ಭಟ್ಕಳದಲ್ಲಿ ಹಿಂದೂ ಮಹಿಳೆಯರ ಬಳಿ ಮೀನು ಖರೀದಿಸದಂತೆ ಮಕ್ಕಳಿಂದ ಸ್ಕಿಟ್! ಧಾರ್ಮಿಕ ದ್ವೇಷಕ್ಕೆ ಸೊಮೊಟೋ ಕೇಸ್!

Published : Sep 28, 2025, 11:31 PM IST
Bhatkal Fish Market Row

ಸಾರಾಂಶ

ಭಟ್ಕಳದ ಮೀನು ಮಾರುಕಟ್ಟೆ ವಿವಾದಕ್ಕೆ ಧಾರ್ಮಿಕ ಬಣ್ಣ ಬಳಿಯಲಾಗುತ್ತಿದ್ದು, ಹಿಂದೂ ಮೀನುಗಾರ ಮಹಿಳೆಯರನ್ನು ಗುರಿಯಾಗಿಸಿ ಅಪಪ್ರಚಾರದ ವಿಡಿಯೋವೊಂದು ಹರಿದಾಡುತ್ತಿದೆ. ಗಲ್ಫ್ ದೇಶಗಳಿಂದ ಈ ದ್ವೇಷ ಭಿತ್ತರಿಸುವ ಯತ್ನ ನಡೆದಿದೆ. ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಉತ್ತರ ಕನ್ನಡ (ಸೆ.28): ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮತ್ತೆ ಧಾರ್ಮಿಕ ವೈರತ್ವದ ಕಿಡಿ ಹೊತ್ತಿಸುವ ಯತ್ನ ನಡೆದಿದೆ. ನೂರಾರು ದನಗಳ ಸಂಹಾರ ಪ್ರಕರಣದ ಬೆನ್ನಲ್ಲೇ ಇದೀಗ ಮೀನು ಮಾರುಕಟ್ಟೆಯ ವಿಚಾರದಲ್ಲಿ ಹಿಂದೂ ಮೀನುಗಾರ ಮಹಿಳೆಯರನ್ನು ಗುರಿಯಾಗಿಸಿ ಅಪಪ್ರಚಾರದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.

ಗಲ್ಫ್ ದೇಶಗಳಿಂದ ದ್ವೇಷ ಭಿತ್ತರಿಸುವ ಯತ್ನ:

ಭಟ್ಕಳದ ಹಳೇ ಮೀನು ಮಾರುಕಟ್ಟೆ ಮತ್ತು ಹೊಸ ಮೀನು ಮಾರುಕಟ್ಟೆಗಳ ನಡುವಿನ ಸ್ಥಳೀಯ ವಿವಾದಕ್ಕೆ ಧಾರ್ಮಿಕ ಬಣ್ಣ ನೀಡಲಾಗುತ್ತಿದೆ. ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಕೆಲವು ಮುಸ್ಲಿಂ ದುಷ್ಕರ್ಮಿಗಳು, ಹಿಂದೂ ಮೀನುಗಾರ ಮಹಿಳೆಯರ ವಿರುದ್ಧ ದ್ವೇಷ ಭಿತ್ತರಿಸುವ ಉದ್ದೇಶದಿಂದ ಮಕ್ಕಳಿಂದ ಒಂದು ಸ್ಕಿಟ್ ಮಾಡಿಸಿ, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

'NEW FISH MARKET DAILY UPDATE' ಎಂಬ ಹೆಸರಿನ 1023 ಸದಸ್ಯರಿರುವ ವಾಟ್ಸಾಪ್ ಗ್ರೂಪ್‌ನಲ್ಲಿ ಈ ವಿಡಿಯೋವನ್ನು ಹಂಚಲಾಗಿದ್ದು, 'ಹಿಂದೂ ಮಹಿಳೆಯರು ಮುಸ್ಲಿಂ ಧರ್ಮದ ಜನರನ್ನು ಹಲವು ಬಾರಿ ಲೂಟಿ ಮಾಡುತ್ತಿದ್ದಾರೆ ಮತ್ತು ನಮ್ಮ ಜನರಿಗೆ ಬುದ್ಧಿ ಇಲ್ಲ' ಎಂಬಂತಹ ಆಪಾದನೆಗಳನ್ನು ಮಾಡಿ, ಮತೀಯ ವೈರತ್ವವನ್ನು ಹೆಚ್ಚಿಸಲು ಯತ್ನಿಸಲಾಗಿದೆ. ಸೌದಿ ಅರೇಬಿಯಾ ಅಥವಾ ದುಬೈನಂತಹ ಗಲ್ಫ್ ದೇಶಗಳಲ್ಲಿ ಈ ಸ್ಕಿಟ್ ಮಾಡಿಸಿ, ಭಟ್ಕಳದಲ್ಲಿ ಧರ್ಮಗಳ ನಡುವೆ ದ್ವೇಷ ಮೂಡಿಸಲು ಯತ್ನಿಸಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಾರುಕಟ್ಟೆ ವಿವಾದವೇ ಹಿನ್ನೆಲೆ:

