ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ಭೂಮಿ ಕೊಟ್ಟಿಲ್ಲ: ಹೆಚ್‌ಡಿಕೆ

Published : Nov 29, 2026, 07:59 AM IST
HD Kumaraswamy

ಸಾರಾಂಶ

ಮಂಡ್ಯದಲ್ಲಿ ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಭೂಮಿ ಹಸ್ತಾಂತರ ವಿಳಂಬವಾದರೆ ಯೋಜನೆ ಬೇರೆ ರಾಜ್ಯಗಳ ಪಾಲಾಗುವ ಆತಂಕವಿದೆ ಎಂದು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ರಾಜ್ಯ ಸರ್ಕಾರದ ಸಹಕಾರದ ಕೊರತೆಯಿಂದ ಈ ಬೃಹತ್ ಕೈಗಾರಿಕಾ ಯೋಜನೆ ಕೈತಪ್ಪುವ ಸಾಧ್ಯತೆ ಬಗ್ಗೆ ಅವರು ಎಚ್ಚರಿಕೆ ನೀಡಿದ್ದಾರೆ.

ಮಂಡ್ಯ: ಮುಂದಿನ ಮಾರ್ಚ್ ವೇಳೆಗೆ ಎಆರ್‌ಎಐ ಪರೀಕ್ಷಾ ಕೇಂದ್ರದ ಕಾಮಗಾರಿ ಆರಂಭಗೊಳ್ಳದಿದ್ದರೆ ಹಣ ವಾಪಸಾಗಲಿದೆ. ಬೇರೆ ಜಿಲ್ಲೆ ಅಥವಾ ಹೊರರಾಜ್ಯದವರ ಪಾಲಾದರೂ ಆಶ್ಚರ್ಯವಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಆತಂಕದಿಂದ ನುಡಿದರು.

ಜಿಲ್ಲೆಯ ಜನರ ಋಣ ತೀರಿಸಲು ದೊಡ್ಡ ಮಟ್ಟದ ಯೋಜನೆಯೊಂದನ್ನು ಜಾರಿಗೊಳಿಸುವುದಕ್ಕೆ ಮುಂದಾಗಿದ್ದೆ. ಅದರೆ, ಸರ್ಕಾರದಿಂದ ನನಗೆ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ. ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಹಾಸನ, ತುಮಕೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳು, ಆಂಧ್ರಪ್ರದೇಶ, ಮಹಾರಾಷ್ಟ್ರ, ಹರಿಯಾಣದಂತಹ ರಾಜ್ಯಗಳು ರೆಡ್‌ಕಾರ್ಪೆಟ್ ಹಾಕಿಕೊಂಡು ಕುಳಿತಿವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಯೋಜನೆ ಜಾರಿಯಿಂದ ನನಗೆ ಹೆಸರು ಬರುತ್ತದೆ ಎಂದು ಭಾವಿಸಿದ್ದರೆ ಅವರೇ ಭೂಮಿ ಕೊಟ್ಟು ಅವರೇ ಶಂಕುಸ್ಥಾಪನೆ ಮಾಡಲಿ. ನನ್ನದೇನೂ ಅಭ್ಯಂತರವಿಲ್ಲ. ಎಆರ್‌ಎಐ ಪರೀಕ್ಷಾ ಕೇಂದ್ರ ಮಂಡ್ಯದಿಂದ ಕೈತಪ್ಪಿ ಹೋಗಬಾರದು ಎನ್ನುವುದಷ್ಟೇ ನನ್ನ ಆಶಯ. ಅದನ್ನು ಉಳಿಸಿಕೊಂಡು ಮಂಡ್ಯವನ್ನು ಕೈಗಾರಿಕಾ ಹಬ್ ಮಾಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಬೇಕೆನ್ನುವುದು ಪ್ರಮುಖ ಉದ್ದೇಶವಾಗಿದೆ ಎಂದರು.

ಸಾಕ್ಷಿ ಗುಡ್ಡೆ ತೋರಿಸಲಿ ಎನ್ನುವವರು ಮೊದಲು ನೂರು ಎಕರೆ ಕೊಡಲಿ: ಎಚ್‌ಡಿಕೆ

ಮಂಡ್ಯದಲ್ಲಿ ಏನು ಮಾಡಿದ್ದಾರೆ. ಸಾಕ್ಷಿ ಗುಡ್ಡೆ ಕೊಡಲಿ ಎನ್ನುತ್ತಾರೆ. ಮೊದಲು ನೀವು ಜಾಗ ಕೊಡಿ, ನಾನು ಸಾಕ್ಷಿ ಗುಡ್ಡೆ ಕೊಡುತ್ತೇನೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ನನಗೆ ಇವರು ಈಗ 100 ಎಕರೆಯನ್ನೇ ಕೊಡಲಿ ಸಾಕು. ಮುಂದೆ ಚುನಾವಣೆಯಲ್ಲಿ ಜನರು ಆಶೀರ್ವಾದ ಮಾಡುತ್ತಾರೆ. ನಮ್ಮ ಸರ್ಕಾರ ಬರುತ್ತೆ, ಆಗ ನಾವೇ ಮಾಡುತ್ತೇವೆ. ಐಟಿ ಹಬ್ ಮಾಡಿದ್ದು ಎಸ್.ಎಂ.ಕೃಷ್ಣ ಎನ್ನುತ್ತಾರೆ.‌ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ತೆರಿಗೆ ವಿನಾಯಿತಿ ನೀಡಿದ್ದರು. ಟೊಯೋಟಾ ತಂದಿದ್ದು ಯಾರು? ದೇವೇಗೌಡರು ಸೂಟು ಬೂಟು ಹಾಕೊಂಡು ಹೋಗಲ್ಲ. ದೇವೇಗೌಡರು ಮಾಡಿದ ಕೆಲಸ ಯಾರೂ ಹೇಳಲ್ಲ. ಇವನ್ಯಾರೋ‌ ಹಳ್ಳಿ ಗುಗ್ಗು, ಗಮಾರ್‌ ಎನ್ನುತ್ತಾರೆ ಎಂದು ವಿರೋಧಿಗಳಿಗೆ ಚಾಟಿ ಬೀಸಿದರು.

