ಬೆಂಗಳೂರಿಗರೆ ಎಚ್ಚರ : ಇಲ್ಲಿನ ತರಕಾರಿಗಳು ಸೇಫ್ ಅಲ್ಲ..!

Kannadaprabha News   | Kannada Prabha
Published : Feb 24, 2026, 09:07 AM IST
vegetables

ಸಾರಾಂಶ

ಬೆಂಗಳೂರು ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ತರಕಾರಿಗಳಲ್ಲಿ ಅಪಾಯಕಾರಿ ಭಾರಿ ಲೋಹವಾಗಿರುವ ಸೀಸದ ಅಂಶ ಮತ್ತು ಕ್ರಿಮಿನಾಶಕಗಳ ಅವಶೇಷಗಳು ಕಂಡು ಬಂದಿದ್ದು, ಇವುಗಳನ್ನು ಸೇವಿಸಿದರೆ ಕಿಡ್ನಿ ಹಾಗೂ ಮಿದುಳು ಕಾಯಿಲೆ ಬರಲಿವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಬೆಂಗಳೂರು : ಬೆಂಗಳೂರು ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ತರಕಾರಿಗಳಲ್ಲಿ ಅಪಾಯಕಾರಿ ಭಾರಿ ಲೋಹವಾಗಿರುವ ಸೀಸದ ಅಂಶ ಮತ್ತು ಕ್ರಿಮಿನಾಶಕಗಳ ಅವಶೇಷಗಳು ಕಂಡು ಬಂದಿದ್ದು, ಇವುಗಳನ್ನು ಸೇವಿಸಿದರೆ ಕಿಡ್ನಿ ಹಾಗೂ ಮಿದುಳು ಕಾಯಿಲೆ ಬರಲಿವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ನಗರದ ಅನೇಕ ತರಕಾರಿಗಳಲ್ಲಿ ಅಪಾಯಕಾರಿ ಅಂಶಗಳಿರುವ ಬಗ್ಗೆ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಎನ್‌ಜಿಟಿ ನಿರ್ದೇಶನದಂತೆ ತರಕಾರಿಗಳ ಪರೀಕ್ಷೆ ನಡೆಸಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಐವರು ಸದಸ್ಯರ ಸಮಿತಿಯನ್ನು ರಚಿಸಿತ್ತು.

ಈ ಸಮಿತಿಯ ಸದಸ್ಯರು ಬೆಂಗಳೂರು ನಗರ, ನೆಲಮಂಗಲ, ಚಿಕ್ಕಬಳ್ಳಾಪುರದ ವಿವಿಧ ಎಪಿಎಂಸಿಗಳು, ಹಾಪ್‌ಕಾಮ್ಸ್‌ಗಳು, ತರಕಾರಿ ಬೆಳೆಯುವ ಪ್ರದೇಶಗಳಿಂದ 72 ಮಾದರಿಯ ತರಕಾರಿಗಳನ್ನು ಸಂಗ್ರಹಿಸಿದ್ದರು. ಪರೀಕ್ಷೆಯ ಭಾಗವಾಗಿ ಹೊಲಗಳಲ್ಲಿನ ಮಣ್ಣು ಮತ್ತು ಬೆಳೆಗಳಿಗೆ ಬಳಸುವ ಸಂಸ್ಕರಿಸಿದ ನೀರು, ಅಂತರ್ಜಲ ಕೂಡ ಸಂಗ್ರಹಿಸಿ ಎಫ್‌ಎಸ್‌ಎಸ್‌ಎಐ ಅನುಮೋದಿತ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲಾಗಿದೆ.

ಈ ವೇಳೆ ಬದನೆಕಾಯಿ, ಸೋರೆಕಾಯಿ ಸೇರಿದಂತೆ ಅನೇಕ ತರಕಾರಿಗಳಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ನಿಗದಿಪಡಿಸಿದ ಮಾನದಂಡಗಳನ್ನು ಮೀರಿ ಹಾನಿಕಾರಕ ಭಾರ ಲೋಹಗಳು ಪತ್ತೆಯಾಗಿವೆ.

72 ಮಾದರಿಗಳ ಪೈಕಿ 53 ಮಾದರಿಗಳನ್ನು ರಾಜಾಜಿನಗರ, ನೆಲಮಂಗಲ, ಕೋಲಾರ ಮಾರುಕಟ್ಟೆಗಳಿಂದ ಉಳಿದ ಮಾದರಿಯನ್ನು ನೆಲಮಂಗಲ, ಕೋಲಾರ ಮತ್ತು ಚಿಕ್ಕಬಳ್ಳಾಪುರದ ಹೊಲಗಳಿಂದ ಸಂಗ್ರಹಿಸಲಾಗಿತ್ತು. 72 ಮಾದರಿಗಳಲ್ಲಿ 19ರಲ್ಲಿ ನಿಗದಿಗಿಂತ ಹೆಚ್ಚು ಸೀಸದ ಅಂಶ ಕಂಡು ಬಂದಿದೆ.

