ತರೀಕೆರೆ (ಆ.26) : ಸ್ವಚ್ಛ ಭಾರತ್ ಯೋಜನೆಯಲ್ಲಿ ತರೀಕೆರೆ ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವ ಪಟ್ಟಿಯಲ್ಲಿ ಇಡೀ ದಕ್ಷಿಣ ಭಾರತದಲ್ಲೇ 17ನೇ ಸ್ಥಾನ ಗಿಟ್ಟಿಸಿ, ಇಡೀ ರಾಜ್ಯದಲ್ಲೇ 3ನೇ ಸ್ಥಾನ ಪಡೆದು ಕೀರ್ತಿ ಗಳಿಸಿದ್ದ ತರೀಕೆರೆ ಪುರಸಭೆ ಇದೀಗ ಮತ್ತೊಂದು ಪ್ರಗತಿಯ ಮೆಟ್ಟಿಲೇರಿದೆ. ಪುರಸಭೆ ವ್ಯಾಪ್ತಿಯ ಎಲ್ಲ ಶೌಚಾಲಯಗಳಲ್ಲಿ ನೀರು, ಬೆಳಕು ಇತ್ಯಾದಿ ಮೂಲಸೌಲಭ್ಯಗಳನ್ನು ಒದಗಿಸಿ ನಿರಂತರವಾಗಿ ಸ್ವಚ್ಛತೆ ಕಾಪಾಡಿ ಕಣ್ಣರಳಿ ನೋಡುವ ಹಾಗೆ ಶೌಚಾಲಯಗಳನ್ನು ಸೌಂದರ್ಯೀಕರಣಗೊಳಿಸಿದ್ದಕ್ಕಾಗಿ ಬ್ಯೂಟಿಫಿಕೇಶನ್ ಆಫ್ ಟಾಯ್ಲೆಟ್ಸ್ ವಿಷಯದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಗಳಿಸಿದ ತರೀಕೆರೆ ಪುರಸಭೆ, ಈಗ ಮತ್ತೊಮ್ಮೆ ರಾಜ್ಯಮಟ್ಟದಲ್ಲಿ ಸುದ್ದಿ ಮಾಡಿದೆ.
ಇದೇನಾ Swachh Bharat ಕಲ್ಪನೆ?: ಗಬ್ಬು ನಾರುತ್ತಿರುವ ಬೀದರ್ ನಗರ..!
ಸಿಟಿ ಮ್ಯಾನೇಜರ್ಸ್ ಅಸೋಸಿಯೇಶನ್ ಅಫ್ ಕರ್ನಾಟಕ(City Managers Association of Karnataka), ಪೌರಾಡಳಿತ ನಿರ್ದೇಶನಾಲಯ(Directorate of Municipal Administration) ಸಹಯೋಗದೊಂದಿಗೆ ಬೆಂಗಳೂರು ವಿಕಾಸಸೌಧದಲ್ಲಿ ಸಿಮ್ಯಾಕ್ ಸಂಸ್ಥೆ ಉತ್ತಮ ಪದ್ಧತಿಗಳ ದಾಖಲೆಗಳ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪೌರಾಡಳಿತ ಮತ್ತು ಸಣ್ಣ ಹಾಗೂ ಸಾರ್ವಜನಿಕ ವಲಯ ಕೈಗಾರಿಕಾ ಸಚಿವ ಎಂ.ಟಿ.ಬಿ.ನಾಗರಾಜ್(M.T.B.Nagaraj), ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು, ರಾಜ್ಯಕ್ಕೆ 2ನೇ ಸ್ಥಾನ ಗಳಿಸಿದ ತರೀಕೆರೆ ಪುರಸಭೆಗೆ ಬೆಸ್ಟ್ ಪ್ರ್ಯಾಕ್ಟೀಸ್ ಅವಾರ್ಡ್ ಪ್ರಶಸ್ತಿ, ಟ್ರೋಫಿ ಹಾಗೂ .75 ಸಾವಿರ ಮೊತ್ತದ ಪ್ರೋತ್ಸಾಹಧನ ಚೆಕ್ ಪ್ರದಾನ ಮಾಡಿ ಗೌರವಿಸಿದ್ದಾರೆ.
