
ಬೆಂಗಳೂರು: ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನ ಸಂಚಾರಕ್ಕೆ ತಕ್ಕಂತೆ ಟ್ರಾಫಿಕ್ ಪೊಲೀಸರ ಕಾರ್ಯಕ್ಕೆ ಬಲ ತುಂಬಲು ರಾಜ್ಯ ಸರ್ಕಾರದಿಂದ ಹೊಸ ಹೆಜ್ಜೆ ಇಡಲಾಗಿದೆ. ಬೆಂಗಳೂರು ನಗರ ಟ್ರಾಫಿಕ್ ಪೊಲೀಸರಿಗೆ 50 ಹೊಸ ಗಸ್ತು ಬೈಕ್‌ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ವಿಧಾನಸೌಧದ ಮೆಟ್ಟಿಲುಗಳಲ್ಲಿ ಭಾನುವಾರ ಉದ್ಘಾಟಿಸಿದರು.
ಈ ಬೈಕ್‌ಗಳನ್ನು ಹೋಂಡಾ ಇಂಡಿಯಾ ಫೌಂಡೇಶನ್ ಹಾಗೂ ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ವಿತರಿಸಲಾಗಿದ್ದು, ಅಪಘಾತ ಸ್ಥಳಗಳಿಗೆ ತ್ವರಿತವಾಗಿ ತಲುಪಲು ಹಾಗೂ ಸಂಚಾರ ನಿರ್ವಹಣೆಯನ್ನು ಸುಗಮಗೊಳಿಸಲು ಅವು ನೆರವಾಗಲಿವೆ. ಇದೇ ವೇಳೆ ಅಪಘಾತ ವರದಿ ಮಾಡಲು ಬಳಸಬಹುದಾದ ‘ಅಸ್ತ್ರಂ’ ಮೊಬೈಲ್ ಆಪ್‌ನ್ನು ಗೃಹ ಸಚಿವರು ಬಿಡುಗಡೆ ಮಾಡಿದರು. ಸಾರ್ವಜನಿಕರು ರಸ್ತೆ ಅಪಘಾತ ಕಂಡರೆ ತಕ್ಷಣವೇ ಆ್ಯಪ್ ಮೂಲಕ ವರದಿ ಮಾಡಲು ಈ ಆ್ಯಪ್ ಸಹಾಯಕವಾಗಲಿದೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗೃಹ ಸಚಿವರು, ಹೋಂಡಾ ಸಂಸ್ಥೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ದೊಡ್ಡ ಕಂಪನಿಗಳು ತಮ್ಮ ಲಾಭದಲ್ಲಿ ಕನಿಷ್ಠ 2% ಸಾರ್ವಜನಿಕರ ಹಿತಕ್ಕಾಗಿ ಮೀಸಲಿಡಬೇಕು ಎಂಬ ನಿಯಮದಂತೆ, ಈ ಬಾರಿ ಒಂದು ಕೋಟಿ 30 ಲಕ್ಷ ವೆಚ್ಚದಲ್ಲಿ ಬೈಕ್‌ಗಳನ್ನು ನೀಡಿದ್ದಾರೆ. ಇದು ಶ್ಲಾಘನೀಯ ಕಾರ್ಯ ಎಂದರು. ಬೆಂಗಳೂರು ಟ್ರಾಫಿಕ್ ಬಗ್ಗೆ ಆಗಾಗ ಟೀಕೆಗಳು ಬರುತ್ತವೆ. ಆದರೆ ವಿಶ್ವದ ದೊಡ್ಡ ನಗರಗಳಾದ ಮುಂಬೈ, ದೆಹಲಿ, ಹೈದರಾಬಾದ್, ಕೊಲ್ಕತ್ತಾಗಳಲ್ಲಿಯೂ ಇದೇ ಸಮಸ್ಯೆ ಇದೆ. ಬೆಂಗಳೂರು ಮಾತ್ರವೇ ವಿಶೇಷ ಅಲ್ಲ ಎಂದು ಹೇಳಿದರು. ಬೆಂಗಳೂರು ನಗರದಲ್ಲಿ ಈಗಾಗಲೇ 74 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿವೆ. ಪ್ರತಿದಿನವೂ ಸಾವಿರಾರು ಹೊಸ ವಾಹನಗಳು ರಿಜಿಸ್ಟರ್ ಆಗುತ್ತಿವೆ. ಇದರ ನಡುವೆ ಪೊಲೀಸರು ತಮ್ಮ ಸೇವೆಯನ್ನು ಪರಿಣಾಮಕಾರಿಯಾಗಿ ನೀಡುತ್ತಿದ್ದಾರೆ ಎಂದು ವಿವರಿಸಿದರು.
