ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗ: 6ನೇ ರೈಲು ಸೇರ್ಪಡೆ, ಇನ್ಮುಂದೆ 13 ನಿಮಿಷಕ್ಕೊಂದು ರೈಲು ಸಂಚಾರ!

Published : Dec 22, 2025, 06:44 PM IST
Bengaluru Namma Metro Yellow Line

ಸಾರಾಂಶ

ಬೆಂಗಳೂರು ಮೆಟ್ರೋದ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಡಿಸೆಂಬರ್ 23, 2025 ರಿಂದ 6ನೇ ರೈಲು ಸೇವೆಗೆ ಸೇರ್ಪಡೆಯಾಗಲಿದೆ. ಇದರಿಂದಾಗಿ, ಜನದಟ್ಟಣೆ ವೇಳೆ ರೈಲುಗಳ ನಡುವಿನ ಅಂತರವು 15 ನಿಮಿಷಗಳಿಂದ 13 ನಿಮಿಷಗಳಿಗೆ ಇಳಿಕೆಯಾಗಲಿದ್ದು, ಪ್ರಯಾಣಿಕರ ಕಾಯುವ ಸಮಯ ಕಡಿಮೆಯಾಗಲಿದೆ.

ಬೆಂಗಳೂರು (ಡಿ.22): ಸಿಲಿಕಾನ್ ಸಿಟಿಯ ಸಂಚಾರ ದಟ್ಟಣೆಗೆ ಪರ್ಯಾಯವಾಗಿರುವ 'ನಮ್ಮ ಮೆಟ್ರೋ' ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಿಸಲು ಸಜ್ಜಾಗಿದೆ. ವಿಶೇಷವಾಗಿ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ (Yellow Line) ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಡಿಸೆಂಬರ್ 23, 2025ರಿಂದ (ಮಂಗಳವಾರ) 6ನೇ ರೈಲನ್ನು ಸೇವೆಗೆ ಮುಕ್ತಗೊಳಿಸುತ್ತಿದೆ.

ಕಡಿಮೆಯಾಗಲಿದೆ ಕಾಯುವ ಸಮಯ

ಪ್ರಸ್ತುತ ಹಳದಿ ಮಾರ್ಗದಲ್ಲಿ ರೈಲುಗಳು ಪ್ರತಿ 15 ನಿಮಿಷಗಳ ಅಂತರದಲ್ಲಿ ಸಂಚರಿಸುತ್ತಿವೆ. ಈಗ 6ನೇ ರೈಲು ಕಾರ್ಯಾಚರಣೆಗೆ ಇಳಿಯುವುದರಿಂದ, ಜನದಟ್ಟನೆಯ ಅವಧಿಯಲ್ಲಿ (Peak Hours) ರೈಲುಗಳ ಸಂಚಾರದ ಅಂತರವು 15 ನಿಮಿಷಗಳಿಂದ 13 ನಿಮಿಷಗಳಿಗೆ ಇಳಿಕೆಯಾಗಲಿದೆ. ಇದು ಸೋಮವಾರದಿಂದ ಶನಿವಾರದವರೆಗೆ ಅನ್ವಯವಾಗಲಿದ್ದು, ಪ್ರಯಾಣಿಕರು ನಿಲ್ದಾಣಗಳಲ್ಲಿ ಕಾಯುವ ಸಮಯ 2 ನಿಮಿಷಗಳಷ್ಟು ಉಳಿತಾಯವಾಗಲಿದೆ.

ವಾರಾಂತ್ಯದ ವೇಳಾಪಟ್ಟಿ

ಭಾನುವಾರಗಳಂದು ಪೀಕ್ ಅವಧಿಯ ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರತಿ 15 ನಿಮಿಷಕ್ಕೊಂದು ರೈಲು ಸಂಚರಿಸುವ ಈಗಿನ ವ್ಯವಸ್ಥೆಯೇ ಮುಂದುವರಿಯಲಿದೆ. ಇನ್ನುಳಿದಂತೆ, ಆರ್.ವಿ. ರಸ್ತೆ ಹಾಗೂ ಬೊಮ್ಮಸಂದ್ರ ನಿಲ್ದಾಣಗಳ ಎರಡೂ ಟರ್ಮಿನಲ್‌ಗಳಿಂದ ಹೊರಡುವ ಮೊದಲ ಮತ್ತು ಕೊನೆಯ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.

ಪ್ರಯಾಣಿಕರ ಅನುಕೂಲಕ್ಕೆ ಆದ್ಯತೆ

ಹಳದಿ ಮಾರ್ಗವು ನಗರದ ಪ್ರಮುಖ ಐಟಿ ಹಬ್‌ಗಳಾದ ಎಲೆಕ್ಟ್ರಾನಿಕ್ ಸಿಟಿಯಂತಹ ಭಾಗಗಳನ್ನು ಸಂಪರ್ಕಿಸುವುದರಿಂದ, ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. 6ನೇ ರೈಲಿನ ಸೇರ್ಪಡೆಯು ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ. ಈ ಬದಲಾವಣೆಯನ್ನು ಗಮನಿಸಿ ಪ್ರಯಾಣಿಕರು ಮೆಟ್ರೋ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಬಿಎಂಆರ್ ಸಿಎಲ್ ಮನವಿ ಮಾಡಿದೆ.

ಹಳದಿ ಮಾರ್ಗದಲ್ಲಿ ಚಾಲಕರಹಿತ ರೈಲು ತಂತ್ರಜ್ಞಾನ ಮತ್ತು ಸಂಕೇತಗಳ ಪರೀಕ್ಷೆಯ ಹಂತಗಳು ಯಶಸ್ವಿಯಾಗಿ ಮುಂದುವರಿಯುತ್ತಿದ್ದು, ಹಂತಹಂತವಾಗಿ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಿ ಸಂಚಾರದ ಅಂತರವನ್ನು ಇನ್ನುಷ್ಟು ಕಡಿಮೆ ಮಾಡುವುದು ಮೆಟ್ರೋ ನಿಗಮದ ಗುರಿಯಾಗಿದೆ.

PREV
Read more Articles on
click me!

Recommended Stories

ರಾಮೇಶ್ವರಂ ಕೆಫೆಗೆ ಬಿಗ್ ರಿಲೀಫ್: ವಿಮಾನ ನಿಲ್ದಾಣ ಮಳಿಗೆ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ
ಕಲಬುರಗಿ: ಮಠದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಸ್ವಾಮೀಜಿ! ಎಸ್ಕೇಪ್ ಆಗಿದ್ದಾತ ಮರಳಿ ಬಂದು ಕೃತ್ಯ