
ಮಾಲೂರು: ಅಮಾವಾಸ್ಯೆ ಹಿನ್ನೆಲೆಯಲ್ಲಿ ಗ್ರಾಮದ ಸ್ಮಶಾನ ಮಧ್ಯೆ ಇರುವ ದೇವಸ್ಥಾನದಲ್ಲಿ ಭಯಾನಕ, ಬೆಚ್ಚಿ ಬೀಳಿಸುವ ಮಾಟ–ಮಂತ್ರ ಪೂಜೆ ನಡೆಸಿದ್ದ ಪೂಜಾರಿಯೊಬ್ಬರನ್ನು ದುಷ್ಕರ್ಮಿಗಳು ಲಾಂಗ್‌ನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಅರಳೇರಿ ಗ್ರಾಮದ ಬಳಿ ನಡೆದಿದೆ. ಈ ಭೀಕರ ಹತ್ಯೆ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮತ್ತು ಭೀತಿಯನ್ನುಂಟು ಮಾಡಿದೆ.
ಹುಲ್ಲೂರು ಚೌಡೇಶ್ವರಿ ದೇವಾಲಯದ ಪೂಜಾರಿಯಾಗಿದ್ದ ಆಂಜಿ ಅಲಿಯಾಸ್ ಆಂಜಿನಪ್ಪ (45) ಕೊಲೆಯಾದ ವ್ಯಕ್ತಿ. ಈತ ಮಾಟ ಮಂತ್ರ ಹಾಗೂ ಕಾಳಿ ದೇವಿಯ ಪೂಜೆ ಮಾಡುತ್ತಿದ್ದ. ಭಾನುವಾರ ರಾತ್ರಿ ಪೂಜೆ ಮುಗಿಸಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಆಂಜಿನಪ್ಪ ಅವರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ, ಲಾಂಗ್‌ನಿಂದ ನಿರಂತರವಾಗಿ ಹಲ್ಲೆ ನಡೆಸಿ ಸ್ಥಳದಲ್ಲೇ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಆಂಜಿನಪ್ಪ ಅಮಾವಾಸ್ಯೆ ದಿನದಂದು ಗ್ರಾಮದ ಸ್ಮಶಾನದ ಮಧ್ಯದಲ್ಲಿರುವ ದೇವಸ್ಥಾನದಲ್ಲಿ ಭಯಾನಕ ಮಾಟ–ಮಂತ್ರ ಪೂಜೆ ನಡೆಸಿದ್ದನೆಂದು ಹೇಳಲಾಗುತ್ತಿದೆ. ಮಣ್ಣಿನಿಂದ ಗೊಂಬೆಯ ಆಕೃತಿ ನಿರ್ಮಿಸಿ, ಅದರಲ್ಲಿ ಮೊಳೆಗಳನ್ನು ವಿವಿಧ ಭಾಗಗಳಲ್ಲಿ ಚುಚ್ಚಿ, ಅಷ್ಟಮಂಗಲ ಪೂಜೆಯೊಂದಿಗೆ ವಾಮಾಚಾರ ನಡೆಸಲಾಗಿತ್ತು. ಈ ಪೂಜೆಗೆ ಮದ್ಯ ಸೇರಿದಂತೆ ಹಲವು ವಸ್ತುಗಳನ್ನು ಬಳಸಲಾಗಿತ್ತು ಎನ್ನಲಾಗಿದೆ.
ಹುಲ್ಲೂರು ಕಾಳಿಕಾಂಬ ದೇವಸ್ಥಾನದ ಸಮೀಪದಲ್ಲಿಯೇ ಈ ಮಾಟ–ಮಂತ್ರ ನಡೆಸಿದ್ದ ಕುರುಹುಗಳು ಪತ್ತೆಯಾಗಿದ್ದು, ಸ್ಥಳದಲ್ಲಿ ಮಣ್ಣಿನ ಗೊಂಬೆ, ಪೂಜಾ ಸಾಮಗ್ರಿಗಳು ಹಾಗೂ ಇತರ ವಸ್ತುಗಳು ಚದುರಿಕೊಂಡ ಸ್ಥಿತಿಯಲ್ಲಿ ಕಂಡುಬಂದಿವೆ.
ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶಗಳಿಂದ ಸಾಕಷ್ಟು ಜನರು ದೆವ್ವಪೀಡೆ, ಪಿಶಾಚಿ ಬಾಧೆ ಹಾಗೂ ಇತರ ತೊಂದರೆಗಳಿಂದ ರಕ್ಷಣೆ ಪಡೆಯಲು ಆಂಜಿನಪ್ಪನ ಬಳಿಗೆ ಬರುತ್ತಿದ್ದರು ಎನ್ನಲಾಗಿದೆ. ಅಮಾವಾಸ್ಯೆ ದಿನದಂದು ವಿಶೇಷ ಪೂಜೆ ನಡೆಯುತ್ತಿದ್ದ ಕಾರಣ ಭಾನುವಾರ ರಾತ್ರಿ ಕೂಡ ಹಲವರು ಪೂಜೆ ನೆರವೇರಿಸಿಕೊಂಡು ತೆರಳಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಇಬ್ಬರು ಪತ್ನಿಯರನ್ನು ಹೊಂದಿದ್ದ ಆಂಜಿನಪ್ಪನ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿವೆ. ಇದು ವಾಮಾಚಾರಕ್ಕೆ ಸಂಬಂಧಿಸಿದ ವೈಷಮ್ಯದಿಂದ ನಡೆದ ಕೊಲೆಯೇ? ಅಥವಾ ಜಮೀನು ವಿವಾದ ಅಥವಾ ವೈಯಕ್ತಿಕ ದ್ವೇಷದಿಂದ ನಡೆದ ಹತ್ಯೆಯೇ? ಎಂಬ ಪ್ರಶ್ನೆಗಳು ಇದೀಗ ಎದ್ದಿವೆ. ಪೂಜೆ ನಡೆಸಿದ ಬಳಿಕ ಯಾರೊಂದಿಗೆ ವೈಷಮ್ಯ ಉಂಟಾಯಿತೇ ಎಂಬುದೂ ತನಿಖೆಯ ಪ್ರಮುಖ ಅಂಶವಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಹಾಗೂ ಮಾಲೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗ್ರಾಮದ ಸ್ಮಶಾನದ ಮಧ್ಯೆ ನಡೆದ ವಾಮಾಚಾರ, ಭೀಕರ ಕೊಲೆ ಹಾಗೂ ಅದರ ಹಿಂದಿರುವ ನಿಜವಾದ ಕಾರಣ ಏನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದ್ದು, ಜನರಲ್ಲಿ ಭಯ ಮೂಡಿಸಿದೆ.