ಬೆಂಗಳೂರಲ್ಲಿ ಒಂದೇ ದಿನ 30 ಲಕ್ಷ ಟ್ರಾಫಿಕ್‌ ದಂಡ!

By Web Desk  |  First Published Sep 6, 2019, 7:33 AM IST

ವಾಹನ ಸವಾರರೆ ಪೊಲೀಸರು ಯಾವಾಗ ಬೇಕಾದರೂ ದಿಢೀರನೆ ಕಾರ್ಯಾಚರಣೆ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ, ಅಗತ್ಯ ದಾಖಲೆಗಳನ್ನು ಇಟ್ಟುಕೊಂಡೇ ಸಂಚರಿಸುವುದು ಸೂಕ್ತ. ಕೆಲವು ಜಿಲ್ಲೆಗಳಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಗಳಿಗೆ ಕಳುಹಿಸಲಾಗುತ್ತಿದೆ.


ಬೆಂಗಳೂರು [ಸೆ.06]:  ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ದೊಡ್ಡ ಮೊತ್ತದ ಪರಿಷ್ಕೃತ ದಂಡ ಕುರಿತ ಅಧಿಸೂಚನೆ ಹೊರಬಿದ್ದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಆದರೆ, ರಾಜ್ಯದ ಇನ್ನಿತರ ಬಹುತೇಕ ಭಾಗಗಳಲ್ಲಿ ಕೆಲ ದಿನಗಳವರೆಗೆ ಜಾಗೃತಿ ಮೂಡಿಸಲು ಪೊಲೀಸರು ತೀರ್ಮಾನಿಸಿದ್ದಾರೆ.

ಹಾಗಂತ ದಂಡ ವಿಧಿಸುವುದು ಇನ್ನೂ ವಿಳಂಬವಾಗಬಹುದು ಎಂದು ಭಾವಿಸಿ ಜನರು ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಸಾಹಸ ಮಾಡುವಂತಿಲ್ಲ. ಪೊಲೀಸರು ಯಾವಾಗ ಬೇಕಾದರೂ ದಿಢೀರನೆ ಕಾರ್ಯಾಚರಣೆ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ, ಅಗತ್ಯ ದಾಖಲೆಗಳನ್ನು ಇಟ್ಟುಕೊಂಡೇ ಸಂಚರಿಸುವುದು ಸೂಕ್ತ. ಕೆಲವು ಜಿಲ್ಲೆಗಳಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಗಳಿಗೆ ಕಳುಹಿಸಲಾಗುತ್ತಿದೆ.

Tap to resize

Latest Videos

ಮಂಗಳವಾರ ಅಧಿಸೂಚನೆ ಹೊರಬಿದ್ದ ಬಳಿಕ ಬುಧವಾರದಿಂದಲೇ ಬೆಂಗಳೂರಿನಲ್ಲಿ ದಂಡ ಪ್ರಯೋಗದ ಕಾರ್ಯಾಚರಣೆ ಆರಂಭವಾಗಿದೆ. ಬುಧವಾರದಿಂದ ಗುರುವಾರ ಮಧ್ಯಾಹ್ನದವರೆಗೆ ಸಂಚಾರ ನಿಯಮ ಉಲ್ಲಂಘಿಸಿದ 2,978 ಪ್ರಕರಣಗಳು ದಾಖಲಾಗಿದ್ದು, 30.11 ಲಕ್ಷ ರು. ದಂಡ ವಸೂಲು ಮಾಡಲಾಗಿದೆ.

ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 41 ಪ್ರಕರಣಗಳು ದಾಖಲಾಗಿದ್ದು, 1.19 ಲಕ್ಷ ದಂಡ ವಿಧಿಸಲಾಗಿದೆ. ಇದರಲ್ಲಿ ಒಬ್ಬರು ಲೈಸನ್ಸ್‌ ಇಲ್ಲದ ಹಾಗೂ ಮದ್ಯಸೇವನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 15 ಸಾವಿರ ದಂಡ ಪಾವತಿಸಿದ್ದರೆ, 11 ಜನರು ತಲಾ .9500 ದಂಡ ಪಾವತಿಸಿದ್ದಾರೆ. ಇವೆಲ್ಲವೂ ಕೋರ್ಟ್‌ ಮೂಲಕ ಪಾವತಿಯಾಗಿವೆ. ಪೊಲೀಸ್‌ ಕಮಿಷನರೆಟ್‌ಗೆ ಈವರೆಗೆ ಸರ್ಕಾರದ ಸುತ್ತೊಲೆ ಬಂದಿಲ್ಲ. ಬರೀ ಪ್ರಕರಣ ಮಾತ್ರ ದಾಖಲಿಸಿ ಕೋರ್ಟ್‌ಗೆ ಕಳುಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ ಮದ್ಯ ಸೇವಿಸಿ ಬೈಕ್‌ ಚಾಲನೆಗೆ ಸಂಬಂಧಿಸಿದಂತೆ ಒಂದೇ ಕೇಸ್‌ಗೆ 10 ಸಾವಿರ ರು. ದಂಡ ವಿಧಿಸಲಾಗಿದೆ. ಸದ್ಯ ಗಣೇಶ ಹಾಗೂ ಮೊಹರಂ ಹಬ್ಬದ ಬಂದೋಬಸ್ತಿಗೆ ಪೊಲೀಸರು ಗಮನ ನೀಡಿದ್ದು, ಶೀಘ್ರ ಕಾರ್ಯಾಚರಣೆ ಚುರುಕುಗೊಳಿಸಲು ನಿರ್ಧರಿಸಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌, ದಂಡ ಪರಿಷ್ಕರಣೆ ಅನುಸಾರ ಕಾರ್ಯಾಚರಣೆ ನಡೆಸುವುದರಲ್ಲಿ ಯಾವುದೇ ರಿಯಾಯಿತಿ ಇಲ್ಲ. ಕೊಲೆ ಅಂದರೆ ಕೊಲೆನೇ. ಅಪರಾಧ ಎಸಗಿದ ಮೇಲೆ ಶಿಕ್ಷೆಯಾಗಬೇಕು. ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಯಾಕೆ ಅನುಕಂಪ ತೋರಿಸಬೇಕು ಎಂದು ಗುಡುಗಿದ್ದಾರೆ.

ಹಲವು ದಿನಗಳಿಂದಲೇ ಸಂಚಾರ ನಿಯಮ ಉಲ್ಲಂಘನೆಗೆ ದಂಡ ಹೆಚ್ಚಳ ಸಂಬಂಧ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಚರ್ಚೆ ನಡೆದಿದೆ. ಜನರಲ್ಲಿ ತಿಳಿವಳಿಕೆ ಸಹ ಮೂಡಿದೆ. ಹೀಗಾಗಿ ಮತ್ತೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸೂಕ್ತ ಎನಿಸುವುದಿಲ್ಲ. ಹೀಗಾಗಿ ಹೊಸ ನಿಯಮವನ್ನು ತಕ್ಷಣದಿಂದಲೇ ಜಾರಿಗೊಳಿಸಲಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಇದೇ ವೇಳೆ ವಿವಿಧ ಜಿಲ್ಲೆಗಳ ಪೊಲೀಸ್‌ ವರಿಷ್ಠರು ಕೆಲವು ದಿನಗಳವರೆಗೆ ಸಾರ್ವಜನಿಕರಿಗೆ ವಿವಿಧ ಸ್ಥಳೀಯ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಿ ನಂತರ ದಂಡ ವಸೂಲಿ ಕಾರ್ಯಕ್ಕೆ ಚಾಲನೆ ನೀಡಲು ನಿರ್ಧರಿಸಿದ್ದಾರೆ.

click me!