ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮಳೆ ಆರ್ಭಟ ಶುರುವಾಗಿದ್ದು, ಕಚೇರಿಗಳಿಗೆ ಕೆಲಸಕ್ಕೆ ಹೊರಟ ಸಾರ್ವಜನಿಕರು ಮಳೆಯಿಂದ ಪರದಾಡುವಂತಾಯಿತು.
ಬೆಂಗಳೂರು (ಜೂ.20): ಉದ್ಯಾನನಗರಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮಳೆಯ ಆರ್ಭಟ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ ದಿನನಿತ್ಯ ಕೆಲಸಕ್ಕಾಗಿ ಕಚೇರಿಗಳಿಗೆ ಹೊರಟ ಸಾರ್ವಜನಿಕರು ರಸ್ತೆಗಳಲ್ಲಿ ಮಳೆಗೆ ಸಿಲುಕಿ ಪರದಾಡುವಂತಾಗಿತ್ತು. ರಸ್ತೆಗಳ ಪಕ್ಕದಲ್ಲಿಯೇ ಬೈಕ್ ಪಾರ್ಕಿಂಗ್ ಮಾಡಿಕೊಂಡು ನಿಂತರೆ, ಕಾರು, ಬಸ್ ಮತ್ತಿತರ ವಾಹನಗಳಿಗೆ ರಸ್ತೆಯಲ್ಲಿ ಸಂಚಾರಕ್ಕೆ ಕಿರಿದಾದ ಜಾಗ ಉಂಟಾಗಿತ್ತು. ಇದರಿಂದ ವಿವಿಧೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೆಲವು ಅಂಡರ್‌ಪಾಸ್ ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ನಿಂತುಕೊಂಡು ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿತ್ತು.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೃಷಿ ಅವಲಂಬಿಸಿ ಜೀವನ ಮಾಡುವವರು ಯಾರೂ ಇಲ್ಲ. ಎಲ್ಲರೂ ತಮ್ಮ ಕೆಲಸಕ್ಕಾಗಿ ಕಚೇರಿಗಳನ್ನು ಅವಲಂಬಿಸಿರುವವರೇ ಶೇ.85ಕ್ಕೂ ಹೆಚ್ಚು ಜನರಿದ್ದಾರೆ. ಆದರೆ, ಬೆಳಗ್ಗೆ ಕಚೇರಿಯತ್ತ ಹೊರಟ ಸಾರ್ವಜನಿಕರಿಗೆ ಮಳೆಯಿಂದಾಗಿ ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ಬೆಂಗಳೂರಿನ ಇಂದಿರ ನಗರ, ಬೈಯಪ್ಪನ ಹಳ್ಳಿ, ಹಲಸೂರು , ಕಾರ್ಪೊರೇಷನ್ ಸರ್ಕಲ್ ಸೇರಿದಂತೆ ಹಲವು ಭಾಗದಲ್ಲಿ ಹೆಚ್ಚಿನ ಮಳೆ ಆರ್ಭಟ ಹೆಚ್ಚಾಗಿತ್ತು. ಮುಂಗಾರು ಆಗಮನದ ಹಿನ್ನಲೆಯಲ್ಲಿ ಮಳೆಯ ಆರ್ಭಟ ಹೆಚ್ಚಾಗಿತ್ತು. ಚುಮುಚುಮು ಚಳಿ ಜೊತೆಗೆ ತುಂತುರು ಮಳೆ ಆರಂಭವಾಗಿ ನಂತರ ಭರ್ಜರಿ ಮಳೆ ಶುರುವಾಯಿತು. ಅದರಲ್ಲಿ ಬೈಕ್ ಸವಾರರು ಸಂಪುರ್ಣವಾಗಿ ಮಳೆಗೆ ಸಿಲುಕಿ ಪರದಾಡುವಂತಾಗಿತ್ತು. ರಸ್ತೆ ಬದಿಯಲ್ಲಿ ಬಸ್ ಹಾಗೂ ಇತರೆ ವಾಹನಗಳಿಗೆ ಕಾಯುತ್ತಿದ್ದ ಮಹಿಳೆಯರು ಕೂಡ ಆಶ್ರಯ ಇಲ್ಲದೇ ಪರದಾಡುತ್ತಿದ್ದರು.
