
ಅಂಶಿ ಪ್ರಸನ್ನಕುಮಾರ್
ಮೈಸೂರು : ಜೆಡಿಎಸ್ ಎರಡನೇ ಪಟ್ಟಿಬಿಡುಗಡೆ ಮಾಡಿದ್ದರೂ ನಗರದ ಚಾಮರಾಜ ಹಾಗೂ ನರಸಿಂಹರಾಜ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿಲ್ಲ,
ಮೈಸೂರು ಜಿಲ್ಲೆಯ 11 ಕ್ಷೇತ್ರಗಳ ಪೈಕಿ ಮೊದಲ ಪಟ್ಟಿಯಲ್ಲಿ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿತ್ತು. ಎರಡನೇ ಪಟ್ಟಿಯಲ್ಲಿ 1 ಕ್ಷೇತ್ರಕ್ಕೆ ಮಾತ್ರ ಟಿಕೆಟ್ ಪ್ರಕಟಿಸಲಾಗಿದೆ. ಉಳಿದ ಮೂರರ ಪೈಕಿ ನಂಜನಗೂಡಿನಿಂದ ಸ್ಪರ್ಧಿಸುವುದಿಲ್ಲ ಎನ್ನಲಾಗಿದೆ.
ಚಾಮರಾಜದಿಂದ ಮಾಜಿ ಶಾಸಕ ದಿ.ಎಚ್. ಕೆಂಪೇಗೌಡರ ಪುತ್ರ ಎಚ್.ಕೆ. ರಮೇಶ್, ಪಾಲಿಕೆ ಸದಸ್ಯರಾದ ಕೆ.ವಿ. ಶ್ರೀಧರ್, ಎಸ್‌ಬಿಎಂ ಮಂಜು ಮತ್ತಿತರ ಹೆಸರುಗಳಿವೆ. ನರಸಿಂಹರಾಜ ಕ್ಷೇತ್ರಕ್ಕೆ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಬರುತ್ತಾರೆ ಎಂದು ಹೇಳಲಾಗುತ್ತಿದೆಯಾದರೂ ಈವರೆಗೆ ಖಚಿತವಾಗಿಲ್ಲ.
ಹಾಸನದಲ್ಲಿ ಟಿಕೆಟ್ ತಪ್ಪಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ ಅವರು ಚಾಮರಾಜ ಕ್ಷೇತ್ರಕ್ಕೆ ಅಭ್ಯರ್ಥಿಯಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ ರೇವಣ್ಣ ಅವರು ಮಾತ್ರ, ನಾವು ಹಾಸನ ಬಿಟ್ಟು ಹೋಗುವುದಿಲ್ಲ ಎಂದಿದ್ದಾರೆ.
ಚಿಕ್ಕಣ್ಣ ಪುತ್ರಗೆ ಟಿಕೆಟ್
ಜಿಲ್ಲೆಯ ಎಚ್.ಡಿ. ಕೋಟೆ ಪ.ಪಂಗಡ ಮೀಸಲು ಕ್ಷೇತ್ರದಿಂದ ಮಾಜಿ ಶಾಸಕ ಚಿಕ್ಕಣ್ಣ ಅವರ ಪುತ್ರ ಸಿ. ಜಯಪ್ರಕಾಶ್ ಅವರಿಗೆ 2ನೇ ಪಟ್ಟಿಯಲ್ಲಿ ಜೆಡಿಎಸ್ ಟಿಕೆಟ್ ನೀಡಲಾಗಿದೆ.
ಜೆಡಿಎಸ್ ಟಿಕೆಟ್‌ಗಾಗಿ ಜಯಪ್ರಕಾಶ್ ಹಾಗೂ ಕೃಷ್ಣನಾಯಕ ಪೈಪೋಟಿ ನಡೆಸಿದ್ದರು. ಆದರೆ ಜಿ.ಟಿ. ದೇವೇಗೌಡರು ಜೆಡಿಎಸ್‌ನಲ್ಲಿ ಸಕ್ರಿಯವಾದ ನಂತರ ಜಯಪ್ರಕಾಶ್ ಚಿಕ್ಕಣ್ಣ ಅವರಿಗೆ ಟಿಕೆಟ್ ಎಂಬುದು ಖಚಿತವಾಗಿತ್ತು. ಆದರೆ ಅಧಿಕೃತವಾಗಿ ಪ್ರಕಟಿಸಿರಲಿಲ್ಲ. ಕೆಲವು ದಿನಗಳ ಹಿಂದೆ ಕೃಷ್ಣನಾಯಕ್ ಬಿಜೆಪಿ ಸೇರಿದ ನಂತರ ಜಯಪ್ರಕಾಶ್ ಅಭ್ಯರ್ಥಿ ಎಂಬುದು ವೇದ್ಯವಾಗಿತ್ತು.
ಈಗಾಗಲೇ ಹಾಲಿ ಶಾಸಕರಾದ ಜಿ.ಟಿ. ದೇವೇಗೌಡ- ಚಾಮುಂಡೇಶ್ವರಿ, ಸಾ.ರಾ. ಮಹೇಶ್- ಕೆ.ಆರ್. ನಗರ, ಕೆ. ಮಹದೇವ್- ಪಿರಿಯಾಪಟ್ಟಣ, ಎಂ. ಅಶ್ವಿನ್‌ಕುಮಾರ್- ಟಿ. ನರಸೀಪುರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ- ಹುಣಸೂರು, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್- ಕೃಷ್ಣರಾಜ ಅವರಿಗೆ ಮೊದಲ ಪಟ್ಟಿಯಲ್ಲಿವೇ ಟಿಕೆಟ್ ಘೋಷಿಸಲಾಗಿತ್ತು.
