುತ್ತಿರುವುದು ಕಂಡುಬಂದಿದೆ.
ಬಾಲಕಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಮೆಹಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ತನ್ನ ಮಗಳ ಸಾವಿಗೆ ಯುವಕ ಕೃಷ್ಣನೇ ನೇರ ಕಾರಣ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಆರೋಪಿ ಕೃಷ್ಣ, ಆತನ ತಂದೆ ಹಾಗೂ ಇಬ್ಬರು ಸಹೋದರರ ವಿರುದ್ಧ ಪೊಕ್ಸೋ (POCSO) ಕಾಯ್ದೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬುದು ಸ್ಪಷ್ಟವಾಗಬೇಕಿದೆ.