
ಮೈಸೂರು: ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ನಾವು ಸಿನಿಮಾಗಳು, ದೇವರ ಚಿತ್ರಗಳು ಹಾಗೂ ಮೊಬೈಲ್ ಕ್ಯಾಮೆರಾಗಳು 3D ರೂಪಕ್ಕೆ ಬದಲಾಗುತ್ತಿರುವುದನ್ನು ನೋಡುತ್ತಿದ್ದೇವೆ. ಆದರೆ, ಇಂದಿಗೆ ಸುಮಾರು ಒಂದು ಸಾವಿರ ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು '3D' ತಂತ್ರಜ್ಞಾನವನ್ನು ಹೋಲುವ ಅದ್ಭುತ ಶಿಲ್ಪಕಲೆಯನ್ನು ಸೃಷ್ಟಿಸಿದ್ದರು ಎಂದರೆ ಯಾರಾದರೂ ಮೂಗಿನ ಮೇಲೆ ಬೆರಳಿಡಬೇಕಾಗುತ್ತದೆ! ಹೌದು, ಇದು ಅಚ್ಚರಿಯಾದರೂ ಐತಿಹಾಸಿಕ ಸತ್ಯ. ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಯ (ASI) ಅಧಿಕಾರಿಗಳನ್ನೇ ಬೆರಗುಗೊಳಿಸುವಂತಹ ಅಪರೂಪದ 3ಡಿ ಸ್ವರೂಪದ ವೀರಗಲ್ಲೊಂದು ಈಗ ಕರ್ನಾಟಕದಲ್ಲಿ ಪತ್ತೆಯಾಗಿದೆ.
ವಿಶ್ವದ ಇಂದಿನ ಹಲವು ಆಧುನಿಕ ಆವಿಷ್ಕಾರಗಳಿಗೆ ಜ್ಞಾನಭೂಮಿ ಭಾರತವೇ ಮೂಲ ಎಂಬ ವಾದಕ್ಕೆ ಪುಷ್ಟಿ ನೀಡುವಂತೆ, ಮಂಡ್ಯ ಜಿಲ್ಲೆಯಲ್ಲಿ ಈ ವಿಶಿಷ್ಟ ವೀರಗಲ್ಲು ಪತ್ತೆಯಾಗಿರುವುದು ಇತಿಹಾಸ ಸಂಶೋಧಕರಲ್ಲಿ ಕುತೂಹಲ ಮೂಡಿಸಿದೆ.
ಮಂಡ್ಯ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರತೀಯ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಇತ್ತೀಚೆಗೆ ಕೈಗೊಂಡಿದ್ದ ಉತ್ಕನನ ಕಾರ್ಯದ ವೇಳೆ ಮಳವಳ್ಳಿ ತಾಲೂಕಿನ 'ಕಲ್ಕುಣಿ' ಗ್ರಾಮದಲ್ಲಿ ಈ ವಿಶಿಷ್ಟ ವೀರಗಲ್ಲು ಬೆಳಕಿಗೆ ಬಂದಿದೆ. ಕಲ್ಲಿನ ಮೂರು ದಿಕ್ಕುಗಳಿಂದಲೂ ವಿಭಿನ್ನವಾಗಿ ಹಾಗೂ ಜೀವಂತವಾಗಿ ವೀಕ್ಷಿಸಬಹುದಾದ ಇಂತಹ 3D ಮಾದರಿಯ ವೀರಗಲ್ಲು ದೊರೆತಿರುವುದು ಕರ್ನಾಟಕದ ಇತಿಹಾಸದಲ್ಲೇ ಇದೇ ಮೊಟ್ಟಮೊದಲ ಬಾರಿ ಎಂದು ಇತಿಹಾಸಕಾರರು ಗುರುತಿಸಿದ್ದಾರೆ.
ಯುದ್ಧ ಭೂಮಿಯಲ್ಲಿ ವೀರಾವೇಶದಿಂದ ಹೋರಾಡಿ ವೀರಮರಣ ಅಪ್ಪಿದ ಯೋಧನ ನೆನಪಿಗಾಗಿ ಕೆತ್ತಲಾದ ಈ ವೀರಗಲ್ಲನ್ನು ಪ್ರಮುಖವಾಗಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.
ವೀರಗಲ್ಲಿನ ಮುಂಭಾಗದಲ್ಲಿ ಶತ್ರುಗಳ ವಿರುದ್ಧ ಹೋರಾಡುವ ವೀರನ ಧೀರ ಚಿತ್ರಣವನ್ನು ಅತ್ಯಂತ ಆಕರ್ಷಕವಾಗಿ ಕೆತ್ತಲಾಗಿದೆ. ಈ ಕಲ್ಲಿನ ಎಡ ಮತ್ತು ಬಲ ಭಾಗಗಳಿಂದ ಗಮನಿಸಿದಾಗ ಸುಂದರವಾದ ರಥದ ಚಿತ್ರಣ, ಅದರ ಚಕ್ರಗಳು ಹಾಗೂ ರಥಕ್ಕೆ ಕಟ್ಟಲಾದ ಎರಡು ಪ್ರಾಣಿಗಳ (ಕುದುರೆ ಅಥವಾ ಎತ್ತುಗಳು) ಕಲಾಕೃತಿಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಕಲ್ಲಿನ ಯಾವುದೇ ಕೋನದಿಂದ ನೋಡಿದರೂ ಕಲೆಯು ಜೀವಂತವಾಗಿ ಕಣ್ಣಿಗೆ ಕಟ್ಟುವಂತೆ ಕೆತ್ತಿರುವುದು ಅಂದಿನ ಶಿಲ್ಪಿಗಳ ಅದ್ಭುತ ದೂರದೃಷ್ಟಿ ಮತ್ತು ವಾಸ್ತುಶಿಲ್ಪದ ನೈಪುಣ್ಯತೆಗೆ ಸಾಕ್ಷಿಯಾಗಿದೆ.
