
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಸಿರು ಹೊದಿಕೆಯನ್ನು ವಿಸ್ತರಿಸುವ ಉದ್ದೇಶದಿಂದ 17.63 ಎಕರೆ ಪ್ರದೇಶದಲ್ಲಿ ಎರಡು ಲಕ್ಷಕ್ಕೂ ಅಧಿಕ ಸ್ಥಳೀಯ ಪ್ರಭೇದದ ಮರಗಳನ್ನು ಬೆಳೆಸುವ ‘ಭಾರತ ವನ’ ಯೋಜನೆಗೆ ಇಂದು ಕೇಂದ್ರ ಹಣಕಾಸು ಹಾಗೂ ಕಾರ್ಪೋರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಚಾಲನೆ ನೀಡಿದರು. ಒಂದೆಡೆ ಇಂದು ಪ್ರಧಾನಿ ನರೇಂದ್ರಮೋದಿ ಅವರು, ಮೈಸೂರಿನಲ್ಲಿ ತಾರಾಲಯ ಉದ್ಘಾಟಿಸಿದರೆ ಇನ್ನೊಂದೆಡೆ ಸಚಿವೆಯಿಂದ ರಾಜ್ಯದ ಅತಿ ದೊಡ್ಡ ಭಾರತ ವನ ಯೋಜನೆಗೆ ಚಾಲನೆ ಸಿಕ್ಕಿದ್ದು, ಇದರಿಂದ ಇಂದು ಡಬಲ್ ಧಮಾಕಾ ಆಗಿದೆ. ಮೈಸೂರಿನ ವಿಜಯನಗರದ ಕೆ.ಸಿ. ಬಡಾವಣೆಯ ಉದ್ಯಾನದಲ್ಲಿ ಸಸಿ ನೆಡುವ ಮೂಲಕ ‘ಭಾರತ ವನ’ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಶಾಸಕರಾದ ಟಿ.ಎಸ್. ಶ್ರೀವತ್ಸ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಚಿವರು ಶಾಲಾ ಮಕ್ಕಳೊಂದಿಗೆ ಪರಿಸರ ಸಂರಕ್ಷಣೆಯ ಕುರಿತು ಸಂವಾದ ನಡೆಸಿದರು.
ಕೇಂದ್ರ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಅನುದಾನದ ಮೂಲಕ ಸಂಪೂರ್ಣವಾಗಿ ಅನುಷ್ಠಾನಗೊಳ್ಳಲಿರುವ ಈ ಯೋಜನೆಗೆ ಸರಕಾರದ ಹಣ ಬಳಸುವುದಿಲ್ಲ. ವಿಜಯನಗರದಲ್ಲಿ ರೂಪುಗೊಳ್ಳಲಿರುವ ಈ ಹಸಿರು ತಾಣವು ಕರ್ನಾಟಕದ ಅತಿದೊಡ್ಡ ‘ಭಾರತ ವನ’ ಯೋಜನೆಯಾಗಲಿದೆ. ಜೀವವೈವಿಧ್ಯವನ್ನು ಹೆಚ್ಚಿಸುವುದು, ಅಂತರ್ಜಲ ಮರುಪೂರಣೆಯನ್ನು ಸುಧಾರಿಸುವುದು, ವಾಯುಮಾಲಿನ್ಯ ತಗ್ಗಿಸುವುದು, ಇಂಗಾಲದ ಬಲವರ್ಧನೆಗೆ (ಕಾರ್ಬನ್ ಸೀಕ್ವೆಸ್ಟ್ರೇಶನ್) ಬೆಂಬಲ ನೀಡುವುದು ಹಾಗೂ ತಂಪಾದ, ಹಸಿರಾದ ನಗರ ಪರಿಸರ ನಿರ್ಮಿಸುವುದು ಈ ಉಪಕ್ರಮದ ಉದ್ದೇಶವಾಗಿದೆ. ಇದು ಸುಸ್ಥಿರ ನಗರ ಹಸಿರೀಕರಣ ಮತ್ತು ಪರಿಸರ ಸಂರಕ್ಷಣೆಗೆ ಒಂದು ಮಹತ್ವದ ಹೆಜ್ಜೆಯಾಗಿದೆ.
