ಒಮ್ಮೆ ಶಾಸಕರಾದರೆ ಮಾಸಿಕ ₹75 ಸಾವಿರ ಪಿಂಚಣಿ + ಭತ್ಯೆ! 426 ಮಾಜಿ ಶಾಸಕರ ಪಿಂಚಣಿಗೆ ₹209 ಕೋಟಿ ಖರ್ಚು!

Published : Nov 29, 2026, 08:25 AM IST
Karnataka MLA pension

ಸಾರಾಂಶ

ರಾಜ್ಯದಲ್ಲಿ ಒಮ್ಮೆ ಶಾಸಕರಾಗಿ ಮಾಜಿಯಾದರೆ ಅವರಿಗೆ ಮಾಸಿಕ 75 ಸಾವಿರ ರೂ. ಪಿಂಚಣಿ ಸಿಗುತ್ತದೆ. ಮತ್ತೊಂದು ಅವಧಿಗೆ ತಲಾ 20 ಸಾವಿರ ರೂ.ಹೆಚ್ಚಳವಾಗುತ್ತದೆ. ಮಾಜಿ ಶಾಸಕರು ಮೃತಪಟ್ಟರೆ ಅವರ ಹೆಂಡತಿಗೆ ಶೇ.50ರಷ್ಟು ಸಿಗುತ್ತದೆ. ಅಂತೆಯೇ ಒಟ್ಟು ರಾಜ್ಯ ಸರ್ಕಾರ 209 ಕೋಟಿ ರೂ. ಮಾಜಿ ಶಾಸಕರು ಮತ್ತು ಮೃತ ಶಾಸಕರ ಕುಟುಂಬದ ಪಿಂಚಣಿಗೆ ಖರ್ಚು ಮಾಡಿದೆ ಎಂದು ಭೀಮಪ್ಪ ಗಡಾದ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿ, ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ ಸೇರಿದಂತೆ ಶ್ರಮಿಕ ವರ್ಗದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಆರ್ಥಿಕ ಹೊರೆಯ ನೆಪ ಹೇಳುವ ಸರ್ಕಾರ, ಮಾಜಿ ಶಾಸಕರು ಹಾಗೂ ಅವರ ಕುಟುಂಬಗಳಿಗೆ ಕೋಟ್ಯಂತರ ರುಪಾಯಿ ಪಿಂಚಣಿ ಮತ್ತು ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಜನಪ್ರತಿನಿಧಿಗಳ ಮರಣಾನಂತರವೂ ಅವರ ಕುಟುಂಬಕ್ಕೆ ಪಿಂಚಣಿ ನೀಡುವುದನ್ನು ನಿಲ್ಲಿಸಿ, ಆ ಹಣವನ್ನು ಶ್ರಮಿಕ ವರ್ಗದ ಕಲ್ಯಾಣಕ್ಕೆ ಬಳಸಬೇಕು ಎಂದು ಸಾಮಾಜಿಕ ಹೋರಾಟಗಾರ ಭೀಮಪ್ಪ ಗಡಾದ ಆಗ್ರಹಿಸಿದರು.

₹209,72,89,930 ಖರ್ಚು

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 426 ಮಾಜಿ ಶಾಸಕರ ನಿವೃತ್ತಿ ವೇತನ, ರೈಲು ಮತ್ತು ವಿಮಾನ ಪ್ರಯಾಣ ಭತ್ಯೆ ಹಾಗೂ ಮೃತಪಟ್ಟ 263 ಮಾಜಿ ಶಾಸಕರ ಕುಟುಂಬಗಳಿಗೆ ನೀಡುತ್ತಿರುವ ಕುಟುಂಬ ಪಿಂಚಣಿಗಾಗಿ ಕಳೆದ ಐದು ವರ್ಷಗಳಲ್ಲಿ ರಾಜ್ಯದ ಖಜಾನೆಯಿಂದ ಒಟ್ಟು ₹209,72,89,930 ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಇದೇ ರೀತಿ ವಿಧಾನ ಪರಿಷತ್ತಿನ 156 ಮಾಜಿ ಸದಸ್ಯರು ಹಾಗೂ ಮೃತಪಟ್ಟ 58 ಮಾಜಿ ಸದಸ್ಯರ ಕುಟುಂಬಗಳಿಗೂ ನಿವೃತ್ತಿ ವೇತನ ನೀಡಲಾಗುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಶೀಘ್ರದಲ್ಲೇ ಬಹಿರಂಗಪಡಿಸುವುದಾಗಿ ಹೇಳಿದರು.

