
ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡವೂರಿನಲ್ಲಿ ಶನಿವಾರ ಬೆಳಗ್ಗೆ ನಡೆದ ಹತ್ಯೆ ಪ್ರಕರಣವು ಸಂಚಲನ ಸೃಷ್ಟಿಸಿದೆ. ರೌಡಿಶೀಟರ್ ಹಾಗೂ ಖಾಸಗಿ ಬಸ್ ಸಂಸ್ಥೆ ಮಾಲಕನಾಗಿದ್ದ ಸೈಫುದ್ದೀನ್ ಅಲಿಯಾಸ್ ಸೈಪು (ಆತ್ರಾಡಿ ನಿವಾಸಿ) ಯನ್ನು ದುಷ್ಕರ್ಮಿಗಳ ತಂಡವೊಂದು ತಲವಾರು ಮತ್ತು ಚಾಕುವಿನಿಂದ ಕೊಚ್ಚಿ ಕೊಲೆ ಮಾಡಿದೆ
ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಕೊಡವೂರಿನ ಸಾಲ್ಮರ ಪ್ರದೇಶದಲ್ಲಿರುವ ಸೈಫುದ್ದೀನ್ ಅವರ ಮನೆಯಲ್ಲಿ ಈ ಹತ್ಯೆ ನಡೆದಿದೆ. ಮನೆಯಲ್ಲಿ ಒಬ್ಬರೇ ಇದ್ದಾಗ ದುಷ್ಕರ್ಮಿಗಳು ಬಲವಂತವಾಗಿ ಒಳನುಗ್ಗಿ, ತಲವಾರು ಮತ್ತು ಚಾಕುವಿನಿಂದ ಹಲವೆಡೆ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಾಗ ರಕ್ತದ ಮಡುವಿನಲ್ಲಿ ಸೈಫುದ್ದೀನ್ ಬಿದ್ದಿದ್ದ.
ಸೈಫುದ್ದೀನ್ ಉಡುಪಿ ಹಾಗೂ ಹಿರಿಯಡ್ಕ ಪೊಲೀಸ್ ಠಾಣೆಗಳಲ್ಲಿ ರೌಡಿಶೀಟರ್ ಆಗಿ ದಾಖಲಾಗಿದ್ದ. ಆತನ ವಿರುದ್ಧ ಒಟ್ಟು 18 ಕ್ರಿಮಿನಲ್ ಕೇಸುಗಳು ದಾಖಲಾಗಿದ್ದು, ಅದರಲ್ಲಿ ಎರಡು ಕೊಲೆ ಪ್ರಕರಣಗಳೂ ಸೇರಿವೆ. ಅವನು ನಡೆಸುತ್ತಿದ್ದ ಎಕೆಎಂಎಸ್ ಖಾಸಗಿ ಬಸ್ ಸಂಸ್ಥೆ ಮಣಿಪಾಲ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿತ್ತು.
ಹತ್ಯೆಯಾದ ಕೆಲವೇ ಗಂಟೆಗಳೊಳಗೆ ಪೊಲೀಸರು ಪ್ರಕರಣದಲ್ಲಿ ತೀವ್ರ ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಾಗಿರುವವರು, ಮಹಮ್ಮದ್ ಫೈಸಲ್ ಖಾನ್, ಮಹಮ್ಮದ್ ಶರೀಫ್ ಮತ್ತು ಅಬ್ದುಲ್ ಶುಕುರ್. ಈ ಮೂವರೂ ಸೈಫುದ್ದೀನ್ ಅವರ ಬಸ್ ಸಂಸ್ಥೆಯಲ್ಲಿಯೇ ಚಾಲಕರಾಗಿ ಕೆಲಸ ಮಾಡುತ್ತಿದ್ದವರು. ಪ್ರಾಥಮಿಕ ಮಾಹಿತಿಯ ಪ್ರಕಾರ, ಬಸ್ ಸಂಸ್ಥೆಯ ವ್ಯವಹಾರ ಸಂಬಂಧಿತ ಅಸಮಾಧಾನದಿಂದಲೇ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣವನ್ನು ಪರಿಶೀಲಿಸಿದರು. ಮಾಧ್ಯಮಕ್ಕೆ ಹೇಳಿಕೆ ನೀಡಿ, ಕೊಲೆ ಬೆಳಗ್ಗೆ 10ರಿಂದ 11ರ ನಡುವೆ ನಡೆದಿದೆ. ಸೈಫುದ್ದೀನ್ ಮೇಲೆ 18 ಅಪರಾಧ ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ಒಂದೇ ವೇಳೆ ದಾಳಿ ನಡೆಸಿ ತಲವಾರು ಹಾಗೂ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಬಂಧಿತ ಮೂವರೂ ಬಸ್ ಸಂಸ್ಥೆಯ ಉದ್ಯೋಗಿಗಳೇ ಆಗಿದ್ದಾರೆ. ಅವರು ಇನ್ನೂ, “ಹತ್ಯೆಯ ನಿಖರ ಕಾರಣ ತನಿಖೆಯಿಂದ ಬಹಿರಂಗವಾಗಲಿದೆ. ಹಿಂದಿನ ಕೊಲೆ ಪ್ರಕರಣಗಳಿಗೆ ಪ್ರತೀಕಾರವಾಗಿರಬಹುದೆಂಬ ಶಂಕೆಯೂ ಇದೆ. ಸೋಕೋ ತಂಡ ಸ್ಥಳದಲ್ಲಿ ತನಿಖೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದರು.
ಪೊಲೀಸರು ಈಗಾಗಲೇ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೊಲೆಯ ನಿಜವಾದ ಹಿನ್ನೆಲೆ ಪತ್ತೆ ಹಚ್ಚುವ ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಿದೆ. ಈ ಪ್ರಕರಣವು ಉಡುಪಿ ಜಿಲ್ಲೆಯ ಜನರಲ್ಲಿ ಆತಂಕ ಉಂಟುಮಾಡಿದ್ದು, ಕುಖ್ಯಾತ ರೌಡಿಶೀಟರ್ ಸೈಫುದ್ದೀನ್‌ನ ಕೊಲೆ ಮತ್ತೊಮ್ಮೆ ಪ್ರದೇಶದ ಅಂಡರ್‌ವಲ್ಡ್ ಚಟುವಟಿಕೆಗಳನ್ನು ಬೆಳಕಿಗೆ ತಂದಿದೆ.