ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ನೀಡ್ತಿದ್ದೀರಾ? ಮಕ್ಕಳ ಆ್ಯಕ್ಸಿಡೆಂಟ್ ಕೇಸಲ್ಲಿ 1250 ಪೋಷಕರಿಗೆ ಸಂಕಷ್ಟ!

Kannadaprabha News   | Kannada Prabha
Published : Mar 24, 2026, 07:33 AM IST
Minor driving

ಸಾರಾಂಶ

ಬೆಂಗಳೂರಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿದ್ದಕ್ಕಾಗಿ 1250 ಪ್ರಕರಣಗಳು ದಾಖಲಾಗಿವೆ. ಈ ತಪ್ಪಿಗಾಗಿ ಅಪ್ರಾಪ್ತರ ಜೊತೆಗೆ ಅವರ ಪಾಲಕರ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತಿದ್ದು, ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ.

 ಮಂಜುನಾಥ ಕೆ. ಕನ್ನಡಪ್ರಭ

ಬೆಂಗಳೂರು: ಕಳೆದ ಮೂರು ವರ್ಷದ ಅವಧಿಯಲ್ಲಿ ಬೆಂಗಳೂರಿನಲ್ಲಿ ಅಪ್ರಾಪ್ತ ಮಕ್ಕಳು ವಾಹನಗಳನ್ನು ಚಲಾಯಿಸಿದ ಪರಿಣಾಮ ನಗರ ಸಂಚಾರ ವಿಭಾಗದಲ್ಲಿ 1250 ಪಾಲಕರ ಮತ್ತು ಅಪ್ರಾಪ್ತರ ವಿರುದ್ಧ ಪ್ರಕರಣ ದಾಖಲಾಗಿದೆ.

ಅಪ್ರಾಪ್ತ ಮಕ್ಕಳು ಮಾಡಿದಂತಹ ತಪ್ಪಿಗೆ ಪಾಲಕರು ಅಥವಾ ಪೋಷಕರು ಕಾನೂನಿನ ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ಅಪ್ರಾಪ್ತ ಮಕ್ಕಳಿಗೆ ತಮ್ಮ ವಾಹನಗಳನ್ನು ನೀಡುವ ಮುನ್ನ ಪಾಲಕರು ನೂರಾರು ಬಾರಿ ಯೋಚಿಸಬೇಕು, ಇಲ್ಲವಾದರೆ ಪಾಲಕರು ವಿನಾಕಾರಣ ಕಾನೂನಿನ ಸಂಕಷ್ಟಕ್ಕೆ ಸಿಲುಕಿ ಒದ್ದಾಡಬೇಕಾಗುತ್ತದೆ.

ಅಪ್ರಾಪ್ತರು ಕೆಲವು ಬಾರಿ ತಮ್ಮ ಪಾಲಕರಿಗೆ ಗೊತ್ತಾಗದಂತೆ ಅಥವಾ ಗೊತ್ತಿದ್ದು ವಾಹನಗಳನ್ನು ಚಲಾಯಿಸಿ ಅಪಾಯಕಾರಿಯಾದ ವ್ಹೀಲಿಂಗ್‌ ಮಾಡಿ ಸಾರ್ವಜನಿಕರ ಪ್ರಾಣಕ್ಕೆ ಹಾನಿ ಉಂಟು ಮಾಡುತ್ತಾರೆ. ಇಂತಹ ಅಪ್ರಾಪ್ತರು ಹಾಗೂ ಪಾಲಕರ ವಿರುದ್ಧ ಸಂಚಾರ ಪೊಲೀಸರು ಕಠಿಣ ಕ್ರಮ ಜರುಗಿಸುತ್ತಿದ್ದಾರೆ.

1250 ಪ್ರಕರಣ ದಾಖಲು:

ನಗರದಲ್ಲಿ ಅಪ್ರಾಪ್ತರು ಕಾನೂನು ಬಾಹಿರವಾಗಿ ವಾಹನ ಚಾಲನೆ ಮಾಡಿರುವ ಹಿನ್ನೆಲೆಯಲ್ಲಿ ಅವರ ಪಾಲಕರು ಮತ್ತು ಅಪ್ರಾಪ್ತರ ವಿರುದ್ಧ ಐಎಂವಿ ಕಾಯ್ದೆ ಮತ್ತು ಬಿಎನ್‌ಎಸ್‌ ಕಾಯ್ದೆಯಡಿ ಕಳೆದ 3 ಮೂರು ವರ್ಷದಲ್ಲಿ ಒಟ್ಟು 1250 ಪ್ರಕರಣ ದಾಖಲಾಗಿದೆ. ಇದರಲ್ಲಿ ಐಎಂವಿ ಕಾಯ್ದೆಯಡಿ 706 ಪ್ರಕರಣ ಹಾಗೂ ಬಿಎನ್‌ಎಸ್‌ ಕಾಯ್ದೆಯಡಿ 544 ಪ್ರಕರಣ ದಾಖಲಾಗಿದೆ. 2023 ರಲ್ಲಿ 240, 2024 ರಲ್ಲಿ 378 ಹಾಗೂ 2025 ರಲ್ಲಿ 632 ಪ್ರಕರಣ ದಾಖಲಾಗಿದೆ. ಈ ಅಂಕಿ ಅಂಶಗಳನ್ನು ಗಮನಿಸಿದ್ದಾಗ ವರ್ಷದಿಂದ ವರ್ಷಕ್ಕೆ ಅಪ್ರಾಪ್ತರು ವಾಹನ ಚಾಲನೆ ಮಾಡುತ್ತಿರುವುದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಕಂಡು ಬಂದಿದೆ.

ಶಿಕ್ಷೆ ಏನು?

18 ವರ್ಷದೊಳಗಿನ ಅಪ್ರಾಪ್ತರು ವಾಹನ ಚಲಾಯಿಸಿ ಸಿಕ್ಕಿ ಬಿದ್ದರೆ ಅಂತಹ ಪಾಲಕರು ಅಥವಾ ಪೋಷಕರಿಗೆ 6 ರಿಂದ 10 ಸಾವಿದವರೆಗೂ ದಂಡ ಹಾಗೂ ಕನಿಷ್ಠ ಆರು ತಿಂಗಳು ಕಾಲ ಜೈಲು ಶಿಕ್ಷೆಯಿದೆ. ಒಂದು ವೇಳೆ ಸಾವು ಸಂಭವಿಸಿದರೆ ಎರಡು ವರ್ಷದವರೆಗೂ ಜೈಲು ಶಿಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೈಗೊಂಡಿರುವ ಕ್ರಮಗಳು:

* ಪ್ರಕರಣ ದಾಖಲು ಮಾಡಿ ಸವಾರರನ್ನು ವಶಕ್ಕೆ ಪಡೆದು ಆ ವಾಹನವನ್ನು ಜಪ್ತಿ ಮಾಡಲಾಗುತ್ತದೆ.

* ಅಪ್ರಾಪ್ತರ ವಿರುದ್ಧ ಪ್ರಕರಣ ದಾಖಲು ಮಾಡುವುದರ ಜತೆಗೆ ಅವರ ಪಾಲಕರುಗಳ ವಿರುದ್ಧವೂ ಕಾನೂನು ರೀತಾ ಕ್ರಮ.

* ಅಪ್ರಾಪ್ತರು ಚಾಲನೆಯಲ್ಲಿ ಭಾಗಿಯಾಗುವ ವಾಹನಗಳ ಆರ್‌.ಸಿ ಕಾರ್ಡ್‌ ರದ್ದುಪಡಿಸಲು ಸಂಬಂಧಪಟ್ಟ ಆರ್.ಟಿ.ಓ. ಕಚೇರಿಗೆ ಶಿಫಾರಸ್ಸು ಕಳುಹಿಸಲಾಗುತ್ತದೆ.

* ಅಪ್ರಾಪ್ತ ವಯಸ್ಕರ ಚಾಲನೆಯನ್ನು ತಡೆಗಟ್ಟುವ ಸಲುವಾಗಿ ಕಾಲಕಾಲಕ್ಕೆ ವಿಶೇಷ ಕಾರ್ಯಾಚರಣೆ.

* ವ್ಹೀಲಿಂಗ್‌ ನಡೆಸುವಂತಹ ಸ್ಥಳಗಳನ್ನು ಗುರುತಿಸಿ, ಆ ಸ್ಥಳಗಳಲ್ಲಿ ಅಗತ್ಯ ಕೋಬ್ರಾ ಸಿಬ್ಬಂದಿಯನ್ನು ಗಸ್ತು ಕರ್ತವ್ಯಕ್ಕೆ ನೇಮಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ.

* ವ್ಹೀಲಿಂಗ್‌ನಲ್ಲಿ ಭಾಗಿಯಾಗುವ ಅಪ್ರಾಪ್ತರ ವಿರುದ್ಧ ಕಲಂ 107 ಸಿ.ಆ‌ರ್.ಪಿ.ಸಿ. ಅಡಿ ಸಂಬಂಧಪಟ್ಟ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರ (ಡಿಸಿಪಿ) ಮುಂದೆ ಪಿ.ಎ.ಆ‌ರ್. ದಾಖಲಿಸಲಾಗುತ್ತಿದೆ.

