ಬೆಂಗಳೂರು ಉಪನಗರ ರೈಲಿನ ಹಂತ 2 ರಲ್ಲಿ 146 ಕಿ.ಮೀ. ವಿಸ್ತರಣೆಗೆ ಯೋಜನೆ ರೂಪಿಸಲಾಗುತ್ತಿದೆ. ಪ್ರಸ್ತಾವಿತ ಸರ್ಕ್ಯುಲರ್ ರೈಲು ಜಾಲದೊಂದಿಗೆ ಸಂಯೋಜನೆಗೊಳಿಸುವ ಕಾರ್ಯಸಾಧ್ಯತೆಯ ಅಧ್ಯಯನ ನಡೆಸಲು ಕೇಂದ್ರದ ಅನುಮತಿ ಕೋರಲಾಗಿದೆ.
ಬೆಂಗಳೂರು (ಡಿ.31): ಬೆಂಗಳೂರು ಉಪನಗರ ರೈಲಿನ ಹಂತ 2 ಯೋಜನೆಯು 146 ಕಿ.ಮೀ.ಗಳನ್ನು ಹೊಂದಿದ್ದು, ಮತ್ತು ಪ್ರಸ್ತಾವಿತ ಸರ್ಕ್ಯುಲರ್ ರೈಲು ಜಾಲದೊಂದಿಗೆ ಸಂಯೋಜಿಸುವ ಪ್ಲ್ಯಾನ್ ಮಾಡಲಾಗುತ್ತಿದೆ. ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಕರ್ನಾಟಕ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ (ಕೆ-ರೈಡ್) ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ (18 ಕಿಮೀ), ಚಿಕ್ಕಬಾಣಾವರದಿಂದ ಕುಣಿಗಲ್ (50 ಕಿಮೀ), ಚಿಕ್ಕಬಾಣಾವರದಿಂದ ದಾಬಸ್‌ಪೇಟೆ (36ಕಿಮೀ), ಕೆಂಗೇರಿಯಿಂದ ಹೆಜ್ಜಾಲ (11 ಕಿ.ಮೀ), ಹೀಲಲಿಗೆ ಆನೇಕಲ್ ರಸ್ತೆ (11 ಕಿಮೀ), ಮತ್ತು ರಾಜಾನುಕುಂಟೆಯಿಂದ ಓಡೇರಹಳ್ಳಿ (20 ಕಿಮೀ)ವರೆಗೆ 146 ಕಿ.ಮೀ ವಿಸ್ತರಣೆಗೆ ಪ್ಲ್ಯಾನ್ ಮಾಡಿದೆ.
ಚಾಲ್ತಿಯಲ್ಲಿರುವ ಉಪನಗರ ರೈಲು ಯೋಜನೆಯು ಒಟ್ಟು 148 ಕಿಮೀ ಉದ್ದದ ನಾಲ್ಕು ಕಾರಿಡಾರ್‌ಗಳನ್ನು ಒಳಗೊಂಡಿದೆ. ಕೆಎಸ್‌ಆರ್ ಬೆಂಗಳೂರು ನಗರ, ಬೆಂಗಳೂರು ವಿಮಾನ ನಿಲ್ದಾಣ ಮತ್ತು ದೇವನಹಳ್ಳಿಯನ್ನು ಸಂಪರ್ಕಿಸುವ 41.4 ಕಿಮೀ ಸಂಪಿಗೆ ಲೈನ್, ಬೆನ್ನಿಗಾನಹಳ್ಳಿ ಮತ್ತು ಚಿಕ್ಕಬಾಣಾವರವನ್ನು ಸಂಪರ್ಕಿಸುವ 25 ಕಿಮೀ ಮಲ್ಲಿಗೆ ಮಾರ್ಗ, ಕೆಂಗೇರಿ ಮತ್ತು ವೈಟ್‌ಫೀಲ್ಡ್ ನಡುವೆ 35.5 ಕಿಮೀ ಪಾರಿಜಾತ ಮಾರ್ಗ ಮತ್ತು ಹೀಲಲಿಗೆ ಮತ್ತು ರಾಜಾನುಕುಂಟೆಗೆ ಸಂಪರ್ಕಿಸುವ 46.25 ಕಿಮೀ ಮಾರ್ಗಗಳು ಇದರಲ್ಲಿ ಸೇರಿವೆ.