ಬರ ಪರಿಹಾರಕ್ಕೆ ದೆಹಲಿ‌ ಚಲೋ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಮಾಡಲಿ ತಪ್ಪೇನಿಲ್ಲ. ಬರ ಪರಿಹಾರ ಕೊಡೋದು ರಾಜ್ಯ ಸರ್ಕಾರದ ಕರ್ತವ್ಯ. ಅವರು ಮಾಡದೇ ಕೇಂದ್ರ ಸರ್ಕಾರದ ಮೇಲೆ ಹೇಳುತ್ತಾರೆ. ಭಾರತ್ ಜೋಡೋ ರೀತಿ ಇಲ್ಲಿಂದಲೇ ಪಾದಯಾತ್ರೆ ಹೋಗಲಿ‌ ಎಂದು ಲೇವಡಿ ಮಾಡಿದರು

ಕೈಗಾರಿಕಾ ಹಬ್ ಏನೆಂದು ಗೊತ್ತಿಲ್ಲದವರು ಎಆರ್‌ಎಐ ಪರೀಕ್ಷಾ ಕೇಂದ್ರದ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಅವರಿಗೆ ಗೊತ್ತಿಲ್ಲದಿದ್ದರೆ ಮಹಾರಾಷ್ಟ್ರ, ಆಂಧ್ರಪ್ರದೇಶ, ಉತ್ತರಪ್ರದೇಶಗಳಿಗೆ ಹೋಗಿ ನೋಡಿಕೊಂಡು ಬರಲಿ. ಸುಮ್ಮನೆ ಇಲ್ಲಿ ಕುಳಿತು ಬಾಯಿಚಪಲಕ್ಕೆ ಮಾತನಾಡಬಾರದು. ಸಣ್ಣತನ ಪ್ರದರ್ಶಿಸುವುದರಿಂದ ಏನೂ ಪ್ರಯೋಜನವಿಲ್ಲ. ಭೂಮಿ ಕೊಟ್ಟಿದ್ದೇವೆ ಎಂದು ಬಾಯಿಬಡಿದುಕೊಳ್ಳುವವರು ಯಾವ ರೀತಿಯಲ್ಲಿ ಭೂಮಿಯನ್ನು ಹಸ್ತಾಂತರಿಸಬೇಕೆಂಬ ಬಗ್ಗೆ ಮೊದಲು ತಿಳಿದುಕೊಂಡು ಮಾತನಾಡಲಿ ಎಂದು ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದರು.

ರಾಜ್ಯಸರ್ಕಾರ ಎಷ್ಟು ದಿನಗಳೊಳಗೆ ಭೂಮಿಯನ್ನು ಕೊಡಲಿದೆ ಎನ್ನುವುದನ್ನು ಖಚಿತಪಡಿಸಬೇಕು. ಕೆಐಎಡಿಬಿಗೆ ಹಸ್ತಾಂತರಿಸಿದ ಬಳಿಕ ಅವರು ಭೂಮಿಯನ್ನು ಅಭಿವೃದ್ಧಿಪಡಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಭೂಮಿಯನ್ನು ಕೆಐಎಡಿಬಿಗೆ ಹಸ್ತಾಂತರಿಸಿದರೆ ಯೋಜನೆಗೆ ಅಡಿಗಲ್ಲು ಹಾಕುವುದಕ್ಕೆ ಅನುಕೂಲವಾಗಲಿದೆ. ಇದೇ ರೀತಿ ವಿಳಂಬ ಮಾಡಿದರೆ ಯೋಜನೆ ಕೈತಪ್ಪಿಹೋಗಲಿದೆ. ಅದರಿಂದ ಜಿಲ್ಲೆಗೆ ಅತಿದೊಡ್ಡ ನಷ್ಟವಾಗಲಿದೆ ಎಂದು ಎಚ್ಚರಿಸಿದರು.

PREV
Read more Articles on
click me!

Recommended Stories

ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ಇರಲ್ಲ! ನಿಮ್ ಏರಿಯಾ ಇದೆನಾ ಈಗಲೇ ಚೆಕ್ ಮಾಡಿ!
'ನಾವೆಲ್ಲ ಹಿಂದೂ' ಎಂದ ವಿಜಯೇಂದ್ರ; ವೇದಿಕೆ ಮೇಲೆ ನುಗ್ಗಿ ಆಕ್ರೋಶ ಹೊರಹಾಕಿದ ಹೋರಾಟಗಾರರು