* ಠಾಣಾ ಮಟ್ಟದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡವನ್ನು ರಚಿಸಿ, ಆ ತಂಡಗಳು ತಮ್ಮ ಠಾಣಾ ವ್ಯಾಪ್ತಿಯಲ್ಲಿ ನಿಗಾ ವಹಿಸುವ ಮೂಲಕ ಸಂಚಾರ ನಿಯಮ ಉಲ್ಲಂಘನೆಯನ್ನು ತಡೆಗಟ್ಟಲು ಕ್ರಮ.

ಜಾಗೃತಿ ಮೂಡಿಸಲು ಕೈಗೊಂಡಿರುವ ಕ್ರಮಗಳು:

* ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಪ್ರಾಪ್ತ ಚಾಲನೆಯಿಂದ ಉಂಟಾಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ.

* ಫೇಸ್‌ಬುಕ್ ಹಾಗೂ ಎಕ್ಸ್‌ನಲ್ಲಿ ಅಪ್ರಾಪ್ತರ ಚಾಲನೆಯಿಂದ ಉಂಟಾಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ.

*ಎಸ್.ಎ.ಆರ್.ಎಸ್ ಯೋಜನೆಯಡಿಯಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಸಮಯದಲ್ಲಿ ಅಪ್ರಾಪ್ತ ಚಾಲನೆಯಿಂದ ಉಂಟಾಗುವ ತೊಂದರೆಗಳ ಬಗ್ಗೆ ಶಾಲೆಗಳಿಗೆ ಭೇಟಿ ಕೊಟ್ಟು ತಿಳಿವಳಿಕೆ ನೀಡುವುದು.

ವರ್ಷಐಎಂವಿ ಕಾಯ್ದೆಬಿಎನ್‌ಎಸ್‌ ಕಾಯ್ದೆ
202395145
2024197181
2025414218
 706544

 ಪಾಲಕರು, ಅಪ್ರಾಪ್ತ ಮಕ್ಕಳಿಗೆ ಯಾವುದೇ ಕಾರಣಕ್ಕೂ ವಾಹನಗಳನ್ನು ನೀಡಬಾರದು. ಇವರ ಬಳಿ ಚಾಲನಾ ತರಬೇತಿ ಮತ್ತು ಡಿಎಲ್‌ ಕೂಡ ಇರುವುದಿಲ್ಲ. ಇದರಿಂದಾಗಿ ಅಪ್ರಾಪ್ತರು ವಾಹನ ಚಲಾಯಿಸಿದರೆ ಅವರ ಜೀವಕ್ಕೆ ಕುತ್ತು ತಂದುಕೊಳ್ಳುವುದರ ಜತೆಗೆ ಇತರರ ಜೀವನಕ್ಕೆ ಕುತ್ತು ತರುವ ಸಾಧ್ಯತೆ ಹೆಚ್ಚಿದೆ. ಈ ಸಂಬಂಧ ಪ್ರಕರಣ ದಾಖಲಿಸುವಾಗ ಅಪ್ರಾಪ್ತರ ಜತೆಗೆ ಅವರ ಪಾಲಕರ ಅಥವಾ ಪೋಷಕರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತದೆ. ಹೀಗಾಗಿ ತಮ್ಮ ಅಪ್ರಾಪ್ತ ಮಕ್ಕಳ ಮೇಲೆ ಪಾಲಕರು ಹೆಚ್ಚಿನ ನಿಗಾ ವಹಿಸಬೇಕು ಇಲ್ಲವಾದರೆ ಕಾನೂನಿನ ಸಂಕಷ್ಟ ತಪ್ಪಿದಲ್ಲ.

-ಕಾರ್ತಿಕ್‌ ರೆಡ್ಡಿ, ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ

PREV
Read more Articles on
click me!

Recommended Stories

ಮದುವೆ ಆಫರ್ ನೀಡಿ ಐದು ಹೆಣ್ಮಕ್ಕಳ ಜೊತೆಗೆ ಸೆ*ಕ್ಸ್..! ಕೊನೆಗೆ ಕೈಕೊಡಲು ಹೋಗಿ ಅರೆಸ್ಟ್ ಆದ ವಂಚಕ
CBI ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್‌: ₹5 ಕೋಟಿ ರುಪಾಯಿ ಧೋಖಾ! ಬೆಂಗಳೂರಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸುವ ಪ್ರಕರಣ