*ವರ್ಷ ಕಳೆದ್ರೂ ಮಿಲ್ಲರ‍್ಸ್ ರಸ್ತೆಗಿಲ್ಲ ಮುಕ್ತಿ!
*ಆಮೆಗತಿಯಲ್ಲಿ ಸಾಗುತ್ತಿರುವ ಟೆಂಡರ್‌ಶ್ಯೂರ್ ಕಾಮಗಾರಿ
*ರಸ್ತೆಗಳು ಗುಂಡಿಮಯ, ವಾಹನ ಸವಾರರಿಗೆ ನಿತ್ಯ ನರಕ
*ಜಲಮಂಡಳಿ, ಬೆಸ್ಕಾಂ, ಕೆಪಿಟಿಸಿಎಲ್ ನಡುವಿನ ಸಮನ್ವಯ ಕೊರತೆ
*ಬೆಂಗಳೂರು ಸ್ಮಾಟ್‌ಸಿಟಿ ಲಿಮಿಟೆಡ್ ಆರೋಪ
ಬೆಂಗಳೂರು (ಜ. 25): ನಗರದ ಮಿಲ್ಲರ‍್ಸ್ ರಸ್ತೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿ (Smart City Work) ಆಮೆವೇಗದಲ್ಲಿ ನಡೆಯುತ್ತಿರುವುದರಿಂದ ವಾಹನ ಸವಾರರು, ಪಾದಚಾರಿಗಳು ಸಂಕಷ್ಟಎದುರಿಸುವಂತಾಗಿದೆ. ಬೆಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್(BSCL) ಕೈಗೊಂಡಿರುವ ಟೆಂಡರ್‌ಶ್ಯೂರ್ ಮಾದರಿಯ ರಸ್ತೆ ಕಾಮಗಾರಿಯಿಂದ ಮಿಲ್ಲರ‍್ಸ್ ರಸ್ತೆಯ ಚಂದ್ರಿಕಾ ಹೋಟೆಲ್ ಮತ್ತು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ನಡುವಿನ 1.3 ಕಿ.ಮೀ. ಉದ್ದದ ಮಾರ್ಗವು ಅತ್ಯಂತ ಕೆಟ್ಟದಾಗಿದ್ದು, ರಸ್ತೆಗುಂಡಿಗಳಿಂದ ತುಂಬಿ ಹೋಗಿ ವಾಹನ ಸವಾರರಿಗೆ ನಿತ್ಯ ನರಕದ ದರ್ಶನವಾಗುತ್ತಿದೆ. ಅಷ್ಟುಸಾಲದೆಂಬಂತೆ ಈ ರಸ್ತೆಯ ಇಕ್ಕೆಲಗಳಲ್ಲಿ ಪೈಪ್‌ಲೈನ್ ಕಾಮಗಾರಿಗಾಗಿ ಅಗೆದಿದ್ದ ಮಣ್ಣು ರಸ್ತೆಗೆ ಹರಡಿಕೊಂಡಿದೆ. ಕೆಲವೆಡೆ ಗುಂಡಿಯನ್ನೂ ಸಹ ವ್ಯವಸ್ಥಿತವಾಗಿ ಮುಚ್ಚಿಲ್ಲ.
ನಿರಂತರ ಅಪಘಾತ: ರಸ್ತೆ ಗುಂಡಿಗಳ ದೆಸೆಯಿಂದ ಚಂದ್ರಿಕಾ ಹೋಟೆಲ್ ಸಿಗ್ನಲ್‌ನಿಂದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದವರೆಗೆ ಕೇವಲ 5 ನಿಮಿಷದಲ್ಲಿ ಕ್ರಮಿಸಬಹುದಾದ ರಸ್ತೆಗೆ ಬೆಳಗ್ಗೆ ಮತ್ತು ಸಂಜೆಯ ದಟ್ಟಣೆ ಅವಧಿಯಲ್ಲಿ 20ರಿಂದ 30 ನಿಮಿಷ ಬೇಕಾಗುತ್ತದೆ. ಜೊತೆಗೆ ಆಗಾಗ ರಸ್ತೆ ಅಪಘಾತಗಳು ಸಾಮಾನ್ಯವಾಗಿ ಬಿಟ್ಟಿದೆ.
ಇದನ್ನೂ ಓದಿ: Pothole free Bengaluru Roads: ಶೀಘ್ರ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಿ: ಬಿಬಿಎಂಪಿಗೆ ಹೈಕೋರ್ಟ್ ಚಾಟಿ!
ಸಮನ್ವಯದ ಕೊರತೆ: ಮಿಲ್ಲರ‍್ಸ್ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ವಿಳಂಬಕ್ಕೆ ಬೆಂಗಳೂರು ಜಲಮಂಡಳಿ, ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಹಾಗೂ ಬಿಬಿಎಂಪಿ ನಡುವಿನ ಸಮನ್ವಯದ ಕೊರತೆಯೇ ಕಾರಣ. ಕೇಬಲ್ ಅಳವಡಿಕೆ, ಪೈಪ್‌ಲೈನ್ ಇತ್ಯಾದಿ ಕಾರಣಕ್ಕೆ ಭೂಮಿ ಅಗೆದಿರುವುದನ್ನು ಕಾರ್ಯವಾದ ನಂತರ ಸರಿಯಾದ ಸಮಯಕ್ಕೆ ಮುಚ್ಚುತ್ತಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳು ತಡವಾಗುತ್ತಿವೆ ಎಂಬುದು ಸ್ಮಾರ್ಟ್‌ಸಿಟಿ ಅಧಿಕಾರಿಗಳ ಆರೋಪ.