ಅಪಘಾತ ಸಂದರ್ಭಗಳಲ್ಲಿ ಸಾರ್ವಜನಿಕರು ಕೇವಲ ನೋಡುವುದಲ್ಲದೆ, ತಕ್ಷಣವೇ ಮಾಹಿತಿ ನೀಡುವಂತೆ ಪ್ರೋತ್ಸಾಹಿಸಲು ಅಸ್ತ್ರಂ ಆ್ಯಪ್ ಬಿಡುಗಡೆ ಮಾಡಲಾಗಿದೆ. ಅಪಘಾತ ಕಂಡು ನೋಡಿಕೊಂಡು ಹೋಗುವ ಬದಲು, ಈ ಆ್ಯಪ್ ಮೂಲಕ ಮಾಹಿತಿ ನೀಡಿದರೆ ಜೀವ ಉಳಿಸಬಹುದು ಎಂದು ಗೃಹ ಸಚಿವರು ಹೇಳಿದರು. ಡ್ರಗ್ಸ್ ವಿರುದ್ಧ ಹೋರಾಟ ಪೊಲೀಸರು ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಗೂ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಇತ್ತೀಚೆಗೆ ಒಂದು ದಿನದಲ್ಲಿ 24 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ ಮಾಡಲಾಗಿದೆ. ಮತ್ತೊಂದು ಸಂದರ್ಭದಲ್ಲಿ 2 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಇದನ್ನು ಸಂಪೂರ್ಣವಾಗಿ ನಿರ್ಮೂಲಗೊಳಿಸಲು ಪೊಲೀಸರು ನಿರಂತರವಾಗಿ ಹೋರಾಡುತ್ತಿದ್ದಾರೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕು ಎಂದರು.
ಗೃಹ ಸಚಿವರು ಸರ್ಕಾರದ ಅಭಿವೃದ್ಧಿ ಕ್ರಮಗಳ ಕುರಿತು ಮಾತನಾಡುತ್ತಾ, 26 ಕೋಟಿ ವೆಚ್ಚದಲ್ಲಿ ಕಮಾಂಡೋ ಸೆಂಟರ್ ನಿರ್ಮಿಸಲಾಗಿದೆ. ನಮ್ಮ ಹೊಯ್ಸಳ ವಾಹನಗಳು 5–7 ನಿಮಿಷಗಳಲ್ಲಿ ತಲುಪುತ್ತವೆ. ಇನ್ನೂ ಹೆಚ್ಚಿನ ಪೆಟ್ರೋಲ್ ಬೈಕ್‌ಗಳು ಪೊಲೀಸ್ ಇಲಾಖೆಗೆ ಅಗತ್ಯವಿದೆ ಎಂದು ಹೇಳಿದರು. ಸರ್ಕಾರದ ವಿರುದ್ಧ ಗುಂಡಿ ಬಿದ್ದಿದೆ ಎಂದು ಟೀಕೆ ಮಾಡುವುದು ಸರಿಯಲ್ಲ. ಮಳೆ ಬಿದ್ದರೆ ಗುಂಡಿ ಬಿಳುತ್ತದೆ, ನಾವು ಅದನ್ನು ಮುಚ್ಚುತ್ತೇವೆ. ಇದೇ ರೀತಿ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಅಸಂಬದ್ಧ ಟೀಕೆ ಬೇಡ ಎಂದು ಟೀಕಿಸಿದರು. ನಮ್ಮ ರಾಜ್ಯಕ್ಕೆ ಈಗಾಗಲೇ 10.22 ಲಕ್ಷ ಕೋಟಿ ವಿದೇಶಿ ಬಂಡವಾಳ ಹೂಡಿಕೆ ಆಗಿದೆ. ವಿದೇಶಿ ಹೂಡಿಕೆದಾರರು ಬೆಂಗಳೂರಿನಲ್ಲಿ ಹೂಡಿಕೆ ಮಾಡುತ್ತಿರುವುದು, ನಮ್ಮ ನಗರವು ಉತ್ತಮ ಹೂಡಿಕೆ ತಾಣವೆಂದು ಅವರಿಗೆ ನಂಬಿಕೆಯಿರುವುದಕ್ಕೆ ಸಾಕ್ಷಿ ಎಂದರು.
ಗೃಹ ಸಚಿವರು ಪೊಲೀಸರ ಶ್ರಮವನ್ನು ಮೆಚ್ಚಿ, ನಾವು ದೀಪಾವಳಿ ಹಬ್ಬವನ್ನು ಸಂಭ್ರಮಿಸುತ್ತೇವೆ, ಆದರೆ ನಮ್ಮ ಸುರಕ್ಷತೆಗೆ ಪೊಲೀಸ್ ಇಲಾಖೆಯೇ ಕಾವಲು ನಿಂತಿದೆ. ಅದಕ್ಕಾಗಿ ಅವರಿಗೆ ನಮ್ಮ ಕೃತಜ್ಞತೆ ಸಲ್ಲಿಸಬೇಕು ಎಂದು ಅಭಿಪ್ರಾಯಪಟ್ಟರು. ಅಂತಿಮವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು. ಕಾರ್ಯಕ್ರಮದಲ್ಲಿ ಜಿಬಿಎ ತುಷಾರ್ ಗಿರೀನಾಥ್, ರಾಜ್ಯದ ಡಿಜಿಪಿ ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಸಂಚಾರ ವಿಭಾಗದ ಜಂಟಿ ಆಯುಕ್ತ ಕಾರ್ತಿಕ್ ರೆಡ್ಡಿ, ಜಂಟಿ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳು ಉಪಸ್ಥಿತರಿದ್ದರು.