ಭಾರತದ ಹವಾಮಾನ, ಮಣ್ಣಿನ ಗುಣಲಕ್ಷಣ ಹಾಗೂ ಭೂಮಿಯ ಪರಿಸ್ಥಿತಿಗೆ ಹೊಂದುವಂತೆ ಸ್ಥಳೀಯ ಸಸ್ಯ ಪ್ರಭೇದಗಳನ್ನು ಬಳಸಿಕೊಂಡು ದಟ್ಟ ಅರಣ್ಯ ನಿರ್ಮಿಸುವುದು ‘ಭಾರತ ವನ’ ವಿಧಾನದ ಉದ್ದೇಶವಾಗಿದೆ. ಒಂದೇ ರೀತಿಯ ಮರಗಳನ್ನು ನೆಡುವ ಬದಲು, ವಿವಿಧ ಎತ್ತರದಲ್ಲಿ ಬೆಳೆಯುವ ಪೊದೆಗಳು, ಹೂ ಬಿಡುವ ಮತ್ತು ಹಣ್ಣು ನೀಡುವ ಮರಗಳು, ಕಾಷ್ಠ ಪ್ರಭೇದಗಳು ಹಾಗೂ ಎತ್ತರವಾಗಿ ಬೆಳೆದು ಮೇಲ್ಛಾವಣಿಯಂತೆ ಆವರಿಸುವ ಮರಗಳನ್ನು ಪದರಗಳಾಗಿ ಬೆಳೆಸಲಾಗುತ್ತದೆ. ಈ ವೈವಿಧ್ಯಮಯ ಸಸ್ಯ ವಿನ್ಯಾಸದ ಮೂಲಕ ಅರಣ್ಯದ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುವುದು, ಮಣ್ಣಿನ ಜೀವಚಟುವಟಿಕೆ ಹೆಚ್ಚಿಸುವುದು ಹಾಗೂ ಕಾಲಕ್ರಮೇಣ ಸ್ವಾವಲಂಬಿಯಾಗಿ ಬೆಳೆಯುವ ಹಸಿರು ಪರಿಸರ ವ್ಯವಸ್ಥೆ ರೂಪಿಸುವುದು ಯೋಜನೆಯ ಗುರಿಯಾಗಿದೆ. ಈ ವೇಳೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳು ತಾವು ನೆಟ್ಟ ಸಸಿಗಳನ್ನು ನಿಯಮಿತವಾಗಿ ಭೇಟಿ ಮಾಡಿ ಪೋಷಿಸಬೇಕು ಹಾಗೂ ಈ ಹಸಿರು ಪರಿಸರವನ್ನು ಸಂರಕ್ಷಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹಣಕಾಸು ಸಚಿವೆ ಅವರು ಪ್ರೋತ್ಸಾಹಿಸಿದರು.
ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಸುವಿನ ಸಗಣಿ, ಕಾಂಪೋಸ್ಟ್ ಹಾಗೂ ಜೀವಾಮೃತದಂತಹ ಶೇಕಡಾ 100ರಷ್ಟು ನೈಸರ್ಗಿಕವಾದ ಪೋಷಕಾಂಶಗಳ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸಲಾಗುತ್ತದೆ. ಸ್ಥಳೀಯ ಪರಿಸರಕ್ಕೆ ಹೊಂದಿಕೊಳ್ಳುವ ಸಸ್ಯಗಳನ್ನು ಆಯ್ಕೆ ಮಾಡಿ, ಅವುಗಳ ಬೆಳವಣಿಗೆಗೆ ಅನುಕೂಲವಾಗುವಂತೆ ಮಣ್ಣನ್ನು ಸಿದ್ಧಪಡಿಸಲಾಗುತ್ತದೆ. ನೈಸರ್ಗಿಕ ಪದಾರ್ಥಗಳ ಮೂಲಕ ಮಣ್ಣಿನ ಆರೋಗ್ಯ ಸುಧಾರಿಸಿ, ಸಸ್ಯಗಳ ಬೆಳವಣಿಗೆಗೆ ಪೂರಕವಾದ ಪರಿಸರ ನಿರ್ಮಿಸುವುದಕ್ಕೆ ಯೋಜನೆಯಲ್ಲಿ ಒತ್ತು ನೀಡಲಾಗಿದೆ.
