ಭದ್ರಾವತಿ ದಂಪತಿ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್, ಚಿನ್ನದ ಆಸೆಗೆ ದೊಡ್ಡಪ್ಪ-ದೊಡ್ಡಮ್ಮನನ್ನೇ ಕೊಂದ ವೈದ್ಯ!

Published : Jan 21, 2026, 03:29 PM IST
Bhadravati Elderly Couple Murder  case

ಸಾರಾಂಶ

ಭದ್ರಾವತಿಯಲ್ಲಿ ವೃದ್ಧ ದಂಪತಿಗಳು ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣವನ್ನು ಪೊಲೀಸರು 24 ಗಂಟೆಗಳಲ್ಲಿ ಭೇದಿಸಿದ್ದಾರೆ. ಹಣ ಮತ್ತು ಚಿನ್ನದ ಆಸೆಗಾಗಿ, ಸ್ವಂತ ಸೋದರನ ಮಗನಾದ ವೈದ್ಯನೇ ಅನಸ್ತೇಶಿಯಾ ಇಂಜೆಕ್ಷನ್ ನೀಡಿ ಅವರನ್ನು ಕೊಲೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ.

ಭದ್ರಾವತಿ: ಉಕ್ಕಿನ ನಗರಿ ಭದ್ರಾವತಿಯನ್ನು ಬೆಚ್ಚಿಬೀಳಿಸಿದ ವೃದ್ಧ ದಂಪತಿಗಳ ನಿಗೂಢ ಸಾವಿನ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳಲ್ಲಿ ಭೇದಿಸಿ, ಭೀಕರ ಸತ್ಯವನ್ನು ಹೊರಗೆಳೆದಿದ್ದಾರೆ. ಹಣ ಹಾಗೂ ಚಿನ್ನದ ಲಾಲಸೆಗೆ ಸ್ವಂತ ದೊಡ್ಡಪ್ಪ–ದೊಡ್ಡಮ್ಮನನ್ನೇ ವೈದ್ಯನೊಬ್ಬ ಕೊಂದಿರುವುದು ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ.

ಭದ್ರಾವತಿಯ ಭೂತನ್ ಗುಡಿ ಪ್ರದೇಶದಲ್ಲಿ ವಾಸವಾಗಿದ್ದ ಚಂದ್ರಪ್ಪ (68) ಮತ್ತು ಅವರ ಪತ್ನಿ ಜಯಮ್ಮ (65) ಅವರು ಜನವರಿ 20ರ ಬೆಳಗ್ಗೆ ಅನುಮಾನಾಸ್ಪದವಾಗಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮನೆಯೊಳಗೆ ಯಾವುದೇ ಗಲಾಟೆ ಅಥವಾ ಹೋರಾಟದ ಗುರುತುಗಳಿರಲಿಲ್ಲ. ದಂಪತಿಯ ದೇಹಗಳ ಮೇಲೂ ಗಾಯದ ಗುರುತುಗಳು ಕಾಣಿಸದ ಕಾರಣ, ಆರಂಭದಲ್ಲಿ ಇದು ಸಹಜ ಸಾವು ಎನ್ನುವ ಅನುಮಾನವೂ ಮೂಡಿತ್ತು. ಆದರೆ ಮನೆಯಲ್ಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿದ್ದರಿಂದ ಪ್ರಕರಣ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತು.

