ಬೆಂಗಳೂರು- ಮೈಸೂರು ದಶಪಥ ಯೋಜನೆ ಕಾಲಮಿತಿಯೊಳಗೆ ಮುಕ್ತಾಯವಾಗಲಿದೆ. ಬೆಂಗಳೂರಿನಿಂದ ನಿಡಘಟ್ಟದವರೆಗೆ ಜೂನ್ ಅಂತ್ಯಕ್ಕೆ ಸಂಚಾರಕ್ಕೆ ಲಭ್ಯವಾಗಲಿದೆ. ನಿಡಘಟ್ಟದಿಂದ ಮೈಸೂರು ತನಕ ದಸರಾ ಒಳಗೆ ಪೂರ್ಣಗೊಳ್ಳಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಮೈಸೂರು (ಏ.22): ಬೆಂಗಳೂರು- ಮೈಸೂರು (Bengaluru to Mysuru) ದಶಪಥ ಯೋಜನೆ ಕಾಲಮಿತಿಯೊಳಗೆ ಮುಕ್ತಾಯವಾಗಲಿದೆ. ಬೆಂಗಳೂರಿನಿಂದ ನಿಡಘಟ್ಟದವರೆಗೆ ಜೂನ್ ಅಂತ್ಯಕ್ಕೆ ಸಂಚಾರಕ್ಕೆ ಲಭ್ಯವಾಗಲಿದೆ. ನಿಡಘಟ್ಟದಿಂದ ಮೈಸೂರು ತನಕ ದಸರಾ (Dasara) ಒಳಗೆ ಪೂರ್ಣಗೊಳ್ಳಲಿದೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ತಿಳಿಸಿದರು. ನಗರದ ಜಲದರ್ಶಿನಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಶಪಥ ಯೋಜನೆಗೆ ಕೇಂದ್ರ ಸರ್ಕಾರವು . 8532 ಕೋಟಿ ಅನುದಾನ ನೀಡಿದೆ. ಇದರಲ್ಲಿ ರಾಜ್ಯ ಸರ್ಕಾರದ ಹಣ ಒಂದು ರೂಪಾಯಿ ಸಹ ಇಲ್ಲ ಎಂದರು.
ಕೊಲಂಬಿಯಾ ಏಷಿಯಾ ಆಸ್ಪತ್ರೆ ರಸ್ತೆ ಬಳಿ ಫ್ಲೈಓವರ್, ಒಂದು ಕಡೆ ಹೆಲಿಪ್ಯಾಡ್, 2 ಕಡೆಗಳಲ್ಲಿ ರೆಸ್ಟ್ ಏರಿಯಾ, ಹೋಟೆಲ್, ಕರಕುಶಲ ವಸ್ತುಗಳ ಮಾರಾಟ, 16 ಕಡೆಗಳಲ್ಲಿ ಎಂಟ್ರಿ ಮತ್ತು ಎಕ್ಸಿಟ್, 96 ಕಡೆ ಬಸ್ ಬೇ ಮತ್ತು ಬಸ್ ಶೆಲ್ಟರ್, 18 ಕಡೆಗಳಲ್ಲಿ ಪಾದಚಾರಿಗಳಿಗೆ ಪುಟ್‌ಪಾತ್ ನಿರ್ಮಿಸಬೇಕಿದೆ. ಇದಕ್ಕಾಗಿ . 1201 ಕೋಟಿ ಅನುದಾನ ಒದಗಿಸಲಾಗಿದೆ. ಇದಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಅವರು ಹೇಳಿದರು. ಮೈಸೂರು- ಕುಶಾಲನಗರ ನಾಲ್ಕು ಪಥದ ರಸ್ತೆಗೆ . 4 ಸಾವಿರ ಕೋಟಿ ಅನುದಾನ ಅಗತ್ಯವಿದೆ. ಪಶ್ಚಿಮ ವಾಹಿನಿಯಿಂದ ಪಿರಿಯಾಪಟ್ಟಣ, ಪಿರಿಯಾಪಟ್ಟಣದಿಂದ ಗುಡ್ಡೆಹೊಸೂರು, ಗುಡ್ಡೆಹೊಸೂರಿನಿಂದ ಕುಶಾಲನಗರ ತನಕ 122 ಕಿ.ಮೀ ತನಕ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