ಮಾಜಿ ಶಾಸಕರಿಗೆ ಮಾಸಿಕ 75 ಸಾವಿರ ಪಿಂಚಣಿ

ಒಂದು ಅವಧಿಗೆ ಶಾಸಕರಾಗಿ ಸೇವೆ ಸಲ್ಲಿಸಿದವರಿಗೆ ಮಾಸಿಕ ₹75 ಸಾವಿರ ಪಿಂಚಣಿ ನೀಡಲಾಗುತ್ತಿದೆ. ಹೆಚ್ಚುವರಿ ಪ್ರತಿಯೊಂದು ಅವಧಿಗೆ ಮಾಸಿಕ ₹20 ಸಾವಿರ ಹೆಚ್ಚುವರಿ ಪಿಂಚಣಿ ಸಿಗುತ್ತದೆ. ರೈಲು ಮತ್ತು ವಿಮಾನ ಪ್ರಯಾಣಕ್ಕಾಗಿ ಪ್ರತಿ ಆರ್ಥಿಕ ವರ್ಷಕ್ಕೆ ₹2 ಲಕ್ಷ, ವೈದ್ಯಕೀಯ ವೆಚ್ಚಕ್ಕಾಗಿ ಮಾಸಿಕ ₹20 ಸಾವಿರ ನೀಡಲಾಗುತ್ತಿದೆ. ಅಲ್ಲದೆ, ಜೀವಿತಾವಧಿಯಲ್ಲಿ ಒಮ್ಮೆ ಶ್ರವಣ ಸಾಧನ ಖರೀದಿಗೆ ₹1 ಲಕ್ಷ, ದಂತಪಂಕ್ತಿಗೆ ₹50 ಸಾವಿರ ಹಾಗೂ ರೂಟ್ ಕೆನಾಲ್ ಚಿಕಿತ್ಸೆಗೆ ₹10 ಸಾವಿರ ನೆರವು ಒದಗಿಸಲಾಗುತ್ತಿದೆ ಎಂದು ವಿವರಿಸಿದರು.

ಮಾಸಿಕ ₹37,500 ಕುಟುಂಬ ಪಿಂಚಣಿ

ಮಾಜಿ ಶಾಸಕರು ಮೃತಪಟ್ಟ ಬಳಿಕ ಅವರ ಧರ್ಮಪತ್ನಿಗೆ ಮಾಸಿಕ ₹37,500 ಕುಟುಂಬ ಪಿಂಚಣಿ ಹಾಗೂ ವೈದ್ಯಕೀಯ ವೆಚ್ಚಕ್ಕಾಗಿ ₹10 ಸಾವಿರ ನೀಡಲಾಗುತ್ತಿದೆ. ಜನಪ್ರತಿನಿಧಿಗಳಿಗೆ ಇಷ್ಟೊಂದು ಸೌಲಭ್ಯಗಳನ್ನು ಒದಗಿಸುವ ಸರ್ಕಾರ, ದುಡಿಯುವ ವರ್ಗದ ಬೇಡಿಕೆಗಳ ಈಡೇರಿಕೆಗೆ ಮಾತ್ರ ಹಣಕಾಸಿನ ಕೊರತೆಯ ನೆಪ ಹೇಳುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಸಾರ್ವಜನಿಕ ಸೇವೆಯ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸುವ ಜನಪ್ರತಿನಿಧಿಗಳು ಶಾಸಕರಾದ ಬಳಿಕ ವೇತನ, ಭತ್ಯೆ ಹಾಗೂ ವಿವಿಧ ಸೌಲಭ್ಯಗಳನ್ನು ಪಡೆಯುತ್ತಾರೆ. ಆದರೂ ಸಾರ್ವಜನಿಕರ ತೆರಿಗೆ ಹಣದಿಂದ ಜೀವಿತಾವಧಿಯವರೆಗೆ ಮಾತ್ರವಲ್ಲದೆ, ಮರಣಾನಂತರವೂ ಅವರ ಕುಟುಂಬದವರಿಗೆ ಪಿಂಚಣಿ ನೀಡುತ್ತಿರುವುದು ಎಷ್ಟು ಸಮಂಜಸ?. ಈ ತಾರತಮ್ಯದ ವಿರುದ್ಧ ಶೀಘ್ರದಲ್ಲೇ ಕಾನೂನು ಹೋರಾಟ ಆರಂಭಿಸಲಾಗುವುದು ಎಂದು ಭೀಮಪ್ಪ ಗಡಾದ ಎಚ್ಚರಿಸಿದರು.

PREV
Read more Articles on
click me!

Recommended Stories

Ankola: ಒಂದೇ ರಾತ್ರಿಯಲ್ಲಿ 25 ಸಾವಿರ ತೆಂಗಿನಕಾಯಿ ಒಡೆದ್ರು; ಅಪರೂಪದ ಧಾರ್ಮಿಕ ಸೇವೆ
ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ಭೂಮಿ ಕೊಟ್ಟಿಲ್ಲ: ಹೆಚ್‌ಡಿಕೆ