ಈ ಅಪಪ್ರಚಾರದ ಮೂಲವು ಭಟ್ಕಳದ ಮೀನು ಮಾರುಕಟ್ಟೆಯ ಸ್ಥಳಾಂತರದ ವಿವಾದದಲ್ಲಿದೆ. ಭಟ್ಕಳದ ಹಳೇ ಬಸ್ ನಿಲ್ದಾಣದ ಬಳಿಯ ಹಳೇ ಮೀನು ಮಾರುಕಟ್ಟೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಹಲವು ವರ್ಷಗಳಿಂದ ಒಟ್ಟಿಗೆ ವ್ಯಾಪಾರ ವಹಿವಾಟು ನಡೆಸುತ್ತಿದ್ದರು.

ಆದರೆ, ಇತ್ತೀಚೆಗೆ ಪುರಸಭೆಯು ಸಂತೆ ಮಾರುಕಟ್ಟೆಯ ಬಳಿ ಹೊಸ ಮೀನು ಮಾರುಕಟ್ಟೆ ನಿರ್ಮಿಸಿ, ಹಳೇ ಮಾರುಕಟ್ಟೆಯನ್ನು ನೆಲಸಮ ಮಾಡಿ ಅಲ್ಲಿ ಕಾಂಪ್ಲೆಕ್ಸ್ ನಿರ್ಮಿಸಲು ಯೋಜಿಸಿತ್ತು. ಪುರಸಭೆ ಅಧಿಕಾರಿಗಳು ಎಲ್ಲಾ ಮಾರಾಟಗಾರರಿಗೆ ಹೊಸ ಮಾರುಕಟ್ಟೆಗೆ ತೆರಳಲು ಸೂಚನೆ ನೀಡಿದರೂ, ಸ್ಥಳ ಮತ್ತು ವ್ಯವಸ್ಥೆಯ ಕೊರತೆಯಿಂದಾಗಿ ಹಲವು ಮೀನುಗಾರರು ಹಿಂಜರಿದರು. ಬದಲಿಗೆ, ಹಳೆಯ ಮಾರುಕಟ್ಟೆಯನ್ನೇ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಮೀನುಗಾರಿಕಾ ಸಚಿವ ಮಾಂಕಾಳು ವೈದ್ಯ ಸಹ ಭರವಸೆ ನೀಡಿದ್ದರು.

ದ್ವೇಷ ರಾಜಕಾರಣ:

ಈ ಬೆಳವಣಿಗೆಗಳ ನಡುವೆ, ಈಗ ಹೊಸ ಮಾರುಕಟ್ಟೆಯಲ್ಲಿ ಮುಸ್ಲಿಂ ಮೀನು ಮಾರಾಟಗಾರರದ್ದೇ ಬಹುಮತವಿದೆ. ಈ ಸಂದರ್ಭವನ್ನು ಬಳಸಿಕೊಂಡು, ಹಿಂದೂ ಮೀನುಗಾರ ಮಹಿಳೆಯರಿಂದ ಮೀನು ಖರೀದಿ ಮಾಡದಂತೆ ಧರ್ಮಗಳ ನಡುವೆ ದ್ವೇಷ ಭಿತ್ತರಿಸುವ ಯತ್ನಗಳು ನಡೆಯುತ್ತಿವೆ.

ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಮತ್ತು ವೈರತ್ವ ಬೆಳೆಸಿ ಮತೀಯ ಭಾವನೆಗೆ ಧಕ್ಕೆ ತರುವ ಸುದ್ದಿಗಳನ್ನು ಹರಿಯಬಿಡುತ್ತಿರುವ ಬಗ್ಗೆ ಹಿಂದೂ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂ ಸಮುದಾಯದ ಮೀನುಗಾರ ಮಹಿಳೆಯರನ್ನು 'ಲೂಟಿಕೋರರು' ಎಂದು ಬಿಂಬಿಸುವ ಮಕ್ಕಳ ಸ್ಕಿಟ್ ವಿಡಿಯೋವು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವುದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಪೊಲೀಸರ ತನಿಖೆಯ ನಂತರ ಈ ಅಪಪ್ರಚಾರದ ಹಿಂದಿರುವವರ ಕುರಿತು ಹೆಚ್ಚಿನ ವಿವರಗಳು ಹೊರಬೀಳುವ ನಿರೀಕ್ಷೆ ಇದೆ.

PREV
Read more Articles on
click me!

Recommended Stories

ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್
ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?