Goraguntepalya Flyover:ಮುಕ್ತಿ ಕಾಣದ ತುಮಕೂರು ರಸ್ತೆ ಫ್ಲೈಓವರ್‌: ಇನ್ನೂ 20 ದಿನ ಪರಿಶೀಲನೆ?

By Kannadaprabha NewsFirst Published Jan 18, 2022, 5:05 AM IST
Highlights

*ಮೇಲ್ಸೇತುವೆ ಸ್ಲಾಬ್‌ ಬಿಗಿಗೊಳಿಸಲು ಬಳಸುವ ರೋಪ್‌ ಸಡಿಲ
*ವಾರದಲ್ಲಿ ದುರಸ್ತಿ ಮಾಡುವುದಾಗಿ ಹೇಳಿದ್ದ ಎನ್‌ಆರ್‌ಎಐ
*ಇಡೀ ಮೇಲ್ಸುತುವೆ ಸುಸ್ಥಿತಿ ತಪಾಸಣೆ: ಇನ್ನೂ 20 ದಿನ ಪರಿಶೀಲನೆ?
*ಕೆಳ ರಸ್ತೆಯಲ್ಲಿ ವಾಹನ ದಟ್ಟಣೆ: ಸವಾರರು ಹೈರಾಣ

ದಾಸರಹಳ್ಳಿ (ಜ. 18): ರಾಷ್ಟ್ರೀಯ ಹೆದ್ದಾರಿ 4ರ ಗೊರಗುಂಟೆಪಾಳ್ಯದಿಂದ (Goraguntepalya) ನಾಗಸಂದ್ರ ಪಾರ್ಲೆಜಿ ಫ್ಯಾಕ್ಟರಿವರೆಗೆ ಸುಮಾರು 5 ಕಿಲೋ ಮೀಟರ್‌ ಸಂಪರ್ಕಿಸುವ ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ (Dr. Shivakumar Swamiji) ದುರಸ್ತಿ ಕಾಮಗಾರಿ ತಿಂಗಳಾದರೂ ಮುಗಿದಿಲ್ಲ. ಇದರಿಂದ ವಾಹನ ಸವಾರರು ನರಕಯಾತನೆ ಯಾವಾಗ ಮುಗಿಯುವುದೋ ಗೊತ್ತಿಲ್ಲ ಎಂಬ ಪರಿಸ್ಥಿತಿ ಎದುರಾಗಿದೆ. ದುರಸ್ತಿ ಕಾಮಗಾರಿ ಪೂರ್ಣಗೊಳ್ಳುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೇ (National Highways Authority) ಇನ್ನೂ ಗೊಂದಲವಿದೆ. ಮೇಲ್ಸೇತುವೆ ಕಾಮಗಾರಿ, ಪರಿಶೀಲನೆ ಬಳಿಕ ಸಾರ್ವಜನಿಕರಿಗೆ ಮುಕ್ತಗೊಳಿಸಲು ಇನ್ನೂ 15ರಿಂದ 20 ದಿನ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಫ್ಲೈಒವರ್‌ ಒಂದು ಕಡೆ ಸಮಸ್ಯೆ ಕಾಣಿಸಿಕೊಂಡಿದ್ದು, ಮುಂದೆ ತೊಂದರೆ ಎದುರಾಗದಂತೆ ಇಡೀ ಮೇಲ್ಸೇತುವೆಯನ್ನು ಪರಿಶೀಲಿಸಿ ಏನಾದರೂ ಸಮಸ್ಯೆಗಳಿದ್ದರೆ ಈಗಲೇ ಸರಿ ಮಾಡಲು ನಿರ್ಧರಿಸಲಾಗಿದೆ. ಹಾಗಾಗಿ ಯಾವಾಗ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಲಾಗದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Latest Videos

ಇದನ್ನೂ ಓದಿPeripheral Ring Road: ಬೆಂಗ್ಳೂರು ಪೆರಿಫೆರಲ್ ರಿಂಗ್ ರೋಡ್‌ಗೆ ಹಸಿರು ನಿಶಾನೆ

ಆಮೆ ಗತಿಯಲ್ಲಿ ಸಾಗಬೇಕಾದ ಅನಿವಾರ್ಯ: ಮೇಲ್ಸೇತುವೆ ದುರಸ್ತಿ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಅತೀ ದುರ್ಗಮವಾಗಿದೆ. ಹತ್ತು ನಿಮಿಷ ಕ್ರಮಿಸಬೇಕಾದ ರಸ್ತೆಯಲ್ಲಿ ಈಗ ಗಂಟೆಗಟ್ಟಲೆ ಆಮೆ ಗತಿಯಲ್ಲಿ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ. ತುಮಕೂರು ಕಡೆಗೆ ಹೋಗಬೇಕಾದ ಪ್ರಯಾಣಿಕರು ಬೆಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ಹತ್ತು ವರ್ಷಗಳ ಹಿಂದೆ ಇಂಟರ್‌ಲಾಕಿಂಗ್‌ ಸಿಸ್ಟಮ್‌ ಬಳಸಿಕೊಂಡು ಗೊರಗುಂಟೆ ಪಾಳ್ಯದಿಂದ ನಾಗಸಂದ್ರ ಪಾರ್ಲೆಜಿವರೆಗೆ ಮೇಲ್ಸೆತುವೆ ನಿರ್ಮಾಣ ಮಾಡಲಾಗಿತ್ತು. ಮೇಲ್ಸೇತುವೆ ನಿರ್ಮಾಣದ ವೇಳೆ ಒಂದು ಪಿಲ್ಲರ್‌ನಿಂದ ಇನ್ನೊಂದು ಪಿಲ್ಲರ್‌ ನಡುವಿನ ಸ್ಲಾಬ್‌ಗಳನ್ನು ಬಿಗಿಗೊಳಿಸಲು ಅಳವಡಿಸುವ ರೋಪ್‌ (ಕಬ್ಬಿಣದ ವಯರ್‌)ಗಳಲ್ಲಿ ಒಂದು ವಯರ್‌ ಸಡಿಲವಾಗಿದ್ದು, ಇದನ್ನು ಸರಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಂದು ವಾರ ಸಮಯವಕಾಶ ಕೇಳಿತ್ತು. ಆದರೆ ತಿಂಗಳಾದರೂ ಇದುವರೆಗೂ ಸರಿಪಡಿಸಿಲ್ಲ.