Karnataka Politics: ಮೋದಿ ಬರುವ ಮುಂಚೆ ಅದಾನಿ, ಅಂಬಾನಿ ಶ್ರೀಮಂತರಾಗಿರಲಿಲ್ಲವಾ?: ಪ್ರತಾಪ್ ಸಿಂಹ
ಗ್ಯಾಸ್ ಪೈಪ್‌ಲೈನ್ ಅಳವಡಿಕೆ: ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಬಗ್ಗೆ ಶಾಸಕರಾದ ತನ್ವೀರ್ ಸೇಠ್, ಜಿ.ಟಿ. ದೇವೇಗೌಡ, ಎಸ್.ಎ. ರಾಮದಾಸ್, ಎಲ್. ನಾಗೇಂದ್ರ ಸೇರಿದಂತೆ ಎಲ್ಲರಿಗೂ ಮನವರಿಕೆ ಮಾಡಿಕೊಡಲಾಗಿದ್ದು, ಅವರೆಲ್ಲರೂ ಈ ಕಾಮಗಾರಿಗೆ ಒಪ್ಪಿಗೆ ಸೂಚಿಸಿದ್ದಾರೆ. ಗ್ಯಾಸ್ ಪೈಪ್‌ಲೈನ್‌ಗೆ ಟ್ರೆಂಚ್ ಒಡೆದ 24 ಗಂಟೆ ಒಳಗೆ ರಸ್ತೆ ಕಾಮಗಾರಿ ಮುಗಿಸಲಾಗುವುದು. ಕೊಲಂಬಿಯಾ ಏಷಿಯಾ ಆಸ್ಪತ್ರೆಯಿಂದ ಬಂಡೀಪಾಳ್ಯದ ತನಕ 22 ಕಿ.ಮೀನಲ್ಲಿ ಆರು ಕಿ.ಮೀ ತನಕ ಮುಗಿದಿದೆ ಎಂದರು. ನಂಜನಗೂಡಿಗೆ ಪೈಪ್‌ಲೈನ್ ಅಳವಡಿಕೆ ಕಾರ್ಯ ನಡೆಯುತ್ತಿದೆ.
ಚಾಮರಾಜ ಕ್ಷೇತ್ರದಲ್ಲಿ ನೋಂದಣಿ ಶುರುವಾಗಿದ್ದು, 15 ಸಾವಿರ ಜನರು ಗ್ಯಾಸ್ ಪೈಪ್‌ಲೈನ್‌ಗಾಗಿ ನೋಂದಾಯಿಸಿದ್ದಾರೆ. ಪೈಪ್‌ಲೈನ್ ಅಳವಡಿಕೆಗೆ ನಗರಪಾಲಿಕೆ ವತಿಯಿಂದ ಒಪ್ಪಿಗೆ ಪಡೆಯಲಾಗುವುದು. ಎಲ್ಲವೂ ಅಂದುಕೊಂಡತೆ ಆದಲ್ಲಿ ಪ್ರಧಾನಿ ಮೋದಿ ಅವರು ಮೈಸೂರಿಗೆ ಭೇಟಿ ನೀಡುವಾಗ, ಅವರಿಂದ ಗ್ಯಾಸ್ ಪೈಪ್‌ಲೈನ್‌ಗೆ ಚಾಲನೆ ಕೊಡಿಸಲಾಗುವುದು ಎಂದು ಅವರು ಹೇಳಿದರು. ಗ್ರೇಟರ್ ಮೈಸೂರು ಮೋನೋ ಮತ್ತು ಮೆಟ್ರೋ ರೈಲು ಬರಬೇಕು ಅಂದರೆ ಜನಸಂಖ್ಯೆ ಪ್ರಮಾಣ ಹೆಚ್ಚಿರಬೇಕು. ಸ್ಯಾಟಲೈಟ್ ರೈಲು ನಿಲ್ದಾಣ ನಿರ್ಮಾಣ ಆಗಲಿದೆ. ಫೆರಿಪೆರಲ್ ಹೊರ ವರ್ತುಲ ರಸ್ತೆ, ಮೆಟ್ರೋ ರೈಲು ಯೋಜನೆ ಬರಬೇಕು.
