ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ಎಂಪಿಎಂ ಕಾರ್ಮಿಕರನ್ನು ಬೀದಿಗೆ ತರುವ ಸ್ವಯಂ ನಿವೃತ್ತಿಗೆ ಹಣ ನೀಡಿದರು. ಆದರೆ ಬಿಜೆಪಿ ಸರ್ಕಾರ ಕಾರ್ಖಾನೆ ಅಭಿವೃದ್ಧಿಗೆ ಯತ್ನಿಸುವುದಾಗಿ ಹೇಳಿದೆ. ಕಾರ್ಖಾನೆ ಅಭಿವೃದ್ಧಿಗೊಳಿಸಿದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನಾಗರಿಕರ ಪರವಾಗಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗುವುದು. ಆದರೆ ಮಾತಿಗೆ ತಪ್ಪಿದರೆ ಹೋರಾಟ ಮಾಡುವುದಾಗಿಯೂ ಮಾನವ ಹಕ್ಕುಗಳ ಹೋರಾಟ ಸಮಿತಿ ಎಚ್ಚರಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜೂ.10): ಭದ್ರಾವತಿ ಎಂಪಿಎಂ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧಾರವನ್ನು ಸ್ವಾಗತಿಸುವುದಾಗಿ ಮಾನವ ಹಕ್ಕುಗಳ ಹೋರಾಟ ಸಮಿತಿಯ ಪ್ರಮುಖ ಬಿ.ಎನ್. ರಾಜು ಹೇಳಿದರಲ್ಲದೆ, ಮಾತಿಗೆ ತಪ್ಪಿದರೆ ಮತ್ತೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಎಂಪಿಎಂ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳ ಹಿಂದೆ ಮಾನವ ಹಕ್ಕುಗಳ ಹೋರಾಟ ಸಮಿತಿ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿತ್ತು. ಇದರ ಫಲವಾಗಿ ಕಾರ್ಖಾನೆ ಬಗ್ಗೆ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಅವರು ಕೂಡ ಅಧಿಕಾರಿಗಳ ಸಭೆಯಲ್ಲಿ ಕಾರ್ಖಾನೆ ಪುನಃಶ್ಚೇತನಕ್ಕೆ ಒತ್ತಾಯಿಸಿದ್ದಾರೆ. ಈ ಇಬ್ಬರಿಗೂ ಸಮಿತಿ ಅಭಿನಂದನೆ ತಿಳಿಸುತ್ತದೆ ಎಂದರು.
ಕಾರ್ಖಾನೆ ಪುನಃ ಆರಂಭವಾಗಬೇಕು. 112 ಬ್ಯಾಕ್‌ಲಾಗ್ ಉದ್ಯೋಗಿಗಳಿಗೆ ಭದ್ರತೆ ಸಿಗಬೇಕು. ಹಿಂದಿನಂತೆ ಕಾರ್ಖಾನೆ ನಡೆಯಬೇಕು. ಕಾರ್ಮಿಕರಿಗೆ ಉದ್ಯೋಗ ದೊರಕುವಂತಾಗಬೇಕೆಂದರು. ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ಕಾರ್ಮಿಕರನ್ನು ಬೀದಿಗೆ ತರುವ ಸ್ವಯಂ ನಿವೃತ್ತಿಗೆ ಹಣ ನೀಡಿದರು. ಆದರೆ ಬಿಜೆಪಿ ಸರ್ಕಾರ ಕಾರ್ಖಾನೆ ಅಭಿವೃದ್ಧಿಗೆ ಯತ್ನಿಸುವುದಾಗಿ ಹೇಳಿದೆ. ಕಾರ್ಖಾನೆ ಅಭಿವೃದ್ಧಿಗೊಳಿಸಿದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನಾಗರಿಕರ ಪರವಾಗಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗುವುದು. ಆದರೆ ಮಾತಿಗೆ ತಪ್ಪಿದರೆ ಹೋರಾಟ ಮಾಡುವುದಾಗಿಯೂ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬ್ಯಾಕ್‌ಲಾಗ್ ಕಾರ್ಮಿಕರ ಸಂಘದ ಅಧ್ಯಕ್ಷ ವಿ.ಎನ್ .ದೊಡ್ಡಯ್ಯ, ಅರುಣ್, ಚಂದ್ರಶೇಖರ, ನಾಗರಾಜ್, ಲತಾ, ಮಂಜುಳಾ ಪಾರ್ವತಮ್ಮ, ರಾಜಪ್ಪ, ನರಸಿಂಹಪ್ಪ, ಸೆಲ್ವಕುಮಾರ್, ಶಿವರಾಜ್ ಮತ್ತಿತರರು ಇದ್ದರು.