ಇದನ್ನೂ ಓದಿ: Hassan: ಬೆಂಗ್ಳೂರು-ಮಂಗ್ಳೂರು ರಾ.ಹೆ ಚತುಷ್ಪಥ ಕಾಮಗಾರಿ: ಶಿರಾಡಿ ಘಾಟ್‌ ಮತ್ತೆ ಬಂದ್‌?

ನಿರ್ವಹಣೆ ವೇಳೆ ಬೆಳಕಿಗೆ ಬಂದ ನಂತರ ಎಚ್ಚೆತ್ತ ಎನ್‌ಎಚ್‌ಎಐ ಅಧಿಕಾರಿಗಳು 101 ಮತ್ತು 102ನೇ ಪಿಲ್ಲರ್‌ ನಡುವಿನ ಸ್ಲಾಬ್‌ಗಳಲ್ಲಿ ಸೆಗ್ಮೆಂಟ್‌ ಜಾಯಿಂಟ್‌ ಸಮಸ್ಯೆ ಎದುರಾಗಿದೆ. ಫ್ಲೈಓವರ್‌ನಲ್ಲಿ 16 ರೋಪ್‌ಗಳನ್ನು ಅಳವಡಿಸಿದ್ದು, ಅದರಲ್ಲಿ ಒಂದು ರೋಪ್‌ನ ಸೆಗ್ಮೆಂಟ್‌ ಜಾಯಿಂಟ್‌ ಮಾತ್ರ ಸಮಸ್ಯೆಯಾಗಿದ್ದು ಉಳಿದ 15 ರೋಪ್‌ಗಳು ಸುಭದ್ರವಾಗಿವೆ ಎಂದು ತಿಳಿಸಿದ್ದರು. ದೋಷ ಕಂಡು ಬಂದಿರುವ ಉಪಕರಣಗಳನ್ನು ಹೊಸದಾಗಿ ಬದಲಿಸಲಾಗಿದೆ ಎಂದು ಕಂಟ್ರಾಕ್ಟರ್‌ ತಿಳಿಸಿದ್ದಾರೆ.

ನಿತ್ಯ 60 ಸಾವಿರ ವಾಹನ ಸಂಚಾರ: ಮೇಲ್ಸೇತುವೆಯಲ್ಲಿ ಕಾಣಿಸಿಕೊಂಡ ದೋಷವನ್ನು ಸರಿಪಡಿಸಲು ತಾತ್ಕಾಲಿಕವಾಗಿ ಎರಡು ಕಡೆಯ ಸಂಚಾರವನ್ನು ನಿಷೇಧಿಸಲಾಗಿದೆ. ಇದರಿಂದ ವಾಹನ ಸವಾರರು ಹೈರಾಣಾಗಿದ್ದು, ಪ್ರಯಾಣಿಕರ ಪರದಾಟ ಮುಂದುವರಿದಿದೆ. ಈ ಮಾರ್ಗದಲ್ಲಿ ಪ್ರತಿದಿನ 50 ರಿಂದ 60 ಸಾವಿರ ವಾಹನಗಳು ಸಂಚರಿಸುತ್ತವೆ. ಉತ್ತರ ಭಾಗದ ಸುಮಾರು 20 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದ್ದು, ದುರಸ್ತಿ ಅತೀ ಅವಶ್ಯಕವಾಗಿ ಆಗಬೇಕಿದೆ. ಮೇಲ್ಸೇತುವೆ ಬಂದ್‌ ಆಗಿರುವುದರಿಂದ ಕೆಳಗಡೆ ರಸ್ತೆಯಲ್ಲಿ ವಾಹನ ದಟ್ಟಣೆ ವಿಪರೀತವಾಗಿದ್ದು, ದಿನನಿತ್ಯ ನರಕ ದರ್ಶನವಾಗುತ್ತಿದೆ. ಪೀಣ್ಯ ಸಂಚಾರಿ ಪೊಲೀಸರು ಹೈರಾಣಾಗಿ ಹೋಗುತ್ತಿದ್ದಾರೆ. ಪೀಣ್ಯದ 100 ಪೊಲೀಸ್‌ ಸಿಬ್ಬಂದಿ ಜೊತೆಗೆ ಪಕ್ಕದ ಠಾಣೆಗಳಿಂದ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜನೆಗಿಳಿಸಲಾಗಿದೆ.

ಪ್ರಶಾಂತ್‌ ಕೆ.ಸಿ., ಕನ್ನಡಪ್ರಭ ವಾರ್ತೆ

click me!