ಇನ್ನೊಂದೆಡೆ, ಕೇಂದ್ರ ರೈಲ್ವೆ ಸಚಿವಾಲಯವು ಬೆಂಗಳೂರು ನಗರದ ಸುತ್ತಲೂ 287 ಕಿಮೀ ವೃತ್ತಾಕಾರದ ರೈಲು ಜಾಲವನ್ನು ಪ್ರಸ್ತಾಪಿಸಿದೆ, ಇದು ನಿಡವಂದ-ದೊಡ್ಡಬಳ್ಳಾಪುರ (40.9 ಕಿಮೀ), ದೊಡ್ಡಬಳ್ಳಾಪುರ-ದೇವನಹಳ್ಳಿ (28.5 ಕಿಮೀ), ದೇವನಹಳ್ಳಿ-ಮಾಲೂರು (46.5 ಕಿಮೀ), ಮಾಲೂರು- ಹೀಲಳಿಗೆ (52 ಕಿಮೀ) ಮುಂತಾದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಹೆಜ್ಜಾಲ-ಸೋಲೂರು (43.5 ಕಿಮೀ), ಸೋಲೂರು-ನಿಡವಂದ (34.2 ಕಿಮೀ), ಮತ್ತು ಹೆಜ್ಜಾಲ-ಹೀಲಳಿಗೆ (42 ಕಿಮೀ) ಸರ್ಕ್ಯುಲರ್ ರೈಲಿಗೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಸಬರ್ಬನ್ ರೈಲನ್ನು, ಉದ್ದೇಶಿತ ಸರ್ಕ್ಯುಲರ್ ರೈಲು ಜಾಲದೊಂದಿಗೆ ಸಂಪರ್ಕಿಸಿ ಏಕೀಕರಣ ಸಾಧಿಸುವ ಕಾರ್ಯಸಾಧ್ಯತೆಯ ಅಧ್ಯಯನ ನಡೆಸಲು ನಾವು ಕೇಂದ್ರ ಕೇಂದ್ರ ರೈಲ್ವೆ ಸಚಿವಾಲಯದ ಅನುಮೋದನೆಯನ್ನು ಕೋರಿದ್ದೇವೆ' ಎಂದು ಕೆ-ರೈಡ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹಿಂದೆ ಕೆ-ರೈಡ್, ದೇವನಹಳ್ಳಿ-ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ-ಕೋಲಾರ, ಚಿಕ್ಕಬಾಣಾವರ-ತುಮಕೂರು, ಚಿಕ್ಕಬಾಣಾವರ-ಮಾಗಡಿ, ಕೆಂಗೇರಿ-ಮೈಸೂರು, ವೈಟ್‌ಫೀಲ್ಡ್-ಬಂಗಾರಪೇಟೆ, ಹೀಲಲಿಗೆ-ಹೊಸೂರು, ಮತ್ತು ರಾಜಾನುಕುಂಟೆ-ಗೌರಿಬಿದನೂರು ಸೇರಿದಂತೆ ಹತ್ತಿರದ ಪಟ್ಟಣಗಳು ಮತ್ತು ನಗರಗಳೊಂದಿಗೆ ಬೆಂಗಳೂರನ್ನು ಸಂಪರ್ಕಿಸಲು ಉಪನಗರ ರೈಲು ಜಾಲದ 452 ಕಿಮೀ ವಿಸ್ತರಣೆಯನ್ನು ಪ್ರಸ್ತಾಪಿಸಿತ್ತು. ಆದರೆ, ಈ ಪ್ರಸ್ತಾಪವನ್ನು ಕಳೆದ ವರ್ಷ ನೈಋತ್ಯ ರೈಲ್ವೆ (SWR) ತಿರಸ್ಕರಿಸಿತು.
ಬೆಂಗಳೂರು ಉಪನಗರ ರೈಲ್ವೆ ಯೋಜನೆ: ವರ್ತುಲ ರೈಲ್ವೆಗಾಗಿ ಉಪನಗರ ರೈಲಿಗೆ ಕೊಕ್ಕೆ?
ಮಾರ್ಚ್ 2023 ರಲ್ಲಿ, ರೈಲ್ವೆ ಮಂಡಳಿಯು ಉಪನಗರ ರೈಲು ಯೋಜನೆಗಳಿಗೆ ಯಾವುದೇ ಸಮೀಕ್ಷೆಗಳನ್ನು ಪ್ರಾರಂಭಿಸಲು ವಲಯ ರೈಲ್ವೆಗಳಿಂದ ಪೂರ್ವಾನುಮತಿ ಅಗತ್ಯವಿದೆ ಎಂದು ಸ್ಪಷ್ಟಪಡಿಸಿತು.
Bengaluru: ವೈಟ್‌ಫೀಲ್ಡ್-ಕೆಂಗೇರಿ ನಡುವಿನ 'ಪಾರಿಜಾತ' ಸಬರ್ಬನ್ ರೈಲು ಪ್ರಾಜೆಕ್ಟ್ ಬಹುತೇಕ ರದ್ದು!
“ಸಬರ್ಬನ್ ರೈಲನ್ನು ವೃತ್ತಾಕಾರದ ರೈಲ್ವೆಯೊಂದಿಗೆ ಸಂಪರ್ಕಿಸಲು ಇದು ಸಕಾರಾತ್ಮಕ ಕ್ರಮವಾಗಿದೆ. ಇದು ಸ್ಯಾಟಲೈಟ್ ಟೌನ್‌ಗಳ ನಿವಾಸಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಬೆಂಗಳೂರಿನ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಾರ್ಯಸಾಧ್ಯತೆಯ ಅಧ್ಯಯನವು ಪೂರ್ಣಗೊಂಡ ನಂತರ, K-RIDE ವಿವರವಾದ ಯೋಜನಾ ವರದಿಯನ್ನು (DPR) ಸಿದ್ಧಪಡಿಸುವ ಅಗತ್ಯವಿದೆ, ಅದರ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುಮೋದನೆಯ ಮೇಲೆ ಕೆಲಸವನ್ನು ಪ್ರಾರಂಭಿಸಬಹುದು' ಎಂದು ರೈಲ್ವೆ ಉತ್ಸಾಹಿ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.