ಒಳ್ಳೆಯ ಮೈಸೂರು ಮಾಡಲು ಚಿಂತನೆ ಮಾಡಬೇಕು ಹೊರತು ನಮ್ಮ ಕುಟುಂಬಕ್ಕೆ ಏನು ಮಾಡಬೇಕು ಎನ್ನುವ ಯೋಚನೆ ಬಿಡಬೇಕು ಎಂದರು. 20 ವರ್ಷಗಳ ಹಿಂದಕ್ಕೆ ಹೋಲಿಸಿದರೆ ಪುಣೆ ಮತ್ತು ಮೈಸೂರು ಸಮಾನ ಖ್ಯಾತಿಯನ್ನು ಹೊಂದಿತ್ತು. ಮುಂಬೈ ಮತ್ತು ಪುಣೆ ನಡುವೆ ನಿರ್ಮಿಸಿದ ಹೆದ್ದಾರಿ ಪುಣೆ ದಿಕ್ಕನ್ನೇ ಬದಲಿಸಿತು. ಹಾಗೆಯೇ ದಶಪಥ ರಸ್ತೆಯೂ ಮೈಸೂರಿನ ಅಭಿವೃದ್ಧಿ ಶರವೇಗದಲ್ಲಿ ನಡೆಯಲಿದೆ ಎಂದು ಅವರು ಹೇಳಿದರು. ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ, ಪ್ರಧಾನ ಕಾರ್ಯದರ್ಶಿಗಳಾದ ಎಚ್.ಜಿ. ಗಿರಿಧರ್, ವಿ. ಸೋಮಸುಂದರ್, ವಾಣೀಶ್‌ಕುಮಾರ್, ಸಹ ವಕ್ತಾರ ಡಾ. ವಸಂತಕುಮಾರ್ ಇದ್ದರು.
ಯೋಗ ದಿನಕ್ಕೆ ಪ್ರಧಾನಿ ಮೋದಿ ಬರುವ ಸಾಧ್ಯತೆ: ಸಂಸದ ಪ್ರತಾಪ್ ಸಿಂಹ
ರಾಜವಂಶಸ್ಥರ ಸಲಹೆ ಸ್ವೀಕಾರ: ದೇವರಾಜ ಮಾರುಕಟ್ಟೆಬಹಳ ಶಿಥಿಲವಾಗಿದ್ದು, ನೆಲಸಮ ಅಥವಾ ನವೀಕರಣ ಸಂಬಂಧಿಸಿದಂತೆ ರಾಜವಂಶಸ್ಥರ ಅಭಿಪ್ರಾಯ ಪಡೆಯುತ್ತೇವೆ. ಮೈಸೂರಿಗೆ ರಾಜವಂಶಸ್ಥರ ಕೊಡುಗೆ ಅಪಾರ. ರಾಜವಂಶಸ್ಥರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳದೇ ಸಚಿವರೊಂದಿಗೆ ತೆರಳಿಗೆ ರಾಜವಂಶಸ್ಥರೊಂದಿಗೆ ಸಮಾಲೋಚನೆ ನಡೆಸಿ, ಸಲಹೆಗಳನ್ನು ಪಡೆಯುವುದಾಗಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಹಾಗೆಯೇ, ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಹಾಗೂ ಮೈಸೂರು ರೈಲು ನಿಲ್ದಾಣಕ್ಕೆ ಚಾಮರಾಜ ಒಡೆಯರ್ ಹೆಸರನ್ನು ಇರಿಸಲು ತೀರ್ಮಾನಿಸಲಾಗುವುದು ಎಂದರು.
ಭಾರತದಲ್ಲಿ ಮಾತ್ರ ಹಣದುಬ್ಬರ ಏರಿಕೆ ಆಗುತ್ತಿಲ್ಲ. ಜಾಗತಿಕ ಮಟ್ಟದಲ್ಲಿ ಆಗಿರುವ ಕೆಲ ಅಹಿತಕರ ಘಟನೆಗಳಿಂದ ಹಣದುಬ್ಬರ ಏರಿಕೆಯಾಗಿದೆ. ನಮ್ಮ ನೆರೆ ಹೊರೆಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಸ್ಥಿತಿ ಉತ್ತಮವಾಗಿದೆ. ಉಕ್ರೇನ್- ರಷ್ಯಾ ನಡುವಿನ ಬಿಕ್ಕಟ್ಟು ಆದಷ್ಟುಬೇಗ ಅಂತ್ಯಗೊಂಡರೆ ಪರಿಸ್ಥಿತಿ ಸುಧಾರಿಸಲಿದೆ. ಎರಡು ದೇಶಗಳ ನಡುವಿನ ಯುದ್ಧದಿಂದಾಗಿ ಭಾರತದ ಮೇಲೆ ಪರಿಣಾಮ ಬೀರಿದೆ.
-ಪ್ರತಾಪ್ ಸಿಂಹ, ಸಂಸದ