ಪ್ರಾಥಮಿಕ ಪರಿಶೀಲನೆಗಳ ಪ್ರಕಾರ, ಈ ಅಪರೂಪದ 3D ವೀರಗಲ್ಲು ಕಲೆ ಮತ್ತು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಹೊಯ್ಸಳರ ಕಾಲಘಟ್ಟಕ್ಕೆ ಸೇರಿರಬಹುದು ಎಂದು ಇತಿಹಾಸಕಾರರು ಅಂದಾಜಿಸಿದ್ದಾರೆ. ಪ್ರಸ್ತುತ, ಈ ವೀರಗಲ್ಲಿನಲ್ಲಿ ಚಿತ್ರಿಸಲಾಗಿರುವ ಆ ಅಪ್ರತಿಮ ವೀರ ಯಾರು? ಆತ ಯಾವ ಯುದ್ಧದಲ್ಲಿ ಭಾಗವಹಿಸಿದ್ದ? ಎಂಬಿತ್ಯಾದಿ ಹೂರಣಗಳನ್ನು ಭೇದಿಸಲು ಪುರಾತತ್ತ್ವ ಇಲಾಖೆಯ ತಜ್ಞರು ತೀವ್ರ ಅಧ್ಯಯನದಲ್ಲಿ ತೊಡಗಿದ್ದಾರೆ.
ಸಾಮಾನ್ಯವಾಗಿ ಇತಿಹಾಸ ಸಂಶೋಧಕರು ಮತ್ತು ವಿದ್ಯಾರ್ಥಿಗಳು ಉತ್ಕನನ ನಡೆಸಿದಾಗ ಹಳೆಯ ಶಾಸನಗಳು ಅಥವಾ ಸಾಮಾನ್ಯ ವೀರಗಲ್ಲುಗಳು ಪತ್ತೆಯಾಗುವುದು ಸಹಜ. ಆದರೆ, ಸಾವಿರ ವರ್ಷಗಳ ಹಿಂದೆಯೇ ತಾಂತ್ರಿಕ ಚಿಂತನೆಯೊಂದಿಗೆ ಮೂರು ಆಯಾಮಗಳಲ್ಲಿ (3-Dimensions) ಕೆತ್ತಲಾದ ಈ ವೀರಗಲ್ಲು ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿ.ನರಸೀಪುರದ ಅಗಸ್ತ್ಯೇಶ್ವರ ದೇವಾಲಯದಲ್ಲಿರುವ ಪಿಟೀಲು ನುಡಿಸುವ ಕಲಾವಿದೆಯ ಶಿಲ್ಪವು ಜಗತ್ತಿಗೆ 'ಪಿಟೀಲು ಭಾರತದ ತಂತಿವಾದ್ಯ' ಎಂಬುದನ್ನು ಸಾಬೀತುಪಡಿಸಿದಂತೆ, ಇಂದಿನ ಜಾಗತಿಕ 3D ಕಲ್ಪನೆಗೆ ಭಾರತವೇ ಜನಕ ಎಂಬುದಕ್ಕೆ ಕಲ್ಕುಣಿಯ ಈ ಶಿಲ್ಪವು ಬಲವಾದ ಸಾಕ್ಷಿ ಒದಗಿಸಿದಂತಿದೆ
"ನನ್ನ ಇಷ್ಟು ವರ್ಷಗಳ ಸುದೀರ್ಘ ಸಂಶೋಧನಾ ಇತಿಹಾಸದಲ್ಲಿ ಕರ್ನಾಟಕದಲ್ಲಿ ಇಂತಹ 3D ಮಾದರಿಯ ವೀರಗಲ್ಲು ಪತ್ತೆಯಾಗಿರುವುದು ಇದೇ ಮೊದಲು. ಸದ್ಯ ಈ ಅಪರೂಪದ ಐತಿಹಾಸಿಕ ಶಿಲ್ಪದ ರಾಸಾಯನಿಕ ಸಂರಕ್ಷಣೆ ಮತ್ತು ದಾಖಲೀಕರಣ ಕಾರ್ಯ ಪ್ರಗತಿಯಲ್ಲಿದೆ."
- ಡಾ. ಆರ್.ಎನ್. ಕುಮಾರನ್, ಮುಖ್ಯ ಸರ್ವೇಕ್ಷಣಾಧಿಕಾರಿ, ಭಾರತೀಯ ಸರ್ವೇಕ್ಷಣಾ ಇಲಾಖೆ (ASI), ಮೈಸೂರು ವೃತ್ತ.