ಸಾವಯವ ತರಕಾರಿ ಎಂದು ಮಾರಾಟ ಮಾಡಲಾಗುತ್ತಿದ್ದ 1 ಕೆ.ಜಿ ಬದನೆಕಾಯಿಯಲ್ಲಿ 1.953 ಎಂ.ಜಿ ಸೀಸ ಕಂಡು ಬಂದಿದೆ. ಇದು ಎಫ್‌ಎಸ್‌ಎಸ್‌ಎಐ ನಿಗದಿಪಡಿಸಿದ್ದಕ್ಕಿಂತ 20 ಪಟ್ಟು ಅಧಿಕ. ತೊಂಡೆಕಾಯಿಯಲ್ಲಿ 18 ಪಟ್ಟು, ಬೀನ್ಸ್‌ನಲ್ಲಿ 9 ಪಟ್ಟು ಸೀಸ ಕಂಡು ಬಂದಿದೆ. ಹಸಿರೆಲೆಗಳು ಹಾಗೂ ಕ್ಯಾಬೇಜ್‌ನಲ್ಲಿ ನಿಗದಿಪಡಿಸಿದ್ದಕ್ಕಿಂತ 5 ಪಟ್ಟು ಹೆಚ್ಚು ಸೀಸ, ಸೌತೆಕಾಯಿ, ದಪ್ಪ ಮೆಣಸಿನಕಾಯಿ, ಹಾಗಲಕಾಯಿ, ಬೀಟ್‌ರೂಟ್, ಬಜ್ಜಿ ಮೆಣಸಿನಕಾಯಿಯಲ್ಲೂ ಕೂಡ ಎಫ್‌ಎಸ್‌ಎಸ್‌ಎಐ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಸೀಸದ ಅಂಶ ಕಂಡು ಬಂದಿದೆ.

ಕ್ರಿಮಿನಾಶಕ ಪತ್ತೆ: ಕಿಡ್ನಿಗೆ ಅಪಾಯಕಾರಿ

ಬೇರೆ ಬೇರೆ ಮಾದರಿಯ 10 ತರಕಾರಿ ಮಾದರಿಗಳಲ್ಲಿ ಕ್ರಿಮಿನಾಶಕ ಅವಶೇಷಗಳು ಕಂಡು ಬಂದಿವೆ. ಉಳಿದ 60 ಮಾದರಿಗಳಲ್ಲಿ ನಿಗದಿಪಡಿಸಿದ್ದಕ್ಕಿಂತ ಕಡಿಮೆ ಇದೆ. ತರಕಾರಿಗಳಲ್ಲಿ ಕಾಣಬರುವ ಸೀಸದ ಅಂಶದಿಂದ ಮನುಷ್ಯರಲ್ಲಿ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ. ಕಿಡ್ನಿ ವೈಫಲ್ಯ ಸೇರಿದಂತೆ ಇನ್ನಿತರ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದು ಜಾಗತಿಕ ಆರೋಗ್ಯ ಸಂಸ್ಥೆಗಳು ಹೇಳಿವೆ.

ಮಣ್ಣು ಕೂಡ ಕಲುಷಿತ

ಸಮಿತಿಯು ಕೋಲಾರ, ಚಿಕ್ಕಬಳ್ಳಾಪುರ ಮತ್ತು ನೆಲಮಂಗಲದಲ್ಲಿನ ಹೊಲಗಳಿಂದ 23 ಮಾದರಿ ಮಣ್ಣು ಸಂಗ್ರಹಿಸಿ ಪರೀಕ್ಷೆ ನಡೆಸಿದ್ದು, ಅದು ಕೂಡ ಕಲುಷಿತಗೊಂಡಿದೆ ಎಂದು ವರದಿ ತಿಳಿಸಿದೆ. ತರಕಾರಿಗಳಲ್ಲಿ ಕಂಡು ಬಂದಿರುವ ಸೀಸ ಮತ್ತು ಕ್ರಿಮಿನಾಶಕ ಅವಶೇಷಗಳ ಕುರಿತು ಎಚ್ಚರಿಕೆ ವಹಿಸಬೇಕು. ನಿಯಮಿತವಾಗಿ ತರಕಾರಿಗಳ ಪರೀಕ್ಷೆ ಮಾಡುತ್ತಿರಬೇಕು. ಅಪಾಯಕಾರಿ ಅಂಶಗಳು ತರಕಾರಿಗಳಲ್ಲಿ ಸೇರ್ಪಡೆಗೊಳ್ಳದಂತೆ ಕೈಗೊಳ್ಳಬೇಕಾದ ಕ್ರಮಗಳನ್ನು ಅನುಸರಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

PREV
Read more Articles on
click me!

Recommended Stories

Shivamogga: ಬೆಳಗ್ಗೆ ದೇವರಿಗೆ ಕೈ ಮುಗಿದು ಹೋದವನು ಹಿಂತಿರುಗಲಿಲ್ಲ: ಸಂಕೇತ್ ಪೋಷಕರ ಕಣ್ಣೀರು
ಬೆಂಗಳೂರಿನ 142 ಕೆರೆಗಳ ನೀರು ಕುಡಿಯಲು ಯೋಗ್ಯವಲ್ಲ : ಮಾಲಿನ್ಯ ನಿಯಂತ್ರಣ ಮಂಡಳಿ ವರದಿ