'ನನ್ನ ಒಡವೆ ತಗೊಳ್ಳಿ, ಪತಿಯನ್ನು ಬಿಟ್ಟುಬಿಡಿ': ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಿರಾತಕರ ಅಟ್ಟಹಾಸ!

Published : Jul 09, 2026, 04:48 PM IST
Bengaluru Mysuru Expressway

ಸಾರಾಂಶ

ಮಂಡ್ಯದ ಮದ್ದೂರು ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಣ್ಣ ಅಪಘಾತವೊಂದು ವಿಕೋಪಕ್ಕೆ ತಿರುಗಿದೆ. ದುಷ್ಕರ್ಮಿಗಳ ಗುಂಪೊಂದು 10 ತಿಂಗಳ ಮಗು ಸೇರಿದಂತೆ ಇಡೀ ಕುಟುಂಬದ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದೆ. ಈ ಘಟನೆಯ ವಿಡಿಯೋ ವೈರಲ್ ಆದ ನಂತರ, ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು/ಮಂಡ್ಯ (ಜು.09): 'ನನ್ನ ಚಿನ್ನದ ಒಡವೆಗಳನ್ನು ಬೇಕಾದರೆ ತೆಗೆದುಕೊಳ್ಳಿ, ಆದರೆ ನನ್ನ ಪತಿಯನ್ನು ಮಾತ್ರ ಬಿಟ್ಟುಬಿಡಿ...' - ಇದು ಮಂಡ್ಯ ಜಿಲ್ಲೆಯ ಮದ್ದೂರು ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ದುಷ್ಕರ್ಮಿಗಳ ಕೈಗೆ ಸಿಲುಕಿ ನರಳುತ್ತಿದ್ದ ಮಹಿಳೆಯೊಬ್ಬರ ಆಕ್ರಂದನ. ಸಣ್ಣ ಕಾರು ಅಪಘಾತವೊಂದು ವಿಕೋಪಕ್ಕೆ ತಿರುಗಿ, ಇಡೀ ಕುಟುಂಬವನ್ನೇ ನಡುರಸ್ತೆಯಲ್ಲಿ ಅಮಾನವೀಯವಾಗಿ ಥಳಿಸಿದ ಘಟನೆ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ.

ನಡೆದಿದ್ದೇನು?

ಭಾನುವಾರ ರಾತ್ರಿ ಸುಮಾರು 10:30ರ ಸುಮಾರಿಗೆ ಬೆಂಗಳೂರು ನಿವಾಸಿ ಸಾಗರ್ ಕುಮಾರ್ ಅವರು ತಮ್ಮ ಪತ್ನಿ, 10 ತಿಂಗಳ ಮಗು ಮತ್ತು ಹಿರಿಯ ಮಹಿಳೆಯೊಬ್ಬರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಎಕ್ಸ್‌ಪ್ರೆಸ್‌ವೇನಲ್ಲಿ ಭಾರಿ ಟ್ರಾಫಿಕ್ ಇದ್ದ ಕಾರಣ, ಸಾಗರ್ ಅವರ ಕಾರು ಮತ್ತೊಂದು ವಾಹನಕ್ಕೆ ಸ್ವಲ್ಪ ತಗುಲಿತ್ತು. ಇದೇ ವಿಚಾರಕ್ಕೆ ಗಲಾಟೆ ಆರಂಭಿಸಿದ ಸುಮಾರು 9 ಜನರ ಗುಂಪು, ಸಾಗರ್ ಅವರ ಕಾರನ್ನು ಅಡ್ಡಗಟ್ಟಿ ಅಟ್ಟಹಾಸ ಮೆರೆದಿದೆ.

ವೈರಲ್ ವಿಡಿಯೋದಲ್ಲಿದೆ ಭೀಕರ ದೃಶ್ಯ:

ಹಿಂದಿನ ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಈ ಇಡೀ ಘಟನೆ ಸೆರೆಯಾಗಿದೆ. ದುಷ್ಕರ್ಮಿಗಳು ಸಾಗರ್ ಅವರ ಕಾರನ್ನು ಸುತ್ತುವರಿದು, ಅವರನ್ನು ಬಲವಂತವಾಗಿ ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಸಾಗರ್ ಪತ್ನಿ ಅಕ್ಷರಶಃ ಪ್ರಾಣಭಿಕ್ಷೆ ಕೇಳಿದ್ದಾರೆ. 'ನಮ್ಮ ಜೊತೆ ಮಗುವಿದೆ, ದಯವಿಟ್ಟು ಬಿಟ್ಟುಬಿಡಿ. ಬೇಕಿದ್ದರೆ ನನ್ನ ಮೈಮೇಲಿರುವ ಚಿನ್ನದ ಒಡವೆಗಳನ್ನು ಕಿತ್ತುಕೊಳ್ಳಿ, ಆದರೆ ಪತಿಯನ್ನು ಹೊಡೆಯಬೇಡಿ' ಎಂದು ಕಣ್ಣೀರಿಟ್ಟರೂ, ಆ ಪಾಪಿಗಳು ಮಾತ್ರ ಹಲ್ಲೆ ನಿಲ್ಲಿಸಲಿಲ್ಲ. ಹತ್ತು ತಿಂಗಳ ಹಸುಗೂಸಿನ ಮುಂದೆಯೇ ತಂದೆಯನ್ನು ಮನಬಂದಂತೆ ಥಳಿಸಲಾಗಿದೆ.

ಸಾಗರ್ ಕುಮಾರ್ ಅವರ ಅಳಲು:

ಘಟನೆಯಿಂದ ತೀವ್ರವಾಗಿ ಗಾಯಗೊಂಡಿರುವ ಸಾಗರ್ ಎನ್‌ಡಿಟಿವಿಯೊಂದಿಗೆ ಮಾತನಾಡುತ್ತಾ, 'ಆ ರಾತ್ರಿ ನಾವು ಅನುಭವಿಸಿದ ನರಕಯಾತನೆ ಅಷ್ಟಿಷ್ಟಲ್ಲ. ಸುಮಾರು 9 ಜನರು ನಮ್ಮ ಮೇಲೆ ಮುಗಿಬಿದ್ದರು. ನನ್ನ ಪತ್ನಿ ಕೈಮುಗಿದು ಬೇಡಿಕೊಂಡರೂ ಅವರು ಕರುಣೆ ತೋರಿಸಲಿಲ್ಲ. ಎಕ್ಸ್‌ಪ್ರೆಸ್‌ವೇನ ಅನೇಕ ಕಡೆ ಸಿಸಿಟಿವಿ ಕ್ಯಾಮೆರಾಗಳಿಲ್ಲ, ಭದ್ರತೆಯೂ ಇಲ್ಲ. ಈ ವಿಡಿಯೋ ರೆಕಾರ್ಡ್ ಆಗಿದ್ದಕ್ಕೆ ನಮಗೆ ನ್ಯಾಯ ಸಿಗುವ ಭರವಸೆ ಇದೆ. ಇಲ್ಲದಿದ್ದರೆ ನಮ್ಮ ಸ್ಥಿತಿ ಏನಾಗುತ್ತಿತ್ತು?' ಎಂದು ಪ್ರಶ್ನಿಸಿದ್ದಾರೆ.

ಪೊಲೀಸ್ ಕ್ರಮ:

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಮಂಡ್ಯ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಹುಡುಕಾಟ ಮುಂದುವರಿದಿದೆ. ಹೆದ್ದಾರಿಗಳಲ್ಲಿ ಸಾರ್ವಜನಿಕರ ಸುರಕ್ಷತೆ ಎಲ್ಲಿದೆ ಎಂಬ ಪ್ರಶ್ನೆಯನ್ನು ಈ ಘಟನೆ ಮತ್ತೆ ಮುನ್ನೆಲೆಗೆ ತಂದಿದೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂತ್ರಸ್ತ ಕುಟುಂಬ ಇಂದಿಗೂ ಆಘಾತದಿಂದ ಹೊರಬಂದಿಲ್ಲ.

PREV
Read more Articles on
click me!

Recommended Stories

ಮದ್ಯಪ್ರಿಯರ ಶೈಲಿ ಬದಲಿಸಿದ ಹೊಸ AIB ನೀತಿ: ಮೊದಲ ತ್ರೈಮಾಸಿಕದಲ್ಲೇ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ದಾಖಲೆಯ ಆದಾಯ!
ಅಂದುಕೊಂಡದ್ದಕ್ಕಿಂತಲೂ ಹೆಚ್ಚು ಕೊಟ್ಟ ‘ನಮ್ಮ ಬೆಂಗಳೂರು’; ಮೊದ್ಲೇ ಇಲ್ಲಿಗೆ ಬರಬಾರದಿತ್ತಾ? ತಲೆ ಚಚ್ಚಿಕೊಂಡ ಯುವಕ