
ಬೆಂಗಳೂರು (ಜು.22): ಬೆಂಗಳೂರಿನ ಶಿವಾಜಿನಗರದಲ್ಲಿ ಪಾದಚಾರಿ ಮಾರ್ಗ ತೆರವು (Footpath Encroachment Clearance) ಮಾಡುವ ವೇಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಧಿಕಾರಿಗಳ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಅಧಿಕಾರಿಗಳ ಮೇಲೆ ಪೆಪ್ಪರ್ ಸ್ಪ್ರೇ (Pepper Spray) ಸಿಂಪಡಿಸಿ, ಹಿಗ್ಗಾಮುಗ್ಗಾ ಥಳಿಸಿದ ಘಟನೆಗೆ ಅಧಿಕಾರಿಗಳು ಅನುಸರಿಸಬೇಕಾದ ಎಸ್‌ಒಪಿ (Standard Operating Procedure - SOP) ಉಲ್ಲಂಘನೆಯೇ ಪ್ರಮುಖ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.
ಯಾವುದೇ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವ ಮೊದಲು ಜಿಬಿಎ ಅಥವಾ ಪಾಲಿಕೆ ಅಧಿಕಾರಿಗಳು ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆದರೆ, ಶಿವಾಜಿನಗರದ (Shivajinagar) ಈ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಈ ಕೆಳಗಿನ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಆರೋಪ ಕೇಳಿಬಂದಿದೆ:
ಪೊಲೀಸರಿಗೆ ಮಾಹಿತಿ ನೀಡಿಲ್ಲ: ಪ್ರತಿ ಏರಿಯಾದಲ್ಲಿ ಕಾರ್ಯಾಚರಣೆ ನಡೆಸುವ ಮೊದಲು ಸ್ಥಳೀಯ ಪೊಲೀಸರಿಗೆ ಲಿಖಿತ ರೂಪದಲ್ಲಿ (Written Intimation) ಮಾಹಿತಿ ನೀಡುವುದು ಕಡ್ಡಾಯ. ಆದರೆ, ಮಂಗಳವಾರದ ಕಾರ್ಯಾಚರಣೆಗೂ ಮುನ್ನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಗೆ ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿರಲಿಲ್ಲ.
ಸಮನ್ವಯತೆಯ ಕೊರತೆ (Lack of Coordination): ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವಾಗ ಬೆಸ್ಕಾಂ (BESCOM), ಸಂಚಾರಿ ಪೊಲೀಸರು ಮತ್ತು ಕಾನೂನು ಸುವ್ಯವಸ್ಥೆ ಪೊಲೀಸರ ಜೊತೆ ಸಮನ್ವಯತೆ ಸಾಧಿಸಬೇಕಿತ್ತು. ಆದರೆ ಅಧಿಕಾರಿಗಳು ಏಕಾಏಕಿ ತೆರವಿಗೆ ಮುಂದಾಗಿದ್ದು ಪರಿಸ್ಥಿತಿ ಕೈಮೀರಲು ಕಾರಣವಾಯಿತು.
ಈ ಬಗ್ಗೆ ಸ್ವತಃ ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ (Commissioner Jagadish) ಅವರು ಲಿಖಿತ ಮಾಹಿತಿ ನೀಡದ ಅಧಿಕಾರಿಗಳ ಲೋಪವನ್ನು ಒಪ್ಪಿಕೊಂಡಿದ್ದಾರೆ.
ಪಾಲನೆಯಾಗದ ಎಸ್‌ಒಪಿ ನಿಯಮಗಳ ಪಟ್ಟಿ ಇಲ್ಲಿದೆ:
ಒಬ್ಬ ಇಂಜಿನಿಯರ್ ಉಸ್ತುವಾರಿಯಲ್ಲಿ ನಡೆಯಬೇಕಿದ್ದ ಈ ಕಾರ್ಯಾಚರಣೆಯಲ್ಲಿ ಇಷ್ಟೆಲ್ಲಾ ಲೋಪಗಳು ನಡೆದಿರುವುದು ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಮಾಡಿದೆ. ಸರಿಯಾದ ಮುನ್ನೆಚ್ಚರಿಕೆ ಮತ್ತು ಪೊಲೀಸ್ ರಕ್ಷಣೆ ಇಲ್ಲದೆ ಕಾರ್ಯಾಚರಣೆಗೆ ಇಳಿದಿದ್ದೇ ಈ ಮಾರಣಾಂತಿಕ ಹಲ್ಲೆಗೆ ಪ್ರಚೋದನೆ ನೀಡಿದಂತಾಗಿದೆ. ಮುಂದಿನ ದಿನಗಳಲ್ಲಾದರೂ ಜಿಬಿಎ (GBA) ಅಧಿಕಾರಿಗಳು ಎಸ್‌ಒಪಿ ಪಾಲಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.