ಮಕ್ಕಳು ಕರೆ ಮಾಡಿದರೂ ಸ್ಪಂದನೆ ಇಲ್ಲ

ಚಂದ್ರಪ್ಪ–ಜಯಮ್ಮ ದಂಪತಿಗಳಿಗೆ ಮೂವರು ಗಂಡು ಮಕ್ಕಳಿದ್ದು, ಎಲ್ಲರೂ ಮದುವೆಯಾಗಿ ಬೇರೆ ಬೇರೆ ಕಡೆ ನೆಲೆಸಿದ್ದರು. ಅನ್ಯೋನ್ಯವಾಗಿ ಬದುಕುತ್ತಿದ್ದ ಈ ದಂಪತಿ ತಮ್ಮ ಮನೆಯಲ್ಲೇ ವಾಸವಾಗಿದ್ದರು. ಎಂದಿನಂತೆ ರಾತ್ರಿ ಊಟ ಮಾಡಿ ಮಲಗಿದ್ದವರು, ಬೆಳಗ್ಗೆ ಶವವಾಗಿ ಪತ್ತೆಯಾಗಿರುವುದು ಕುಟುಂಬಸ್ಥರಿಗೆ ಆಘಾತ ತಂದಿತು. ಬೆಳಗ್ಗೆ ಮಕ್ಕಳಿಂದ ಕರೆ ಬಂದರೂ ಫೋನ್ ಸ್ವೀಕರಿಸದಿದ್ದ ಕಾರಣ ಆತಂಕಗೊಂಡ ಅವರು, ಸ್ಥಳೀಯರಿಗೆ ಮನೆಗೆ ಹೋಗಿ ಪರಿಶೀಲಿಸುವಂತೆ ತಿಳಿಸಿದರು. ಮನೆಗೆ ತೆರಳಿದಾಗ ಬೆಡ್ರೂಮ್‌ನಲ್ಲಿ ಚಂದ್ರಪ್ಪ ಅವರ ಶವ ಪತ್ತೆಯಾಗಿದ್ದು, ಹಾಲ್‌ನಲ್ಲಿ ಪತ್ನಿ ಜಯಮ್ಮ ಅವರ ಶವ ಬಿದ್ದಿರುವುದು ಕಂಡುಬಂದಿತು.

ಸಂಬಂಧಿಕನೇ ಆರೋಪಿ ಎಂಬ ಭೀಕರ ಸತ್ಯ

ತನಿಖೆ ವೇಳೆ ಈ ಜೋಡಿ ಕೊಲೆಯ ಆರೋಪಿ ಬೇರೆ ಯಾರೂ ಅಲ್ಲ ಮಗನೇ ಎಂಬುದು ಪೊಲೀಸರಿಗೆ ಗೊತ್ತಾದಾಗ ಎಲ್ಲರೂ ಬೆಚ್ಚಿಬಿದ್ದರು. ಮೃತ ಚಂದ್ರಪ್ಪ ಅವರ ಸಹೋದರ ಫಾಲಾಕ್ಷಪ್ಪ ಅವರ ಪುತ್ರ ಡಾ. ಮಲ್ಲೇಶ್ ಈ ಕೃತ್ಯದ ರೂವಾರಿ ಎನ್ನುವುದು ತನಿಖೆಯಲ್ಲಿ ಬಹಿರಂಗವಾಯಿತು. ಆರೋಪಿ ಮಲ್ಲೇಶ್ ಬೀರನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಆಯುರ್ವೇದ ವೈದ್ಯನಾಗಿದ್ದ. ವಿಶೇಷವೆಂದರೆ, ಚಂದ್ರಪ್ಪ–ಜಯಮ್ಮ ದಂಪತಿಗಳಿಗೆ ಯಾವುದೇ ಆರೋಗ್ಯ ಸಮಸ್ಯೆ ಬಂದಾಗ ಅವರು ಇದೇ ಮಲ್ಲೇಶ್ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಈ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡ ಮಲ್ಲೇಶ್, ಯಾವುದೇ ಅನುಮಾನ ಮೂಡಿಸದೇ ಕೊಲೆ ಮಾಡುವ ಯೋಜನೆ ರೂಪಿಸಿದ್ದ.

ಅನಸ್ತೇಶಿಯಾ ಇಂಜೆಕ್ಷನ್ ಮೂಲಕ ಕೊಲೆ

ಪೊಲೀಸರ ತನಿಖೆಯಲ್ಲಿ ತಿಳಿದುಬಂದಂತೆ, ಆರೋಪಿ ಮಲ್ಲೇಶ್ ಮೈತುಂಬ ಸಾಲ ಮಾಡಿಕೊಂಡಿದ್ದ. ತನ್ನ ಸಾಲ ತೀರಿಸಲು ಒಂದು ವೇಳೆ ದೊಡ್ಡಪ್ಪ ಚಂದ್ರಪ್ಪ ಅವರ ಬಳಿ 15 ಲಕ್ಷ ರೂಪಾಯಿ ನೀಡುವಂತೆ ಕೇಳಿದ್ದ. ಆದರೆ ದಂಪತಿ ಸಾಲ ನೀಡಲು ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಮಲ್ಲೇಶ್, ದೊಡ್ಡಪ್ಪ–ದೊಡ್ಡಮ್ಮನ ಬಳಿ ಇದ್ದ ಚಿನ್ನಾಭರಣದ ಮೇಲೆ ಕಣ್ಣು ಹಾಕಿದ್ದ.