ಜಲ ಮಂಡಳಿ ಕುಡಿಯುವ ನೀರು ಮತ್ತು ಒಳ ಚರಂಡಿ ಕಾಮಗಾರಿ ಪೂರ್ಣಗೊಳಿಸಿದ ನಂತರ ಬಿಬಿಎಂಪಿಗೆ ಪ್ರಮಾಣಪತ್ರ ಕೊಡಬೇಕು. ಆ ನಂತರ ರಸ್ತೆ ಕಾಮಗಾರಿಯನ್ನು ಆರಂಭಿಸುತ್ತೇವೆ. ಆದರೆ, ಜಲಮಂಡಳಿ ಕಾಮಗಾರಿ ಮುಗಿದರೂ ಸರಿಯಾಗಿ ಮುಚ್ಚುವುದಿಲ್ಲ. ಪ್ರಮಾಣಪತ್ರವನ್ನು ಕೊಡುವುದಿಲ್ಲ. ಅವರು ಕೆಲಸ ಮುಗಿದಿರುವ ಬಗ್ಗೆ ಪ್ರಮಾಣಪತ್ರ ಕೊಡದೆ ನಾವು ಕೆಲಸ ಶುರು ಮಾಡುವಂತಿಲ್ಲ ಎನ್ನುತ್ತಾರೆ ಬಿಬಿಎಂಪಿ ಹಿರಿಯ ಅಧಿಕಾರಿಗಳು.
ಇದನ್ನೂ ಓದಿ: Bengaluru Roads:ರಸ್ತೆಗುಂಡಿಗೆ 3 ದ್ವಿಚಕ್ರ ಸವಾರರು ಬಲಿ, ಬಿಬಿಎಂಪಿ ವಿರುದ್ಧ ಆಕ್ರೋಶ!
ಜೊತೆಗೆ ಬಿಬಿಎಂಪಿ ಕೈಗೊಂಡ ಟೆಂಡರ್‌ಶ್ಯೂರ್ ರಸ್ತೆಗಳ ಕಾಮಗಾರಿ ಸಂಪೂರ್ಣವಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಕೆಲವೆಡೆ ರಸ್ತೆಗಳ ನಿರ್ಮಾಣವಾಗುತ್ತಿದೆ. ಈ ಕಾಮಗಾರಿಗಳು ಪೂರ್ಣಗೊಂಡ ಬಳಿಕ ರಸ್ತೆಗಳ ಡಾಂಬರೀಕರಣ ನಡೆಸಲಾಗುವುದು. ಸದ್ಯಕ್ಕೆ ರಸ್ತೆ ಗುಂಡಿ ಮುಚ್ಚುವ ಕೆಲಸವನ್ನು ಬಿಬಿಎಂಪಿ ಮಾಡಲಿದೆ ಎಂದು ಪಾಲಿಕೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯಕ್ಕಂತೂ ಮುಗಿಯಲ್ಲ: ಈ ರಸ್ತೆಯಲ್ಲಿ ಟೆಂಡರ್‌ಶ್ಯೂರ್ ಕಾಮಗಾರಿ ಆರಂಭಗೊಂಡು ವರ್ಷ ಕಳೆದರೂ ಕೂಡ ಪೈಪ್‌ಲೈನ್ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಕಾಮಗಾರಿಯು ನಿಧಾನಗತಿಯಲ್ಲಿ ಸಾಗುತ್ತಿದ್ದು ಸದ್ಯಕ್ಕೆ ಮುಗಿಯುವಂತೆಯೂ ಕಾಣುತ್ತಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಪೈಪ್‌ಲೈನ್ ಕಾಮಗಾರಿ ಮುಗಿಯದ ಹೊರತು ರಸ್ತೆ ಕಾಮಗಾರಿಯೂ ಆರಂಭಗೊಳ್ಳುವಂತಿಲ್ಲ. ಅಲ್ಲಿಯವರೆಗೆ ವಾಹನ ಸವಾರರಿಗೂ ಮುಕ್ತಿ ಸಿಗುವುದಿಲ್ಲ ಎನ್ನುತ್ತಾರೆ ನಿತ್ಯ ಇದೇ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಕಂಪನಿ ಉದ್ಯೋಗಿ ಲಕ್ಷ್ಮೇಪತಿ ಬಾಬು. ಇಷ್ಟುದಿನ ಮಳೆ ಎನ್ನುತ್ತಿದ್ದರು. ಈಗ ಕೊರೋನಾ ಕಾಟ ಅನ್ನುತ್ತಿದ್ದಾರೆ. ಸದ್ಯಕ್ಕೆ ಕಾಮಗಾರಿಯನ್ನಂತೂ ಮುಗಿಸುವ ಲಕ್ಷಣ ಕಾಣುತ್ತಿಲ್ಲ ಎಂಬುದು ವಕೀಲೆ ಶೈಲಾ ಅವರ ಅಭಿಪ್ರಾಯ.
ಸಂಪತ್ ತರೀಕೆರೆ, ಕನ್ನಡಪ್ರಭ ವಾರ್ತೆ