ತರೀಕೆರೆ ಪುರಸಭೆ ಪ್ರಭಾರ ಅಧ್ಯಕ್ಷೆ ಯಶೋದಮ್ಮ, ಮುಖ್ಯಾಧಿಕಾರಿ ಎಚ್.ಮಹಂತೇಶ್, ಪರಿಸರ ಅಭಿಯಂತರರಾದ ತಾಹಿರಾ ತಸ್ನೀಂ, ಜೆ.ಇ.ಬಿಂದು, ದಫೇದಾರ್ ಪ್ರಕಾಶ್, ಪೌರಕಾರ್ಮಿಕರಾದ ಲಲಿತಮ್ಮ, ವಿಜಯಮ್ಮ ಕಾರ್ಯಕ್ರಮದಲ್ಲಲಿ ಭಾಗವಹಿಸಿದ್ದರು.
ನೈರ್ಮಲ್ಯ ರಕ್ಷಣೆ: ಪುರಸಭೆ ವತಿಯಿಂದ ಪಟ್ಟಣ ವ್ಯಾಪ್ತಿಯಲ್ಲಿರುವ ಶೌಚಾಲಯಗಳ ಗಮನಹರಿಸಿದ ಪುರಸಭೆ ಶೌಚಾಲಯಗಳಲ್ಲಿ ನೈರ್ಮಲ್ಯತೆ ಕಾಪಾಡಿ, ಶೌಚಾಲಯಗಳಿಗೆ ಅಗತ್ಯವಾಗಿರುವ ಸಾಕಷ್ಟುನೀರು ಬೆಳಕು ಮತ್ತು ಗಾಳಿ ಒದಗಿಸಲಾಗಿದೆ. ಶೌಚಾಲಯಗಳಲ್ಲಿ ಉತ್ತಮ ಗುಣಮಟ್ಟದ ನೆಲಹಾಸಿಗೆ ಹಾಕಿಸಿ ಸುಸಜ್ಜಿತಗೊಳಿಸಲಾಗಿದೆ. ಶೌಚಾಲಯವನ್ನು ಸುಣ್ಣ ಬಣ್ಣದಿಂದ ಕಂಗೊಳಿಸುವಂತೆ ಮಾಡಿ, ಅವುಗಳನ್ನು ಕಲಾತ್ಮಕವಾಗಿ ಶೃಂಗರಿಸಿ ಸಾರ್ವಜನಿಕರು ಮುಜುಗರ ಪಟ್ಟುಕೊಳ್ಳದೇ ಶೌಚಾಲಯಗಳನ್ನು ಉಪಯೋಗಿಸುವಂತೆ ಸೌಲಭ್ಯಗಳನ್ನು ಒದಗಿಸಲಾಗಿದೆ. ಇಷ್ಟೇ ಅಲ್ಲ, ಎಲ್ಲ ಶೌಚಾಲಯಗಳಲ್ಲಿ ಪ್ರತಿನಿತ್ಯ ಶುಭ್ರತೆ ಮತ್ತು ನೈರ್ಮಲ್ಯತೆಯನ್ನು ಕಾಪಾಡಲಾಗಿದೆ.