ರಾಜ್ಯದಲ್ಲಿ ಮುಂಗಾರು ಚುರುಕು: 5 ದಿನ ಉತ್ತಮ ಮಳೆ ಸಂಭವ
ಮಳೆಯ ಹಿನ್ನೆಲೆ ಗೃಹಜ್ಯೋತಿ ಸರ್ವರ್ ಡೌನ್: ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆಯಡಿ ಮನೆಗಳಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಕೆ ಕಾರ್ಯ ಮೂರನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ಮಳೆ ಹಾಗೂ ಮೋಡಕವಿದ ವಾತಾವರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸೇವಾಸಿಂಧು ಪೋರ್ಟಲ್ ಸರ್ವರ್ ಡೌನ್ ಆಗಿದೆ. ವಿವಿಧೆಡೆ ಅರ್ಜಿ ಸಲ್ಲಿಕೆಗೆ ತೆರಳಿದ್ದ ಸಾರ್ವಜನಿಕರಿಗೆ ಅರ್ಜಿ ಸಲ್ಲಿಕೆ ಕೇಂದ್ರಗಳಲ್ಲಿ ಸರ್ವರ್‌ಡೌನ್ ಇದೆ ಎಂದು ಸಿಬ್ಬಂದಿ ಉತ್ತರ ನೀಡುತ್ತಿದ್ದರು. ಇದರಿಂದ ಮಳೆಯ ನಡುವೆಯೂ ಪರದಾಡುತ್ತಾ ಅರ್ಜಿ ಸಲ್ಲಿಕೆಗೆ ಬಂದ ಸಾರ್ವಜನಿರು ಸರತಿ ಸಾಲಿನಲ್ಲಿ ನಿಂತುಕೊಂಡಿದ್ದಾರೆ. ವಿಲ್ಸನ್‌ಗಾರ್ಡನ್ ಬೆಂಗಳೂರು ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಕೆ ಮಾಡಲು ಬಂದವರ ಸಂಖ್ಯೆ 200ಕ್ಕೂ ಅಧಿಕವಾಗಿತ್ತು.
ಕರ್ನಾಟಕದಲ್ಲಿ ಮೊದಲ ವಾರವೇ ಶೇ.72 ಮುಂಗಾರು ಮಳೆ ಕೊರತೆ..!
ರಾಜಕಾಲುವೆ ಒತ್ತುವರಿ ತೆರವು ಕಾರ್ಯಕ್ಕೆ ಬ್ರೇಕ್: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮೂರು ದಿನಗಳಿಂದ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಇಂದು ಬೆಳಗ್ಗೆ ತೆರವು ಕರ್ಯಾಚರಣೆಗೂ ಮುನ್ನವೇ ಭರ್ಜರಿ ಮಳೆಯಾದ ಹಿನ್ನೆಲೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಹಿನ್ನೆಲೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಚರಣೆ ಗೆ ಬ್ರೇಕ್ ನೀಡಿದೆ. ಮಂಗಳವಾರ ಎರಡು ಭಾಗದಲ್ಲಿ ಒತ್ತುವರಿ ತೆರವು ಕಾರ್ಯಚರಣೆಯನ್ನು ಬಿಬಿಎಂಪಿ ಹಮ್ಮಿಕೊಂಡಿತ್ತು. ದೊಡ್ಡನಕ್ಕುದಿಯಲ್ಲಿ ಖಾಲಿ ನಿವೇಶನ ಹಾಗೂ ಪಣತ್ತೂರಿನಲ್ಲಿ ಕಟ್ಟಡಗಳ ತೆರವಿಗೆ ಮುಂದಾಗಿತ್ತು. ಆದರೆ, ಸುಮಾರು 2 ಗಂಟೆಗೂ ಅಧಿಕ ಕಾಲ ಸುರಿದ ಮಳೆಯ ಹಿನ್ನೆಲೆಯಲ್ಲಿ ಎರಡು ಭಾಗದಲ್ಲಿಯೂ ಇಂದು ಒತ್ತುವರಿ ತೆರವು ಕಾರ್ಯಚರಣೆಗೆ ತಾತ್ಕಾಲಿಕ ಸ್ಥಗಿತ ಮಾಡಲಾಗಿದೆ ಎಂದು ಮಹದೇವಪುರ ವಲಯ ಮುಖ್ಯ ಇಂಜಿನಿಯರ್ ಲೋಕೇಶ್ ಮಾಹಿತಿ ನೀಡಿದ್ದಾರೆ.