ಜನವರಿ 19ರಂದು ಮಧ್ಯಾಹ್ನ ಮನೆಗೆ ತೆರಳಿದ ಮಲ್ಲೇಶ್, ಮಂಡಿನೋವು ಕಡಿಮೆಯಾಗಲು ಇಂಜೆಕ್ಷನ್ ನೀಡುತ್ತೇನೆ ಎಂದು ನಂಬಿಸಿ, ಸುಮಾರು 50 ಎಂ.ಜಿ. ಅನಸ್ತೇಶಿಯಾ ಇಂಜೆಕ್ಷನ್ ಅನ್ನು ಓವರ್‌ಡೋಸ್ ನೀಡಿ ಇಬ್ಬರನ್ನೂ ಕೊಲೆ ಮಾಡಿದ್ದಾನೆ. ಬಳಿಕ ಅವರ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿ ಅಡವಿಟ್ಟು ತನ್ನ ಸಾಲವನ್ನು ತೀರಿಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

24 ಗಂಟೆಗಳಲ್ಲಿ ಪ್ರಕರಣ ಭೇದ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಭದ್ರಾವತಿ ಪೊಲೀಸರು, ವೈಜ್ಞಾನಿಕ ರೀತಿಯಲ್ಲಿ ತನಿಖೆ ನಡೆಸಿ ಕೇವಲ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರು ಮಾತನಾಡಿ, “ವೃದ್ಧ ದಂಪತಿಗಳ ಸಾವಿನ ಪ್ರಕರಣವನ್ನು ಸೂಕ್ಷ್ಮವಾಗಿ ತನಿಖೆ ನಡೆಸಲಾಗಿದೆ. ವೈದ್ಯಕೀಯ ವರದಿ ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ಸಮಾಜಕ್ಕೆ ಕನ್ನಡಿ ಹಿಡಿದ ಘಟನೆ

ಒಟ್ಟಿನಲ್ಲಿ, ಹಣ ಮತ್ತು ಚಿನ್ನದ ಲಾಲಸೆಗೆ ರಕ್ತ ಸಂಬಂಧವನ್ನೇ ಮರೆತು ಸ್ವಂತ ದೊಡ್ಡಪ್ಪ–ದೊಡ್ಡಮ್ಮನನ್ನೇ ಕೊಲೆ ಮಾಡಿದ ಈ ಘಟನೆ ಸಮಾಜಕ್ಕೆ ಕನ್ನಡಿ ಹಿಡಿದಂತಾಗಿದೆ. ರಕ್ತ ಸಂಬಂಧಿ ಎಂದು ನಂಬಿ ಮನೆ ಒಳಗೆ ಬಿಡಿಸಿಕೊಂಡಿದ್ದ ವೃದ್ಧ ದಂಪತಿಗಳು, ಅದೇ ನಂಬಿಕೆಯ ಬೆಲೆ ಜೀವವನ್ನೇ ಕಳೆದುಕೊಳ್ಳುವಂತಾಗಿದೆ.

PREV
Read more Articles on
click me!

Recommended Stories

ಬೆಂಗಳೂರಿನಲ್ಲಿ ಫಿಟ್ನೆಸ್ ಇನ್ಫ್ಲುಯೆನ್ಸರ್‌ಗೆ ಕಿರು*ಕುಳ: ಹರಿಯಾಣದಿಂದ ಬಂದಿದ್ದ 'ಸೈಕೋ' ಸ್ಟಾಕರ್ ಬಂಧನ!
ಬೆಂಗಳೂರಿನಲ್ಲಿ ಮತ್ತೆ ಘರ್ಜಿಸಿದ ಬಿಡಿಎ ಜೆಸಿಬಿ: ಕೆಂಗೇರಿಯಲ್ಲಿ ಅಕ್ರಮ ಕಟ್ಟಡಗಳ ತೆರವು, ನಿವಾಸಿಗಳ ಆಕ್ರೋಶ!