ಚಿಕ್ಕೆರೆ ಫಳಫಳ: ಅಶುಚಿಯ ಆಗರವಾಗಿದ್ದ ಪಟ್ಟಣದ ಕೇಂದ್ರ ಸ್ಥಳದಲ್ಲಿರುವ ಚಿಕ್ಕೆರೆಯಲ್ಲಿ ಬಹಳ ಸಮಯದಿಂದ ಅಪಾರ ಪ್ರಮಾಣದ ತ್ಯಾಜ್ಯ ವಸ್ತುಗಳು, ಕಸ-ಕಡ್ಡಿಗಳು, ಬೇಡದಿರುವ ಗಿಡಗಳಿಂದ ತುಂಬಿಕೊಂಡು ಪಾಚಿ ಕಟ್ಟಿಚಿಕ್ಕೆರೆ ಮತ್ತು ಕೆರೆಯ ನೀರು ಉಪಯೋಗಕ್ಕೆ ಬಾರದಷ್ಟುಸಂಪೂರ್ಣ ಹಾಳಾಗಿತ್ತು. ಚಿಕ್ಕೆರೆ ಕೆರೆ ಏರಿ ಕುಸಿದಿತ್ತು. ಕೆರೆ ಮೆಟ್ಟಿಲುಗಳು ನಾಶವಾಗಿದ್ದವು. ಕೆರೆ ಶುದ್ಧಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಂಡ ಪುರಸಭೆ, ಪೌರಕಾರ್ಮಿಕರು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆದು ತಿಂಗಳುಗಟ್ಟಲೆ ಶ್ರಮಪಟ್ಟು, ಕೆರೆಯಲ್ಲಿದ್ದ ಭಾರಿ ಪ್ರಮಾಣದ ಕಸವನ್ನು ನೂರಾರು ಟ್ರ್ಯಾಕ್ಟರ್‌ಗಳಲ್ಲಿ ಸ್ಥಳಾಂತರಿಸಿ, ಫೆನ್ಸಿಂಗ್‌ನಿಂದ ಕೆರೆ ಏರಿ ಭದ್ರಪಡಿಸಿ, ಕೆರೆಗೆ ಆಳೆತ್ತರ ಗೇಟ್‌ಗಳನ್ನು ಅಳವಡಿಸಿ, ಕೆರೆ ಸುತ್ತಲೂ ಉತ್ತಮ ಪರಿಸರ ಕಾಪಾಡುವ ನಿಟ್ಟಿನಲ್ಲಿ ಚಿಕ್ಕೆರೆ ಅಭಿವೃದ್ಧಿಗೊಳಿಸಲಾಗಿದೆ. ಈ ಕಾರ್ಯದಲ್ಲಿ ಪುರಸಭೆ ಯಶಸ್ಸು ಕಂಡಿದೆ.
ಇಲ್ಲಿಯವರೆಗೆ ನೆಪಮಾತ್ರಕ್ಕೆ ಇದ್ದ ಪುರಸಭೆ ಉದ್ಯಾನಗಳು ಇದೀಗ ತರೀಕೆರೆ ಪಟ್ಟಣದ ಐಡೆಂಟಿಟಿ ಗುರುತಿಸುವಷ್ಟುಗಿಡ-ಮರ ಹಸಿರಿನಿಂದ ಸ್ವಚ್ಛತೆಯಿಂದ ಕಂಗೊಳಿಸಿ ತರೀಕೆರೆ ಪುರಸಭೆಗೆ ಒಳ್ಳೆಯ ಹೆಸರು ತರುವಷ್ಟುಬದಲಾವಣೆ ಕಂಡಿದೆ. ಸ್ವಚ್ಛತೆ ಅರಿವು ಮೂಡಿಸುವ ನಾಮಫಲಕಗಳು ಪಟ್ಟಣದ ಎಲ್ಲೆಡೆ ರಾರಾಜಿಸುತ್ತಿವೆ. ಉದ್ಯಾನವನಗಳಲ್ಲಿ ಗಿಡ- ಮರಗಳಿಂದ ಉದುರುವ ಎಲೆಗಳಿಂದ ಗೊಬ್ಬರ ತಯಾರಿಸುವ ಪಾರ್ಕ್ ಕಾಂಪೋಸ್ಟರ್‌ಗಳನ್ನು ಅಳವಡಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ದಾದಾಪೀರ್, ನಿರೀಕ್ಷೆಯಂತೆಯೇ ತರೀಕೆರೆ ಪುರಸಭೆಗೆ ರಾಜ್ಯ ಮಟ್ಟದಲ್ಲಿ ಪುರಸ್ಕಾರ ಲಭ್ಯವಾಗಿದೆ, ಅಡಳಿತ ಹಾಗೂ ಅಧಿಕಾರಿಗಳ ಸಮನ್ಯಯ ಶ್ರಮ ಇದಕ್ಕೆ ಕಾರಣವಾಗಿದೆ ಎಂದಿದ್ದಾರೆ. ಮುಖ್ಯಾಧಿಕಾರಿ ಎಚ್.ಮಹಂತೇಶ್ ಅವರು ತರೀಕೆರೆ ಪುರಸಭೆ ಪುರಸ್ಕಾರ ಪಡೆದಿರುವುದು ಸಂತೋಷ ತಂದಿದೆ. ಸಹಕರಿಸುತ್ತಿರುವ ಸರ್ವರಿಗೂ ಪುರಸಭೆ ಕೃತಜ್ಞತೆ ಸಲ್ಲಿಸುತ್ತದೆ ಎಂದು ತಿಳಿಸಿದ್ದಾರೆ.