ಮಳೆನೀರು ಇಂಗುವಿಕೆ, ಅಂತರ್ಜಲಕ್ಕೆ ನೆರವು
ಮಳೆನೀರು ಭೂಮಿಯೊಳಗೆ ಇಂಗುವ ಪ್ರಮಾಣವನ್ನು ಹೆಚ್ಚಿಸುವುದು ಯೋಜನೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ವಿವಿಧ ಆಳಕ್ಕೆ ಹರಡುವ ಬೇರುಗಳ ಜಾಲವು ಮಣ್ಣಿನೊಳಗೆ ನೀರು ಪ್ರವೇಶಿಸಲು ನೆರವಾಗಲಿದ್ದು, ಅಂತರ್ಜಲ ಮರುಪೂರಣಕ್ಕೆ ಪೂರಕವಾಗುವ ನಿರೀಕ್ಷೆಯಿದೆ. ಜತೆಗೆ, ಬೇರುಗಳು ಮೇಲ್ಮಣ್ಣನ್ನು ಹಿಡಿದಿಡುವುದರಿಂದ ಮಳೆಗಾಲದಲ್ಲಿ ಮಣ್ಣು ಮತ್ತು ಅದರಲ್ಲಿರುವ ಪೋಷಕಾಂಶಗಳು ಕೊಚ್ಚಿಹೋಗುವುದನ್ನು ತಡೆಯಲು ನೆರವಾಗಲಿದೆ ಎಂಬ ಆಶಯ ಹೊಂದಲಾಗಿದೆ.
ಸ್ಥಳೀಯ ಹೂ ಮತ್ತು ಹಣ್ಣಿನ ಮರಗಳು ಪಕ್ಷಿಗಳು, ಜೇನುನೊಣಗಳು ಹಾಗೂ ಇತರ ಪರಾಗಸ್ಪರ್ಶಿ ಜೀವಿಗಳಿಗೆ ಆಹಾರ ಮತ್ತು ಆಶ್ರಯ ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಆ ಮೂಲಕ ನಗರ ಪ್ರದೇಶದಲ್ಲಿ ಸ್ಥಳೀಯ ಜೀವವೈವಿಧ್ಯಕ್ಕೆ ಪೂರಕವಾದ ಹಸಿರು ತಾಣ ರೂಪಿಸಲು ಉದ್ದೇಶಿಸಲಾಗಿದೆ. ದಟ್ಟವಾದ ಎಲೆ ಮತ್ತು ಕೊಂಬೆಗಳ ಹೊದಿಕೆಯು ಧೂಳನ್ನು ಹಿಡಿದಿಡಲು ಹಾಗೂ ವಾಯುಮಾಲಿನ್ಯದ ಪರಿಣಾಮ ಕಡಿಮೆ ಮಾಡಲು ನೆರವಾಗುವ ನಿರೀಕ್ಷೆಯೂ ಇದೆ.
ಮರಗಳ ನೆರಳು ಹಾಗೂ ಸಸ್ಯಗಳಿಂದ ವಾತಾವರಣಕ್ಕೆ ಬಿಡುಗಡೆಯಾಗುವ ತೇವಾಂಶದ ಮೂಲಕ ಸುತ್ತಮುತ್ತಲಿನ ಪ್ರದೇಶದಲ್ಲಿ ತಂಪಾದ ವಾತಾವರಣ ರೂಪಿಸುವುದು ಯೋಜನೆಯ ಮತ್ತೊಂದು ಗುರಿಯಾಗಿದೆ. ಮರಗಳು ಬೆಳೆದಂತೆ ಇಂಗಾಲವನ್ನು ಹೀರಿಕೊಂಡು ಸಂಗ್ರಹಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಲಿವೆ ಎಂಬ ನಿರೀಕ್ಷೆಯನ್ನು ಯೋಜನೆ ಹೊಂದಿದೆ. ಖಾಸಗಿ ಸಂಸ್ಥೆಗಳ ಸಿಎಸ್ಆರ್ ಅನುದಾನವನ್ನು ಸಾರ್ವಜನಿಕ ಹಸಿರು ಸಂಪತ್ತಿನ ನಿರ್ಮಾಣಕ್ಕೆ ಬಳಸುವುದು ಈ ಉಪಕ್ರಮದ ಪ್ರಮುಖ ಅಂಶವಾಗಿದೆ. ನಗರ ಹಸಿರೀಕರಣದ ಜತೆಗೆ ಮಣ್ಣಿನ ಆರೋಗ್ಯ, ನೀರಿನ ಸಂರಕ್ಷಣೆ ಹಾಗೂ ಜೀವವೈವಿಧ್ಯ ವೃದ್ಧಿಯನ್ನು ಒಟ್ಟಿಗೆ ಸಾಧಿಸುವ ಉದ್ದೇಶವನ್ನು ‘ಭಾರತ ವನ’ ಹೊಂದಿದೆ.