
ಬೆಂಗಳೂರು (ಅ.21): ರಾಜಧಾನಿಯ ಹಲವು ಪ್ರದೇಶಗಳಲ್ಲಿ ಸ್ವಿಗ್ಗಿ, ಝೊಮ್ಯಾಟೋ ಸೇರಿ ಹಲವು ಕಂಪನಿಗಳ ಆಹಾರ ವಿತರಣಾ ಸಿಬ್ಬಂದಿ (ಫುಡ್ ಡೆಲಿವರಿ ಬಾಯ್ಸ್) ಯವರನ್ನೇ ಗುರಿಯಾಗಿಸಿಕೊಂಡು ರಾಬರಿ ನಡೆಸುತ್ತಿದ್ದ ನೇಪಾಳಿ ಮೂಲದ ನಾಲ್ವರ ಗ್ಯಾಂಗ್ ಅನ್ನು ಬೆಳ್ಳಂದೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಬಂಧನದಿಂದ ಬೆಳ್ಳಂದೂರು ಸೇರಿದಂತೆ ನಗರದ ಐದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣಗಳು ಬೆಳಕಿಗೆ ಬಂದಿವೆ.
ಬಂಧಿತ ಆರೋಪಿಗಳನ್ನು ಪಾರಸ್ ಸಿಂಗ್ (25), ಮುಕೇಶ್ ಸಾಯಿ (19), ಬಿಪಿನ್ ಕರ್ಕಿ (20) ಮತ್ತು ಸಮೀರ್ ಲೋಹಾರ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ನೇಪಾಳದಿಂದ ಬೆಂಗಳೂರಿಗೆ ಬಂದು ಇಲ್ಲಿನ ವಿವಿಧ ಪ್ರದೇಶಗಳಲ್ಲಿ ಸೆಕ್ಯುರಿಟಿ ಗಾರ್ಡ್ ಮತ್ತು ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದರು. ಇದರ ಜೊತೆಗೆ, ಸುಲಭವಾಗಿ ಹಣ ಗಳಿಸುವ ದುರಾಸೆಯಿಂದ, ಸಮಯ ಸಿಕ್ಕಾಗಲೆಲ್ಲಾ ಫುಡ್ ಡೆಲಿವರಿ ಬಾಯ್‌ಗಳನ್ನು ಟಾರ್ಗೆಟ್ ಮಾಡಿ ದರೋಡೆ ನಡೆಸುತ್ತಿದ್ದರು.
ಕಳೆದ ತಿಂಗಳು, ಸೆಪ್ಟೆಂಬರ್ 13ರ ರಾತ್ರಿ, ಆರೋಪಿಗಳು ಕಸವನಹಳ್ಳಿ ರಸ್ತೆಯಲ್ಲಿ ತಮ್ಮ ಕೈಚಳಕ ತೋರಿದ್ದರು. ಫುಡ್ ಡೆಲಿವರಿ ಬಾಯ್ ಸುರೇಶ್ ಎಂಬುವವರು ಆರ್ಡರ್ ಡೆಲಿವರಿಗೆ ಹೋಗುತ್ತಿದ್ದಾಗ, ಮೂರು ಬೈಕ್‌ಗಳಲ್ಲಿ ಬಂದ ಆರು ಮಂದಿ ದರೋಡೆಕೋರರು ಅವರನ್ನು ಅಡ್ಡಗಟ್ಟಿದ್ದರು. ಅವರು ಸುರೇಶ್‌ಗೆ ಹಲ್ಲೆ ಮಾಡಿ, ಅವರ ಮೊಬೈಲ್ ಮತ್ತು ನಗದನ್ನು ಕಸಿದುಕೊಂಡು ಪರಾರಿಯಾಗಿದ್ದರು. ಸುರೇಶ್ ಅವರು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ತನಿಖೆ ಆರಂಭಿಸಿದ ಬೆಳ್ಳಂದೂರು ಪೊಲೀಸರ ವಿಶೇಷ ತಂಡವು, ಸಿಸಿಟಿವಿ ದೃಶ್ಯಾವಳಿ ಮತ್ತು ಇತರೆ ಮಾಹಿತಿಗಳನ್ನು ಆಧರಿಸಿ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ, ಅವರು ಕೇವಲ ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ, ಬೆಂಗಳೂರಿನ ಹೆಬ್ಬಗೋಡಿ, ಪರಪ್ಪನ ಅಗ್ರಹಾರ, ಬಂಡೇಪಾಳ್ಯ ಮತ್ತು ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿಯೂ ಇದೇ ರೀತಿ ಫುಡ್ ಡೆಲಿವರಿ ಸಿಬ್ಬಂದಿಯನ್ನು ಟಾರ್ಗೆಟ್ ಮಾಡಿ ದರೋಡೆ ಕೃತ್ಯಗಳನ್ನು ಎಸಗಿರುವುದು ಬಯಲಾಗಿದೆ.
ಪೊಲೀಸರು ಬಂಧಿತರಿಂದ ಒಟ್ಟು 9 ಮೊಬೈಲ್ ಫೋನ್‌ಗಳು ಮತ್ತು ದರೋಡೆಗೆ ಬಳಸಿದ್ದ ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿನ್ನೂ ಇಬ್ಬರು ಸಹಚರರ ಸುಳಿವು ಸಿಕ್ಕಿದ್ದು, ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆಹಾರ ವಿತರಣಾ ಸಿಬ್ಬಂದಿಗಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಾಗ ಹೆಚ್ಚು ಜಾಗರೂಕರಾಗಿರುವಂತೆ ಪೊಲೀಸರು ಸೂಚಿಸಿದ್ದಾರೆ.