Children Death:ಬೆಳಗಾವಿ, ಚುಚ್ಚುಮದ್ದು ಪಡೆದ ಮಕ್ಕಳ ಸಾವಿನ ಸಮಗ್ರ ವರದಿ ಕೊಡಿ, ಬೊಮ್ಮಾಯಿ ಕಟ್ಟಪ್ಪಣೆ

By Suvarna NewsFirst Published Jan 18, 2022, 12:17 AM IST
Highlights

* ಬೆಳಗಾವಿ ಜಿಲ್ಲೆಯಲ್ಲಿ ಮೂವರು ಮಕ್ಕಳ ಸಾವು ಪ್ರಕರಣ
*  ಜಿಲ್ಲಾಧಿಕಾರಿಗಳಿಂದ ಸಮಗ್ರ ವರದಿ ಕೇಳಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
* ಆರೋಗ್ಯ ಕೇಂದ್ರದಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ್ದರು

ಬೆಳಗಾವಿ(ಜ.17)  ಬೆಳಗಾವಿ (Belagavi) ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸಂಭವಿಸಿರುವ ಮೂರು ಮಕ್ಕಳ (Children) ಸಾವು ಪ್ರಕರಣದ ಕುರಿತು ತನಿಖಾ ವರದಿ ನೀಡುವಂತೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು  ಬೆಳಗಾವಿ ಜಿಲ್ಲಾಧಿಕಾರಿ ಗಳಿಗೆ ಸೂಚನೆ ನೀಡಿದ್ದಾರೆ.

ಧಡಾರ ರೋಗ ತಡೆಗೆ ನೀಡಲಾಗುವ ರುಬೆಲ್ಲ ಚುಚ್ಚುಮದ್ದನ್ನು ಪಡೆದ ಸಂದರ್ಭದಲ್ಲಿ ಆ ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಪ್ರಕರಣದ ಕುರಿತು ಮುಖ್ಯಮಂತ್ರಿಗಳು ಡಿಸಿ‌ ಅವರಿಂದ ವಿವರವಾದ ವರದಿ ಕೇಳಿದ್ದಾರೆ. 

ಬೆಳಗಾವಿ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸಿಎಂ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.

ರೂಬೆಲ್ಲಾ ಲಸಿಕೆ (Rubella) ಪಡೆದಿದ್ದ ಮೂರು ಕಂದಮ್ಮಗಳು ನಿಗೂಢವಾಗಿ ಅಸುನೀಗಿರುವ ಮನಕಲಕುವ ಘಟನೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ (Belagavi) ನಡೆದಿತ್ತು. ಘಟನೆ ಬೆನ್ನಲ್ಲೇ ಎಚ್ಚೆತ್ತಿರುವ ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿತ್ತು. . ಜಿಲ್ಲೆಯ ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ ಪವಿತ್ರಾ ಹುಲಗೂರ (13 ತಿಂಗಳು), ಮಧು ಕರಗುಂದಿ (14 ತಿಂಗಳು) ಹಾಗೂ ಮಲ್ಲಾಪುರ ಗ್ರಾಮದ ಚೇತನ ಪೂಜಾರಿ (18 ತಿಂಗಳು)  ಮೃತಪಟ್ಟಿದ್ದರು.

ಈ ಮಕ್ಕಳಿಗೆ ಜನವರಿ 12ರಂದು ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ರೂಬೆಲ್ಲಾ ಚುಚ್ಚುಮದ್ದು ನೀಡಿದ್ದರು. ಚುಚ್ಚುಮದ್ದು ಹಾಕಿಸಿಕೊಂಡು ಮನೆಗೆ ಹೋಗಿದ್ದ ಮಕ್ಕಳಲ್ಲಿ ಐವರು ಮಕ್ಕಳು ತೀವ್ರ ಅಸ್ವಸ್ಥಗೊಂಡು ವಾಂತಿ-ಭೇದಿಯಿಂದ
ಬಳಲಿದ್ದರು. ಕುಟುಂಬಸ್ಥರು ತಕ್ಷಣವೇ ಐದೂ ಮಕ್ಕಳನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಈ ಪೈಕಿ ಮೂವರು ಮಕ್ಕಳಿಗೆ ಐಸಿಯುನಲ್ಲಿ ಆಮ್ಲಜನಕದ ನೆರವಿನೊಂದಿಗೆ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೂವರು ಕಂದಮ್ಮಗಳು ನಿಗೂಢವಾಗಿ ಅಸುನೀಗಿದ್ದವು.

ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್‌ ಲಸಿಕಾ ಅಭಿಯಾನವೂ ಜಾರಿಯಲ್ಲಿತ್ತು. ಹೀಗಾಗಿ ಅಲ್ಲಿನ ಸಿಬ್ಬಂದಿ ಮಕ್ಕಳಿಗೆ ಯಾವ ಚುಚ್ಚುಮದ್ದು ನೀಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದರು.

"ಜ.12ರಂದು 21 ಮಕ್ಕಳಿಗೆ ಲಸಿಕೆ ನೀಡಲಾಗಿದ್ದು ಅವರಲ್ಲಿ ನಾಲ್ವರು ಮಕ್ಕಳಿಗೆ ಧಡಾರ, ರುಬೆಲ್ಲಾ ವ್ಯಾಕ್ಸಿನ್‌ ನೀಡಲಾಗಿತ್ತು. ಆ ನಾಲ್ಕು ಮಕ್ಕಳಲ್ಲಿ ಪ್ರತಿಕೂಲ ಪರಿಣಾಮ ಕಾಣಿಸಿಕೊಂಡಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಪರಿಶೀಲಿಸಿ ಕ್ರಮ ವಹಿಸುತ್ತೇವೆ" ಎಂದು ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್‌.ವಿ.ಮುನ್ಯಾಳ ತಿಳಿಸಿದ್ದರು.

 

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸಂಭವಿಸಿರುವ ಮೂರು ಮಕ್ಕಳ ಸಾವು ಪ್ರಕರಣದ ಕುರಿತು ತನಿಖಾ ವರದಿ ನೀಡುವಂತೆ ಮುಖ್ಯಮಂತ್ರಿ ಅವರು ಇಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ. (1/2)

— CM of Karnataka (@CMofKarnataka)
click me!