ವರುಣ ಕ್ಷೇತ್ರದ ಕಥೆ?
ವರುಣ ಕ್ಷೇತ್ರದಲ್ಲಿ ಎಂ.ಎಸ್. ಅಭಿಷೇಕ್ ಅವರಿಗೆ ಟಿಕೆಟ್ ಘೋಷಿಸಲಾಗಿತ್ತು. ಆದರೆ ಅವರು ಸಕ್ರಿಯರಾಗಿಲ್ಲ. ಹೀಗಾಗಿ ಬದಲಿಸಲಾಗುವುದು ಎಂದು ಹೇಳಲಾಗಿತ್ತು ರುದ್ರಸ್ವಾಮಿ, ಗಿರೀಶ್ ಇಲ್ಲಿಂದ ಟಿಕೆಟ್ ಕೇಳಿದ್ದಾರೆ. ರುದ್ರಸ್ವಾಮಿ 2006ರ ಚಾಮಂಡೇಶ್ವರಿ ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ದಿವಂಗತ ಶಿವಬಸಪ್ಪ ಅವರ ಪುತ್ರ,
ವರುಣದಲ್ಲಿ ಮಾಜಿ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ. ಈಗ ಬಿಜೆಪಿಯು ವಸತಿ ಸಚಿವ ವಿ. ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ. ಇಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯೇ ನಡುವೆಯೇ ಹೋರಾಟ. ಜೆಡಿಎಸ್ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬ ಪರಿಸ್ಥಿತಿ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಭಿಷೇಕ್ 28 ಸಾವಿರ ಮತಗಳನ್ನು ಪಡೆದಿದ್ದರು. ಹೀಗಾಗಿ ಇಲ್ಲಿ ಕೂಡ ಸ್ಪರ್ಧೆ ಅನುಮಾನ.
ನಂಜನಗೂಡಿನಲ್ಲಿ ಸ್ಪರ್ಧೆ ಇಲ್ಲ
ನಂಜನಗೂಡು ಕ್ಷೇತ್ರದಿಂದ ಆರ್. ಮಾದೇಶ್ ಹಾಗೂ ಬೆಳವಾಡಿ ಶಿವಕುಮಾರ್ ಹೆಸರು ಕೇಳಿ ಬಂದಿದ್ದವು. ಆದರೆ ಅಲ್ಲಿಂದ ಕಾಂಗ್ರೆಸ್ ಅಭ್ಯರ್ಥಿಯಾಗಬಯಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್. ಧ್ರುವನಾರಾಯಣ ಅವರ ಹಠಾತ್ ನಿಧನ, ನಂತರ ಅವರ ಪತ್ನಿ ವೀಣಾ ಅವರ ನಿಧನದಿಂದಾಗಿ ಜೆಡಿಎಸ್ ತನ್ನ ನಿಲವು ಬದಲಿಸಿಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಧ್ರುವನಾರಾಯಣ ಅವರ ಪುತ್ರ ದರ್ಶನ್ ಅವರಿಗೆ ಬೆಂಬಲಿಸುವುದಾಗಿ ಹೇಳಿಕೆ ನೀಡಿದ್ದರು. ಹೀಗಾಗಿ ಜೆಡಿಎಸ್ ಸಂಘಟನೆಗೆ ಓಡಾಡುತ್ತಿದ್ದ ಆರ್. ಮಾದೇಶ್ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ.
ಬಿಜೆಪಿಯಲ್ಲಿ 1, ಕಾಂಗ್ರೆಸ್‌ನಲ್ಲಿ 2 ಕ್ಷೇತ್ರದ ಟಿಕೆಟ್ ಬಾಕಿ
ಬಿಜೆಪಿಯು 10 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಿಸಿದ್ದು, ಎಸ್.ಎ. ರಾಮದಾಸ್ ಅವರು ಪ್ರತಿನಿಧಿಸುತ್ತಿರುವ ಕೃಷ್ಣರಾಜ ಅಂತಿಮವಾಗಿಲ್ಲ. ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ತೀವ್ರ ಪೈಪೋಟಿ ಒಡ್ಡಿದ್ದಾರೆ.
ಕಾಂಗ್ರೆಸ್‌ನಲ್ಲಿ ಕೃಷ್ಣರಾಜ ಹಾಗೂ ಚಾಮರಾಜ ಅಭ್ಯರ್ಥಿಗಳು ಅಂತಿಮವಾಗಿಲ್ಲ. ಕೃಷ್ಣರಾಜದಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್,ಪಾಲಿಕೆ ಮಾಜಿ ಸದಸ್ಯ ಎಂ. ಪ್ರದೀಪ್‌ಕುಮಾರ್, ಎಂಡಿಎ ಮಾಜಿ ಅಧ್ಯಕ್ಷ ಕೆ.ಆರ್. ಮೋಹನಕುಮಾರ್ ಪುತ್ರ ಎನ್.ಎಂ. ನವೀನ್‌ಕುಮಾರ್ ಹೆಸರುಗಳಿವೆ. ಬಿಜೆಪಿಯಿಂದ ಇಬ್ಬರಲ್ಲಿ ಒಬ್ಬರು ಬರಬಹುದು ಎಂದು ಕೂಡ ನಿರೀಕ್ಷಿಸಲಾಗುತ್ತಿದೆ.
ಚಾಮರಾಜದಲ್ಲಿ ಮಾಜಿ ಶಾಸಕ ವಾಸು ಹಾಗೂ ಮುಖಂಡ ಕೆ. ಹರೀಶ್‌ಗೌಡ ನಡುವೆ ಪೈಪೋಟಿ ಇದೆ.