Swachh Amrit Mahotsav; ಮೈಸೂರಿಗೆ ಸ್ವಚ್ಛ ನಗರ ಗೌರವ, ಪುರಸ್ಕಾರದ ಹಿಂದಿನ ಶಕ್ತಿಗಳು
ಸ್ವಚ್ಛ ಭಾರತ್ ಯೋಜನೆಯಲ್ಲಿ 2021ರಲ್ಲಿ ಇಡೀ ರಾಜ್ಯಕ್ಕೆ 3ನೇ ಸ್ಥಾನ ಪಡೆದಿದ್ದ ತರೀಕೆರೆ ಪುರಸಭೆ ಈ ಬಾರಿ ಬೆಸ್ಟ್ ಪ್ರಾಕ್ಟೀಸ್ ಅವಾರ್ಡ್‌ನಲ್ಲಿ ಮತ್ತೆ 2ನೇ ಸ್ಥಾನ ಪಡೆದಿರುವುದು ಸಂತೋಷ ತಂದಿದೆ. ಪಟ್ಟಣದಲ್ಲಿ ಸ್ವಚ್ಛತೆ ಪಾಲನೆ ಜೊತೆಗೆ ಸಾರ್ವಜನಿಕರ ಆರೋಗ್ಯ ಕಾಪಾಡುತ್ತಿರುವ ತರೀಕೆರೆ ಪುರಸಭೆ ಇಡೀ ರಾಜ್ಯದಲ್ಲೇ ಮೊದಲ ಸ್ಥಾನ ಗಳಿಸುವಂತಾಗಲಿ
- ಡಿ.ಎಸ್.ಸುರೇಶ್, ಶಾಸಕ
ತರೀಕೆರೆ ಪುರಸಭೆ ಈ ಬಾರಿ ಬೆಸ್ಟ್ ಪ್ರಾಕ್ಟೀಸ್ ಅವಾರ್ಡ್ ದೊರೆತಿರುವುದು ಸಂತೋಷ ತಂದಿದೆ. ಈ ಪ್ರಶಸ್ತಿ ಪಡೆಯಲು ಶ್ರಮಿಸಿದ ಪುರಸಭೆ ಸರ್ವ ಸದಸ್ಯರಿಗೂ, ಪುರಸಭಾ ಮುಖ್ಯಾಧಿಕಾರಿ, ಪುರಸಭಾ ಅಧಿಕಾರಿಗಳು, ಪೌರಕಾರ್ಮಿಕರು ಹಾಗೂ ಪಟ್ಟಣದ ಎಲ್ಲ ನಾಗರಿಕರಿಗೆ ಈ ಗೌರವ ಸಲ್ಲುತ್ತದೆ
- ಯಶೋದಮ್ಮ, ಪ್ರಭಾರ ಅಧ್ಯಕ್ಷೆ, ಪುರಸಭೆ